- ಬೆಂಗಳೂರಿನಲ್ಲಿ ಗುಡುಗು-ಗಾಳಿ ಸಹಿತ ಧಾರಾಕಾರ ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 16: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನಲ್ಲೂ ಮಳೆಯಾಗುವ
ನಿರೀಕ್ಷೆಯಿದೆ. ಕಳೆದ ರಾತ್ರಿ ಬೆಂಗಳೂರಿನಲ್ಲಿ ಕೆಲವೆಡೆ ಗಾಳಿ-ಮಿಂಚಿನ ಜೊತೆಗಿನ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತಂಪಾದ ವಾತಾವರಣ ಮೆರೆಯುತ್ತಿದೆ.
ಇಂದು ಮಧ್ಯಾಹ್ನದವರೆಗೆ ತಾಪಮಾನ ಸಾಮಾನ್ಯವಾಗಿದ್ದು, ನಂತರ ಕಾರ್ಮೋಡ ಆವರಿಸುವ ಸಾಧ್ಯತೆ ಇದೆ. ಸಂಜೆ ಬಳಿಕ ಗಾಳಿ ಮತ್ತು ಮಳೆ ಗಂಭೀರ ರೂಪ ಪಡೆಯುವ ಲಕ್ಷಣಗಳಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳುವ ಸಂಭವವಿರುವುದರಿಂದ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
ರಾಜ್ಯದ ಯಾವೆಲ್ಲೆಡೆ ಮಳೆಯಾಗಬಹುದು?
ಇಂದು ಏಪ್ರಿಲ್ 16 ರಂದು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆ ಹವಾಮಾನ ಇಲಾಖೆ ಮುನ್ಸೂಚಿಸಿದೆ. ಮಳೆಯ ಮುನ್ಸೂಚನೆ ಇರುವ ಜಿಲ್ಲೆಗಳು:
- ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ
- ಮಧ್ಯ ಕರ್ನಾಟಕ:ತುಮಕೂರು, ಚಿತ್ರದುರ್ಗ, ದಾವಣಗೆರೆ
- ಉತ್ತರ ಕರ್ನಾಟಕ: ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಕೊಪ್ಪಳ, ಹಾವೇರಿ, ಬಳ್ಳಾರಿ
- ಕರಾವಳಿ ಪ್ರದೇಶ: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲೂ ಮಳೆ ಬೀಳುವ ಲಕ್ಷಣಗಳಿವೆ
ಇದನ್ನು ಓದಿ –ಹಣಕಾಸು ವಿವಾದ: 13 ದಿನಗಳ ಬಳಿಕ ಹಲ್ಲೆಗೊಳಗಾದ ಯುವಕನ ಸಾವು
ಮುಂಗಾರು ಮುನ್ಸೂಚನೆ
ಸಾಮಾನ್ಯವಾಗಿ ಜೂನ್ 1 ರಂದು ಕೇರಳದಿಂದ ಮುಂಗಾರು ಪ್ರಾರಂಭವಾಗುತ್ತದೆ. ಈ ಬಾರಿ ಮುಂಗಾರು ಮಳೆಯ ಪ್ರಮಾಣ ಶೇ.105 ರಷ್ಟಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಹಾಕಿದ್ದು, ದೇಶದಾದ್ಯಂತ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ಸುದ್ದಿ ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ.