ಡಾ. ಲೀಲಾ ಅಪ್ಪಾಜಿ ಎಂದರೆ ಅಗಾಧ ಶಿಷ್ಯರ ನಡುವಿನ ಒಬ್ಬ ಪ್ರೀತಿಸುವ ಹೃದಯದ ಗುರು ಶಿಷ್ಯರನ್ನು ಮಕ್ಕಳಂತೆ ಕಾಣುವ ಪ್ರೀತಿ ವಾತ್ಸಲ್ಯ. ಕಾಲೇಜ್ ದಿನಗಳಲ್ಲಿ ಅತ್ಯುತ್ಸಾಹದಿಂದ ಪಾಠದ ಜೊತೆಗೆ ಮಕ್ಕಳ ಕಲೆಗೆ ಒಳಗಿನ ಪ್ರತಿಭೆಗೆ ನೀರೆರೆಯುತ್ತಿದ್ದ ಡಾ. ಲೀಲಾ ಅಪ್ಪಾಜಿ ಅವರು ಸ್ವತಃ ಕೃತಿಗಳನ್ನು ಆಗ ರಚಿಸದಿದ್ದರೂ ಮಕ್ಕಳಿಗಾಗಿ ಅನೇಕ ಸ್ಕ್ರಿಪ್ಟ್ ಗಳನ್ನು ತಯಾರಿಸುತ್ತಿದ್ದರು ಆಗೆಲ್ಲ ಇವರೊಳಗೊಬ್ಬ ಸಾಹಿತಿ ಇದ್ದಾರೆ ಅದೇಕೆ ಗುರುತಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ನನಗೆ ಮೂಡುತ್ತಿತ್ತು.
ನಿವೃತ್ತಿಯ ನಂತರ ಅವರ ಹೊಸತೊಂದು ಮುಖ ಅನಾವರಣಗೊಂಡಿತ್ತು ಅದುವೇ ಚಿತ್ರಗ್ರಹಣ ವಿಶೇಷವಾಗಿ ಹಕ್ಕಿ ಫೋಟೋಗ್ರಫಿ ಇವರ ಪ್ರಮುಖ ಹವ್ಯಾಸಗಳಲ್ಲಿ ಒಂದಾಯಿತು. ಹಕ್ಕಿಗಳ ಹಿಂದೋಡುವುದು ಸುಲಭದ ಕೆಲಸವಲ್ಲ ಅಗಾಧವಾದ ತಾಳ್ಮೆ ಸಹನೆ ಏಕಾಗ್ರತೆ ದೈಹಿಕ ಶ್ರಮವನ್ನು ಬೀಳುವ ಕಾಯಕ ಇದು. ಡಾ ಲೀಲಾ ಅಪ್ಪಜಿಯವರು ಮೂಲತಃ ಶಿಕ್ಷಣ ಕ್ಷೇತ್ರದವರಾದರೂ, ನಿವೃತ್ತಿಯ ನಂತರದ ಹವ್ಯಾಸವಾಗಿ ಬೆಳೆಸಿಕೊಂಡ ಹಕ್ಕಿ ಛಾಯಾಗ್ರಹಣ ಅವರು ಬದುಕನ್ನು ನೋಡುವ ದಿಕ್ಕನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು. ಶಿಕ್ಷಕಿ ಹಿನ್ನೆಲೆಗೆ ಸರಿದು, ಛಾಯಾಗ್ರಾಹಕಿ ಮುನ್ನೆಲೆಗೆ ಬಂದುದರ ಹಿಂದೆ ಒಂದು ದೊಡ್ಡ ಚಿತ್ರಣವೇ ಇದೆ.

ಗಾಂಧಿ, ಟ್ಯಾಗೋರ್, ಕುವೆಂಪು ಅವರನ್ನು ಚಿತ್ರಗಳಲ್ಲಿ ಕಂಡಿರಿಸಿದ ಡಾ.ಲೀಲಾ ಅಪ್ಪಾಜಿ ಅವರಿಗೆ ಹಕ್ಕಿಗಳನ್ನು ಚಿತ್ರಗಳಲ್ಲಿ ಹಿಡಿಯುವ ಆಸೆ ತುಸು ದುಬಾರಿಯೇ ಆಯಿತು. ಹಣದ ರೂಪದ ದುಬಾರಿಯಲ್ಲ.
ಕ್ಯಾಮೆರಾ ಹಿಡಿದು ನಿಂತರೆ ಬೇರೆ ವಿಶ್ವವಿದೆಯೆನ್ನುವುದನ್ನೇ ಮರೆಯುವ ಡಾ.ಲೀಲಾ ಅಪ್ಪಾಜಿಯವರು ಮುನ್ನುಡಿಯಲ್ಲೇ `ಹಕ್ಕಿಗಳ ಸಂಗದಲಿ ರೆಕ್ಕೆ ಮೂಡುವುದೆನಗೆ; ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ.’ ಎಂದು ಹೇಳುತ್ತಾ “ಹೊಸಕ್ಷೇತ್ರದತ್ತ ಸೆಳೆತ ಸಹಜ. ಅದರಾಳದ ಸುಳಿಯಲ್ಲಿ ಸಿಕ್ಕಿಕೊಳ್ಳುವುದು ವಿಶಿಷ್ಟ ಅನುಭವ. ಹಕ್ಕಿಗೊಲಿದೆ, ಮಾತು ಮರೆತೆ. ಮೌನದಾಸರೆಯ ಸೆರೆಯಾದೆ. ಚಿಲಿಪಿಲಿ ಸದಾ ಕಿವಿದೆರೆಗೆ ತಾಗಲೆನುವ ಧ್ಯಾನಲೀನ ಈ ಲೀಲಾ. ಹಕ್ಕಿ ಚಿತ್ರ ತೆಗೆಯಲು ಪಳಗಿದ ಫೋಟೋಗ್ರಾಫರ್ ಆದರಷ್ಟೇ ಸಾಲದು, ನಾವೂ ಹಕ್ಕಿಯಾಗಲೇಬೇಕು, ಕೊನೆಯ ಪಕ್ಷ ಹಕ್ಕಿಯಂತಾದರೂ ಆಗಬೇಕು. ನಿಸರ್ಗದಲ್ಲಿ ಹಕ್ಕಿಗಳೇ ಬೆಸ್ಟ್ ಫೋಟೋಗ್ರಾಫರ್. ನಾವು ಕಾಣುವುದಕ್ಕಿಂತ ಚಂದದ ನೋಟವನ್ನು ಅವುಗಳು ಕಾಣಬಲ್ಲವು. ಪಕ್ಷಿನೋಟ ಎಂಬುದಕ್ಕೆ ವಿಶೇಷ ಅರ್ಥ ವ್ಯಾಪ್ತಿ. ಪ್ರಕೃತಿಯ ಜೊತೆಗೆ ನಮ್ಮನ್ನು ಬೆಸೆಯುವ ಸೇತುಗಳೆ ಪಕ್ಷಿಗಳು.
ತುಸು ಹೆಚ್ಚೆ ದುಬಾರಿಯಾದ ಹಕ್ಕಿ ಛಾಯಾಗ್ರಹಣಕ್ಕಿಳಿದ ನನಗೆ ಅವು ಕೊಟ್ಟ ಖುಷಿ ಲೋಕದ ಲೆಕ್ಕಾಚಾರಕ್ಕೆ ನಿಲುಕದ್ದು. ಅರವತ್ತು ಕಳೆದ ಬಳಿಕ ಹೊಸಲೋಕ ಹೊಕ್ಕ ನಾ ಗಳಿಸಿದ್ದು ಅಪಾರ. ನಾ ಮತ್ತೆ ಮಗುವಾದೆ. ಮಗು ಸಹಜವಾದ ಆಸಕ್ತಿ ಕುತೂಹಲ ಮುಗ್ಧತೆಗಳ ಸೆರಗು ಹಿಡಿದು ಸೆರಗಿಲ್ಲದ ಸಂತಸದ ಲೋಕಕ್ಕೆ ಹೊರಟ ನನ್ನನ್ನು ಹಕ್ಕಿಲೋಕ ತನ್ನದೆಗೆ ಅವುಚಿಕೊಂಡು ಅಕ್ಕರೆಯಿಂದ ಪೊರೆದಿದೆ, ಮತ್ತೆ ಮತ್ತೆ ಕೈಬೀಸಿ ಅಲ್ಲಲ್ಲ ರೆಕ್ಕೆ ಬೀಸಿ ಕರೆದಿದೆ, ಕರೆಯುತ್ತಿದೆ. ಹಳತೆಂಬ ಬೇಸರವಿರದ ನಿತ್ಯನೂತನವಾದ ಈ ಲೋಕದಲ್ಲಿ ನಾನು ಕಳೆದುಹೋದೆ, ಕೂಡಿಕೊಂಡೆ, ಕೂಡಿಸಿಕೊಂಡೆ. ಹೊಸ ಪ್ರವೃತ್ತಿ ಸೆಳೆದು ಹಕ್ಕಿ ಹಿಂದೆ ಹೊರಟಿದ್ದೆ ತಡ ಆ ಸಂಪತ್ತು ಮತ್ತೊಂದು ರೂಪದಲ್ಲಿ ಬದುಕಿನ ಜೋಳಿಗೆಗೆ ಬಂದವು. ಸಿಕ್ಕ ಹಕ್ಕಿಗಳು ಗುರುಗಳಾದರು, ನಾನು ಬದುಕಿನ ನಾನಾ ಪಾಠಗಳನ್ನು ಅವರಿಂದ ಕಲಿಯುವ ವಿಧೇಯ ಶಿಷ್ಯಳಾದೆ. ಗುರುವಾಗಿದ್ದೆ ಎಂಬ ನೆನಪು ಮಾಸತೊಡಗಿತ್ತು ಚಿತ್ತ ಸೆಳೆಯುವ ಚಿತ್ರ – ಸಾವಿರ ಮಾತು ತೆರೆಸುವ ಸಾಗರದ ಆಗರ. ಅದರ ದಡದಲ್ಲಿ ನಿಂತ ನಾನು ಕಂಡ ನೋಟವನ್ನು ನಿಮಗೆ ಕಾಣಿಸುವ ಈ ಪ್ರಯತ್ನಕ್ಕೆ ನಿಮ್ಮ ಕಣ್ಮನವೂ ಕೂಡಲೆಂಬ ಹಂಬಲದೊಡನೆ ನನ್ನ ಹಕ್ಕಿ ಕಂದಮ್ಮಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುತ್ತಿರುವೆ. ಸಂಭ್ರಮದಿAದ ಸ್ವೀಕರಿಸಿ.”

ಹೀಗೆ ಗರಿಗೆದರುವ ಮುನ್ನ ತಮ್ಮ ಮಾತುಗಳನ್ನು ಹೇಳುವ ಡಾ. ಲೀಲಾ ಅಪ್ಪಾಜಿ ಅವರ ಹಕ್ಕಿ ಅಟೆಂಡೆನ್ಸ್ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ವಿಶಿಷ್ಟ ಪ್ರಯೋಗ. ಏಕೆಂದರೆ ಸಾದಾಸೀದಾ ಅನುಭವಗಳನ್ನು ದಾಖಲಿಸುವ ಧಾವಂತವಿರದ ಡಾ. ಲೀಲಾ ಅಪ್ಪಾಜಿ ಅವರು ಹಕ್ಕಿಗಳ ನಡುವೆಯೂ ಒಬ್ಬ ಟೀಚರಂತೆ ಅಟೆಂಡೆನ್ಸ್ ಹಾಕುವ ರೀತಿಯಲ್ಲಿ ಹಕ್ಕಿಗಳ ಜೊತೆ ಮಾತನಾಡುವ ತೆರದಲ್ಲಿ ಈ ಕೃತಿಯನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಛಾಯಾಚಿತ್ರಗ್ರಹಣ ಮಾತ್ರವಲ್ಲದೆ ಸಾಹಿತ್ಯವು ಸೆಳೆಯುತ್ತದೆ ಈ ಸಾಹಿತ್ಯ ಇಲ್ಲದೆ ಹೋಗಿದ್ದರೆ ಇದೊಂದು ಚಿತ್ರಗ್ರಹಣದ ಪುಸ್ತಕವಾಗಿ ಬಿಡುತ್ತಿತ್ತು .

ಲೀಲಾ ಅಪ್ಪಾಜಿಯವರು ಕ್ಯಾಮೆರಾ ಹಿಡಿದು ಮಯೂರ ಮಯೂರ ಎಂದು ಕರೆದರೆ ಅದು ಪ್ರೆಸೆಂಟ್ ಮೇಡಂ ಎನ್ನುತ್ತದೆ.
ಹೀಗೊಂದು ಸಂಭಾಷಣೆ ಒಮ್ಮೆ ನೋಡಿ:
`ಮೇಡಂ ಇದೇನ್ರೋ ಭಾನುವಾರ ಆದರೂ ಬಂದಿದ್ದೀರಿ ಎಲ್ಲರೂ ಇಲ್ಲೇ ಇದ್ದೀರಿ, ಏನ್ರೋ ಸಮಾಚಾರ’ ಅಂತ ಮೇಡಂ ಕೇಳುತ್ತಾರೆ. ಹಕ್ಕಿಗಳು ಹೇಳುತ್ತವೆ “ಇಲ್ಲೇ ಆಡಿಕೊಳ್ಳೋಣ ಅಂತಾ ಇದೀವಿ ಮೇಡಂ.’
`ಸರಿ ಆಡ್ಕೊಳ್ರಪ್ಪ’
`ಇವತ್ತು ಅಟೆಂಡೆನ್ಸ್ ಹಾಕಿ ಮೇಡಂ’
`ಬೇಡ ಕಣ್ರಯ್ಯ ಇವತ್ತು ಭಾನುವಾರ’
`ಅಟೆಂಡೆನ್ಸ್ ಹಾಕಿ ಮೇಡಂ. ಆದರೆ ಮಾಮೂಲಿ ಪುಸ್ತಕದಲ್ಲಿ ಬೇಡ.’
`ಮತ್ತೆ ಇನ್ನು ಹೇಗೆ ಅಟೆಂಡೆನ್ಸ್ ಹಾಕೋದು’
ಎಂಬ ಪ್ರಶ್ನೆಯನ್ನು ಲೀಲಾ ಅಪ್ಪಾಜಿ ಹಾಕಿದರೆ ಹಕ್ಕಿಗಳು ಹೇಳುತ್ತವೆ `
`ಮೇಡಂ ಆ ಉದ್ದದ ಕೊಳವೆ ಹಾಕಿಕೊಂಡು ನೋಡ್ತಿರಲ್ಲ ಅದು ಅದರಲ್ಲಿ. ಮೇಡಂ ಕೇಳುತ್ತಾರೆ `ಕ್ಯಾಮರಾ ಏನ್ರೋ’ ಹಕ್ಕಿಗಳು `ಹೌದು ಮೇಡಂ ನೀವು ಅದರಲ್ಲಿ ಅಟೆಂಡೆನ್ಸ್ ಹಾಕಿದರೆ ಚಂದ ನೀವು ಒಂದು ಕಣ್ಣಲ್ಲಿ ನಮ್ಮನ್ನು ನೋಡಿದರೂ ಬೇರೆಯವರು ಎರಡು ಕಣ್ಣಲ್ಲು ನೋಡುವ ಹಾಗೆ ಹೊಡೆಯುತ್ತಿರಿ ಎಷ್ಟೊಂದು ಜನಕ್ಕೆ ನಮ್ಮನ್ನು ತೋರಿಸುತ್ತೀರಿ’ ಎನ್ನುತ್ತವೆ.

ಮತ್ತೊಂದು ಚಿತ್ರದ ಸಂಭಾಷಣೆಯಲ್ಲಿ ಉಲಿಯಕ್ಕಿ `ಇವತ್ತು ಭಾನುವಾರ ಹೌದು ನನಗೂ ಗೊತ್ತು ಇವತ್ತು ಭಾನುವಾರ ಅಂತ ಆದ್ರೂ ಯಾಕೆ ಬಂದಿದ್ದೀಯಾ’ ಅಂತ ಕೇಳಿದರೆ `ನಿಮ್ಮನ್ನು ನೋಡೋಣ ಅಂತ ಬಂದಿದ್ದೀನಿ ಭಾನುವಾರ ನಿಮ್ಮ ಆ ಮಕ್ಕಳು ಬರುತ್ತಿದ್ದರೆ?’ ಎಂದು ಹಕ್ಕಿಗಳು ಇವರ ಶಿಷ್ಯರನ್ನು ಕುರಿತು ಲೇವಡಿ ಮಾಡುತ್ತವೆ. ಆಗ ಮೇಡಂ ಹೇಳುತ್ತಾರೆ `ಎಷ್ಟೋ ಸ್ಪೆಷಲ್ ಕ್ಲಾಸ್ ಇರುತ್ತಿದ್ದವು ಕೆಲವು ಸಲ ಕೆಲಸ, ಕೆಲವು ಸಲ ಪಾಠ. ನಾವು ಭಾನುವಾರಗಳಲ್ಲೂ ಪಾಠ ಮಾಡುತ್ತಿದ್ದೆವು ಎಂದು ಹೇಳುತ್ತಾ ಹಕ್ಕಿಗಳೊಂದಿಗೆ ಚಿತ್ರ ತೆಗೆಯುವಾಗಲು ತಮ್ಮ ಪಾಠದ ದಿನಗಳನ್ನು ನೆನೆಸಿಕೊಳ್ಳುವ ಪರಿ ವಿಶಿಷ್ಟವಾಗಿದೆ.

ಈ ಕೃತಿ ಕೇವಲ ಚಿತ್ರಗ್ರಹಣವಾಗದೆ ಅಟೆಂಡೆನ್ಸ್ ಎಂದು ಕೂಗುವ ಪರಿ ಮಾತ್ರವಾಗದೆ ಅವರ ಬದುಕನ್ನು ಪಕ್ಷಿ ನೋಟದಲ್ಲಿ ಹಿಡಿದಿರುವ ಒಂದು ಪ್ರಯತ್ನವೂ ಆಗಿದೆ ಅದಕ್ಕೆ ಒಂದು ಉದಾಹರಣೆ :
`ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆ ಕುಹು ಕುಹು ಕೋಕಿಲ ವಾಣಿ ಜಗಜುಮ್ಮೆಂದಿತು ಅದ ಕೇಳಿ. ಎನ್ನುವ ಹಾಡನ್ನು ಹಕ್ಕಿಗಳು ಹಾಡುತ್ತವೆ. `ಏನಪ್ಪ ಇವತ್ತು ಕುವೆಂಪು ಬರೆದ ಕೋಗಿಲೆ ಹಾಡುಗಳನ್ನು ಕಾಂಪಿಟೇಶನ್ ಗೆ ಹಾಡ್ತಾ ಇದ್ದೀರಾ’ ಎಂದರೆ ಆಗ `ಕೋಗಿಲೆ ಕ್ಲಾಸಿಗೆ ಬರದೆ ಹೊರಗೆ ಕುಳಿತಿದ್ದಾನೆ ಒಳಗೆ ಬರಲಿ ಎಂದು ಹಾಡು ಹೇಳುವ ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು ಚಿಕ್ಕವ್ವ ಚಿಕ್ಕವ್ವ ಎನ್ನುತ್ತ ತನ್ನಯ ಗೆಳೆಯರ ಕರೆದಿತ್ತು ಹಾಡು ಕೇಳಿದ್ದೀರಿ ಅಲ್ವಾ ಮೇಡಂ ಎಂದು ಕೇಳುತ್ತವೆ ಯಾಕಪ್ಪ ಕೋಕಿಲ ಬಾರೋ ಒಳಗೆ ಇನ್ನು ಎಷ್ಟು ಹಾಡು ಹಾಡು ಬೇಕೋ ಎಂದು ಕರೆಯುತ್ತಾರೆ.

ಅನನ್ಯವಾದ ಅಭೂತಪರ‍್ವವಾದ ಚಿತ್ರಗಳು ಇಲ್ಲಿ ಕಣ್ಮನ ಸೆಳೆಯುತ್ತವೆ ಅದಕ್ಕೆ ತಕ್ಕ ಹಾಗೆಯೇ ಅಲ್ಲಿನ ಸಂಭಾಷಣೆಗಳು ನಡೆಯುತ್ತವೆ ಈ ಕೃತಿಯಲ್ಲಿ ಎಲ್ಲ ಪುಟಗಳಲ್ಲೂ ಹಕ್ಕಿಗಳಿವೆ ಆ ಹಕ್ಕಿಗಳಿಗೆ ಸಂಬಂಧಪಟ್ಟ ಹಾಗೆಯೇ ಅದು ಯಾವ ಹಕ್ಕಿ ಎಂದು ತಿಳಿಸುವಂತ ಸಂಭಾಷಣೆಗಳಿವೆ.
ಬರ‍್ಬೆಟ್ ಹಕ್ಕಿಯ ಚಿತ್ರದಲ್ಲಿನ ಸಂಭಾಷಣೆ ನೋಡಿ
ಕುಟ್ ಎಂದು ಪ್ರೀತಿಯಿಂದ ಮೇಡಂ ಕರೆದರೆ
ಎಸ್ ಮಿಸ್ ಎನಬಾರದೇ ಅದು ಏನ್ ಮೇಡಂ ಕಟ್ಟಪ್ಪನಾ ಎನ್ನುತ್ತದೆ.
ಏ ಸುಮ್ಮನಿರು ಕಟ್ಟಪ್ಪ ಅಂತೆ ಕಟ್ಟಪ್ಪ ಎನ್ನುತ್ತಾರೆ ಹಕ್ಕಿ ನಮಗೆಲ್ಲ ಗೊತ್ತಿರೋದು ಬಾಹುಬಲಿಯ ಕಟ್ಟಪ್ಪ ಮೇಡಂ ಎನ್ನುತ್ತದೆ ಎನ್ನುವ ಮೇಡಂ ಅಚ್ಚರಿಯ ಪ್ರಶ್ನೆಗೆ ಹಕ್ಕಿ ನಾವ್ಯಾಕೆ ಸಿನಿಮಾ ನೋಡೋಣ ನಿಮ್ಮಂತವರು ನೋಡಿ ಅದೇ ಮಾತಾಡ್ತಾ ರ‍್ತೀರಲ್ಲ ಕಿವಿ ಮೇಲೆ ಬೀಳ್ತಾ ಇರುತ್ತೆ ಆ ಕಟ್ಟಪ್ಪ ಅಲ್ಲದಿದ್ದರೆ ಮತ್ಯಾರು ಮೇಡಂ ಎಂದು ಕೇಳುತ್ತದೆ ಅಂತ ಇವರೇ ಹೇಳುವಂತಾಗುತ್ತದೆ.
ಓಹೋ ನಮ್ಮ ಬರ‍್ಬೆಟ್ ಎಂದು ಹಕ್ಕಿಯೇ ಕೇಳುತ್ತದೆ.
ಇಂತಹ ಅನೇಕ ರೋಮಾಂಚಕ ಪ್ರಸಂಗಗಳು ಈ ಕೃತಿಯಲ್ಲಿದೆ.
ಕಾಪರ್ ಸ್ಮಿತ್ ಬರ‍್ಬೆಟ್ ಎನ್ನುವ ಹಕ್ಕಿಯ ಒಂದು ಚಿತ್ರದ ಜೊತೆಗಿನ ಸಂಭಾಷಣೆ ನೋಡಿ ಆ ಚಿತ್ರದಲ್ಲಿ ಹಕ್ಕಿ ತುಂಬಾ ಬಗ್ಗಿ ಕುಳಿತಿದೆ ಬೆನ್ನ ಮೇಲೊಂದು ನೊಣ.
’ಕಂಚು ಕಂಚು’ ’ಪ್ರೆಸೆಂಟ್ ನಾನು ಪ್ರೆಸೆಂಟ್ ಮೇಡಂ’’ ’ಅವನೆಲ್ಲಿ ವಾಯ್ಸ್ ಮಾತ್ರ ಕೇಳುತ್ತಿದೆ ಕಾಣಿಸ್ತಿಲ್” ಎನ್ನುವ ಪ್ರಶ್ನೆಗೆ `ಕಂಚುಗಾರ ಅಲ್ಲಿದ್ದಾನೆ ಮೇಡಂ’ ಎಂದು ಉಳಿದ ಹಕ್ಕಿಗಳು ತೋರಿಸಿದವು. ಆ ಕಡೆ ನೋಡಿದ ಮೇಡಂ `ಏನು ಮಾಡುತ್ತಿದ್ದೀಯ ಅಕಸ್ಮಾತ್ ಬಿದ್ದರೇನು ಗತಿ ಜೋಪಾನ’ ಎಂದು ಹೇಳಿದರೆ ಬಿದ್ದರೆ ಏನ್ ದಡ್ಡರು ಮೇಡಂ ನೀವು ರೆಕ್ಕೆಗಳ ಬಗ್ಗೆ ವಿಶ್ವಾಸವಿದೆ ಎನ್ನುತ್ತದೆ.
ಈ ಸಾಲು ಅತ್ಯಂತ ಮೋಹಕವಾಗಿದೆ. ನಮ್ಮ ಬಗ್ಗೆ ನಮಗೆ ವಿಶ್ವಾಸವಿಲ್ಲದಿದ್ದರೆ ಮನುಷ್ಯ ಎಷ್ಟು ಕುಗ್ಗಿ ಹೋಗುತ್ತಾನೆ, ಆದರೆ ಹಕ್ಕಿಗಳಿಗೆ ತಮ್ಮ ರೆಕ್ಕೆಯ ಬಗೆಗೆ ಅದೆಷ್ಟು ವಿಶ್ವಾಸವಿದೆ ತಾವು ಬೀಳುವುದಿಲ್ಲ ಎನ್ನುವ ಖಾತ್ರಿ ಇದೆ. ಮನುಷ್ಯರು ಇಂತಹ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಕುಗ್ಗಲು ಸಾಧ್ಯವಿಲ್ಲ ಎಂಬುದನ್ನು ಈ ಸಾಲು ಎತ್ತಿ ಹಿಡಿಯುತ್ತದೆ.
ಕೇವಲ ಅಟೆಂಡೆನ್ಸ್ ರೀತಿ ಸಂಭಾಷಣೆಯ ರೀತಿ ಮಾತ್ರವಿದ್ದಿದ್ದರೆ ಈ ಕೃತಿ ಇಷ್ಟು ಉತ್ಕೃಷ್ಟವಾಗುತ್ತಿತ್ತೋ ಇಲ್ಲವೋ ಮಧ್ಯ ಮಧ್ಯೆ ಸಾಹಿತ್ಯದ ಸಾಲುಗಳು ಹೊಳೆಯುತ್ತವೆ.
ನಮಗೆ ರೆಕ್ಕೆಯ ಮೇಲೆ ವಿಶ್ವಾಸವಿದೆ ಎಂದು ಹಕ್ಕಿ ಹೇಳಿದಾಗ ಇರಲೇ ಬೇಕಲ್ವಾ ಮೇಡಂ ಇಲ್ದಿದ್ರೆ ನಮಗೆ ರೆಕ್ಕೆ ಇದ್ದೇನ್ ಪ್ರಯೋಜನ ಎನ್ನುತ್ತವೆ ಆಗ ಮೇಡಂ ಹೆಚ್ ಎಸ್ ವೆಂಕಟೇಶ ಮರ‍್ತಿಯವರು ರೆಕ್ಕೆ ಇದ್ದರೆ ಸಾಕೇ ಹಕ್ಕಿಗೆ ಬೇಕು ಬಾನು ಬಯಲಲ್ಲಿ ತೇಲುತ ತಾನು ಮ್ಯಾಲೆ ಹಾರೋಕೆ ಎಂದಿದ್ದಾರೆ ಎನ್ನುತ್ತಾರೆ ಆಗ ಹಕ್ಕಿಗಳು ಎಷ್ಟು ಚೆನ್ನಾಗಿದೆ ನಮಗೂ ಈ ಹಾಡು ಹೇಳಿಕೊಡಿ ಎನ್ನುತ್ತವೆ.
ಸಾಹಿತ್ಯದ ಪ್ರೇಮವನ್ನು ಶಿಷ್ಯಮಕ್ಕಳಿಗೆ ಮಾತ್ರ ಉಣಿಸುವುದಲ್ಲದೆ ಹಕ್ಕಿಗಳಿಗೂ ಉಣಿಸಬಹುದು ಎನ್ನುವ ಒಂದು ಹೊಸ ಪರಿಯನ್ನು ತೋರಿಸಿದ್ದಾರೆ.
ಕೋವಿಡ್ ಕಾಲದಲ್ಲಿ ಇಡೀ ವಿಶ್ವವೇ ಆನ್ ಲೈನ್ ಎನ್ನುವ ಹೊಸ ಪದ್ದತಿಗೆ ಒಗ್ಗಿಕೊಂಡಿತು.
`ಮಿಂಚು ಮಿಂಚು’ ಎಂದು ಮೇಡಂ ಕರೆದರೆ `ಆ ಸ್ಮಾಲ್ ಕಿಂಗ್ ಅಣ್ಣ ಅಭ್ಯಾಸ ಬಲದಿಂದ ಆಚೆ ಕಲ್ಲಿನ ಮೇಲೆ ಕೂತಿದ್ದಾನೆ’ ಎಂದು ಮತ್ತೊಂದು ಹಕ್ಕಿ ಹೇಳುತ್ತದೆ. `ಮೇಡಂ ಅವನಿಗೆ ಹೇಳಿದ್ವಿ `ಆಫ್ಲೈನ್ ಕ್ಲಾಸ್ ಒಳಗೆ ಬಾ ಎಂದು ಅವನು ನಮ್ಮ ಮಾತು ನಂಬ್ತಾನೇ ಇಲ್ಲ ಮೇಡಂ ಆನ್ಲೈನ್ ಕ್ಲಾಸ್ ಇರೋದು ನೆಟ್ ಸಿಕ್ತಿಲ್ಲ ಅಂತ ನೆಟ್ಟಗೆ ಆಕಾಶ ನೋಡ್ತಾ ಸ್ಟ್ಯಾಚು ತರಹ ಕೂತಿದ್ದಾನೆ. ನಾವೆಲ್ಲ ಹೋಗಿ ಅವನನ್ನು ರ‍್ಕೊಂಡು ರ‍್ತೀವಿ’ ಎಂದು ಹಕ್ಕಿಗಳು ಹೇಳುತ್ತವೆ.
`ನೀವೆಲ್ಲ ಹೋದರೆ ನಿಮ್ಮನ್ನು ರ‍್ಕೊಂಡು ಬರೋಕೆ ಯಾರನ್ನು ಕಳಿಸಲಿ ಯಾರೂ ಹೋಗೋದು ಬೇಡ ಅವನು ಹೇಗೂ ಚುರುಕು ಆಮೇಲೆ ಬಂದರೂ ಕಲಿತುಬಿಡುತ್ತಾನೆ’ ಎನ್ನುತ್ತಾರೆ ಮೇಡಂ `ನೀವೊಂದು ತರಹ ಪಕ್ಷಪಾತಿ ಅವನು ಮಾತ್ರ ಚುರುಕ ನಾವೆಲ್ಲ ದಡ್ಡರೆ’ ಎಂದು ಕೇಳುವ ಪರಿ ಇದೆಯಲ್ಲ ಸಾಮಾನ್ಯ ತರಗತಿಗಳಲ್ಲಿ ಗುರುಗಳು ಎಲ್ಲರನ್ನೂ ಒಂದೇ ರೀತಿ ನೋಡಬೇಕೆಂದರೂ ಕೆಲವರು ಎಂದು ಗುರುತಿಸುವ ಶಕ್ತಿ ಗುರುಗಳಿಗಿರುತ್ತದೆ ದಡ್ಡ ಮಕ್ಕಳನ್ನು ಹೆಚ್ಚಾಗಿ ಪ್ರೀತಿಸುವ ಗುರುಗಳು ಅವರನ್ನು ಮುಂದೆ ಕೂಡಿಸಿಕೊಂಡು ಹೆಚ್ಚಿನ ಆಸ್ಥೆಯಿಂದ ಅವರು ಮುಖ್ಯ ವಾಹಿನಿಗೆ ಬರುವ ಹಾಗೆ ಮಾಡುತ್ತಾರೆ ಎನ್ನುವ ಅತ್ಯುತ್ತಮ ಪರಿಕಲ್ಪನೆಯಿಂದ ಒಡಮೂಡಿದ ಸಂಭಾಷಣೆಯಂತೆ ಇದು ಕಾಣುತ್ತದೆ
ತರಗತಿಗಳಲ್ಲಿ ಒಬ್ಬರು ಬಿದ್ದರೆ ಮತ್ತಷ್ಟು ಜನ ನಗುವುದು ಸಾಮಾನ್ಯ ಈ ಹಕ್ಕಿ ಅಟೆಂಡೆನ್ಸ್ ಕೃತಿಯಲ್ಲೂ ಒಂದು ಹಕ್ಕಿಯ ರ‍್ಕಸ್ ನಿಂದ ಉಳಿದ ಹಕ್ಕಿಗಳು ನಗುವ ಪರಿಯನ್ನು ಡಾ. ಲೀಲಾ ಅಪ್ಪಾಜಿ ಅವರು.
ಡಾ ಲೀಲಾ ಅಪ್ಪಾಜಿ ಅವರಿಗೆ ಪದಗಳನ್ನು ಹಿಡಿದು ಆಟವಾಡುವ ಪನ್ ಎಂದರೆ ಬಹು ಇಷ್ಟ ಅದಕ್ಕೆ `ಚಿಟ್ಟು ಚಿಟ್ಟು’ ಎಂದು ಕರೆದರೆ `ಯಾರು ತಲೆ ಚಿಟ್ಟು ಹಿಡಿಸ್ತಾ ಇರೋದು’ ಎನ್ನುವ ಅದೇ ಪದಕ್ಕೆ ಮತ್ತೊಂದು ರ‍್ಥವನ್ನು ಕೊಡುತ್ತಾರೆ ಉಳಿದ ಹಕ್ಕಿಗಳು ನಗುತ್ತಿದ್ದರೆ ಯಾಕೋ ಬಿದ್ದು ಬಿದ್ದು ನಗ್ತೀರ ಎಂದು ಮೇಡಂ ಕೇಳುತ್ತಾರೆ ಹಕ್ಕಿಗಳು. ನೋಡಿ ಮೇಡಂ `ಇವನು ರ‍್ಕಸ್ ಮಾಡ್ತಾ ಇರುವುದು’ ಎನ್ನುತ್ತವೆ ಆದರೆ ಚಿಟ್ಟು ಎನ್ನುವುದು ಪುಟ್ಟಗಿಳಿ.
ನೀವು ಕೂಗೋವಷ್ಟರಲ್ಲಿ ಬರಬೇಕೆಂದು ಹಾರಿ ಬಂದೆ ಕೂತುಕೊಳ್ಳುವಾಗ ಸ್ವಲ್ಪ ಬ್ಯಾಲೆನ್ಸ್ ತಪ್ಪಿದ್ದಕ್ಕೆ ಇವರೆಲ್ಲ ಆಡಿಕೊಂಡು ನಗ್ತಾ ಇದ್ದಾರೆ ಮೇಡಂ ಯಾರಿಗೂ ಆಗದೆ ಇರುವುದು ಆಗಿದ್ಯಾ ಅದಕ್ಯಾಕೆ ಇಷ್ಟು ನಗಬೇಕು ಏಳುಬೀಳು ಬಾಳಲ್ಲಿ ಸಹಜವಲ್ವೆ’ ಎಂದು ಪ್ರಶ್ನಿಸುತ್ತದೆ.
ಹೌದು ಬಾಳಿನಲ್ಲಿ ಏಳು ಬೀಳು ಅತ್ಯಂತ ಸಹಜ ಅದನ್ನು ನಿಭಾಯಿಸುವುದು ಜಾಣತನ ಹಕ್ಕಿಯ ಈ ಮಾತಿನಲ್ಲಿ ಬದುಕಿನ ದೊಡ್ಡ ತತ್ವವೇ ಅಡಗಿದೆ .
ಸೂರಮ್ಮ ಎಂಬ ಹಕ್ಕಿಯಿದೆ. ಅದನ್ನು ಮೇಡಂ `ಸೂರಮ್ಮ ಸೂರಮ್ಮ’ ಎಂದು ಕರೆದಾಗ ಉಳಿದ ಹಕ್ಕಿಗಳು `ಅವಳನ್ನು ಯಾಕೆ ಕರಿತಿರಿ ಬಿಡಿ ಮೇಡಂ’, `ಯಾಕ್ರೋ ಅವಳು ಬಂದಿಲ್ವಾ’, `ಬರದೇ ಏನೋ ಬಂದಿದ್ದಾಳೆ’ `ಮತ್ಯಾಕ್ರಪ್ಪ ಅವಳನ್ಯಾಕೆ ಕರೆಯುತ್ತೀರಿ ಅಂದ್ರಿ’ ಎಂದು ಪ್ರಶ್ನಿಸಿದಾಗ `ಅವಳು ಕ್ಲಾಸಿಗೆ ಬರದೆ ನಿಮ್ಮ ಸ್ಕೂಟರ್ ಕನ್ನಡಿಯಲ್ಲಿ ತನ್ನ ಚಂದ ನೋಡಿಕೊಳ್ತಿದ್ದಾಳೆ ಅವಳು ಈ ಕಾಲಕ್ಕೆ ಕ್ಲಾಸಿಗೆ ಎಲ್ಲಿ ಬರುತ್ತಾಳೆ ಎಂದು ಹೇಳುತ್ತವೆ ಇವಳು ಹೋಗಿದ್ದು ನೋಡಿ ಸೂರಪ್ಪನೂ ಹೋಗಿ ಪೈಪೋಟಿಯಲ್ಲಿ ಕನ್ನಡಿ ನೋಡಿಕೊಳ್ತಾ ಇದ್ದಾನೆ’ ಎಂದು ಹೇಳುತ್ತವೆ.
ಯೌವ್ವನ ಎಂದರೆ ಹಾಗೆ ಅಲ್ಲವೇ? ಬಹು ಸೊಗಸು – ಹುಚ್ಚು ಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಮಾತು ಮಾತಿಗೇಕೋ ಹೂನಗೆ ಮರುಗಳಿಗೆಯೇ ಮೌನ ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ ಎನ್ನುವ ಹಾಡಿನ ಸಾಲುಗಳನ್ನು ನೆನಪಿಗೆ ತರುವ ಹಾಗೆ ಮನುಷ್ಯರು ಹೇಗೆ ತಮ್ಮ ಸೌಂರ‍್ಯವನ್ನು ಆಗಾಗ ಕನ್ನಡಿಯಲ್ಲಿ ನೋಡಿ ಸಂತೋಷಸುತ್ತಾರೋ ಹಾಗೆಯೇ ಹಕ್ಕಿಗಳೂ ಸಹ ಎಂಬ ಕಲ್ಪನೆ ಇಲ್ಲಿದೆ. ಆದರೆ ಹಕ್ಕಿಗಳು ಹೋಗುವುದು ಕನ್ನಡಿಯ ಮುಂದೆ ಮತ್ತೊಂದು ಹಕ್ಕಿಯಿದೆ ಎನ್ನುವ ಕುತೂಹಲದಿಂದ. ಆದರೂ ಈ ಸಂಭಾಷಣೆ ಸಾಹಿತ್ಯಕವಾಗಿದೆ.
ಪನ್ ಎನ್ನುವ ವಿಷಯವನ್ನು ಆಗಲೇ ಪ್ರಸ್ತಾಪಿಸಿದೆ. ಇಲ್ಲಿ ಓರಿಯಂಟಲ್ ಮ್ಯಾಗ್ ಪೈ ರಾಬಿನ್ ಎನ್ನುವ ಹಕ್ಕಿಯನ್ನು ಕನ್ನಡದಲ್ಲಿ ಮಡಿವಾಳ ಎನ್ನುತ್ತಾರೆ. ಮಡಿವಾಳ ಮಡಿವಾಳ ಎಂದು ಎರಡು ಸಲ ಅಟೆಂಡೆನ್ಸ್ ಕೂಗಿದಾಗ ಅಲ್ಲಿ ತರಗತಿಯಲ್ಲಿ ಕುಳಿತಿದ್ದ ಉಳಿದ ಹಕ್ಕಿಗಳು ಮಡಿವಾಳನನ್ನು ಕೂಗಲ ಮೇಡಂ ನಿಮ್ಮ ಬಟ್ಟೆ ಒಗೆಯೋಕೆ ಕೊಡುತ್ತೀರಾ ಎಂದು ರೇಗಿಸುತ್ತವೆ ಮೇಡಂ ಆಗ ಮಡಿವಾಳ ಅಂದರೆ ಅಗಸನನ್ನ ಕರೆಯಲಿಲ್ಲ ಎನ್ನುತ್ತಾರೆ. ಮಾತು ಮಾತು ಮುಂದುವರಿದು ಫ್ರಿಲ್ ಇರೋ ಫ್ರಾಕ್ ಹಾಕಿ ಕೂತಂತಿದೆ ಮಡಿವಾಳಪ್ಪ ಈ ಕಡೆ ತಿರುಗು ಎನ್ನುತ್ತಾರೆ.
ಈ ಇಡೀ ಕೃತಿಯಲ್ಲಿ ಹಕ್ಕಿಗಳ ಬಗೆಗೆ ನೇರವಾಗಿ ವಿವರಣೆ ಕೊಡುವ ರೀತಿ ಇಲ್ಲದಿದ್ದರೂ ಸಂಭಾಷಣೆಯೊಳಗೆ ಹಕ್ಕಿಯ ಬಣ್ಣ ಆಕಾರ ವೈಶಿಷ್ಟ್ಯತೆ ಹಾಗೂ ರೂಪವನ್ನು ತಂದುಬಿಡುತ್ತಾರೆ. ಹಾಗಾಗಿ ಸಾಹಿತ್ಯ ಲೋಕದಲ್ಲಿ ಇದೊಂದು ವಿಶಿಷ್ಟ ಕೃತಿಯಾಗಿದೆ.
”ಬುಲ್ ಬುಲ್ ಮಾತಾಡಕ್ಕಿಲ್ವಾ’ ಇದೇನ್ರಪ್ಪ ನೀವೇ ಬುಲ್ ಬುಲ್ ಅಂದ್ರೆ ಎನ್ನುವ ಹಕ್ಕಿಗಳ ಮಾತಿಗೆ ನಾನು ಕರೆದರೆ ನೀವು ಈ ಹಾಡು ಹೇಳ್ತೀರಾ ಎಂದು ಮೇಡಂ ಕೇಳುತ್ತಾರೆ.. ಹೀಗೆ ಸಾಗುವ ಮಾತುಕತೆ ಸಿನಿಮಾ ಪರದೆಯಂಚನ್ನೂ ತಾಕುತ್ತದೆ.
ನನ್ನ ಶಿಷ್ಯರೆಲ್ಲ ನನ್ನ ಫ್ರೆಂಡ್ಸ್ ಎನ್ನುವ ಮೇಡಂ ಮಾತಿಗೆ ಹಕ್ಕಿಗಳು ಅಚ್ಚರಿ ತೋರಿಸುತ್ತಾ ಶಿಕ್ಷಣ ನೀಡುವುದು ಶಿಕ್ಷೆ ನೀಡುವುದು ಅಲ್ಲ ಎಂದು ಹಕ್ಕಿಗಳ ಬಾಯಲ್ಲಿ ಹೇಳಿಸುತ್ತಾರೆ. ಮತ್ತೆ ಮೇಡಂ ಕೂಡ ಹೇಳುತ್ತಾರೆ ಹೌದು ಶಿಷ್ಯರು ಮಕ್ಕಳಿದ್ದಂತೆ ಮಿತ್ರರಿದ್ದಂತೆ ಶಿಕ್ಷೆ ಎಂದರೆ ಶಿಕ್ಷಣ ಎಂರ‍್ಥವೇ ವಿನಃ ಶಿಕ್ಷೆ ನೀಡುವಂಥದ್ದಲ್ಲ. ಇಡೀ ಶಿಷ್ಯ ಪರಂಪರೆಯ ಬಗೆಗೆ ಪ್ರೀತಿಯನ್ನು ತೋರಿಸುತ್ತಾ ಶಿಕ್ಷಣ ಎಂದರೆ ಹೇಗಿರಬೇಕು ಎಂಬುದರ ಕುರಿತಾಗಿಯೂ ಈ ಕೃತಿಯಲ್ಲಿ ಕೆಲವು ಕಡೆ ಬೆಳಕು ಚೆಲ್ಲುತ್ತದೆ.
ದೂರಹಾರಿ ಕರೆವೆಯೊಮ್ಮೆ ಸ್ವರ್ಗವಾಣಿಯಂದದಿ, ಬಳಿಗೆ ಸುಳಿದು ಉಲಿವೆಯೊಮ್ಮೆ ಮರ್ತ್ಯ ವೀಣೆಯಂದದಿ ಏನು ಮೋಹ ಏನು ಮಾಯೆ ನಿನ್ನ ಕಲೆಯ ನೆರಳ ಛಾಯೆ ನನ್ನ ಕಲೆ ತೇನೆ ಹಕ್ಕಿ ನಿನಗೆ ಮುಕ್ತಿಯಾಗಿದೆ ಎಂದು ಆರಂಭವಾಗುವ ಒಂದು ಸಂಭಾಷಣೆಯಲ್ಲಿ ಕುವೆಂಪು ಅವರು ತೇನೆಹಕ್ಕಿಯ ಬಗ್ಗೆ ಬರೆದದ್ದು ಎಂದು ಮೇಡಂ ಹೇಳುತ್ತಿದ್ದರೆ ಹಕ್ಕಿಗಳು ಹಾರಿ ಬಂದು ಕುಳಿತುಕೊಳ್ಳುತ್ತವೆ. ಹಕ್ಕಿಯೇ ಹೇಳುತ್ತದೆ ಹಕ್ಕಿ ಅಜ್ಜ ಸಲೀಂ ಅಲಿ ಡಿಡ್ ಯು ಡೂ ಇಟ್ ಎಂದ್ದಾರೆ ಎನ್ನುತ್ತದೆ .
ಪಕ್ಷಿ ತಜ್ಞ ಸಲೀಂ ಅವರ ಹೆಸರು ಇರದಿದ್ದರೆ ಈ ಕೃತಿ ಎಲ್ಲೋ ಒಂದು ಕಡೆ ಅಪೂರ‍್ಣವಾಗುತ್ತಿತ್ತು. ಆದರೆ ಬಹು ಸೂಕ್ಷ್ಮಜ್ಞ ಲೀಲಾಅಪ್ಪಾಜಿಯವರು ಪಕ್ಷಿ ತಜ್ಞರನ್ನು ಪಕ್ಷಿಯ ಬಾಯಲ್ಲಿ ಹೇಳಿಸಿದ್ದಾರೆ .
ಒಬ್ಬ ಸಾಹಿತಿ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಛಾಯಾಗ್ರಹಕರಾದರೆ ಅದರಲ್ಲೂ ಹಕ್ಕಿ ಛಾಯಾಗ್ರಹಕರಾದರೆ ಆ ಕೃತಿಯಲ್ಲಿ ಎಷ್ಟೆಲ್ಲಾ ಸಾಹಿತ್ಯದ ವಿಷಯಗಳನ್ನು ತರಬಹುದು ಎಂಬುದಕ್ಕೆ ಹಕ್ಕಿ ಅಟೆಂಡೆನ್ಸ್ ಸಾಕ್ಷಿಯಾಗಿದೆ.
ಚಾತಕ ಚಾತಕ ಎಂದು ಅಟೆಂಡೆನ್ಸ್ ಕೂಗುವ ಮೇಡಂಗೆ ಹಕ್ಕಿ ’ಯಾರ ಜಾತಕ ಕೇಳ್ತಾ ಇದ್ದೀರಿ ಮೇಡಂ ನೀವು ನಂಬುತ್ತೀರಾ ಇದನ್ನೆಲ್ಲ” ಎಂದು ಕೇಳುತ್ತದೆ ಆಗ ಮೇಡಂ ಹೇಳುತ್ತಾರೆ – ನಾನೆಲ್ಲೋ ಜಾತಕ ಕೇಳಿದೆ ನಾನು ಕರೆದದ್ದು ಚಾತಕನನ್ನು ಜಾಕೋಬಿನ್ ಕುಕೂ, ಪೈಡ್ ಕುಕೂ. ಜಾತಕ ಎಂದರೆ ಕಾಯುವುದು ಎಂರ‍್ಥ ಕಣ್ರಪ್ಪ ಕೋಗಿಲೆ ಜಾತಿಯ ಜಾತಕ ಮಳೆಹನಿಗಾಗಿ ಕಾಯುತ್ತದೆ ಎಂಬ ಕವಿ ಸಮಯವಿದೆ ಎಲ್ಲಿದ್ದಾನೆ ಅವನು ಎಂದು ಕೇಳುತ್ತಾರೆ. ಇಲ್ಲಿ ಕವಿ ಸಮಯ ಎನ್ನುವ ಅತ್ಯಪರ‍್ವ ಸಾಹಿತ್ಯ ವಿಷಯವನ್ನು ಹಕ್ಕಿಗಳ ಸಂಭಾಷಣೆಯಲ್ಲಿ ತಂದಿದ್ದಾರೆ.
ಹಕ್ಕಿಯ ಚಿತ್ರಗಳ ಕೆಳಗೆ ಇದಕ್ಕೆ ಇಂಗ್ಲಿಷ್ ಹೆಸರು, ಇದು ಇಂಥವನ್ನು ತಿನ್ನುತ್ತವೆ, ಇವು ಈ ಜಾತಿಗೆ ಸೇರಿದ್ದು, ಸಾಮಾನ್ಯವಾಗಿ ಇವುಗಳ ಸಂತತಿ ಎಷ್ಟು, ಇಂತಹ ಸ್ಥಳದಲ್ಲಿ ಇರುತ್ತದೆ, ಇವು ಇಂತಹ ಆಹಾರ ತಿನ್ನುತ್ತವೆ. ಇಷ್ಟು ದಪ್ಪ ಇರುತ್ತದೆ. ಇಂಥ ಬಣ್ಣ ಇರುತ್ತವೆ ಎಂದೆಲ್ಲ ಹೇಳುವ ಚಿತ್ರಗಳನ್ನು ಅಥವಾ ಪುಸ್ತಕಗಳನ್ನು ನಾವು ನೋಡಿದ್ದೇವೆ. ಆದರೆ ಈ ಕೃತಿ ಏಕೆ ವಿಶಿಷ್ಟವಾಗಿದೆ ಎನ್ನುವುದು ಈ ರೀತಿಯ ಸಂಭಾಷಣೆಗಳಿಂದಲೇ.
ಗೂಬೆಗಳು ಬುದ್ಧಿವಂತ ಪಕ್ಷಿಗಳು. ಅವು ನಮ್ಮ ಕ್ಲಾಸ್ ನಲ್ಲಿ ಇರೋದು ಒಂದು ಶೋಭೆ ಎಂದು ಮೇಡಂ ಹೇಳಿದಾಗ ನಿಶಾಚರಿಗಳಾದ ಇವು ರೈತರಿಗೆ ಕಷ್ಟ ಕೊಡುವ ಇಲಿ ಇತ್ಯಾದಿ ತಿಂದು ರೈತ ಮಿತ್ರರೇ ಆಗಿವೆ ಎನ್ನುವ ಮಾತು ಬರುತ್ತದೆ. ಹಾಲಕ್ಕಿಗೆ ಶಕುನದ ಹಕ್ಕಿ ಎಂದು ಹೆಸರಿದೆ. ಶುಭನುಡಿಯೇ ಶುಭನುಡಿಯೇ ಶಕುನದ ಹಕ್ಕಿ ಎಂದು ಬೇಂದ್ರೆ ಬರೆದಿದ್ದಾರೆ. ಬುಡಬುಡುಕಿಯವರು ಶ್ರೀ ಕೃಷ್ಣ ನುಡಿಸಿದಂತೆ ನುಡಿಯುತ್ತೇವೆ ಎಂದು ಹೇಳುತ್ತವೆ. ಹಾಲಕ್ಕಿ ಶಕುನ ನುಡಿದೈತೆ ಜಯವಾಗಲಿ ಸ್ವಾಮಿ ಜಯವಾಗಲಿ ಎಂದು ಹಾಲಕ್ಕಿ ಶಕುನ ಹೇಳುತ್ತಾರೆ ಎನ್ನುವ ಮಾತನ್ನು ಇಲ್ಲಿ ಕಾವ್ಯಮಯವಾಗಿ ಚಿತ್ರಿಸಿದ್ದಾರೆ.
ಪೇಂಟೆಡ್ ಸ್ಟರ‍್ಕ್ ಎನ್ನುವ ಹಕ್ಕಿ ಕುರಿತಾದ ಚಿತ್ರ ಸಂಭಾಷಣೆಯಲ್ಲಿ ಬಣ್ಣ ಬಣ್ಣ ನನ್ನ ಒಲವಿನ ಬಣ್ಣ ನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು ಎಂದು ಹಾಡುವ ಹಕ್ಕಿಗಳ ಮಾತಿಗೆ ತಮ್ಮ ಮಾತು ಬೆರೆಸಿ ಏನ್ರಯ್ಯ ಕೋರಸ್ಸಿನಲ್ಲಿ ಬಂಧನ ಸಿನಿಮಾದಲ್ಲಿ ನಮ್ಮ ವಿಷ್ಣುರ‍್ಧನ್ ಹೇಳಿದಂತೆ ಬಣ್ಣ ಹಾಡು ಹೇಳ್ತಾ ಇದ್ದೀರಿ ಏನ್ ಸಮಾಚಾರ ಎಂದು ಕೇಳುತ್ತಾರೆ. ಇವರ ಕಲ್ಪನಾ ವಿಲಾಸ ಸಾಹಿತ್ಯ ಪ್ರಜ್ಞೆ ಸಮಯಪ್ರಜ್ಞೆ ಮೆಚ್ಚುವಂಥದ್ದು.
’ಮೇಡಂ ಅವನು ರ‍್ತಾ ಇದ್ದಾನ” ’ಯಾರ” ’ಕೊಕ್ಕರೆ ಮೇಡಂ ಫುಲ್ ವೈಟ್ ಅಂಡ್ ವೈಟು ಶನಿವಾರದ ಯುನಿಫರ‍್ಮ್ ಇವತ್ತೇ ಹಾಕಿ ಬಂದಂತಿದೆ ಎಷ್ಟು ಚೆನ್ನಾಗಿ ಹಾರಿಕೊಂಡು ಬರುತ್ತಿದ್ದಾನೆ ಅಲ್ವಾ ಮೇಡಂ’ ಎಂದು ಹೇಳಿದಾಗ ಲೇಖ್ಹಕಿ ಹಾರುತ್ತಿದ್ದ ಬೆಳ್ಳಕ್ಕಿ ಸಾಲನ್ನು ಕಂಡು ಕುವೆಂಪು ದೇವರು ರುಜು ಮಾಡಿದನು ರಸವಶನಾಗುತ ಕವಿ ಅದ ನೋಡಿದನು ಎಂದಿದ್ದಾರೆ ಸುರಂ ಎಕ್ಕುಂಡಿ ಅವರು ಬೆಳ್ಳಕ್ಕಿ ಸಾಲಾಗಿ ನಡೆದವು ಮುಗಿಲಿನ ಹಾದಿಯ ಹಿಡಿದಾವೋ. ಬಿಳಿರೆಕ್ಕೆ ಬೀಸಲು ಮೇಲೊಂದು ಮುಗಿಲಿದೆ ಇಳಿದಲ್ಲಿ ಈ ಸಲ ಕೆಳಗೊಂದು ಕಡಲಿದೆ ಎಂದಿದ್ದಾರೆ ಎಷ್ಟು ಚಂದವಾಗಿ ಹೇಳಿದ್ದಾರೆ ಪರವಾಗಿಲ್ಲ ಕಣ್ರೋ ನೀವು ತಿಳ್ಕೊಂಡಿದ್ದೀರಿ ಎಂದು ಮೇಡಂ ಹಕ್ಕಿಗಳ ಬೆನ್ನು ತಟ್ಟುವ ಒಂದು ಸಂಭಾಷಣೆಯಲ್ಲಿ ಕವಿಗಳ ಸಾಲುಗಳು ಕೂಡ ಈ ಕೃತಿಯಲ್ಲಿ ದಾಖಲಾಗಿದೆ.
ಪ್ರತಿನಿತ್ಯ ಅಥವಾ ಹೆಚ್ಚು ಕಡಿಮೆ ಪ್ರತಿನಿತ್ಯ ಫೇಸ್ಬುಕ್ ನಲ್ಲಿ ಇವರ ಹಕ್ಕಿ ಫೋಟೋಗಳಿಗಾಗಿ ಕಾಯುತ್ತಿದ್ದ ದೊಡ್ಡ ಅಭಿಮಾನಿ ವರ್ಗವೇ ಇತ್ತು. ಬರೀ ಹಕ್ಕಿಗಳಿಗಷ್ಟೇ ಅಲ್ಲದೆ ಈ ಹಕ್ಕಿಗಳ ರಸವತ್ತಾದ ಸಂಭಾಷಣೆ ಅನುಭವಿಸಲು ತುದಿಗಾಲಲಿ ನಿಂತಿದ್ದ ಅನೇಕ ಮಂದಿ ಇದ್ದರೂ ಒಂದು ಸಾಹಿತ್ಯ ಕೃತಿ ಸಾರ್ಥಕವಾಗುವುದು ಅದರ ರಸದಿಂದ, ಅದು ಕೊಡುವ ಆನಂದದಿಂದ. ಈ ನಿಟ್ಟಿನಲ್ಲಿ ಈ ಕೃತಿ ಸಾರ್ಥಕವಾಗಿದೆ.

-ಡಾ. ಶುಭಶ್ರೀಪ್ರಸಾದ್ ಮಂಡ್ಯ
- ಪಹಲ್ಗಾಮ್ ಉಗ್ರರು ಚೆನ್ನೈನಿಂದ ಶ್ರೀಲಂಕಾಗೆ ಪರಾರಿ?
- ಕನ್ನಡಿಗರ ವಿರುದ್ಧ ವಿವಾದಿತ ಹೇಳಿಕೆ: ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲು
- ಯೂನಿಯನ್ ಬ್ಯಾಂಕ್ನಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಗೋವಾ ಶಿರಗಾವ್ ದೇವಸ್ಥಾನದಲ್ಲಿ ಕಾಲ್ತುಳಿತ – 6 ಭಕ್ತರು ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
- ಮೈಸೂರು ನಗರದ ವಿವಿಧೆಡೆ ಬಾಂಬ್ ಇಟ್ಟಿದ್ದೇವೆ ಎಂದು ಇ-ಮೇಲ್ ಬೆದರಿಕೆ