ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಹೆತ್ತೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿದೆ,
ಸಕಲೇಶಪುರದಿಂದ 26 ಕೀಲೂ ಮೀಟರ್ ಪ್ರಯಾಣ ಮಾಡಿದರೆ ನನ್ನ ತವರಿಗೆ ಭೇಟಿ ನೀಡಬಹುದು ,ಪ್ರಕೃತಿ ಮಡಿಲಿನಲ್ಲಿ ಇರುವ ನನ್ನೂರಿನ ಸುತ್ತ ಮುತ್ತಲು ಬಿಸಿಲೆ ಘಾಟ್, ಮಲ್ಲಳ್ಳಿಪಾಲ್ಸ್,ಮೂಕನಮನೆ ಪಾಲ್ಸ್ ,ಮುಂಜರಾಬಾದ್ ಕೋಟೆ ಇನ್ನೂ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬಹುದು ಅಲ್ಲದೆ ಕುಕ್ಕೆ ಸುಬ್ರಮಣ್ಯ, ಮತ್ತು ಕೊಡಗಿನ ಗಡಿಭಾಗವು ಹೌದು ,3000 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮತ್ತು ಪ್ರತಿಮನೆಯಲ್ಲಿಯೂ ಪದವೀಧರರನ್ನು ಕಾಣಬಹುದು ಅತಿ ಹೆಚ್ಚು ವಿದ್ಯಾವಂತರನ್ನು ಹೊಂದಿರುವ ಹೆಗ್ಗಳಿಕೆಗೆಯು ನನ್ನೂರಿಗೆ ಇದೆ, ಇತಂಹ ನನ್ನ ಊರಿನಲ್ಲಿ ನಡೆಯುವ ಒಂದು ವಿಶೇಷತೆ ಅಂದ್ರೆ ಅದು ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಾಡುವ ದೇವಿ ಉತ್ಸವ ಅದೇ ಸುಗ್ಗಿ ಹಬ್ಬ.
ಹತ್ತೂರುಗಳ ಸುಗ್ಗಿ ನೋಡುವ ಬದಲು ಹೆತ್ತೂರಿನ ಸುಗ್ಗಿ ನೋಡು ಎನ್ನುತ್ತಾರೆ ಬಲ್ಲವರು!! ಅಷ್ಟು ಚಂದ ಈ ಉತ್ಸವ ನನಗೆ ಗೊತ್ತಿರುವ ಹಾಗೆ ಇಷ್ಟು ಚಂದದ ಸುಗ್ಗಿ ಉತ್ಸವ ನಾನು ಬೇರೆಲ್ಲೂ ಕಂಡಿಲ್ಲ… ಹಾಗಾಗಿ ಇವತ್ತು ಇದರ ಬಗ್ಗೆ ಬರೆಯಬೇಕಿನಿಸಿತ್ತು……
ಸುಗ್ಗಿ ಹಬ್ಬದ ಆಚರಣೆಗೆ ಚಾಲನೆ
ಪ್ರತಿವರ್ಷ ಯುಗಾದಿಯ ನಂತರ ಬರುವ ಮೊದಲನೆಯ ಮಂಗಳವಾರದಿಂದ ನಂತರದ ಒಬ್ಬತ್ತು ದಿನಗಳವರೆಗೆ ದೇವಿರಮ್ಮ(ದೊಡ್ಡಮ್ಮ)ಮತ್ತು ಚಿಕ್ಕಮ್ಮ ದೇವಿಯ ಸುಗ್ಗಿ ಉತ್ಸವ ಆಚರಿಸಲಾಗುತ್ತದೆ
ಹಂಚು ಎತ್ತಬೇಡ,ಒಣಗು ಮುರಿಬೇಡ,ಹಸಿರಕಡಿಬೇಡ,ಒಳಗಿರೋರು ಒಳಗೆ ಹೊರಗಿರೋರು ಹೊರಗೆ ಸುಗ್ಗಿಯಮ್ಮನ ಸಾರೋ ಸಾರು ಹೀಗೆ ಡಂಗೂರ ಹಾಕುತ್ತ ಮನೆ ಮನೆಗೆ ಹೋಗಿ ಸಾರಿದರೆ ಅವತ್ತಿಂದ ವ್ರತದ ರೀತಿಯಲ್ಲಿ ಒಂಬತ್ತು ದಿನಗಳವರೆಗೆ ನಡೆಯುವ ಹೆತ್ತೂರ ದೇವಿರಮ್ಮನವರ ಸುಗ್ಗಿ ಉತ್ಸವದ ಅಲಿಖಿತ ನೇಮ ನಿಷ್ಠೆ ಜಾರಿಯಾಗುತ್ತದೆ, ಅಂದಿನಿಂದ ( ಒಕ್ಕಲಿಗರ ಸಮುದಾಯದವೇ ಜಾಸ್ತಿ ಇರುವುದರಿಂದ ಮತ್ತು ಎಲ್ಲ ಧರ್ಮ ಜಾತಿ ವರ್ಗದವರಿಗೂ ಅನ್ವಯಿಸತ್ತದೆ)ಈ ನಿಯಮ ಜಾರಿಯಾಗುತ್ತದೆ ಅಂದಿನಿಂದ ಮಾಂಸಾಹಾರ ಸೇವನೆ, ಸೌದೆ ಕಡಿಯುವುದು,ಒಡೆಯುವುದು, ಹೆಂಚಿನಮೇಲೆ ದೋಸೆ, ರೊಟ್ಟಿ, ಚಪಾತಿ ಅಂತಹ ಆಹಾರ ಪದಾರ್ಥಗಳನ್ನು ತಯಾರಿಸುವುದು, ಒಗ್ಗರಣೆ ಹಾಕುವುದು ಮತ್ತು ದೂರದ ಊರಿಗೆ ಪ್ರಯಾಣ ಬೆಳೆಸುವುದು ಸಂಪೂರ್ಣ ನೀಷಿದ್ದವಾಗಿರುತ್ತದೆ ಈ ಸುಗ್ಗಿ ಉತ್ಸವಕೆ ಹೆತ್ತೂರು,ಹಾಡ್ಲಹಳ್ಳಿ,ಕರ್ಕಳ್ಳಿ,ಮರ್ಕಳ್ಳಿ, ಮೇಕಿರಮನೆ,ಮಟಗೊರು,ಕೊಣಬನಹಳ್ಳಿ,ಸೇರಿದಂತೆ ಹತ್ತಾರು ಊರುಗಳ ಎಲ್ಲ ವರ್ಗದ ಜಾತಿ ಧರ್ಮದ ಜನರು ಸೇರಿ ಸುಗ್ಗಿ ಉತ್ಸವ ಆಚರಿಸುತ್ತಾರೆ, ವರ್ಷಪೂರ್ತಿ ದುಡಿಯುವ ರೈತರು,ಮಹಿಳೆಯರು ಮಕ್ಕಳು ಉತ್ಸವದಲ್ಲಿ ಎಲ್ಲರೂ ಪಾಲ್ಗೊಂಡು ಸಂಬ್ರಮಿಸಲಿ ಎನ್ನುವ ಉದ್ದೇಶದಿಂದ ಈ ಕಟ್ಟು ಪಾಡು.

ಮೊದಲಿಗೆ ಕಾಡು ಒಡೆಯನ ಸುಗ್ಗಿ : ಹೆತ್ತೂರು ನಾಡಿಗೆ ಸೇರಿದ ಎಲ್ಲ ಮನೆಗಳಲ್ಲಿ ಸುಗ್ಗಿಯ ನೇಮ ಸಾರಲು ಬಂದವರಿಗೆ ಅಕ್ಕಿ ಬೆಲ್ಲ, ಒಣ ಮೆಣಸು ಇನ್ನಿತರ ಪದಾರ್ಥಗಳನ್ನು ನೀಡುತ್ತಾರೆ ಅವರು ಅದ್ರಲ್ಲಿ ಅಂದು ರಾತ್ರಿ ನೈವೇದ್ಯ ಮಾಡಿ ಬಾಸಿಂಗ ಕಟ್ಟೆಯಲ್ಲಿರುವ ಕಾಡಿನೋಡಯನ ದೇವರಿಗೆ ಅರ್ಪಿಸಿ ಸುಗ್ಗಿ ಕುಣಿಯುತ್ತಾರೆ.
ಹೊನ್ನಾರು ಸುಗ್ಗಿ:- ಸಾರು ಹಾಕಿದ ಮೂರನೇ ದಿನ ಗುರುವಾರ ರಾತ್ರಿಯಿಂದ ಶುಕ್ರವಾರದ ಬೆಳಿಗ್ಗೆವರೆಗೂ ಹೊನ್ನಾರು ಸುಗ್ಗಿ ಆಚರಿಸುತ್ತಾರೆ, ಹೊನ್ನಾರು ಸುಗ್ಗಿ ಕಟ್ಟೆಯ ಮೇಲೆ ದೇವಿರಮ್ಮ ಮತ್ತು ಚಿಕ್ಕಮ್ಮ ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಿ ಹಿರಿಯರು ಗ್ರಾಮದಲ್ಲಿ ಬಡಗಿ ಕೆಲಸ ಮಾಡುವವರು ಮರದಿಂದ ಮಾಡಿದ ಚಿಕ್ಕ ನೇಗಿಲನ್ನು ಬಳಸಿ ಶ್ರುಕವಾರ ಮುಂಜಾನೆ ಹೊನ್ನಾರು ಬಿತ್ತಲಾಗುತ್ತದೆ, ನೇಗಿಲನ್ನು ಹಿಡಿದು ಕೊಂಡು ದವಸ ಧಾನ್ಯಗಳ ಅವರಣದ ಸುತ್ತಲೂ ಓಡುತ್ತಾ ಚೆಲ್ಲುತ್ತಾ ಒಂದು ರೌಂಡ ಬರುತ್ತಾರೆ, ಎಲ್ಲಿ ಹೆಚ್ಚು ಚೆಲ್ಲಿರುತ್ತದೆಯೋ ಆ ದಿಕ್ಕಿನಲ್ಲಿ ಹದವಾಗಿ ಮಳೆಯಾಗಿ ಉತ್ತಮ ಫಸಲು ಕೈ ಸೇರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಈ ದಿನವೇ ನನ್ನ ಮನೆತನದಿಂದ ನನ್ನ ತಂದೆ ಕಡೆಯಿಂದ ಮೊದಲ ಈಡುಕಾಯಿ ದೇವಿಗೆ ಸಲ್ಲುತ್ತದೆ. ನಂತರ ದೇವಿಯನ್ನು ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತರಲಾಗುತ್ತದೆ . ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಇದಾದ ಎರಡು ದಿನಕ್ಕೆ ಬರುವ ಮಂಗಳವಾರ ಹೆಣ್ಣು ಮಕ್ಕಳ ಸುಗ್ಗಿ ಉತ್ಸವ ನಡೆಯುತ್ತದೆ.
ಹೆಣ್ಣು ಮಕ್ಕಳ ಸುಗ್ಗಿ:- ಉತ್ಸವದ ಎಂಟನೇ ದಿನವಾದ ಮಂಗಳವಾರದಂದು ಬೆಳಿಗ್ಗೆ ಕರ್ಕಳ್ಳಿಯಲ್ಲಿರುವ ಕೂತಿನಾಡಮ್ಮನ ಬನದಲ್ಲಿ ಹೆಣ್ಣು ಮಕ್ಕಳ ಸುಗ್ಗಿ ನಡೆಯುತ್ತದೆ ,ಅಲ್ಲಿ ದೇವರಿಗೆ ಮಡಿಯಲ್ಲಿದ್ದು ನೇಮ ಮಾಡುವವರು ಕೊಡ ಮಹಿಳೆಯರೆ ಆಗಿದ್ದು ಅವರೆ ಪೂಜೆಯ ನೇತೃತ್ವ ವಹಿಸುತ್ತಾರೆ, ಬಳಿಕ ಮಹಿಳೆಯರೆಲ್ಲಾ ಸೇರಿ ಸುಗ್ಗಿ ಉತ್ಸವವನ್ನು ಆಚರಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ,ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ಸಂಕಲ್ಪ ಮಾಡಿಕೊಳ್ಳುತ್ತಾರೆ… ನಂತರ ಹರಕೆಯ ರೂಪದಲ್ಲಿ ಸೀರೆ
ರವಿಕೆ ಕಣ,ಬಳೆ, ಅರಿಶಿನ ಕುಂಕುಮ,ಬೆಳ್ಳಿಯ ತೊಟ್ಟಿಲು ,ಬಾಳೆಹಣ್ಣಿನ ಗೊನೆ, ಹೀಗೆ ದೇವರಿಗೆ ಒಪ್ಪಿಸಿ ಹರಕೆ ತೀರಿಸುತ್ತಾರೆ...ಇಲ್ಲಿಗೆ ಯಾವುದೇ ಕಾರಣಕ್ಕೂ ಪುರುಷರು, ಸಣ್ಣ ಗಂಡುಮಕ್ಕಳು, ಗರ್ಭಿಣಿಯರು(ಮಗುವಿನ ಲಿಂಗ ತಿಳಿಯದೆ ಇರುವುದರಿಂದ ಇವರಿಗೆ ಪ್ರವೇಶ ನಿಷೀದ್ದ ವಾಗಿರಬಹುದು) ಹೋಗುವಂತ್ತಿಲ್ಲ. ಇದೊಂದು ಸಂಪೂರ್ಣ ಮಹಿಳೆಯರಿಂದಲೇ ಆಚರಿಸುವ ವಿಶಿಷ್ಟ ವಿಭಿನ್ನವಾದ ಆಚರಣೆ..ಈ ದೇವಿಯ ಮತ್ತು ಬನದ ಫೋಟೋಗಳನ್ನು ತೆಗೆಯುವ ಪದ್ಧತಿ ಕೂಡಾ ಇಲ್ಲದಿರುವುದರಿಂದ ಇದುವರೆಗೂ ಒಂದೇ ಒಂದು ಪೋಟೋ ಹೊರಗೆ ನೋಡಲು ಸಿಗುವುದಿಲ್ಲ. ಹೆಣ್ಣುಮಕ್ಕಳ ಸುಗ್ಗಿ ನೋಡಬೇಕು ಎನ್ನುವವರು ಸ್ಥಳಕ್ಕೆ ಬಂದೇ ನೋಡ್ಬೇಕು.
ಬಿಲ್ಲು ಸುಗ್ಗಿ :- ಸುಗ್ಗಿ ಉತ್ಸವದ ಎಂಟನೇ ದಿನವಾದ ಮಂಗಳವಾರದ ರಾತ್ರಿ ಹೆತ್ತೂರಿನಲಿರುವ ಸತ್ಯಮಲ್ಲೇಶ್ವರ ಸ್ವಾಮಿ ದೇವಲಾಯದಲ್ಲಿ ಅಲಂಕೃತಳಾಗಿದ್ದ ದೇವಿರಮ್ಮನವರ ಹೊತ್ತು ರಾತ್ರಿ ಗ್ರಾಮದ. ಸುಗ್ಗಿ ಕಟ್ಟೆಯಲ್ಲಿರುವ ಉಯ್ಯಾಲೆ ಯಲ್ಲಿ ದೇವಿಯನ್ನು ಕುಳ್ಳಿರಿಸಿ ದೊಡ್ಡ ಸುಗ್ಗಿ ನಡೆಸಲಾಗುತ್ತದೆ , ಮನೆ ಮನೆಗಳಲ್ಲಿ ನಕ್ಷತ್ರಾಕಾರವಾಗಿ ಬಿದಿರಿನ ಪಟ್ಟಿ ಕಟ್ಟಿ ಅದಕೆ ಬಿಳಿ ದೇವಕಣಿಗಲೆ ಹೂವಿಂದ ಅಲಂಕರಿಸಿದ ಬಿಲ್ಲನ್ನು ವಾದ್ಯಮೇಳದೊಂದಿಗೆ ಮೇರವಣಿಗೆಯಲಿ ದೇವಸ್ಥಾನಕೆ ಕರೆತರಲಾಗುತ್ತದೆ, ದೇವರ ಪೂಜೆಗೆ ಎಂದು
ಮಡಿಯಲ್ಲಿದ್ದವರು ಮಾಡಿದ ರೊಟ್ಟಿ, ಕೊಸಂಬರಿಯನ್ನು ಎಡೆ ಮಾಡಿ ಬಿಲ್ಲುಕಟ್ಟಿದವರಿಗೆ ಹಾಗೂ ಭಕ್ತರಿಗೆ ವಿತರಿಸಲಾಗುತ್ತದೆ, ಬಳಿಕ ಗ್ರಾಮದ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ಕುಣಿಸುತ್ತಾ ಮೆರವಣಿಗೆಯ ಮೂಲಕ ಸುಗ್ಗಿ ಕಟ್ಟೆಯಲ್ಲಿರುವ ಉಯ್ಯಾಲೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ, ನಂತರ ಸುಗ್ಗಿಕಟ್ಟೆಯ ಆವರಣದ ಸುತ್ತಲೂ ಬೆಳಿಗ್ಗೆವರೆಗೂ ಹತ್ತು ಗ್ರಾಮಗಳ ಹಿರಿಯರು,ಕಿರಿಯರು ಎಂದು ಲೆಕ್ಕಿಸದೇ ಸಾಂಪ್ರದಾಯಿಕ ವಾದ್ಯಕೆ ಸುಗ್ಗಿ ಕುಣಿಯುತ್ತಾರೆ ಅದಕೆ ಹೆಣ್ಣು ಮಕ್ಕಳು ಹೆಜ್ಜೆ ಹಾಕುವ ಮೂಲಕ ಮೆರಗು ಹೆಚ್ಚಿಸುತ್ತಾರೆ,ಸಾಂಪ್ರದಾಯಿಕ ವಸ್ತ್ರ ತೂಟ್ಟು ಕುಣಿವ ಕತ್ತಿ (ಖಡ್ಗ ರೂಪದ್ದು) ಕುಣಿತ ನೋಡುಗರ ಕಣ್ಮನ ಸೆಳೆಯುತ್ತದೆ,
ಬುಧವಾರ ಮುಂಜಾನೆ ಮತ್ತೆ ಮೆರವಣಿಗೆ ಯಲ್ಲಿ ಸ್ವಸ್ಥಾನಕ್ಕೆ ದೇವರನ್ನು ತರಲಾಗುತ್ತದೆ.
ಮಡೆ ಉತ್ಸವ :- ಅಂತಿಮ ದಿನವಾದ ಬುಧವಾರ ಮಧ್ಯಾಹ್ನ ಅದ್ದೂರಿಯಾಗಿ ಮಡೆ ಉತ್ಸವ ಆಚರಿಸಲಾಗುತ್ತದೆ ,ದೇವರಿಗೆ ನೈವೇದ್ಯವನ್ನು ತಯಾರಿಸಿ ಅದನ್ನು ಚಿಕ್ಕಮ್ಮದೇವಿಯನ್ನು ಇಟ್ಟಿರುವ ಅಲಂಕೃತ ಕುಕ್ಕೆಯಲ್ಲಿ ಇಟ್ಟು ದೇವಿರಮ್ಮನ ಉತ್ಸವ ಮೂರ್ತಿಯೊಂದಿಗೆ ದೇವರ ಬನದಲ್ಲಿರುವ ಮಡೆಬನಕ್ಕೆ ಮೆರವಣಿಗೆಯಲ್ಲಿ ಕೊಂಡೂಯ್ಯಲಾಗುತ್ತದೆ, ಉತ್ಸವ ಸಾಗುವ ಮಾರ್ಗದ್ದುದ್ದಕ್ಕೂ ಭಕ್ತರು ಈಡುಗಾಯಿ ಹೊಡೆದು ಕಾಣಿಕೆ ಹರಕೆಗಳನ್ನು ಅರ್ಪಿಸುತ್ತಾರೆ,
ಮಡೆಬನಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ದೇವರ ಕೆರೆಯಲ್ಲಿ ಮೂಗುತಿ ಹುಡುಕುವ ಶಾಸ್ತ್ರ ನಡೆಯುತ್ತದೆ, ದೇವಿರಮ್ಮ ತಾಯಿ ತನ್ನ ಮೂಗುತಿಯನ್ನು ಈ ಕೆರೆಯಲ್ಲಿ ಕಳೆದುಕೊಂಡಿದ್ದಾಳೆಂದು ಅದನ್ನು ತವರಿಗೆ ಹೋಗುವಾಗ ಹುಡುಕುತ್ತಾಳೆ ಅನ್ನುವ ಪ್ರತೀತಿ ಇದೆ .
ದೇವರ ಬನದಲ್ಲಿ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರನ್ನು ಇಟ್ಟು ಪ್ರತ್ಯೇಕವಾಗಿ ಪೂಜೆ ಸಲ್ಲಿಸಿರುತ್ತಾರೆ, ಚಿಕ್ಕಮ್ಮ ದೇವರಿಗೆ ನವದಂಪತಿಗಳು ಪೂಜೆ ಸಲ್ಲಿಸುವುದರ ಮೂಲಕ ಮಡೆ ಮುಗಿಯುತ್ತದೆ ,ಬಳಿಕ ದೇವತೆಗಳನ್ನು ಅದೇ ಮಾರ್ಗದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕೆ ತಂದು ಪೂಜೆ ಸಲ್ಲಿಸಿ ಉತ್ಸವಕ್ಕೆ ತೆರೆ ಎಳೆಯಲಾಗುತ್ತದೆ,.
ಇಂದು ನಾಳೆ ಹೆಣ್ಣು ಮಕ್ಕಳ ಸುಗ್ಗಿ, ಬಿಲ್ಲು ಸುಗ್ಗಿ,ಮಡೆ ನಡೆಯಲಿದೆ.. ನಿಮ್ಮೆಲ್ಲರಿಗೂ ದೇವಿರಮ್ಮನ ಕೃಪೆ ಸದಾ ಇರಲಿ.

✍️ಪವಿತ್ರ ಹೆತ್ತೂರು