
ಭಾರತದಲ್ಲಿ ಏಪ್ರಿಲ್ ಬಂತೆಂದರೆ ಕ್ರಿಕೆಟ್ ಪ್ರಿಯರಿಗೆ ಹಬ್ಬವೋ ಹಬ್ಬ, ಕಿರಿಯರಿಂದ ಹಿರಿಯರವರಿಗೆ ಎಲ್ಲರೂ ಇಷ್ಟ ಪಡುವ ಆಟ, 18 ವರ್ಷಗಳ ಹಿಂದೆ ಪ್ರಾರಂಭವಾದ ಈ ಆಟ , ಬಿಸಿಸಿಐ ಪಾಲಿಗಂತೂ ಚಿನ್ನದ ಮೊಟ್ಟೆ ಇಡುವ ಕೋಳಿ. ಇದು ಬಿಸಿಸಿಐಗಷ್ಟೇ ಅಲ್ಲ; ಜಗತ್ತಿನ ವಿವಿಧ ದೇಶದ ಕ್ರಿಕೆಟ್ ಆಟಗಾರರು,ತಂಡದ ಮಾಲೀಕರಿಗೆ, ಕ್ಲಬ್, ಬಾರ್ ಗಳಿಗೆ, ಜಾಹೀರಾತುದಾರರಿಗೆ-ಅದರ ಪ್ರಚಾರ ರಾಯಭಾರಿಗಳಿಗೆ- ಟಿವಿ ಮಾಧ್ಯಮಗಳಿಗೆ ಓಟಿಟಿ ಗಳಿಗೆ, ಮೊಬೈಲ್ ಕಂಪನಿಗಳು ಮುಂತಾದವರಿಗೆಲ್ಲಾ ಹಣದ ಹೊಳೆಯನ್ನೇ ಹರಿಸುವ ಹಬ್ಬ.
ಈ ಬಾರಿಯ ಐಪಿಎಲ್ (IPL) ಪ್ರಸಾರ ಹಕ್ಕುಗಳನ್ನು ಪಡೆದಿರುವ ಜಿಯೋ ಸ್ಟಾರ್, ಟಿವಿ ಮತ್ತು ಡಿಜಿಟಲ್‌ನಿಂದ 100 ಕೋಟಿ ವೀಕ್ಷಣೆಯ ಗುರಿಯನ್ನು ಹಾಕಿಕೊಂಡಿದೆ, ಅಲ್ಲದೇ ಹತ್ತು ಸೆಕೆಂಡ್ ಟಿವಿ ಜಾಹೀರಾತಿಗೆ 8.5 ಲಕ್ಷ ರೂ. ದರವನ್ನು ನಿಗದಿಪಡಿಸಿ ,ಈ ಟೂರ್ನಿಯ ಜಾಹೀರಾತುಗಳಿಂದ ಒಟ್ಟು 4,500 ಕೋಟಿ ರೂ. ಆದಾಯವನ್ನು ನಿರೀಕ್ಷಿಸುತ್ತಿದೆ .
ಬರೀ ಇವರಿಗಷ್ಟೇ ಅಲ್ಲ ಹಣ ತಂದುಕೊಡುವುದು, ಮತ್ತೊಂದು ಕರಾಳ ದಂಧೆ ಮಾಡುವರಿಗೆ ಸಾವಿರಾರು ಕೋಟಿ ಹಣ ಈ ಐಪಿಎಲ್ ತಂದುಕೊಡುತ್ತದೆ, ಅವರೇ ಬೆಟ್ಟಿಂಗ್ ದಂಧೆ ನಡೆಸುವವರು. ಅವರ ಪಾಲಿಗಂತೂ ಚಿನ್ನದ ಮೊಟ್ಟೆ ಇಡುವ ಕೋಳಿಯೇ. ಈ ಆಟದಲ್ಲಿ ಹಣ ಕಟ್ಟಿ ಶ್ರೀಮಂತರಾಗಲು ಹೊರಟ ಅದೆಷ್ಟೋ ಮಂದಿ, ಬೀದಿ ಪಾಲಾಗಿದ್ದಾರೆ ಅಷ್ಟರ ಮಟ್ಟಿಗೆ ಬೆಟ್ಟಿಂಗ್ ಹಾವಳಿಯಿಂದ ಜನರ ಬದುಕು ಅಸ್ತವ್ಯಸ್ತ, ದುಸ್ತರವಾಗಿದೆ.
ಐಪಿಎಲ್ ನ್ನು ಮನರಂಜನೆಯಾಗಿ ತೆಗೆದು ಕೊಳ್ಳದೇ ಅನೇಕ ಯುವಕರು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು, ದಿನಗೂಲಿ, ಪಟ್ಟಣ ನಗರ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವರು ಈ ಬೆಟ್ಟಿಂಗ್ ಜಾಲದಲ್ಲಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರಲಾರದೇ ಒದ್ದಾಡುತ್ತಿದ್ದಾರೆ.
ಈ ಮೊದಲು ನಗರ, ಪಟ್ಟಣಗಳಲ್ಲಿ ಅವ್ಯಾಹತವಾಗಿತ್ತು. ಈಗ ನಗರ ಪಟ್ಟಣಗಳನ್ನೇ, ಮೀರಿಸುವಷ್ಟು ಹಳ್ಳಿಗಳಲ್ಲಿ ದಂಧೆಯ ವಹಿವಾಟು ನಡೆಯುತ್ತಿದೆ.
ಐಪಿಎಲ್ ನಡೆದಾಗಲೆಲ್ಲ ಸಾವಿರಾರು ಕೋಟಿ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ ಎಂಬುದು ಎಷ್ಟು ನಿಜವೋ, ಇದರಿಂದಾಗಿ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿವೆ. ಹಣವೂ ಬರದೆ, ಸಾಲವನ್ನೂ ತೀರಿಸಲಾಗದೆ ಸಾವಿನ ದವಡೆಗೆ ಸೇರುತ್ತಾರೆ.
ಬೆಟ್ಟಿಂಗ್ ದಂಧೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಯುವ ಸಮುದಾಯವೇ ತೊಡಗಿರುವುದು ಆತಂಕ ಹೆಚ್ಚಿಸಿದೆ. ಕೆಲವು ಹೋ ಟೆಲ್, ಸಲೂನ್, ಟೀ ಅಂಗಡಿ, ತೋಟದ ಮನೆಗಳು ಹೀಗೆ ಸಿಕ್ಕ ಸಿಕ್ಕಲ್ಲಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಇನ್ನೊಂದೆಡೆ ಆನ್ಲೈನ್ನಲ್ಲೂಸಾಕಷ್ಟು ಬೆಟ್ಟಿಂಗ್ ಮಾದರಿಯ ಆ್ಯಪ್ಗಳು ಸೃಷ್ಟಿಯಾಗಿದ್ದು ಆನ್ಲೈನ್ ಜೂಜು ಅವ್ಯಾಹತವಾಗಿ ನಡೆಯುತ್ತಿದೆ. ಮೊಬೈಲ್ಗಳಲ್ಲೇ ಹಣ ಕಟ್ಟಿ ಆನ್ಲೈನ್ ಅದೃ ಷ್ಟ ಪರೀಕ್ಷೆಗೆ ಇಳಿಯುವ ಯುವಕರು ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚಾಗುತ್ತಿದೆ.
ಕದ್ದುಮುಚ್ಚಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವುದು ದೊಡ್ಡ ಸವಾಲಾಗಿದೆ. ಬೆಟ್ಟಿಂಗ್ ಜಾಲ ನಡೆ ಸುವ ದಂಧೆ ಒಂದೆಡೆಯಾದರೆ ಆನ್ಲೈನ್ ಅದೃಷ್ಟ ಪರೀಕ್ಷೆ ಕೂಡಾ ರಾಜಾರೋಷವಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ದಂಧೆ ತಡೆಯೊಡ್ಡುವುದು ಹೇಗೆ ಎಂಬುದೇ ಈಗ ದೊಡ್ಡ ಸವಾಲಾಗಿದೆ.
ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳೇ ಬೆಟ್ಟಿಂಗ್ ದಂಧೆಯಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಇನ್ನು ಕೆಲವರು ಸ್ನೇಹಿತರು ಬೆಟ್ಟಿಂಗ್ಗಾಗಿಯೇ ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಮಾಡಿಕೊಂಡು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇದು ಒಂದೆಡೆಯಾದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಯುವಕರೆಲ್ಲಾಒಂದೆಡೆ ಸೇರಿ ಕ್ರಿಕೆಟ್ ಮ್ಯಾಚ್ ನೋಡುತ್ತಲೇ ಸ್ಪಾಟ್ನಲ್ಲೇ ಬೆಟ್ಟಿಂಗ್ ಆಟವಾಡುತ್ತಿದ್ದಾರೆ.
ಐಪಿಎಲ್ ಪಂದ್ಯದ ಆರಂಭದಿಂದ ಹಿಡಿದು ಅಂತ್ಯದವರೆಗೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲೂಯುವಕರು ಬೆಟ್ಟಿಂಗ್ ಹುಚ್ಚಿಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ.
ಆನ್ಲೈನ್ನಲ್ಲಿ ವ್ಯವಹಾರ ಇರುವುದರಿಂದ ಯಾವ ಪಂದ್ಯ? ಎಷ್ಟು ಗಂಟೆಗೆ ಆರಂಭಗೊಳ್ಳುತ್ತದೆ? ಎದುರಾಳಿ ಪಂದ್ಯದಲ್ಲಿ ಯಾರು ಉತ್ತಮ ಆಟಗಾರರು? ಅವರ ಪ್ರದರ್ಶನ ಹೇಗೆ? ಯಾವ ಟೀಂ ಟಾಸ್ ಗೆಲ್ಲುತ್ತದೆ? ಯಾವ ಬೌಲರ್ ಎಷ್ಟು ವಿಕೇಟ್ ಪಡೆಯುತ್ತಾನೆ? ಯಾವ ಬ್ಯಾಟ್ Õಮ್ಯಾನ್ ಎಷ್ಟು ರನ್ ಹೊಡೆಯುತ್ತಾನೆ? ಎಷ್ಟು ಓವರ್ಗಳಲ್ಲಿ ಪಂದ್ಯ ಮುಗಿಯಲಿದೆ? 10 ಓವರ್ಗಳಲ್ಲಿ ಬ್ಯಾಟಿಂಗ್ ಟೀಂ ಎಷ್ಟು ರನ್ ಗಳಿಸುತ್ತದೆ? 20 ಓವರ್ನಲ್ಲಿ ಎಷ್ಟು ರನ್ ಹೊಡೆಯುತ್ತದೆ? ಯಾವುದು ಫೆವ್ ರೆಟ್ ಟೀಂ? ಯಾವುದು ಅನ್ ಫೆವ್ರೆಟ್ ಟೀಂ ಎಂದು ತರಾವರಿ ಪ್ರಶ್ನೆ ಹಾಕಿ ಬೆಟ್ಟಿಂಗ್ ಗೆ ಹಣ ಹೂಡುವ ಖಯಾಲಿ ದಟ್ಟವಾಗಿ ಗೋಚರಿಸಿದೆ.
ಬೆಟ್ಟಿಂಗ್ನಲ್ಲಿ ಹೂಡಿದ ಹಣವನ್ನು ಆನ್ಲೈನ್ನಲ್ಲೇ ಬುಕ್ಕಿಗಳಿಗೆ ಅಥವಾ ಬೆಟ್ಟಿಂಗ್ ಆಡಿಸಿದವರ ಖಾತೆಗೆ ಹಣ ರವಾನೆಯಾಗುತ್ತಿದೆ. ಪಂದ್ಯ ಆರಂಭವಾದ ವೇಳೆ ಕಣದಲ್ಲಿರುವ ಎರಡು ಟೀಂ ಸ್ಟ್ರಾಂಗ್ ಇದ್ದರೆ ಬೆಟ್ಟಿಂಗ್ನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಲಾಗಲ್ಲ. ಒಂದು ವೇಳೆ ಕಣದಲ್ಲಿರುವ ಎರಡು ಟೀಂಗಳಲ್ಲಿ ಒಂದು ಟೀಂ ಡಲ್ ಇದ್ದರೆ ಅಂತಹ ಟೀಂಗಳ ಪರ ಹಣ ಹಾಕುವವರಿಗೆ ಬೆಟ್ಟಿಂಗ್ ಮಾಡಿದ ಹಣಕ್ಕಿಂತ ದುಪ್ಪಟ್ಟು ನೀಡಲಾಗುವುದೆಂದು ಯುವಕರಿಗೆ ಆಮಿಷವೊಡ್ಡಲಾಗುತ್ತಿದೆ.
ಬೆಟ್ಟಿಂಗ್ ಆಡುವವರಿಗೆ ,ಬುಕ್ಕಿಗಳು ಸೇರಿ ಬೆಟ್ಟಿಂಗ್ ಆಡುವವರಿಗೆ ಟಿಪ್ಸ್ ನೀಡುವ ಸಲುವಾಗಿಯೇ ಕೆಲ ಅಧಿಕೃತ ವೆಬ್ಸೈಟ್ಗಳು ಹುಟ್ಟಿಕೊಂಡಿವೆ. ಇನ್ನು ಕೆಲ ವೆಬ್ಸೈಟ್ಗಳು ಮಾನ್ಯತೆ ಪಡೆಯದೇ ಟಿಪ್ಸ್ ನೀಡುವ ಮೂಲಕ ತೆರಿಗೆ ವಂಚಿಸುತ್ತಿವೆ. ಬೆಟ್ಟಿಂಗ್ ಆಡುವವರು ಮೊದಲೇ 30 ಸಾವಿರ ರೂ.ಗಳನ್ನು ಬುಕ್ಕಿಗಳಲ್ಲಿ ಡಿಪಾಜಿಟ್ ಮಾಡಿದಾಗ ಮಾತ್ರ ಆಡಲು ಸಾಧ್ಯ. ಬೆಟ್ಟಿಂಗ್ ಆಡಿದವರು ಬುಕ್ಕಿಗಳಿಗೆ ನೇರವಾಗಿ ನಗದು ರೂಪದಲ್ಲಿ ಹಣ ನೀಡದೇ ಆನ್ಲೈನ್ ಮೂಲಕ ಪೇ-ಟಿಎಂ, ಗೂಗಲ್-ಪೇ, ಫೋನ್ ಪೇ ಮೂಲಕ ವ್ಯವಹಾರ ನಡೆಸುತ್ತಾರೆಂದು ಹೇಳಲಾಗಿದೆ.
ಪ್ರತಿ ಪಂದ್ಯಕ್ಕೆ ಎಷ್ಟು ಬೆಟ್ಟಿಂಗ್ ನಡೆಯುತ್ತದೆ?
ಪ್ರತಿ ಪಂದ್ಯಕ್ಕೆ ಎಷ್ಟು ಕೋಟಿ ಬೆಟ್ಟಿಂಗ್ ನಡೆಯುತ್ತದೆ ಎಂಬುದು. ಅದರ ಮೊತ್ತ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು. ಐಪಿಎಲ್ನ ಪಂದ್ಯವೊಂದಕ್ಕೆ ವ್ಯವಹಾರ ನಡೆಯುವುದು ಬರೋಬ್ಬರಿ 3,500 ಕೋಟಿ. ಅಂದರೆ ಇಡೀ ಟೂರ್ನಿಗೆ 2,59,000 ಕೋಟಿ ವ್ಯವಹಾರ ನಡೆಯುತ್ತದೆ. ಇದು ಇನ್ನೂ ಹೆಚ್ಚಾಗಲೂಬಹುದು ಎಂದು ಅಂದಾಜಿಸಿದೆ ‘ಇನ್ಸೈಡ್ ಸ್ಪೋರ್ಟ್ಸ್’ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿ.
ಪಂದ್ಯಕ್ಕೆ 3,500 ಕೋಟಿ ವ್ಯವಹಾರ ನಡೆದರೆ, ಒಟ್ಟು 74 ಪಂದ್ಯಗಳಲ್ಲಿ 2,59,000 ಕೋಟಿ ವ್ಯವಹಾರ ಸಂಭವಿಸುತ್ತದೆ. ಇದು ಒಂದು ರಾಜ್ಯ ಬಜೆಟ್ಗೆ ಸಮ ಅಥವಾ ಅದಕ್ಕಿಂತಲೂ ಹೆಚ್ಚು ಎಂದರೆ ತಪ್ಪಾಗಲ್ಲ. ಕೆಲ ರಾಜ್ಯಗಳಲ್ಲಿ ಇದಕ್ಕಿಂತಲೂ ಕಡಿಮೆ ಬಜೆಟ್ ಮಂಡನೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸುವುದು ಒಂದು ವರ್ಷಕ್ಕೆ. ಆದರೂ ತಾವು ಮಂಡಿಸುವ ಬಜೆಟ್ ಅನ್ನು ಸರಿಯಾಗಿ ಪೂರೈಸುವುದೇ ಇಲ್ಲ. ಆದರೆ ಬೆಟ್ಟಿಂಗ್ನಲ್ಲಿ ಇಷ್ಟು ಕೋಟಿ ವ್ಯವಹಾರ ನಡೆಯುತ್ತದೆ ಎಂದರೆ ಅದರ ವ್ಯಾಪ್ತಿಯು ಎಲ್ಲಿಯವರೆಗೆ ಚಾಚಿದೆ ಎಂಬುದು ಗೊತ್ತಾಗುತ್ತದೆ.
ಐಪಿಎಲ್ ಪಂದ್ಯಾವಳಿ ವೇಳೆಯಲ್ಲಿ ನಾಯಿ ಕೊಡೆಗಳಂತೆ ಹುಟ್ಟುವ ಬೆಟ್ಟಿಂಗ್ ಆ್ಯಪ್ ಗಳು, ವಿವಿಧ ರೀತಿಯ ಆಕರ್ಷಕ ಲಾಭದ ಈ ಬೆಟ್ಟಿಂಗ್ ಆ್ಯಪ್‍ಗಳು ಮೊಬೈಲ್ ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ.
ಈ ನಡುವೆ ಕೆಲವು ಆ್ಯಪ್ ಗಳು ಬೆಟ್ಟಿಂಗ್ ಏಜೆಂಟ್ ಆಗಿ ಕಾರ್ಯ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಲೈವ್ ಲೈನ್ ಗುರು, ಕ್ರಿಕೆಟ್ ಮಜ್ಞಾ, ಲೋಟಸ್, ಬೆಟ್ – 365, ಬೆಟ್ ಮೇಳದಂತಹ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್’ಗಳು ಯುವಕರ ಮೊಬೈಲ್ ಸೇರುತ್ತಿವೆ. ರಮ್ಮಿ ಸರ್ಕಲ್, ಡ್ರೀಮ್ ಎಲೆವೆನ್’ನಂತಹ ಅಂತರಾಷ್ಟ್ರೀಯ ವೆಬ್ ಸೈಟ್ ಗಳು,
ಸಾಕಷ್ಟು ಮಧ್ಯಮ ವರ್ಗದ ಜನರೇ ಇದರಲ್ಲಿ ಹಣ ಹೂಡುತ್ತಾರೆ. ಈ ಜೂಜಿನಲ್ಲಿ ಲಾಭ ಮಾಡಿ ಯಶಸ್ವಿಯಾದವರು ತುಂಬಾ ಕಡಿಮೆ. ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡವರು ಕೊನೆಗೆ ಪ್ರಾಣವನ್ನೂ ಕಳೆದುಕೊಂಡವರೇ ಹೆಚ್ಚು.
ಪ್ರಾರಂಭದಲ್ಲಿ ಸರಳವಾಗಿ ಖುಷಿ ಖುಷಿಯಾಗಿ ಇದು ನಮ್ಮನ್ನು ಸೆಳೆಯತೊಡಗುತ್ತದೆ. ಹಾಗೆಯೇ ಮುಂದುವರೆದಂತೆ ಆಳಕ್ಕೆ ಎಳೆದೊಯ್ಯುತ್ತದೆ. ಕೊನೆಗೆ ನಮ್ಮ ಅಸ್ತಿತ್ವವನ್ನೇ ಮರೆಸುತ್ತದೆ. ನಮ್ಮ ಭಾವನೆಗಳನ್ನು ಬೆಟ್ಟಿಂಗ್ ನಿಯಂತ್ರಿಸುತ್ತದೆ. ಮಾನ ಮರ್ಯಾದೆ ಕುಟುಂಬದ ಜವಾಬ್ದಾರಿ ಭವಿಷ್ಯದ ಕಷ್ಟಗಳು ಯಾವುದೂ ಆ ಕ್ಷಣದಲ್ಲಿ ನೆನಪಾಗದಂತೆ ಮಾಡುತ್ತದೆ.
ಹಣಕ್ಕಾಗಿ ಯಾರನ್ನು ಬೇಕಾದರೂ ಅಂಗಲಾಚುವ, ಏನನ್ನೂ ಬೇಕಾದರೂ ಮಾಡುವ, ಯಾವುದನ್ನು ಬೇಕಾದರೂ ಮಾರುವ ಮನಸ್ಥಿತಿ ಸೃಷ್ಟಿ ಮಾಡುತ್ತದೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರು ಇದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಕೆಲವರು ದುಷ್ಚಟಗಳಿಗೆ ಬಲಿಯಾದರೆ, ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡು ತೀರಾ ಕೆಳಹಂತಕ್ಕೆ ಕುಸಿದರೆ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಊರು ಬಿಟ್ಟು ಓಡಿ ಹೋಗುವವರು, ಸಂಸಾರದಿಂದ ವಿಚ್ಚೇದಿತರಾಗುವವರು, ಮಾನಸಿಕ ಖಿನ್ನತೆಗೆ ಒಳಗಾಗುವವರು ಸಹ ಸಾಕಷ್ಟು ಜನರಿದ್ದಾರೆ.
‘ಇದೊಂದು ಚಕ್ರವ್ಯೂಹ. ಒಳಗೆ ಹೋಗುವುದಷ್ಟೇ. ಹೊರಗೆ ಬರುವುದು ಯಾರಿಗೂ ಗೊತ್ತಿಲ್ಲ. ಅಗ್ಗದ ದರಕ್ಕೆ ಸಿಗುವ ಸ್ಮಾರ್ಟ್ಫೋನ್, ಉಚಿತ ಡಾಟಾದಿಂದಾಗಿ ಬೆಟ್ಟಿಂಗ್ ಲೋಕವೂ ಡಿಜಿಟಲೀಕರಣಗೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲಿನ ತರಹ ಯಾವುದೋ ಮಹಾನಗರಿಯಲ್ಲಿ ಕುಳಿತ ಒಬ್ಬ ವ್ಯಕ್ತಿ ಇದನ್ನು ನಿಯಂತ್ರಿಸುತ್ತಿಲ್ಲ. ಈಗ ಎಲ್ಲ ಪಟ್ಟಣ, ನಗರಗಳಲ್ಲಿಯೂ ಕಿಂಗ್ಪಿನ್ ಗಳಿದ್ದಾರೆ. ಬುಕ್ಕಿಗಳು, ಬಾಜಿ ಕಟ್ಟುವವರ ದ್ವೀಪಗಳು ಸೃಷ್ಟಿಯಾಗಿವೆ. ತಮ್ಮ ಪಕ್ಕದಲ್ಲಿಯೇ ಕೂತಿರುವವರು, ಬೆಟ್ಟಿಂಗ್ ಜಾಲದಲ್ಲಿ ತೇಲಾಡುತ್ತಿದ್ದರೂ ಗೊತ್ತೇ ಆಗದ ಸ್ಥಿತಿ ಇಂದಿನದು.
ಶ್ರೀಮಂತರು ಮೋಜಿಗಾಗಿ ಬೆಟ್ಟಿಂಗ್ ಮಾಡುತ್ತಾರೆ. ಅವರಿಗೆ ಕಳೆದುಕೊಂಡಿದ್ದನ್ನು ಮರಳಿ ಗಳಿಸುವುದು ಗೊತ್ತಿರುತ್ತದೆ. ಮಧ್ಯಮ, ಕೆಳಮಧ್ಯಮ ವರ್ಗದ ಕುಟುಂಬಗಳು ಒಮ್ಮೆ ಹಾಳಾದರೆ ಚೇತರಿಸಿಕೊಳ್ಳಲು ಸಾಧ್ಯವೇ?
90ರ ದಶಕಕ್ಕಿಂತ ಮೊದಲು ಪಂದ್ಯದ ಗೆಲುವು ಮತ್ತು ಸೋಲುಗಳು ಮಾತ್ರ ಬೆಟ್ಟಿಂಗ್ ನ ಕೇಂದ್ರಬಿಂದುವಾಗಿತ್ತು. ಸ್ನೇಹಿತರ, ಬಂಧುಗಳ ವಲಯದ ಮಟ್ಟಿಗೆ ಇದು ನಡೆಯುತ್ತಿತ್ತು. ಇದರ ಲಾಭ, ಜನಪ್ರಿಯತೆ ಹೆಚ್ಚಾದಂತೆ ಮುಂದೆ ಮುಂಬೈ ಭೂಗತ ಜಗತ್ತು ಇದನ್ನು ತಮ್ಮ ಕೈವಶ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿತು. ಅಲ್ಲಿಂದ ಶುರುವಾಯಿತು ಕ್ರಿಕೆಟ್ ಬೆಟ್ಟಿಂಗ್ ನ ಕರಾಳ ದಂಧೆ.
ಲೇಖಕ ಚಂದ್ರಮೋಹನ್ ಪುಪ್ಪಳ ಅವರು ಬರೆದಿರುವ ‘ನೋ ಬಾಲ್’ ಆಂಗ್ಲ ಕೃತಿಯಲ್ಲಿ ಮುಂಬೈ ಮಾಫಿಯಾದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದರಲ್ಲಿ ಎರಡು ವಿಧಗಳನ್ನು ಗುರುತಿಸುತ್ತಾರೆ. ಒಂದು ಹರಡಿಕೊಂಡಂತೆ ಮಾದರಿಯ ಬೆಟ್ಟಿಂಗ್ (ಸ್ಪ್ರೆಡ್ ಬೆಟ್ಟಿಂಗ್) ಮತ್ತು ಸಮಗ್ರ ಮಾದರಿಯ ಬೆಟ್ಟಿಂಗ್ (ಟೋಟಲ್ ಬೆಟ್ಟಿಂಗ್) .
ಸ್ಪ್ರೆಡ್ ಬೆಟ್ಟಿಂಗ್ ಎಂದರೆ, ಪಂದ್ಯದ ಟಾಸ್, ತಂಡಗಳ ಸ್ಕೋರ್,,ಆಟಗಾರರ ವೈಯಕ್ತಿಕ ಸ್ಕೋರ್ ಗಳ ಸುತ್ತ ಬಾಜಿ ಕಟ್ಟಲಾಗುತ್ತದೆ. ಟೋಟಲ್ ಬೆಟ್ಟಿಂಗ್ ವ್ಯಾಪ್ತಿ ದೊಡ್ಡದು. ಟಾಸ್, ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಬೆಸ್ಟ್ ಬೌಲರ್, ವಿನ್ನರ್, ಲೂಸರ್, ಟೋಟಲ್ ಸ್ಕೋರ್ ಎಲ್ಲವನ್ನೂ ಒಳಗೊಂಡಿರುತ್ತದೆ. ಆದರೆ ಇಲ್ಲಿಯ ಲೆಕ್ಕಾಚಾರ ತುಸು ಕ್ಲಿಷ್ಟಕರ. ಆದರೂ ಈ ಮಾದರಿಯತ್ತಲೇ ಬಹಳ ಜನರಿಗೆ ಆಕರ್ಷಣೆ ಹೆಚ್ಚು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕ್ರಿಕೆಟ್ ಬೆಟ್ಟಿಂಗ್ ಮೂಲಕವೇ ಕೋಟ್ಯಂತರ ಹಣ ಗಳಿಸಿದ ದಾಖಲೆಗಳು ಪೊಲೀಸ್ ಕಡತಗಳಲ್ಲಿವೆ. ಬೆಟ್ಟಿಂಗ್ ಅನ್ನು ತಮಗೆ ಬೇಕಾದ ಹಾಗೆ ಲಾಭದ ದಂಧೆ ಮಾಡಿಕೊಳ್ಳಲು ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಷಿಂಗ್ ಶುರುವಾದವು. ಭಾರತ, ದಕ್ಷಿಣ ಆಫ್ರಿಕಾ,ಪಾಕಿಸ್ತಾನ ಸೇರಿದಂತೆ ಹಲವು ದೇಶಗಳ ಖ್ಯಾತನಾಮ ಕ್ರಿಕೆಟಿಗರು ಸಿಕ್ಕಿಹಾಕಿಕೊಂಡಿದ್ದು ಇತಿಹಾಸ. 2013ರಲ್ಲಿ ಐಪಿಎಲ್ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಅತಿ ದೊಡ್ಡ ಹಗರಣವಾಗಿ ಗಮನ ಸೆಳೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷ ಅಮಾನತಿನಲ್ಲಿಡಲಾಯಿತು. ಶ್ರೀಶಾಂತ್, ಚಾಂಡಿಲಾ ಅವರಂತಹ ಆಟಗಾರರು ನಿಷೇಧ ಶಿಕ್ಷೆಅನುಭವಿಸಿದರು. ಕ್ರಿಕೆಟ್ ಆಟವನ್ನು ಬಹಳಷ್ಟು ಜನರು ಸಂಶಯದ ದೃಷ್ಟಿಯಿಂದ ನೋಡುವಂತಾಯಿತು.
ಭಾರತದಲ್ಲಿ ಕಾನೂನು ಬಾಹಿರ
ಜೂಜು ಹಾಗೂ ಬೆಟ್ಟಿಂಗ್ ಸೇರಿದಂತೆ ಹಣ ನೀಡಿ ಗಳಿಸುವ ಟೋಕನ್ಗಳನ್ನು ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜನ್ನು ನಿಷೇಧಿಸಲಾಗಿದೆ. ಆನ್ಲೈನ್ ಜೂಜು, ಬೆಟ್ಟಿಂಗ್ ಆಡಿದವರಿಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 1 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ.
ಬಾಜಿ ಕಟ್ಟಿ ಆಡಿದ್ರೂ ಶಿಕ್ಷೆ
ಬಾಜಿ ಕಟ್ಟಿ ಆಡಿದ್ರೂ ಶಿಕ್ಷೆ ವಿಧಿಸಲಾಗುತ್ತದೆ. ಜೂಜಾಟಕ್ಕೆ ಸ್ಥಳ ಕೊಟ್ಟವರಿಗೆ ಹಾಗೂ ಬೆಂಬಲಿಸಿದವರಿಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ಏರಿಕೆ ಮಾಡಲಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ಆಡುವವರಿಗೆ ಸಹಾಯ ಮಾಡಿದ್ರೆ 6 ತಿಂಗಳ ತನಕ ಜೈಲು, ಹತ್ತು ಸಾವಿರ ದಂಡ ವಿಧಿಸಲಾಗುತ್ತದೆ.
ಜೂಜಾಟ, ಮಟ್ಕಾದಂಥ ಅಕ್ರಮ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ನಿತ್ಯ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.ಸೈಬರ್ ಕ್ರೈಂ ವಿಭಾಗವೂ ಹದ್ದಿನ ಕಣ್ಣು ಇಟ್ಟಿದ್ದರೂ. ಸಹ ಐಪಿಎಲ್ ಪಂದ್ಯಗಳ ಮೇಲಿನ ಅಕ್ರಮಕ್ಕೆ ಕಡಿವಾಣ ಇಲ್ಲದಂತಾಗಿದೆ. ಹೀಗಾಗಿ ದಿನದಿಂದ ದಿನಕ್ಕೆ ಬೆಟ್ಟಿಂಗ್ ಪ್ರಮಾಣ ಹೆಚ್ಚುತ್ತಿದೆ. ಪೊಲೀಸರು ಎಷ್ಟು ನಿಗಾ ಇರಿಸಿದ್ದರೂ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕುವುದು ಸವಾಲಿನ ಕೆಲಸವಾಗಿದೆ.
ಲೋಧಾ ಸಮಿತಿ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಆಡಳಿತ ಸುಧಾರಣೆಗಾಗಿ ಶಿಫಾರಸ್ಸುಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ನಿವೃತ್ತ ನ್ಯಾ. ಆರ್.ಎಂ. ಲೋಧಾ ಸಮಿತಿಯು ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಬೇಕು ಎಂದು ಹೇಳಿದೆ.
ಅನಧಿಕೃತ ಬೆಟ್ಟಿಂಗ್ನಿಂದಾಗಿ ಬಹಳಷ್ಟು ಅಕ್ರಮ ನಡೆಯು ತ್ತಿವೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಕಾನೂನು ಬದ್ಧಗೊಳಿಸಿದರೆ ಆದಾಯ ಸಿಗುತ್ತದೆ. ಜನರನ್ನು ಮೋಸಗೊಳಿಸುವ ಕುತಂತ್ರಗಳಿಗೆ ಕಡಿವಾಣ ಹಾಕಿ ದಂತಾಗುತ್ತದೆ ಜೊತೆಗೆ ‘ಅಕ್ರಮ ಬೆಟ್ಟಿಂಗ್ ವೃತ್ತಿಪರ ಆಟಗಾರರ ಮೇಲೆಯೂ ತನ್ನ ಪ್ರಭಾವ ಬೀರುತ್ತಿದೆ. ಆದ್ದರಿಂದ ಬೆಟ್ಟಿಂಗ್ ಸಕ್ರಮವಾಗಲಿ; ಮ್ಯಾಚ್ ಫಿಕ್ಸಿಂಗ್ ಶಿಕ್ಷಾರ್ಹ ಅಪರಾಧವಾಗಬೇಕು. ಅದಕ್ಕಾಗಿ ಕಾನೂನು ರೂಪಗೊಳ್ಳಬೇಕು’ ಎಂದು ಶಿಫಾರಸು ಮಾಡಿದೆ
ಈಗಾಗಲೇ ಆಸ್ಟ್ರೇಲಿಯಾ, ಯುಕೆ, ದ. ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಲಾಗಿದೆ. ಜೂಜುಪ್ರಿಯರ ದೇಶ ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ಬೆಟ್ಟಿಂಗ್ ನಿಂದ ಸರ್ಕಾರಕ್ಕೆ ಅಪಾರ ಆದಾಯ ಬರುತ್ತಿದೆ. ಇಲ್ಲಿ ಟೆನಿಸ್ , ಫುಟ್ಬಾಲ್ ಮತ್ತಿತರ ಕ್ರೀಡೆಗಳ ಬೆಟ್ಟಿಂಗ್ ಗಳನ್ನೂ ಸಕ್ರಮಗೊಳಿಸಲಾಗಿದೆ .
ಐಪಿಎಲ್ ನಿಂದ ಬಿಸಿಸಿಐ ಗೆ ಆದಾಯ, ಸಾವಿರಾರು ಜನರಿಗೆ ಉದ್ಯೋಗ, ಕೋಟ್ಯಾಂತರ ಜನರಿಗೆ ಮನರಂಜನೆ , ಸರ್ಕಾರಕ್ಕೆ ತೆರಿಗೆ ನೀಡಿದರೆ ,ಇದರ ಜೊತೆಗೆ ಲಕ್ಷಾಂತರ ಕುಟುಂಬಗಳು ಬೀದಿಪಾಲು ಆಗಿರುವುದು ಅಕ್ಷರಶಃ ಸತ್ಯ.
ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರದ್ದು ಆಗಿದ್ದರೂ ಸಹ ಸಮಾಜವನ್ನು ಸ್ವಾಸ್ಥ್ಯತೆ ಕಡೆಗೆ ಸಾಗುವ ಹಾಗೆ ಮಾಡುವು ಜವಾಬ್ದಾರಿ ಸರ್ಕಾರ ಸಮುದಾಯ, ಸಂಘಸಂಸ್ಥೆಗಳ ಮೇಲೆ ಇದೆ.
ಸುಲಭವಾಗಿ ಹಣ ಮಾಡಬೇಕು ಎಂಬ ಮನೋಭಾವ ದುರಾಸೆಯ ಪ್ರವೃತ್ತಿ, ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು ಆಗಿವೆ. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯನ್ನು ಗಮನಿಸಬೇಕು.ಒಂದು ಅತ್ಯುತ್ತಮ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದು ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು ಒಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ದುರ್ಗತಿಗೆ ಕಾರಣವಾಗುತ್ತಿದೆ.
ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ, ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಜನರ ಹುಚ್ಚು ಮನಸ್ಸಿನ ಹೊಳೆಯಲ್ಲಿ ಬೆಟ್ಟಿಂಗ್ ನಿಲ್ಲಿಸುವುದು ಅಥವಾ ಇಲ್ಲದಂತೆ ಮಾಡುವುದು ಕಷ್ಟ. ಅದಕ್ಕೆ ಬದಲಾಗಿ ನಾವುಗಳೇ ಆ ಚಟಕ್ಕೆ ಬಲಿಯಾಗದಂತೆ ಸ್ವಯಂ ನಿಯಂತ್ರಣ ಹೇರಬೇಕು.ಅಲ್ಲದೇ ಸರ್ಕಾರ ಕಠಿಣವಾದ ಕಾಯಿದೆಯನ್ನು ಜಾರಿಗೆ ಗೊಳಿಸಬೇಕು.