(ಬ್ಯಾಂಕರ್ಸ್ ಡೈರಿ)
ಏಕೋ ಏನೋ ಇತ್ತೀಚಿಗೆ ಮಾತುಗಳೆಲ್ಲ ಹೆಣ್ಣು ಮಕ್ಕಳ ಸುತ್ತಲೇ ಸುತ್ತುತ್ತಿವೆ. ಬಹುಶಃ ಮಹಿಳಾ ದಿನಾಚರಣೆಯ ಗುಂಗಿರಬಹುದು ಅಂದುಕೊಂಡರೂ ಅದಷ್ಟೇ ನಿಜವಲ್ಲ. ಪತ್ರಿಕೆ ತೆಗೆದಾಗಲೆಲ್ಲ, ಯೂಟ್ಯೂಬ್ ನೋಡಿದಾಗಲೆಲ್ಲ ಎಲ್ಲ ಕಡೆಯೂ ಇಲ್ಲಿ ಅತ್ಯಾಚಾರ ಅಲ್ಲಿ ವರದಕ್ಷಿಣೆ ಕೊಲೆ. ಮತ್ತೆ ಎಲ್ಲೋ ಹೆಣ್ಣುಮಗಳೇ ಗಂಡನನ್ನು ಕೊಂದಳು.. ಹೀಗೆ ಹೆಣ್ಣು ಮಕ್ಕಳ ಸುದ್ದಿ ಸದಾ ಸದಾ ಉರಿಯುತ್ತಾ ಇದೆ .
ಮೊನ್ನೆ ಮೊನ್ನೆ ಬ್ಯಾಂಕಿಗೆ ಬಂದ ವೈದ್ಯೆಯೊಬ್ಬರು ಕೂಡ ತಮ್ಮ ಆಸ್ಪತ್ರೆಯ ಸುತ್ತ ಮುತ್ತ ನಡೆಯುತ್ತಿರುವ ಹೆಣ್ಣು ಅಸ್ಪೃಶ್ಯತೆಯ ಕುರಿತು ನೋವನ್ನು ತೋಡಿಕೊಂಡರು. ಹೆಣ್ಣು ಅಸ್ಪೃಶ್ಯತೆಯೇ? ಹಾಗಂದರೇನು ಎಂದು ಹುಬ್ಬೇರಿಸಬೇಡಿ. ಅದಕ್ಕೂ ಒಂದೊಳ್ಳೆ ಹೆಸರಿದೆ ’ಭ್ರೂಣಹತ್ಯೆ’ ಎಂದು.
ಆಕೆ ಕೆಲಸ ಮಾಡುವ ಆಸ್ಪತ್ರೆಯ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ನೂರಾರು ಹೆಣ್ಣು ಭ್ರೂಣ ಹತ್ಯೆ ಆಗಿರುವುದನ್ನು ಆಕೆ ನನ್ನ ಬಳಿ ಬಹಳ ಸಂಕಟದಿಂದ ಹೇಳಿಕೊಂಡರು. ಆಕೆ ಅದನ್ನು ಅಲ್ಲಿ ದೊಡ್ಡದಾಗಿ ವಿರೋಧಿಸಿದ್ದೂ ಆಗಿದೆ. ಹಾಗೆ ಹಾಕಿ ವಿರೋಧಿಸಿದ್ದಕ್ಕೆ ಆ ಹೆಣ್ಣು ಮಕ್ಕಳ ತಾಯಿ ತಂದೆಯರಾಗುತ್ತಿದ್ದವರು ಇವರ ವಿರುದ್ಧ ಧ್ವನಿಯೆತ್ತಿದ್ದೂ ಇದೆಯಂತೆ . “ಕೇವಲ ಧ್ವನಿ ಎತ್ತುವುದಿಲ್ಲ ಮೇಡಂ ಕೈಯನ್ನು ಕೂಡ ಎತ್ತುತ್ತಾರೆ ಹೊರಗೆ ಬಂದಾಗ” ಎಂದರಾಕೆ.
“ಇದು ಕೇವಲ ಗಂಡ ಹೆಂಡಿರ ವಿಷಯಕ್ಕೆ ಸಂಬಂಧಪಟ್ಟದ್ದಲ್ಲ. ಇದಕ್ಕೆ ಒಂದು ದೊಡ್ಡ ಜಾಲವಿದೆ. ಆ ಜಾಲ ಎಷ್ಟರಮಟ್ಟಿಗೆ ಸುತ್ತಮುತ್ತ ಹೆಣೆದು ಕೊಂಡಿದೆ ಎಂದರೆ ಅದು ಬರಿ ಜೇಡರ ಬಲೆಯಾಗಿ ಮಾತ್ರ ಉಳಿದಿಲ್ಲ ಜೇಡರ ಬಲೆಯಂತೆ ಕಂಡರೂ ಅದು ಕಬ್ಬಿಣದ ಬಲೆಯಾಗಿದೆ. ಮೇಡಂ ಎಲ್ಲೋ ದೂರದ ವಿಷಯವನ್ನು ನಾನು ಹೇಳುತ್ತಿಲ್ಲ. ಮಂಡ್ಯದಿಂದ ಕೇವಲ 10 – 20 ಮೈಲಿ ದೂರದ ಹಳ್ಳಿಯ ಸುತ್ತಮುತ್ತ ನಡೆದ ಪ್ರಸಂಗ ಇದು. ಈ ಒಂದು ವರ್ಷದಿಂದ ಪತ್ರಿಕೆಗಳಲ್ಲಿ ಅದೆಷ್ಟು ಬಾರಿ ಸುದ್ದಿಯಾಗಿದೆ ಎಂದರೆ ಅದರಲ್ಲಿ ನಮ್ಮ ವೈದ್ಯರ ಶಾಮೀಲಿರದೆ ಇವೆಲ್ಲ ಆಗಲು ಸಾಧ್ಯವೇ? ಇದರಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವವರು, ವೈದ್ಯರು, ಏಜೆಂಟರು ಎಲ್ಲರೂ ಸೇರಿದ್ದಾರೆ. ಹಾಗೆ ಪತ್ತೆ ಮಾಡುವ ಸಾಧನಗಳನ್ನು ಉಚಿತವಾಗಿ ಸಪ್ಲೈ ಮಾಡುವ ದೊಡ್ಡ ಜಾಲವಿದೆ” ಎಂದಾಕೆ ಹೇಳಿದರು. ಹೇಳಿದಾಕೆ ನೋಡಲು ಗಂಡು ಮಕ್ಕಳಂತೆಯೇ ಉಡುಗೆ ತೊಡುಗೆ ಹೇರ್ ಕಟ್ ಮತ್ತು ಧೈರ್ಯ. ಒಂದು ಜೀನ್ಸ್ ಪ್ಯಾಂಟು ಮೇಲೊಂದು ಅದು ಕುರ್ತಾ ಎನ್ನಬಹುದು ಆ ಥರದ್ದು. ಗಂಡು ಮಕ್ಕಳ ಕುರ್ತವೋ ಹೆಣ್ಣುಮಕ್ಕಳ ಕರ್ತವೋ ಎಂಬುದು ಅರ್ಥವಾಗದಂತಹ ಬಟ್ಟೆ. ಆದರೂ ಈ ಹೆಣ್ಣು ಮಕ್ಕಳ ಬಗ್ಗೆ ಅವರೊಳಗೆ ಮಿಡಿಯುತ್ತಿದ್ದ ಆ ಭಾವ ಮತ್ತು ಸಂಕಟ ಹೆಣ್ಣಿನದೇ ಆಗಿತ್ತು . ಸಾಕಷ್ಟು ವಿಷಯಗಳನ್ನು ಆಕೆ ನನ್ನೊಂದಿಗೆ ಹಂಚಿಕೊಂಡಿರು.
ಇದಾಗಿ ಕೆಲ ತಿಂಗಳುಗಳು ಆಗಿದ್ದವು. ನನ್ನ ಬೇರೆ ಶಾಖೆಯ ಸಹೋದ್ಯೋಗಿಯೊಬ್ಬರು ಮಾತನಾಡುತ್ತಾ ಆಕಸ್ಮಿಕವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಅವರು ನಮ್ಮ ರಾಜ್ಯದವರಲ್ಲ. ಅವರು “ ನಾನು ಎರಡನೇ ಮಗುವಿಗೆ ಗರ್ಭಿಣಿ ಆದ ಸಂದರ್ಭ. ಆರನೆಯ ತಿಂಗಳಿರಬೇಕು. ನನ್ನ ಮುಖದಲ್ಲಿ ದಡಾರದ ರೀತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡವು. ದಿಢೀರ್ ಗುಳ್ಳೆಗಳು ಕಾಣಿಸಿಕೊಂಡಾಗ ಡಾಕ್ಟರ್ ಬಳಿ ಹೋದೆ. ಆಕೆ ’ಇದರಿಂದಾಗಿ ನಿಮ್ಮ ಮಗುವಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಮಗುವಿನ ಮುಖದ ಮೇಲೆಲ್ಲಾ ಇದೇ ರೀತಿಯಾಗಿ ಆ ಗುಳ್ಳೆಗಳು ಆಗಬಹುದು, ಕಿವಿ ಕಣ್ಣಿನ ಮೇಲು ಆಗಬಹುದು. ಹಾಗಾದರೆ ಮಗುವಿನ ಕಣ್ಣು ಹೋಗುತ್ತದೆ ಅಥವಾ ಕಿವಿ ಕೇಳುವುದಿಲ್ಲ, ಇಲ್ಲವಾದರೆ ಬುದ್ಧಿಮಾಂದ್ಯವಾಗುತ್ತದೆ ಎಂದು ಹೇಳಿದರು“ ಎಂದಾಕೆ ಕ್ಷಣಕಾಲ ಉಸಿರು ತೆಗೆದುಕೊಂಡಾಗ ಆರು ತಿಂಗಳು ಹೊಟ್ಟೆಯಲ್ಲಿ ಹೊತ್ತ ಮಗುವಿನ ಬಗ್ಗೆ ಸಾವಿರ ಕನಸನ್ನು ಕಂಡ ತಾಯಿಗೆ ಅದೆಷ್ಟು ಆಘಾತವಾಗಿರಬಹುದು ಎಂಬ ಯೋಚನೆ ಕಾಡಿತು. ಎಷ್ಟು ಮಕ್ಕಳಿದ್ದರೂ ತಾಯಿಗೆ ಮಕ್ಕಳೆಂದರೆ ಅಷ್ಟೇ ಪ್ರೀತಿ. ಒಂದು ಕಣ್ಣಿಗೆ ನೋವಾದರೆ ಮತ್ತೊಂದು ಕಣ್ಣು ಅಳುವ ಹಾಗೆ ಒಂದು ಮಗುವಿದ್ದರೂ ಕೂಡ ಈ ಮಗುವನ್ನು ಕಳೆದುಕೊಳ್ಳುವ ನೋವು ಅಥವಾ ಉಳಿಸಿಕೊಂಡರೆ ಮಗುವಿಗೆ ಆಗಬಹುದಾದ ತೊಂದರೆಯ ಬಗೆಗೆ ಆತಂಕ ಎರಡು ಸೇರಿ ಆಕೆಯನ್ನು ಹೈರಾಣಾಗಿಸಿದ್ದವು ಎಂಬುದನ್ನು ಆಕೆಯ ಮುಖವೇ ಹೇಳುತ್ತಿತ್ತು.
“ನಮ್ಮ ಇಡೀ ಕುಟುಂಬ ಒಂದೆಡೆ ಕೂತು ಚರ್ಚಿಸಿದೆವು. ಕೊನೆಗೆ ಅಕಸ್ಮಾತ್ ಬುದ್ಧಿಮಾಂದ್ಯ ಮಗುವೋ ಅಂಗವೈಕಲ್ಯ ಮಗುವೋ ಹುಟ್ಟಿಬಿಟ್ಟರೆ ನೋಡಿಕೊಳ್ಳುವುದಾದರೂ ಹೇಗೆ? ಏಕೆಂದರೆ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಹಾಗಾಗಿ ಅತ್ತೂ ಕರೆದು ಕೊನೆಗೆ ಗಟ್ಟಿ ಮನಸ್ಸು ಮಾಡಿ ಮಗುವನ್ನು ತೆಗೆಸುವುದು ಎಂದು ನಿರ್ಧರಿಸಿದೆವು” ಎಂದು ಹೇಳಿದರು. ಅವರ ವೈಯಕ್ತಿಕ ವಿಚಾರ ನನಗೆ ಹೆಚ್ಚು ಗೊತ್ತಿಲ್ಲದ್ದರಿಂದ ಎರಡನೆಯ ಮಗು ಏನಾಯಿತು ಎಂಬ ಕುತೂಹಲವೂ ಮೂಡಿತು ಆತಂಕದ ಜೊತೆಗೆ.
“ಈಗ ಬೇಡ ಏಳನೇ ತಿಂಗಳಾಗಲಿ, ಆಗ ನಾರ್ಮಲ್ ಡೆಲಿವರಿ ಅಂತೆ ಮಾಡಬಹುದು ಅಬಾರ್ಷನ್ ಬೇಡ ಎಂದು ಡಾಕ್ಟರ್ ಹೇಳಿದರು. ನಮಗೂ ಅದೇ ಸರಿ ಎನಿಸಿತು. ಏಳನೆಯ ತಿಂಗಳ ಕೊನೆಯಲ್ಲಿ ವೈದ್ಯರ ಬಳಿ ಹೋಗಿ ಕೇಳಿ ತೆಗೆಸುವುದು ಎಂದು ನಿರ್ಧಾರವಾಯಿತು” ಎಂದರು.
“ನಾರ್ಮಲ್ ಡೆಲಿವರಿ ಆದ ಮೇಲೆ ಮಗುವನ್ನು ಸಾಯಿಸುವುದು ಎಂದರೆ ಅದು ಹೇಗೆ” ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಿತು. ಅದನ್ನು ಕೇಳಿಯೂ ಬಿಟ್ಟೆ.
“ ಮಗುವನ್ನು ನಾರ್ಮಲ್ ಡೆಲಿವರಿ ಮಾಡಿಸಿದ ಮೇಲೆ ಮಗುವಿನ ಹೊಕ್ಕಳು ಬಳ್ಳಿಗೆ ಕ್ಲಿಪ್ ಹಾಕುತ್ತಾರಲ್ಲಾ. ಹಾಗೆ ಕ್ಲಿಪ್ ಹಾಕದಿದ್ದರೆ ಆ ಹೊಕ್ಕಳು ಬಳ್ಳಿಯ ಮೂಲಕ ಮಗುವಿನ ರಕ್ತವೆಲ್ಲ ಹೊರಗೆ ಹೋಗಿ ಮಗು ಸತ್ತು ಹೋಗುತ್ತದೆ. ಹೀಗೆಂದು ಡಾಕ್ಟರ್ ನನಗೆ ಹೇಳಿದರು” ಎಂದರು. ನನಗೆ ಆ ಕ್ಷಣ ನಿಜಕ್ಕೂ ಆಶ್ಚರ್ಯವಾಯಿತು ಜೊತೆಗೆ ಮನುಷ್ಯರ ಕ್ರೂರತೆಯ ಬಗೆಗೆ ನಾಚಿಕೆಯಾಯಿತು. ನನಗೆ ಈ ವಿಷಯ ಗೊತ್ತೇ ಇರಲಿಲ್ಲವಲ್ಲ ಎಂದು ಯೋಚಿಸಿದೆ. ಆ ದಿಕ್ಕಿನಲ್ಲಿ ನಾನು ಎಂದೂ ಯೋಚಿಸಿರಲಿಲ್ಲ. ನಿಜ ಮಗು ಹುಟ್ಟಿದಾಗ ಕರುಳು ಬಳ್ಳಿಯನ್ನು ಗಂಟು ಮಾಡುತ್ತಾರೆ ಎಂಬುದು ನೆನಪಿಗೆ ಬಂತು. ಕೆಲವು ಕಡೆ ಗಂಟು ಮಾಡುತ್ತಾರೆ, ಕೆಲವು ಕಡೆ ಕ್ಲಿಪ್ ಹಾಕಬಹುದೇನೋ ಎಂದು ಯೋಚಿಸಿದೆ.
“ಮೇಡಂ ಏನಾಯ್ತು ಆಮೇಲೆ?” ಎಂದು ಆತಂಕದಿಂದ ಕೇಳಿದೆ. ನನ್ನ ಸುತ್ತ ಇನ್ನೊಂದಿಬ್ಬರು ಮಹಿಳಾ ಸಹೋದ್ಯೋಗಿಗಳಿದ್ದರು. ಅದು ಎಲ್ಲರ ಪ್ರಶ್ನೆಯೂ ಆಗಿತ್ತು. ನಿಜಾ ಹೇಳಬೇಕೆಂದರು ಆಗ ಆತಂಕದ ಅವಶ್ಯಕತೆ ಇರಲಿಲ್ಲ ಏಕೆಂದರೆ ಇದಾಗಿ ಆಗಲೇ 20 ವರ್ಷ ಆಗಿತ್ತು. ಅವರಿಗೆಷ್ಟು ಮಕ್ಕಳು ಎಂದು ನನಗೆ ಗೊತ್ತಿರಲಿಲ್ಲ ಗೊತ್ತಿದ್ದರೆ ಈ ಪ್ರಶ್ನೆ ಕೇಳುತ್ತಿದ್ದೇನೋ ಇಲ್ಲವೋ ನನಗೆ ಗೊತ್ತಿಲ್ಲ .
ಆಕೆ ಹೇಳಿದರು “ನಾನು ಯಾವ ವೈದ್ಯೆಯ ಬಳಿ ಹೋಗಿದ್ದೆನೋ ಆ ವೈದ್ಯೆ ತುರ್ತು ಕಾರ್ಯನಿಮಿತ್ತ ಬೇರೆ ಕಡೆ ಹೋಗಬೇಕಾದರೆ ನನಗೆ ನೋವು ಬರುವ ಇಂಜಕ್ಷನ್ ಕೊಟ್ಟು ನಾರ್ಮಲ್ ಡೆಲಿವರಿ ಆಗುತ್ತದೆ. ಇನ್ನೊಬ್ಬ ವೈದ್ಯಯಿದ್ದಾರೆ ಅವರು ನೋಡಿಕೊಳ್ಳುತ್ತಾರೆ. ಆಮೇಲೆ ಅಲ್ಲಿ ನರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಅನೇಕ ಹುಡುಗಿಯರು ಇದ್ದಾರಲ್ಲ ಅವರು ನಿಮ್ಮನ್ನು ಕೇರ್ ಮಾಡುತ್ತಾರೆ ಎಂದು ಹೇಳಿ ಆಕೆ ಹೊರಟುಹೋದರು. ಆ ನರ್ಸುಗಳಲ್ಲಿ ಒಬ್ಬಳು ನನ್ನ ಸಹೋದ್ಯೋಗಿಯ ಸ್ನೇಹಿತೆಯ ಮಗಳೇ ಆಗಿದ್ದಳು. ಸರಿ ನಾರ್ಮಲ್ ಡೆಲಿವರಿ ಆಯಿತು. ಹೊರಗಡೆ ಅತ್ತೆ ಮಾವ ಗಂಡ ಎಲ್ಲರೂ ಕುಳಿತಿದ್ದರು. ಆಗ ಮಧ್ಯ ರಾತ್ರಿ ಆಗಿತ್ತು . ಹೊರಗೆ ಹೋಗಿ ನರ್ಸ್ ಡೆಲಿವರಿ ಆಯಿತು ಗಂಡು ಮಗು ಎಂದು ಹೇಳಿದಳು. ಇನ್ನೇನು ಎಲ್ಲಾ ಮುಗಿತಲ್ಲಾ ಎಂದು ಅವರೆಲ್ಲರೂ ಮನೆಗೆ ಹೋದರು. ನಾನು ಕೂಡ ಡೆಲಿವರಿ ಆಯ್ತು, ಬೆಳಿಗ್ಗೆ ಹೊತ್ತಿಗೆ ಮಗುವು ಇರುವುದಿಲ್ಲ. ಮುಖ ನೋಡಿದರೆ ಮತ್ತೆ ಮೋಹ ಮೂಡುವುದು ಎನ್ನುವುದರಿಂದ ನಾನು ಮಗುವನ್ನು ನೋಡಲಿಲ್ಲ. ಸರಿ ಬೆಳಗ್ಗೆ ೯ ಗಂಟೆ ಆಯಿತು. ಯಾವದೋ ಮಗು ಅಳುವ ಸದ್ದು ಕೇಳಿಸುತ್ತಿತ್ತು. ಎಷ್ಟಾದರೂ ಅದು ಹೆರಿಗೆ ಆಸ್ಪತ್ರೆಯಲ್ಲವೇ? ಯಾವುದೋ ಒಂದು ಮಗು ಅಳುತ್ತಲೇ ಇರುತ್ತದೆ.
ಆಗ ನರ್ಸ್ ಆಗಿದ್ದ ನನ್ನ ಸಹೋದ್ಯೋಗಿಯ ಗೆಳತಿಯ ಮಗಳು ಬಂದು ’ನಿಮ್ಮ ಮಗು ಅಳುತ್ತಿದೆ. ತುಂಬಾ ಆರೋಗ್ಯವಾಗಿ ಕಾಣುತ್ತಿದೆ’ ಎಂದಳು.
ನನಗೆ ಆಶ್ಚರ್ಯ.. ಅದು ಹೇಗೆ ಎಂದು ಕೇಳಿದೆ ಮಗುವಿಗೆ ನಾನೇ ಹೊಕ್ಕುಳ ಬಳ್ಳಿಗೆ ಕ್ಲಿಪ್ ಹಾಕಿದ್ದೆ. ಹಿ ಈಸ್ ಫೈನ್ ಎಂದಳು. ನನಗೆ ಮಿಶ್ರ ಭಾವ. ಸಂತೋಷಕ್ಕೆ ಕಣ್ಣು ತುಂಬಿ ಬಂದಿತು.
ಮಗು ಅಳುತ್ತಿದೆ ಅಂದ ಮೇಲೆ ಅದಕ್ಕೆ ಒಂದಿಷ್ಟು ಸಕ್ಕರೆ ನೀರನ್ನು ಕುಡಿಸೋಣ ಹಸಿವಾಗಿರಬಹುದು ಎಂದಳು. ಕೂಡಲೇ ಅದಕ್ಕೆ ಗ್ಲುಕೋಸ್ ನೀರನ್ನು ಕುಡಿಸಿದ ಕೂಡಲೇ ಕೈಕಾಲು ಬಡಿದು ಕಣ್ಣು ಪಿಳಿಪಿಳಿ ಎಂದಿತು. ಮುದ್ದಾಗಿದ್ದ ಆ ಮಗುವನ್ನು ಕೂಡಲೇ ಇನ್ಕ್ಯುಬೇಟರ್ಗೆ ಶಿಫ್ಟ್ ಮಾಡಿದರು .
ನಿಮ್ಮ ಮಗುವಿಗೆ ತೊಂದರೆಯಾಗುತ್ತದೆ ಮಗುವನ್ನು ಸಾಯಿಸಬೇಕು ಎಂದು ಹೇಳಿದವರು ಯಾರು ಎಂದು ಅಲ್ಲಿಯವರು ಕೇಳಿದರು. ಆಗ ನಾನು ಇಂಥವರು ಎಂದು ಹೆಸರು ಹೇಳಿದೆ. ಆಗ ಅವರೆಲ್ಲ ನಿಮ್ಮ ಅದೃಷ್ಟ ಚೆನ್ನಾಗಿದೆ. ಆಕೆ ಇಂದು ಇಲ್ಲಿ ಇಲ್ಲ. ಆಕೆಯ ವೃತ್ತಿ ಇದೇನೇ. ತುಂಬಾ ಒಳ್ಳೆಯ ಕುಟುಂಬದ ಹೆಣ್ಣು ಮಕ್ಕಳು ಹೆರಿಗೆಗೆ ಬರುವಾಗ ಈ ರೀತಿ ಹೇಳಿ ಮಗುವಾದ ಮೇಲೆ ಮಗು ಇಲ್ಲದವರಿಗೆ ಅದನ್ನು ಮಾರಾಟ ಮಾಡುತ್ತಾಳೆ. ಆಕೆ ಇಲ್ಲದಿದ್ದರಿಂದ ನಿಮ್ಮ ಮಗು ಬಚಾವಾಯಿತು ನೀವು ತುಂಬಾ ಅದೃಷ್ಟವಂತೆ ಎಂದು ಹೇಳಿದರು ಕಡೆಯ ಪಕ್ಷ ಒಂದುವರೆ ಎರಡು ತಿಂಗಳು ಮಗು ಇಂಕ್ಯುಬೇಟರ್ ನಲ್ಲಿ ಇತ್ತು.
ಈಗ ಗುಂಡುಗುಂಡಾಗಿ ದಪ್ಪಗೆ ಎತ್ತರಕ್ಕೆ ಅಚ್ಚುಕಟ್ಟಾಗಿ ಬೆಳೆದು ಒಳ್ಳೆಯ ವಿದ್ಯಾಭ್ಯಾಸ ಪಡೆದು ಕೆಲಸಕ್ಕೂ ಸೇರಿದಾನೆ. ಈ ವಿಷಯವನ್ನು ನಾನು ಅವನಿಗೆ ಈವರೆವಿಗೆ ಹೇಳಿಯೇ ಇಲ್ಲ” ಎಂದು ಆಕೆ ನಕ್ಕರು.
ಇದೆಲ್ಲ ಕೇಳುವಾಗ ನನ್ನ ಮನದಲ್ಲಿ ಹೊಯ್ದಾಟ ಆರಂಭವಾಗಿತ್ತು. ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ . ಕಾಯಿಲೆ ಕಸಾಲೆ ಬಂದಾಗ ವೈದ್ಯರನ್ನು ನಮ್ಮ ಕಣ್ಣ ಮುಂದಿನ ದೇವರು ಎಂದು ನಾವು ಭಾವಿಸಿ ನಮ್ಮ ಇಡೀ ಜೀವವನ್ನು ಅವರ ಕೈಗೆ ಒಪ್ಪಿಸುತ್ತೇವೆ. ಅಂತಹುದರಲ್ಲಿ ನಮ್ಮ ಮಾನಸಿಕ ದೈಹಿಕ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಹಣದ ಗುಡಾಣದಂತೆ ವ್ಯವಹರಿಸುವ ಇಂತಹ ವೈದ್ಯರನ್ನು ಕಂಡಾಗ ಅಶ್ವಿನಿ ದೇವತೆಗಳು ಕೂಡ ನಾಚಿಕೊಂಡಾರು.
ಎಮೋಷನಲ್ ಬ್ಲಾಕ್ ಮೇಲ್ ಎನ್ನುವ ಪದವನ್ನು ಅಂತಹ ವೈದ್ಯರು ಚೆನ್ನಾಗಿ ಬಳಸಿಕೊಳ್ಳುತ್ತಾರೆ . ಮನುಷ್ಯನ ಸ್ವಭಾವವೇ ಹಾಗೆ ತನಗೆ ಬೇಕಾದವರು ಎಂದಾಗ ಹಣಕ್ಕಿಂತ ಪ್ರೀತಿ ಮತ್ತು ಮೋಹವೇ ಹೆಚ್ಚಾಗಿ ಬಿಡುತ್ತದೆ. ’ನೋಡಿ ನಿಮ್ಮವರಿಗೆ ಹೀಗಾಗಿದೆ ಯೋಚನೆ ಮಾಡಿ ಉಳಿಸಿಕೊಳ್ಳುವುದು ಬಿಡುವುದು ನಿಮ್ಮ ಕೈಯಲ್ಲಿದ” ಎಂದು ಒಂದು ಸಣ್ಣ ಅಸ್ತ್ರವನ್ನು ಬಿಟ್ಟರೆ ಸಾಕು ರೋಗಿಯ ಕಡೆಯವರು ಕಂಗಾಲಾಗಿ ಬಿಡುತ್ತಾರೆ.
ಸದ್ಯ ನಮ್ಮವರು ಬದುಕುಳಿದರೆ ಸಾಕು ಎನಿಸುವ ಆ ಸಂದರ್ಭದಲ್ಲಿ ವೈದ್ಯರು ಏನು ಹೇಳಿದರೂ ಮಾಡುವ ಮನಸ್ಥಿತಿಗೆ ತಲುಪುವ ರೋಗಿಯ ಕಡೆಯವರು ಕೈಯಲ್ಲಿ ಇದ್ದುದೆಲ್ಲವನ್ನೂ, ಕೊನೆಗೆ ಆಸ್ತಿ, ಮನೆ ಮಾರಾಟ ಮಾಡಿಯಾದರೂ ತಮ್ಮವರನ್ನು ಉಳಿಸಿಕೊಳ್ಳಲು ಹೆಣಗಾಡುತ್ತಾರೆ.
ಮೊದಲು ಹೇಳಿದ ಹಾಗೆ ಗಂಡಿನಂತೆ ತೋರುವ ವೈದ್ಯೆಯ ಹೃದಯದಲ್ಲಿ ಮೂಡಿದ ಆ ಅನುಕಂಪವೆಷ್ಟು ? ಹೀಗೆ ಸೌಂದರ್ಯವೇ ಮೈವತ್ತಂತೆ ತೋರಿದ ಈ ವೈದ್ಯಯ ಹೃದಯದಲ್ಲಿ ಇದ್ದ ರಾಕ್ಷಸ ಎಂಥವನು ಎಂದು ತಿಳಿದಾಗ ಈ ವಿಶ್ವದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದು ಇದ್ದೇ ಇರುತ್ತದೆ. ಒಳ್ಳೆಯವರು ಕೆಟ್ಟವರು ಎಂಬುದು ಚರ್ಮದ ಬಣ್ಣ, ಅಂತಸ್ತು, ವೃತ್ತಿ, ಜಾತಿ, ಸೌಂದರ್ಯ ಯಾವುದಕ್ಕೂ ಸಂಬಧಿಸಿದ್ದಲ್ಲ. ಅದು ಮನಸ್ಸು ಹೃದಯಕ್ಕೆ ಸಂಬಂಧಿಸಿದ್ದು.
ಒಳ್ಳೆಯವರ ಶೇಕಡವಾರು ಹೆಚ್ಚಾಗಿದ್ದರೆ ಮನುಷ್ಯ ಬದುಕಲು ಈ ವಿಶ್ವ ಯೋಗ್ಯವಾಗುತ್ತದೆ; ಕೆಟ್ಟತನವೇ ಹೆಚ್ಚಾಗುತ್ತಾ ಹೋದರೆ ಬದುಕಲು ಭಯ ಹೆಚ್ಚುತ್ತಾ ಹೋಗುತ್ತದೆ .
ಎಲ್ಲ ವರ್ಗಗಳಲ್ಲೂ ಒಳ್ಳೆಯದೂ ಕೆಟ್ಟದ್ದು ಒಳ್ಳೆಯವರು ಕೆಟ್ಟವರು ಎಂಬುದು ಇದ್ದೇ ಇರುತ್ತದೆ. ಒಬ್ಬರಿಗೆ ಒಳ್ಳೆಯದನಿಸುವುದು ಮತ್ತೊಬ್ಬರಿಗೆ ಕೆಟ್ಟದಾಗುವುದು, ಒಬ್ಬರಿಗೆ ಕೆಟ್ಟದ್ದು ಎನಿಸುವುದು ಮತ್ತೊಬ್ಬರಿಗೆ ಒಳ್ಳೆಯದು ಎನಿಸುವುದು ಅತ್ಯಂತ ಸಹಜ ಈ ಪ್ರಕೃತಿಯಲ್ಲಿ .
ಕಪ್ಪೆಯನ್ನು ತಿನ್ನುವ ಹಾವನ್ನು ಕಂಡಾಗ ಅದು ತೀರ ಸಹಜ ಹಸಿವೆಗಾಗಿ ತಿನ್ನುತ್ತದೆ ಎಂದು ಹಾವಿನ ಪರ ಹೇಳಿದರೆ ಜೀವ ಕಳೆದುಕೊಳ್ಳುವ ಕಪ್ಪೆಯನ್ನು ಕಂಡಾಗ ಮರುಕ ಹುಟ್ಟುವುದು ಸಹಜ. ಅಂತೆಯೇ ಹಾವನ್ನು ತಿನ್ನುವ ಹದ್ದು…. ಇದರಲ್ಲಿ ಒಳ್ಳೆಯದು ಕೆಟ್ಟದು ಎಂಬುದು ಏನೂ ಇಲ್ಲ. ಪ್ರಕೃತಿಯು ಸಮತೋಲನವನ್ನು ಕಾಪಾಡಿಕೊಳ್ಳಲು ಇಂತಹ ಆಹಾರ ಪದ್ಧತಿಯನ್ನು ರೂಪಿಸಿರುತ್ತದೆ.
ಆದರೆ ಮಾನವ ಜೀವಿ ಒಬ್ಬನೇ ಹೊಟ್ಟೆ ತುಂಬಾ ಆಹಾರ ಸಿಕ್ಕರೂ , ಬಟ್ಟೆ ಸಿಕ್ಕರೂ, ಮೈ ತುಂಬಾ ಒಡವೆ ಹೇರಿಕೊಂಡರೂ, ಮತ್ತೂ ಮತ್ತೂ ಮುಂದಿನ ಹತ್ತು ತಲೆಮಾರಿಗೆ ಬೇಕು ಎನ್ನುವ ದುರಾಸೆಯೊಂದಿಗೆ ಕೂಡಿಡಲು ಅಡ್ಡದಾರಿ ಹಿಡಿಯುವುದು .
ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ಕ್ಷೇತ್ರ ತೀರಾ ದುರಾಸೆಯ ವ್ಯವಹಾರಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಏಕೆಂದರೆ ಈ ಎರಡೂ ಕ್ಷೇತ್ರಗಳು ಸಮಾಜಕ್ಕೆ ತೀರಾ ಅನಿವಾರ್ಯ ಮತ್ತು ಮೂಲಭೂತ ಸೌಲಭ್ಯ. ಅಂತಹುದರಲ್ಲಿ ಇವನ್ನು ಈ ಮಟ್ಟದಲ್ಲಿ ದುರ್ಲಾಭ ಪಡೆಯುತ್ತಿರುವ ದೊಡ್ಡ ಅಪಾಯ ನಮ್ಮ ಕಣ್ಮುಂದಿದೆ.
ಹಾಗೆಂದು ಎಲ್ಲ ವೈದ್ಯರು ಕೆಟ್ಟವರಲ್ಲವೇ ಅಲ್ಲ. ಇಂದಿಗೂ ತಮ್ಮ ವೃತ್ತಿಯ ನೈತಿಕತೆಯನ್ನು ಘನತೆಯನ್ನು ಕಾಪಾಡಿಕೊಳ್ಳುತ್ತಿರುವ ಅನೇಕ ವೈದ್ಯರು ನಮ್ಮ ಕಣ್ಮುಂದೆ ಇದ್ದಾರೆ.
ಖಾಯಿಲೆ ಎಂದು ಹೋದರೆ ಅದು ದೊಡ್ಡ ಕಾಯಿಲೆ ಅಲ್ಲವೇ ಅಲ್ಲ. ಔಷಧವೂ ಬೇಡ. ನೀವು ಮನೆಯಲ್ಲಿ ಆಹಾರದಲ್ಲಿಯೇ ಇದನ್ನು ಸರಿಪಡಿಸಿಕೊಳ್ಳಬಹುದು ಎಂದು ಧೈರ್ಯ ಹೇಳಿ ಕೌನ್ಸಿಲಿಂಗ್ ಮಾಡುವಂತಹ ವೈದ್ಯರು ಕೂಡ ಇದ್ದಾರೆ .
ಆದರೆ ದೊಡ್ಡ ಮಟ್ಟದಲ್ಲಿ ಔಷಧ ಮಾಫಿಯಾ ಕೆಲಸ ಮಾಡುವಾಗ ಇಂತಹ ವೈದ್ಯರ ಸಂಖ್ಯೆ ಕಡಿಮೆ ಆಗುತ್ತಾ ಹೋಗುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ.
ಇವೆಲ್ಲ ಒಂದು ಕಡೆ ಇರಲಿ. ನನ್ನ ಸಹೋದ್ಯೋಗಿಗೆ ಮತ್ತೆ ಮಗು ದೊರಕಿತಲ್ಲ ಆ ಕ್ಷಣದಲ್ಲಿ ಬುದ್ಧಿಮಾತುಗಳೆಲ್ಲ ಕರಗಿ ಹೋಗಿ ಮನದ ಭಾವವೆಲ್ಲ ಹಕ್ಕಿಯಂತೆ ಹಾರಾಡಿ ಆ ಖುಷಿಯೇ ಹೆಚ್ಚು ಎನಿಸಿಬಿಟ್ಟಿತು.
ಸತ್ತು ಹೋಗಿದೆ ಎಂದುಕೊಂಡ ಮಗು ಆರೋಗ್ಯವಾಗಿ ನಮ್ಮ ಕಣ್ಮುಂದೆ ಇದೆ ಎಂದಾಗ ಆ ಇಡೀ ಕುಟುಂಬದ ಆ ಸಂಭ್ರಮ ಏನಿದೆ ಅದನ್ನು ನೆನೆದಾಗ ಒಂದು ಕ್ಷಣ ರೋಮಾಂಚನವಾಗುತ್ತದೆ.
ಮತ್ತಷ್ಟು ಮಗದಷ್ಟು ಸಂಭ್ರಮಗಳು ನಮ್ಮ ಜೊತೆಗಿದ್ದು ಎಲ್ಲ ನೋವುಗಳನ್ನು ಮರೆಸಲಿ ಎಂಬುದು ಸದಾಶಯ.

-ಡಾ. ಶುಭಶ್ರೀ ಪ್ರಸಾದ್ ಮಂಡ್ಯ