ಕಥೆಗಾರರೂ ಕಾದಂಬರಿಕಾರರೂ ಆದ ಶ್ರೀ ಕೆ ಸತ್ಯನಾರಾಯಣ ಅವರು ಬದುಕನ್ನು ನೋಡುವ ರೀತಿಯೇ ವಿಭಿನ್ನವಾಗಿದೆ ಮತ್ತು ವಿಶಿಷ್ಟವಾಗಿದೆ.
ಅರ್ಧ ಶತಮಾನದ ಹಿಂದೆ ಕಂಡ ಹಿರಿಯಾಕೆ ಒಬ್ಬರು ತಮ್ಮ ಬದುಕಿನ ಬಗ್ಗೆ ಹೇಳಿದ ನಾಲ್ಕಾರು ನೋವಿನ ಮಾತುಗಳ ಜಾಡನ್ನು ಹಿಡಿದು ಮತ್ತು ಆ ಜಾಡು ನಮ್ಮೆಲ್ಲರ ಬದುಕಿನ ರೀತಿಯನ್ನು ವ್ಯಾಖ್ಯಾನಿಸುವ ಮತ್ತು ನಿರ್ದೇಶಿಸುವ ಕಾದಂಬರಿಯಾಗಿ ರೂಪುಗೊಳ್ಳುವಂತೆ ಮಾಡಿದ ಆ ಒತ್ತಡ ಪ್ರತಿ ಸಾಹಿತಿಯ ಮನಸ್ಥಿತಿಯನ್ನು ವಿಶ್ಲೇಷಿಸುವಂತಿದೆ.
ಒಂದು ಹೆಂಗಸು ಆಡಿದ ಮಾತು ನಿಮಿತ್ತ ಮಾತ್ರವಾದರೂ ಆನಂತರ ಆಕಸ್ಮಿಕವೋ ಪೂರ್ವ ನಿಯೋಜಿತವೋ ಎಂಬಂತೆ ಆಕೆಯ ಸಂಬಂಧಿಕರು ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಾಹಿತಿಗೆ ಪರಿಚಯವಾಗಿ ಇಡೀ ಸ್ಥೂಲ ಚಿತ್ರಣ ಇವರ ಕೈ ಹಿಡಿದು ಬರೆಸುವಂತೆ ಮಾಡಿದ್ದು ಕಾಕತಾಳೀಯವೋ ಅಲ್ಲವೋ ಎಂಬ ಗೊಂದಲವೂ ಕಾಡುತ್ತದೆ.
ಸಂಬಂಧಗಳು ಹೇಗೆ ಗಟ್ಟಿಯಾಗುತ್ತವೆ ಮತ್ತು ಹೇಗೆ ಜಾಳಾಗುತ್ತವೆ ಎನ್ನುವ ಸೂಕ್ಷ್ಮ ವಿಷಯಗಳನ್ನು ಕಾದಂಬರಿಕಾರರು ಸಮರ್ಥವಾಗಿ ಚರ್ಚಿಸಿ ನಿಭಾಯಿಸಿದ್ದಾರೆ.
ಈ ಕಾದಂಬರಿಯ ಪಾತ್ರಗಳು ಆಡುವ ಮಾತಿನಿಂದಲೇ ಇಡೀ ಕಾದಂಬರಿಯನ್ನು ಗ್ರಹಿಸುವ ಪ್ರಯತ್ನ ಇದು.
’ಅಪ್ಪ ಅಮ್ಮನಿಗೆ ಯಾವಾಗಲೂ ಸುನಂದ ವಿಷಯಕ್ಕೆ ಜಗಳ ಆಗ್ತಾನೆ ಇರುವುದು ನೀನೇ ಹುಡುಕಿದ ಸಂಬಂಧ ಅಂತ ಅಪ್ಪನ ಆರೋಪ. ನೀವು ಯಾವುದಕ್ಕೂ ಮುತುವರ್ಜಿ ವಹಿಸುತ್ತಿರಲಿಲ್ಲ. ಅದಕೇ ನಾನು ಹುಡುಕಿದೆ ಅಂತ ಅಮ್ಮನ ವಾದ. ಗಂಟೆಗತ್ತಲೆ ಜಗಳ ಕಾಯೋರು’
ಅಂತರ ಧರ್ಮೀಯವನನ್ನು ಮದುವೆಯಾದ ನಾಯಕಿ ವಿಮಲಾಬಾಯಿಯ ಅಕ್ಕ ಮಾಲಿನಿ ಅಪ್ಪ ಸತ್ತಾಗಲೂ ಬರದೆ ಇದ್ದವಳು ವಿಮಲಾ ಬೇರೆ ಜಾತಿಯ ಹುಡುಗನನ್ನು ಇಷ್ಟಪಡುತ್ತಿದ್ದಾಳೆ ಎಂದು ತಿಳಿದಾಗ ಫಾರಿನ್ ನಿಂದ ಓಡಿ ಬಂದು ಬಾಯಿ ತುಂಬಾ ಬೈದು ಮರ್ಯಾದೆ ಹಾಳು ಮಾಡುತ್ತಿದ್ದೀಯ ಎಂದದ್ದು ಇಲ್ಲಿ ಸಿರಿವಂತಿಕೆ ಮತ್ತು ಮಧ್ಯಮ ವರ್ಗದ ಜನರ ನಡುವಿನ ಅಂತರವನ್ನು ತೋರುತ್ತದೆ. ಸಿರಿವಂತಿಕೆ ಇದ್ದ ಮಾಲಿನಿಯ ಗಂಡ ಬೇರೆ ಧರ್ಮದವನಾದರೂ ಎಲ್ಲರೂ ಒಪ್ಪಿಸಿ ಮದುವೆ ಮಾಡಿದ್ದರು. ಇದರೊಟ್ಟಿಗೆ ಮಾಲಿನಿ ಗರ್ಭವತಿ ಕೂಡ ಆಗಿದ್ದರೂ ಅದು ಲೋಕಕ್ಕೆ ತಿಳಿಯಬಾರದು ಎಂದು ಮದುವೆ ಮಾಡಿದ್ದರು.
ಆದರೆ ವಿಮಲಾಳನ್ನು ಇಷ್ಟಪಟ್ಟಂತಿದ್ದ ಸರ್ವೋತ್ತಮನಿಗೆ ಕೊಟ್ಟು ಮದುವೆ ಮಾಡುವುದಾದರೆ ವರದಕ್ಷಿಣೆ ಕೊಡಬೇಕಾಗುತ್ತದೆ ಎನ್ನುವ ಸ್ವಾರ್ಥ ಮನೆಯವರದ್ದು. ಆತ ಇವಳೊಂದಿಗೆ ಸಂಬಂಧ ನಿರಾಕರಿಸುವಾಗ ಎಲ್ಲರೂ ಇವಳನ್ನೇ ದೂಷಣೆ ಮಾಡಿದ್ದು ಮಾನವ ಮನಸ್ಥಿತಿಯ ಸಹಜವಾದ ವಿಚಾರಗಳನ್ನು ಸೂಕ್ಷ್ಮವಾಗಿ ಹೇಳುತ್ತಾ ಹೋಗುತ್ತದೆ.
ಈ ಕಾದಂಬರಿಯ ಶೀರ್ಷಿಕೆ ಅಂಪೈರ್ ಮೇಡಂ ಹೇಗೆ ಬಂತು ಎನ್ನುವ ಕುತೂಹಲಕ್ಕೆ ಒಳಗೊಂದು ಉತ್ತರ.
ಅಂಪೈರ್ ಮೇಡಂ ಕಾದಂಬರಿಯ ನಾಯಕಿ ವಿಮಲಾಳ ಅಣ್ಣ ವಲ್ಲಭ ಒಳ್ಳೆಯ ಕ್ರಿಕೆಟ್ ಆಟಗಾರ.”ಅವನು ಮ್ಯಾಚ್ ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದ ದಿವಸ ಬ್ಯಾಟ್ಸ್ಮನ್ ತಂಗಿ; ವಿಕೆಟ್ ಜಾಸ್ತಿ ತೊಗೊಂಡಾಗ ಸ್ಪಿನ್ನರ್ ಮೇಡಂ; ಹೀಗೆ ನನ್ನ ಟೈಟಲ್ ಕೂಡ ಬದಲಾಗುವುದು’ ಎಂದು ನಾಯಕಿ ಹೇಳಿಕೊಳ್ಳುವಲ್ಲಿ ಇವರಿಗೊಂದು ಅಸ್ತಿತ್ವ ಇದೆಯೋ ಇಲ್ಲವೋ ? ಬೇರೆಯವರಿಂದ ಇವರ ಅಸ್ತಿತ್ವದ ಗುರುತುವಿಸುವಿಕೆಯೇ ಎನ್ನುವ ಅನುಮಾನ ಕೂಡ ಬರುತ್ತದೆ.
ಈ ವಿಷಯವೇ ಈ ಕಾದಂಬರಿಯ ಹೈಲೈಟ್ ಎಂದರು ತಪ್ಪಾಗಲಾರದು
’ಇಷ್ಟು ಹೊತ್ತಿಗೆ ಕಿರಂಗೂರಿನಲ್ಲಿ ಸ್ಕೂಲಿನಲ್ಲಿ ಗೌಡರ ಮನೆಯಲ್ಲಿ ಎಲ್ಲಾ ಕಡೆಯೂ ಬೆಂಗಳೂರಿನ ಮನೆಯಲ್ಲಿ ನನಗೆ ಸರಿಯಾದ ಆಶ್ರಯ ಇಲ್ಲ ಅನ್ನೋದು ಗೊತ್ತಾಗಿಬಿಟ್ಟಿತ್ತು. ಹೆಂಗಸರಿಗೆ, ಹೆಣ್ಣು ಮಕ್ಕಳಿಗೆ ಮದುವೆ ಆಗಲಿ, ಆಗದೇ ಇರಲಿ, ತಂದೆ ಮನೆ ಕಡೆ ಒಂದು ಬೆಂಬಲ ಇಲ್ಲ ಅಂತ ಗೊತ್ತಾಗಿ ಹೋದರೆ, ಎಂತಹ ಸಜ್ಜನರು ಎಂತಹ ಕುಲೀನ ಮನೆತನದವರಾದರು ಒಂದು ಸದರ ಬೆಳೆಸಿಕೊಂಡೇ ಬೆಳೆಸಿಕೊಳ್ಳುತ್ತಾರೆ. ಇದು ನನಗೆ ಪ್ರತಿಯೊಂದು ಸಂದರ್ಭದಲ್ಲೂ ಮತ್ತೆ ಮತ್ತೆ ಅನುಭವಕ್ಕೆ ಬರುತ್ತಿತ್ತು’ ಎನ್ನುವ ವಿಮಲಾಳ ಮಾತಿನಲ್ಲಿ ಕಾದಂಬರಿಕಾರರು ಹೆಣ್ಣುಮಕ್ಕಳ ವಿಷಯದಲ್ಲಿ ಎಷ್ಟು ಸೂಕ್ಷ್ಮಜ್ಞರಾಗಿದ್ದಾರೆ ಎಂದು ವೇದ್ಯವಾಗುತ್ತದೆ.
’ದಿಕ್ಕಿಲ್ಲದವರ ಬೇಸಿಗೆ ರಜೆ ಎನ್ನುವ ಹೆಸರಿನಲ್ಲಿ ಏನಾದರೂ ಒಂದಿಷ್ಟು ಬರೆಯಬಹುದಾದರೆ ಅದಕ್ಕೆ ಪೂರಕವಾಗಿ ಈ ಕಾದಂಬರಿಯಲ್ಲಿ ಒಂದು ಘಟನೆ ಇದೆ ’ಸ್ಕೂಲಿಗೆ ರಜ ಬಂದಾಗ ಪರೀಕ್ಷೆಗಳು ಮುಗಿದಾಗ ಎಲ್ಲಾ ಮೇಷ್ಟ್ರು ಮೇಡಂ ಗಳೆಲ್ಲ ಅವರವರ ಊರಿಗೆ ಹೊರಟು ನಿಂತಾಗ ನಾನು ಕೂಡ ಬೆಂಗಳೂರಿಗೆ ಹೋಗ್ತೀನಿ ಅಂತ ನಾಟಕ ಮಾಡಿ ಬ್ಯಾಗ್ ಗೆ ಒಂದಿಷ್ಟು ಬಟ್ಟೆಗಳನ್ನು ತುರುಕಿಕೊಂಡು ಹೊರಡುವ ಆತುರ ತೋರಿಸುತ್ತಿದ್ದೆ. ಆದರೆ ಬೆಂಗಳೂರಿನ ದಿಕ್ಕಿನಲ್ಲಿ ಕೂಡ ಹೋಗುತ್ತಿರಲಿಲ್ಲ. ಮೈಸೂರಿಗೋ, ಶ್ರೀರಂಗಪಟ್ಟಣಕ್ಕೋ ಹೊರಟು ಹೋಗುತ್ತಿದ್ದೆ. ಒಂದೊಂದು ಸಲ ದೊಡ್ಡ ಜಾತ್ರೆಗಳು ಕೂಡಿ ಬರೋವು. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ತಲಕಾಡು ಕ್ಷೇತ್ರದ ಪಂಚಲಿಂಗ ದರ್ಶನದ ಜಾತ್ರೆಗೆ ಹೋದರೆ ಆ ಜನ ಜಾತ್ರೆಯಲ್ಲಿ ಕಾಲ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ. ಚುಂಚನಗಿರಿ, ಎಡತೊರೆ ಜಾತ್ರೆಗಳನ್ನು ಕೂಡ ನಾನು ಹಾಗೇ ನೋಡಿದ್ದು. ಅಷ್ಟು ಜನಜಂಗುಳಿಯಲ್ಲಿ ನನ್ನನ್ನು ಯಾರು ಗುರುತಿಸುತ್ತಿಲ್ಲ ಎನ್ನುವುದೇ ತುಂಬಾ ಸಮಾಧಾನ ಆಗುವುದು. ಮತ್ತೆ ಮತ್ತೆ ಜಾತ್ರೆಗಳಿಗೆ ಬರಬೇಕು ಅನಿಸುವುದು. ಶ್ರೀರಂಗಪಟ್ಟಣಕ್ಕೆ ಅದೆಷ್ಟು ಸಲ ಹೋಗಿದ್ದೆನೋ?
ಒಂದೇ ಒಂದು ಸಲವೂ ದೇವರ ದರ್ಶನಕ್ಕೆ ಹೋಗಲಿಲ್ಲ ಕೋಟೆ ಒಳಗೆ ಪಾಳು ಬಿದ್ದಿರುವ ಬೀದಿಗಳಲ್ಲಿ ಓಡಾಡೋದು, ಸ್ನಾನ ಘಟ್ಟಕ್ಕೆ ಹೋಗಿ ಮೆಟ್ಟಿಲುಗಳ ಮೇಲೆ ಕುಳಿತು ಕಾಲನ್ನು ನೀರೊಳಗೆ ಇಳಿ ಬಿಡೋದು, ಆಮೇಲೆ ಕರಿಘಟ್ಟದ ತೀರದಲ್ಲಿ ಹೋಗಿ ಕೂರೋದು. ಒಬ್ಬರಾದ ಮೇಲೆ ಒಬ್ಬರು ಕಾರಿನಲ್ಲಿ ವ್ಯಾನಿನಲ್ಲಿ ಬಂದು ಅಸ್ತಿ ವಿಸರ್ಜನೆ ಮಾಡುತ್ತಲೇ ಇರೋರು. ಪ್ರತಿಸಲ ಅಸ್ತಿ ವಿಸರ್ಜಿಸಿದಾಗಲೂ ಬೂದಿಯ ಕೊನೆಯ ಭಾಗ ಕಾಣುವ ತನಕವೂ ನೋಡುತ್ತಾ ನಿಂತಿರುತ್ತಿದ್ದೆ. ಸುತ್ತಮುತ್ತಲ ಗ್ರಾಮಗಳಿಗೂ ಹೋಗುತ್ತಿದ್ದೆ. ಈ ವರ್ಷವೂ ಹೋಗೋದು, ಮುಂದಿನ ವರ್ಷವೂ ಹೋಗೋದು, ಆಚೆ ವರ್ಷವೂ ಹೋಗೋದು. ಹೀಗೆ ಪ್ರತಿ ವರ್ಷವೂ ಒಂದೇ ಊರಿಗೆ ಒಂದೇ ಬೀದಿಗೆ ಬರ್ತಾ ಇದ್ದರೆ ಇದು ನಮ್ಮೂರೇ ಅಂತ ಅನಿಸಿಬಿಡುತ್ತೆ ಅಂತ ಅನಿಸಿದರೂ ಅಂಗಡಿ ಬೀದಿಗಳಲ್ಲಿ ಮಾತ್ರ ಏಕೆ ಇಷ್ಟೊಂದು ಹೊಸ ಅಂಗಡಿಗಳು ಬರುತ್ತಲೇ ಇವೆಲ್ಲ ಅಂತ ಹೋದ ಕಡೆಯಲ್ಲ ಎಷ್ಟು ಅಂಗಡಿಗಳು, ಎಂತದ್ದು ಅಂತ ಲೆಕ್ಕ ಹಾಕುತ್ತಿದ್ದೆ’ ಎನ್ನುವ ಮಾತುಗಳಲ್ಲಿ ಜಾಗತೀಕರಣದ ನೆರಳನ್ನು ಕಾಣುತ್ತೇವೆ. ಜೊತೆಗೆ ಮನುಷ್ಯ ಸ್ವಭಾವದಲ್ಲಿ ಪರಿಚಯ ತಂದುಡ್ಡುವ ಪ್ರಭಾವವನ್ನು ಗುರುತಿಸಬಹುದು.
’ಎಲ್ಲ ಕಡೆಯೂ ಹೀಗೇ ಆಗುತ್ತಿದ್ದರಿಂದ ರಿಟೈರ್ರ್ ಆದ ಮೇಲೆ ನನಗೆ ಬೆಂಗಳೂರಿಗೆ ಹೋಗಬೇಕು ಎಂದು ಅನಿಸಿತು. ಎಲ್ಲರೂ ರಿಟೈರ್ ಆದಮೇಲೆ ಅವರವರ ಊರಿಗೆ ಹೊರಟು ಬಿಡುತ್ತಿದ್ದರು. ದೇವಲಾಪುರ ಎಳಂದೂರು ಕಿಕ್ಕೇರಿ ಹೀಗೆ ಇವರೆಲ್ಲ ನನ್ನೆದುರಿಗೆ ಹಾಕುತ್ತಿದ್ದ ಲೆಕ್ಕಾಚಾರ, ಆಡುತ್ತಿದ್ದ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿರಬೇಕು. ಎರಡು ಮೂರು ವಾರಗಳಲ್ಲಿ ನನಗೆ ಬೆಂಗಳೂರಿನಲ್ಲಿ ಸುಸ್ತಾಗಿ ಹೋಯಿತು. ನಾನು ಎಷ್ಟು ಕೇವಲದ ಪದಾರ್ಥವಾಗಿ ಹೋಗಿದ್ದೀನಿ ಅಂತ ಗೊತ್ತಾಯ್ತು. ಎಷ್ಟೋ ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ಬೆಂಗಳೂರು ಅದೇ ರೀತಿಯಲ್ಲಿ ಇರುತ್ತೆ ಅಂತ ನಾನು ಯಾಕೆ ಅಂದುಕೊಂಡಿದ್ದೆ.ಎಲ್ಲೂ ಯಾರ ಮನೆಯಲ್ಲಿ ಯಾರು ಯಾವುದು ಹಾಗೆ ಉಳಿದಿರಲಿಲ್ಲ. ಹಾಗೆ ಉಳಿದಿದ್ದು ಅಂದರೆ ಸರ್ಕಲ್ ಪಾರ್ಕ್ ಗಳು ದೇವಸ್ಥಾನದ ಮುಂದೆ ನಿಲ್ಲಿಸಿರುವ ಮರದ ತೇರುಗಳು ಅಷ್ಟೇ’
ಕಾಲ ಬದಲಾದ ಹಾಗೆ ಮನುಷ್ಯರೂ ಬದಲಾಗುತ್ತಾರೆ. ಜಾಗತೀಕರಣದ ಪ್ರತಿ ಹಂತದಲ್ಲೂ ಮನುಷ್ಯ ಸಂಬಂಧದ ಗಂಟು ತುಸು ತುಸುವೇ ಬಿಡಿಸಿಕೊಳ್ಳುತ್ತಾ ಸಡಿಲವಾಗುತ್ತಾ ಹೋಗುತ್ತಿದೆ. ತನ್ನೂರು ಎಂದು ಆಸೆಯಿಂದ ಬಂದರೆ ಹಿಂದೆ ಕಂಡಿದ್ದಂತೆ ಮತ್ತೆ ಕಾಣಸಿಗದು. ಈಗ ಕಾಣುತ್ತಿರುವುದು ಬೇರೆಯೇ ಎನಿಸಿಬಿಡುತ್ತದೆ ಮತ್ತು ಒಂದು ಅಪರಿಚಿತತೆ ಹುಟ್ಟುಕೊಂಡುಬಿಡುತ್ತದೆ. ಇದು ಪ್ರತಿ ಹಂತದಲ್ಲಿಯೂ ಸಹಜವೇ. ಆದರೆ ಈಗಿನ ಜೆನರೇಷನ್ ಹಳತರ ಬಗೆಗೆ ಅಂಥ ಆಸೆ, ನಿರೀಕ್ಷೆ ಮತ್ತು ನಂಟು, ಯಾವುದನ್ನೂ ಇಟ್ಟುಕೊಳ್ಳದ ಕಾರಣ ತೀರಾ ಪ್ರಾಕ್ಟಿಕಲ್ ಆಗಿ ಇಂಥ ನಿರಾಸೆಯ ನಿಟ್ಟುಸಿರು ಅವರನ್ನು ತಾಕುವುದೇ ಇಲ್ಲ. ಜೊತೆಗೆ ಅಂಥ ಆನಂದವನ್ನೂ ಅವರು ಕಳೆದುಕೊಳ್ಳುತ್ತಿದ್ದರೆ ಎಂಬುದೂ ಸತ್ಯವೇ.
ಈ ಬೆಂಗಳೂರು ಒಂದು ಊರಷ್ಟೇ ನನ್ನೂರಲ್ಲ. ನಾನು ಹುಟ್ಟಿದ ಊರಷ್ಟೇ ಓದಿದ ಊರಷ್ಟೇ. ಈಗ ಇಲ್ಲಿ ನನ್ನವರು ಯಾರು ಇಲ್ಲ. ನನ್ನವರು ಅಂತ ಹುಟ್ಟಿನಿಂದ ಜೊತೆಯಲ್ಲಿದ್ದವರು ಈಗ ಯಾರು ಇಲ್ಲ. ಅವರೆಲ್ಲ ದೂರವಾಗಿದ್ದಾರೆ ಬೇರೆಯಾಗಿದ್ದಾರೆ. ನನಗೆ ಯಾಕೆ ಇಲ್ಲಿಗೆ ಬರಬೇಕೆನಿಸಿತು. ಹಾಗನಿಸಿದ್ದೇ ತಪ್ಪು ಅಂತ ಕಾಣುತ್ತೆ. ಮನೆಯನ್ನು ಹೇಗೂ ಖಾಲಿ ಮಾಡಿಲ್ಲ. ಖಾಲಿ ಮಾಡುವುದಕ್ಕೆ ಏನಿದೆ? ಗೋವಿಂದರಾಜು ಮೇಷ್ಟ್ರು ಹೊರಡುವ ಮುನ್ನ ತಮಾಷೆ ಮಾಡಿದ್ದರಲ್ಲ. ಭವಿಷ್ಯ ನುಡಿಯುವವರಂತೆ – ಇಲ್ಲಮ್ಮ ಈ ಪುಟ್ಟ ಔಟ್ ಹೌಸ್ ನಿನ್ನದೇ. ನೀನು ವಾಪಸ್ ಬಂದೇ ಬರ್ತೀಯ ಅಂತ’
ಹೌದು ವ್ಯಾಪಾರವೇ ಸಂಬಂಧಗಳಿಗಿಂತ ದೊಡ್ಡದಾದ ಶಹರಗಳಲ್ಲಿ ನಾನು ನನ್ನದು ಎನ್ನುವುದೆಲ್ಲ ಕೆಲವೊಮ್ಮೆ ಕನ್ನಡಿಗಂಟಾಗಿಬಿಡುತ್ತದೆ. ಹಾಗೆ ನೋಡಿದರೆ ಕಿರಂಗೂರಿನಂತಹ ಹಳ್ಳಿಗಳಲ್ಲಿ ಊಹಾಪೋಹಗಳು ಕಟಕಿಗಳು ಇದ್ದರೂ ಇನ್ನೂ ಮನುಷ್ಯತ್ವದ ಬೇರುಗಳು ಉಳಿದುಕೊಂಡಿದೆ ಎಂಬುದು ಕಾದಂಬರಿಯುದ್ದಕ್ಕೂ ಸುಳಿಯುತ್ತವೆ.
’ಆದರೂ ಒಂದು ರೀತಿಯ ಭಯ. ಯಾರನ್ನು ಏನನ್ನಾದರೂ ಕೇಳಲು, ಯಾರನ್ನಾದರೂ ಆಶ್ರಯಿಸಲು. ಯಾರಿಗೂ ಯಾರೋ ಒಬ್ಬರಿಗೂ ನಾವು ಬಯಸುವಷ್ಟು ಗಮನ ಪ್ರೀತಿಯನ್ನು ಕೊಡುವ ಶಕ್ತಿ ವ್ಯವಧಾನ ಇರುವುದಿಲ್ಲ. ಆಯಿತು ಅವರವರ ಬದುಕು ಅವರವರಿಗೆ. ಅವರು ಏನನ್ನು ಕೊಡುವುದು ಬೇಡ. ಕೊಡಬಲ್ಲವರು ಕೊಡುತ್ತಾರೆ ಅಂತ ನಮಗೆ ಅನಿಸಬೇಕಲ್ಲ. ಹಾಗೆ ಈಗ ಯಾರ ಬಗ್ಗೆ ವಿವರಿಸುವುದಿಲ್ಲ. ಆದರೆ ಆಸೆಯಾಗುತ್ತದೆ. ಆಸೆ ನಮ್ಮ ಮನಸ್ಸನ್ನು ಸೂಚಿಸುತ್ತದೆಯೇ ಹೊರತು ಇನ್ನೊಬ್ಬರಿಗೆ ನಮ್ಮ ಬಗ್ಗೆ ಇರುವ ಭಾವವನ್ನಲ್ಲ’ ಎಂದು ನಾಯಕಿ ಹೇಳುವಾಗ ಇಡೀ ಜಗದ ಮೊಗದ ದರ್ಶನ ಆಗಿಬಿಡುತ್ತದೆ. ಯಾರಿಗೂ ಯಾರ ಬಗ್ಗೆಯೂ ಕಾಳಜಿ ತೋರುವ ವ್ಯವಧಾನ ಇರದ ಜಗತ್ತಿನಿಂದ ನಾವು ನಿರೀಕ್ಷಿಸುವುದೆಷ್ಟು? ನಾವು ಕೊಡುವುದೆಷ್ಟು ಎಂದು ಅಂತರ್ಮಥನ ಮಾಡಿಕೊಳ್ಳುವಂತೆ ಮುಖಾಮುಖಿಯಾಗಿಸುತ್ತಾರೆ.
’ನಮ್ಮನ್ನು ಕೀಳಾಗಿ ಕಾಣುವುದು ಯಾರು ಗೊತ್ತಾ ? ನಮ್ಮ ಜೊತೆ ಹೆಂಗಸರೇ. ಇಂತಹ ಹೆಂಗಸರ ಪ್ರಕಾರ ನಮ್ಮ ಹಾಗೆ ಮದುವೆ ಆಗದೆ ಇರುವರಿಗೂ ಸೂಳೆಯರಿಗೂ ಏನು ವ್ಯತ್ಯಾಸವಿಲ್ಲವಂತೆ’ ಎಂದು ನೋವಿನಿಂದ ನಾಯಕಿ ಹೇಳುವಾಗ ಹೆಣ್ಣು ಪ್ರಪಂಚದ ಬಗೆಗೆ ಒಂದು ಕಿಟಕಿ ತೆರೆದಂತಾಗುತ್ತದೆ. ಹಿಂದಿನಿಂದಲೂ ’ಕವಿಗೆ ಕವಿ ಮುನಿವನ್, ಸ್ತ್ರೀಗೆ ಸ್ತ್ರೀ ಮುನಿವಳ್’ ಎಂದೇ ಹೇಳಿಕೊಂಡು ಬರುತ್ತಿರುವುದು.
ಹೂರ ಮಾತಿಗೂ ಮನದೊಳಗಿನ ಸತ್ಯಕ್ಕೂ ಇರುವ ವ್ಯತ್ಯಾಸದ ದರ್ಶನವನ್ನು ಕಾದಂಬರಿಕಾರರು ಮಾಡುತ್ತಾರೆ. ’ಯಾರಿಗೂ ಯಾರ ಬಗ್ಗೆಯೂ ನಿಜವಾಗಿಯೂ ಕಕ್ಕುಲಾತಿ ಇರೋಲ್ಲ. ನಮ್ಮ ಬಗ್ಗೆ ಮಾತ್ರ ಇರುತ್ತೆ ಅಂತ ನಾವು ತಪ್ಪು ತಪ್ಪಾಗಿ ಭಾವಿಸಿರುತ್ತೇವೆ. ಸಮಯ ಸಂದರ್ಭ ಬಂದಾಗ ಗೊತ್ತಾಗುತ್ತದೆ.’
ಮನುಷ್ಯ ವರ್ತಮಾನದಲ್ಲಿ ಬದುಕುವುದಕ್ಕಿಂತ ಭೂತದ ನೆನಪಿನಲ್ಲಿ, ಭವಿಷ್ಯದ ಕನಸಿನಲ್ಲಿ ಬದುಕುವುದೇ ಹೆಚ್ಚು. ತಾನು ಏನಾಗಿದ್ದೆ, ಏನಾಗಬೇಕಿತ್ತು, ಏನಾಗಿಬಿಟ್ಟೆ ಎಂದು ಯೋಚಿಸುತ್ತಲೇ ಕಣ್ಮುಂದಿನ ಅವಕಾಶವನ್ನು ಕಳೆದುಕೊಳ್ಳುವ ಮನಸ್ಥಿತಿ ಬಹುತೇಕರದ್ದು.
ಅಂಪೈರ್ ಮೇಡಂ ವಿಮಲಾ ಕೂಡಾ ಸಾಮಾನ್ಯ ಮನುಷ್ಯಳೇ ಆಕೆಯೂ ’ಎಲ್ಲವನ್ನು ಎಲ್ಲರನ್ನೂ ನೆನಪಿಸಿಕೊಳ್ಳಲು ಪ್ರಾರಂಭಿಸಿದಳು. ನೆನೆಸಿಕೊಂಡಷ್ಟು ಮನಸ್ಸು ಹಿಂದಕ್ಕೆ ಹಿಂದಕ್ಕೆ ಇನ್ನೂ ಹಿಂದಕ್ಕೆ ಹೋಗುತ್ತಿತ್ತು. ಎಲ್ಲವೂ ಕಣ್ಣೆದುರಿಗೆ ಬರುತ್ತಿತ್ತು. ಎಷ್ಟೋ ದೃಶ್ಯಗಳಲ್ಲಿ ತಾನು ಕೂಡ ಇರುವುದು ಗೊತ್ತಾಗಿ ಅದನ್ನೇ ಮತ್ತೆ ನೋಡಲು ಹಿಂದೆ ಆಡಿದ ಮಾತುಗಳನ್ನೇ ಮತ್ತೊಂದು ಸಲ ಆಡಲು ಹಿಂದೇ ಕೇಳಿಸಿಕೊಂಡ ಮಾತುಗಳನ್ನೇ ಮತ್ತೊಮ್ಮೆ ಕೇಳಿಸಿಕೊಳ್ಳ ಬಯಸಿದಳು’ ಎನ್ನುವ ಕಾದಂಬರಿಕಾರರು ಮನುಷ್ಯರ ಇಂಥ ಸಾಮಾನ್ಯ ಮನೋವೃತ್ತಿಯ ಬಗೆಗೆ ಹೆಚ್ಚು ಆಸಕ್ತರಾಗುತ್ತಾರೆ. ಮತ್ತೆ ಮತ್ತೆ ಇಂಥ ಅನೇಕ ಮನೋವೃತ್ತಿಯ ಬಗೆಗೆ ಬೆಳಕು ಚೆಲ್ಲುತ್ತಾ ಹೋಗುತ್ತಾರೆ.
ಕಿರಂಗೂರು ಎಂಬ ಹೊಸ ಹಳ್ಳಿಗೆ ಬಂದ ವಿಮಲಾಭಾಯಿಗೆ ತನ್ನ ಪರಿಚಯ ಮಾಡಿಕೊಳ್ಳುವ ಇರದೆ ಇರದಿದ್ದರೂ ಬಾಯಿ ತಪ್ಪಿ ಪತ್ರಿಕೆಯಲ್ಲಿ ಬಂದಿರುವ ಹೆಸರು ತನ್ನ ಅಣ್ಣನದು ಎಂದುಬಿಡುತ್ತಾಳೆ. ಅದನ್ನು ತಿಳಿದಾಗ ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದ ಗೌಡರ ಮಗ ಇವಳಿಗಿಂತ ಚಿಕ್ಕವ ಪುಟ್ಟರಾಜು ಇವಳಿಗೆ ’ಅಂಪೈರ್ ಮೇಡಂ’ ಎಂದು ಹೊಸ ನಾಮಕರಣ ಮಾಡಿ ಊರಿಗೆಲ್ಲ ಅದೇ ಹೆಸರು ಪರಿಚಯಿಸಿ ಬಿಟ್ಟ. ಹಿಂದೆಲ್ಲ ಅವಳ ಗೆಳತಿಯರು ಅದೇ ಹೆಸರನ್ನು ಕರೆಯುತ್ತಿದ್ದರು. ಆಗ ಅದು ತಮಾಷೆ ಎನಿಸಿದ್ದರೂ ಈಗ ಅಂಪೈರ್ ಮೇಡಂ ಆಗಿಯೇ ಉಳಿದಳು. ಈ ಹೆಸರನ್ನು ಇಟ್ಟ ಪುಟ್ಟರಾಜು ನಾಯಕಿಯ ಬಾಳಿನ ಅನೇಕ ಘಟ್ಟಗಳಲ್ಲಿ ಬಂದು ಹೋಗುತ್ತಾ ಅವನೇ ಇವಳ ಬದಕನ್ನು ವಿಮರ್ಶಿಸಿಕೊಳ್ಳುವ ಅಂಪೈರ್ ಆಗಿಬಿಡುತ್ತಾನೆ ಮತ್ತು ವಿಮಲಾ ತನ್ನನ್ನು ತಾನು ಅಂಪೈರಿಂಗ್ ಮಾಡಿಕೊಳ್ಳಲು ಪುಟ್ಟರಾಜುವನ್ನೇ ಮಾನದಂಡವನ್ನಗಿಯೂ ಮಾಡಿಕೊಳ್ಳುವುದನ್ನು ಕಾಣುತ್ತೇವೆ.
ಅಂಪೈರ್ ಎನ್ನುವುದು ಬಹುದೊಡ್ಡ ಪದವಿ ಮತ್ತು ಅರ್ಥ. ಬೇರೆಯವರ ಆಟವನ್ನು ನೋಡುತ್ತಾ ಅಂಪಯರ್ ಆಗಿ ಸರಿ ತಪ್ಪು, ಸೋಲು ಗೆಲುವನ್ನು ಹೇಳುವ ವೃತ್ತಿ ಪ್ರವೃತ್ತಿಯಾಗಿರುವಾಗ ಅಂಬೇರ್ ಮೇಡಂ ಆಗಿ ತನ್ನ ಬದುಕಿನ ಆಟದ ಸೋಲು ಗೆಲುವು ತಪ್ಪು ಸರಿಗಳ ಲೆಕ್ಕಾಚಾರವನ್ನು ತಾನೇ ಹಾಕಿಕೊಳ್ಳುವ ಪರಿಸ್ಥಿತಿಗೆ ಬಂದದ್ದರಿಂದ ಈ ಕಾದಂಬರಿಗೆ ಈ ಹೆಸರು ತುಂಬಾ ಅನ್ವರ್ಥ ಆಗಿದೆ.
”ಬಹುತೇಕ ಮನೆಗಳಲ್ಲಿ ಎಲ್ಲಾ ಕಡೆ ಹೀಗಿದೆ. ಎಲ್ಲ ಕಡೆಯೂ ನಾಗರಾಜನ ತರಹ ಕೆಲವರು ನೇರವಾಗಿ ತಮ್ಮ ಧೋರಣೆಯನ್ನು ತೋರಿಸಿದರೆ ಇನ್ನು ಕೆಲವರು ಸುತ್ತು ಬಳಸಿ ಮಾತನಾಡುವರು. ಮತ್ತೆ ಕೆಲವರು ಉದಾಸಿನ ಮಾಡುವರು. ಹೇಗೆ ಮಾತನಾಡಿಸಿದರು ನಾನು ನಗುನಗುತ್ತಾ ಉತ್ತರ ಕೊಡಬೇಕು. ವಿಪರೀತ ಕುತೂಹಲ ನಾನು ಒಬ್ಬಳೇ ಹೇಗಿದ್ದೇನೆ ಎಂದು’ ಎನ್ನುವ ವಿಮಲಾಳ ಮಾತು ಶತಮಾನಗಳ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ನಾಲ್ಕು ಸಾಲುಗಳಲ್ಲಿ ವಿವರಿಸುವ ಅರ್ಥೈಸುವಲ್ಲಿ ಅತ್ಯಂತ ಮಾರ್ಮಿಕವಾಗಿದೆ. ಯಾರಾದರೂ ಆಗಿರಲಿ ಒಂದು ರಕ್ಷಣೆ ಇಲ್ಲದೆ ಹೋದರೆ ಆಕೆ ಸಮಾಜದಲ್ಲಿ ಎದುರಿಸಬೇಕಾದ ನೋಟ, ನಡವಳಿಕೆಯ ಕುರಿತಾಗಿ ಸೂಕ್ಷ್ಮವಾಗಿ ಕಾದಂಬರಿಕಾರರು ಚಿತ್ರಿಸಿದ್ದಾರೆ. ಇನ್ನು ಮುಂದಕ್ಕೆ ಹೋಗಿ ಹೇಳಬೇಕೆಂದರೆ ಇತ್ತೀಚಿನ ದಿನಗಳಲ್ಲಿ ಆಬಾಲೆ ವೃದ್ಧೆಯರಾದಿಯಾಗಿ ಯಾರಿಗೂ ರಕ್ಷಣೆ ಇಲ್ಲ. ಎಲ್ಲ ವಯಸ್ಸಿನವರ ಮೇಲೂ ದೈಹಿಕವಾಗಿ, ಇಲ್ಲವೇ ಮಾನಸಿಕವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಅದೇಕೆ ಹೆಣ್ಣಾಗಿ ಹುಟ್ಟಿದ್ದೇನೋ ಎಂದು ಭಯಪಡುವ ಹಾಗಾಗಿದೆ. ಈ ಪರಿಸ್ಥಿತಿಯಲ್ಲಿ ಕಾದಂಬರಿಯ ಈ ನಾಲ್ಕು ಸಾಲುಗಳು ತುಂಬಾ ಪ್ರಭಾವಿಯಾಗಿದೆ.
’ನನ್ನ ಬದುಕನ್ನು ನಿಕೃಷ್ಟವಾಗಿ ನೋಡೋಕೆ ಗೇಲಿ ಮಾಡೋಕೆ ಯಾರಾದರೂ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ. ಒಬ್ಬೊಬ್ಬರು ನೆನಪಿಗೆ ಬಂದಾಗಲೂ ತಲೆ ಚಿಟ್ಟು ಹಿಡಿದುಬಿಡುತ್ತದೆ ಗಂಡಸರಿಗಿಂತ ಹೆಂಗಸರೇ ಹೆಚ್ಚು ಹೀಗೆ ಮಾಡುತ್ತಿದ್ದು. ಓರಗಿತ್ತಿಯರ ಅತ್ತಿಗೆ ನಾದಿನಿಯರ ಕಾಟ ನನಗೆ ಇಲ್ಲ ಅನಿಸದ ಹಾಗೆ ಸ್ಕೂಲಲ್ಲಿ ಜೊತೆ ಮೇಡಮ್ ಗಳು ಕೂಡ ಮಾಡೋರು’ ಎಂದು ನೊಂದುಕೊಳ್ಳುವ ಕಥಾನಾಯಕಿಗೆ ಸುತ್ತಮುತ್ತಲ ಹೆಣ್ಣುಗಳ ಕಾಟ ಮಗ್ಗುಲುಮುಳ್ಳು. ಹೆಣ್ಣುಮಕ್ಕಳೆಂದರೆ ಹಾಗೆ. ಪ್ರೀತಿ, ಸಹನೆ, ತಾಳ್ಮೆ, ಕಾಳಜಿಯ ಜೊತೆಗೆ ಅನುಮಾನ, ಅಸೂಯೆಯೂ ತುಂಬಿದ ಡಬ್ಬಿ. ಅದಕ್ಕೇ ಹೆಣ್ಣು ಮಕ್ಕಳೇ ಹೆಚ್ಚು ಕೆಣಕುವುದು ಕೆದಕೋದು ಕುಹಕ ಮಾಡುವುದು ಕಟಕಿಯಾಡುವುದು. ಇದು ಜಗತ್ತಿನ ಬಹುತೇಕ ಎಲ್ಲಾ ಕಡೆಗಳಲ್ಲೂ ಇರುವಂತದ್ದು ಅದರಲ್ಲೂ ಮುಂದುವರೆದ ದೇಶಗಳಿಗಿಂತ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿ ಇದು ಹೆಚ್ಚು. ಏಕೆಂದರೆ ಅನೇಕ ಹೆಣ್ಣು ಮಕ್ಕಳ ಪ್ರಪಂಚ ತುಂಬಾ ಚಿಕ್ಕದು.
ಬಹುತೇಕ ಮನುಷ್ಯರ ಸ್ವಭಾವ ಎಂದರೆ ಮಾತನಾಡಬೇಕಾದಾಗ ಮೌನ ತಾಳುವುದು, ಮೌನದಿಂದ ಇರಬೇಕಾದಾಗ ಬೇಡದ ಮಾತನಾಡುವುದು, ಹಾಗೆ ಮಾತನಾಡಿ ಕಷ್ಟಕ್ಕೆ ಪೇಚಿಗೆ ಸಿಲುಕಿಕೊಳ್ಳುವುದು, ಇದರೊಟ್ಟಿಗೆ ಏಕೆ ಹಾಗೆ ಮಾತನಾಡಿದೆನೋ ಎಂದು ಒಂದು ಬಾರಿ ಆಡಿದ ಮಾತನ್ನು 100 ಬಾರಿ ಮನಸ್ಸಿನಲ್ಲಿ ಕುಲುಕಿ ನೋವುಣ್ಣುವುದು.
ನಾಯಕಿ ’ನಾನು ಯಾಕೆ ಅವರ ಮನೆಗೆ ಹೋದೆ ಯಾಕೆ ಹಾಗೆ ಪೆಚ್ಚು ಹೆಚ್ಚಾಗಿ ಮಾತನಾಡಿದೆ ಏಕೆ ಅಷ್ಟೊಂದು ಸಂಕಟಪಟ್ಟೆ ಅಂತ ಇವತ್ತಿಗೂ ಗೊತ್ತಾಗುತ್ತಿಲ್ಲ. ಮಾತನಾಡಬೇಕಾದಾಗ ಮಾತನಾಡದೆ ನಂತರ ಒಬ್ಬಳೇ ಇದ್ದಾಗ ಕೊರಗಿದರೆ ಏನು ಪ್ರಯೋಜನ? ಹಾಗೆ ಒಬ್ಬಳೇ ಕೂತುಕೊಂಡು ಕೊರಗೋಕೆ ಮೂರು ಕಾಸಿನ ಧೈರ್ಯವೂ ಬೇಡ’ ಎನ್ನುವಲ್ಲಿ ಇದು ಯುನಿವರ್ಸಲ್ ಟ್ರೂಥ್ ಎನ್ನುವ ಹಾಗಿದೆ.
ಈ ಕಾದಂಬರಿಯಲ್ಲಿ ವಿಮಲಾಬಾಯಿಯ ಸುತ್ತಲೇ ಸುತ್ತುವ ವಿಷಯಗಳು ಅವಳೊಟ್ಟಿಗೆ ಅನೇಕ ಹೆಣ್ಣು ಪಾತ್ರಗಳನ್ನು ಒಳಗೊಳ್ಳುತ್ತಾ ಸ್ತ್ರೀಪ್ರಪಂಚದ ಪರಿಚಯ ಮಾಡಿಸುತ್ತದೆ. ಗೋವಿಂದರಾಜುವಿನ ತಂಗಿ ಗೋದಾದೇವಿ, ಗೋವಿಂದರಾಜುವಿನ ಹೆಂಡತಿ ರಂಗನಾಯಕಿ, ಗೋದಾದೇವಿಯ ಮಗಳು ಶ್ರೀದೇವಿ, ಪುಟ್ಟರಾಜುವಿನ ಪತ್ನಿ ರತ್ನಿ, ರತ್ನಿಯ ತಾಯಿ ಸುಂದರಮ್ಮ… ಹೀಗೆ ಅನೇಕ ಪಾತ್ರಗಳು ಹೆಣ್ಣುಲೋಕದ ಚಿತ್ರವನ್ನು ಕಟ್ಟಿಕೊಡುತ್ತಾ ಹೋಗುತ್ತವೆ.
ಗೋದಾಬಾಯಿಯ ಜೊತೆಗೆ ವಿಮಲಾಳಿಗೆ ಮಾತು ಹೆಚ್ಚು ಏಕೆಂದರೆ ಇವಳ ವಿಷಯವನ್ನು ಕೆದಕದೆ ಆಕೆ ತನ್ನದೇ ಕಷ್ಟ ಸುಖಗಳನ್ನು ಹೇಳುತ್ತಿದ್ದರು. ಈ ಮಾತುಗಳನ್ನು ಹೇಳುವಾಗ ಕಾದಂಬರಿಕಾರರು ಅತ್ಯಂತ ಸೊಗಸಾದ ಸತ್ಯವನ್ನು ಚಿತಿಸುತ್ತಾರೆ ’ ಇವತ್ತು ಹೇಳಿದ ಕಷ್ಟ-ಸುಖದ ಮಾತನ್ನೇ ನಾಳೆ ಹೇಳಿದರೂ ಹೇಳಿದ ಮಾತನ್ನು ಚೆನ್ನಾಗಿ ಹೇಳುತ್ತಿದ್ದಳು. ಹೊಸ ಹೊಸ ವಿವರಗಳನ್ನು ಸೇರಿಸುತ್ತಿದ್ದಳು. ಇವತ್ತು ನಗುನಗುತ್ತಾ ಹೇಳಿದ ವಿಷಯವನ್ನೇ ನಾಳೆ ಆಳುತ್ತಾ ಹೇಳುವಳು. ಮಾತುಕತೆಯಲ್ಲಿ ಇವತ್ತು ಹೊಗಳಿದವರನ್ನು ನಾಳೆ ತೆಗೆಳುವಳು . ಕಷ್ಟ ಸುಖ ಇರೋರಿಗೆ ಮಾತೂ ಜಾಸ್ತಿ ಕಥೆಯೂ ಜಾಸ್ತಿ. ಮಾತೂ ಬೇಕು ಕಥೆಯೂ ಬೇಕು ’
ಹೌದಲ್ಲವೇ ಎಲ್ಲ ಸುಖದಲ್ಲಿ ತೇಲುವವರಿಗೆ ಅನುಭವಿಸಲು ಏನಿಲ್ಲ; ಹೇಳಿಕೊಳ್ಳಲು ಏನಿಲ್ಲ; ಆದರೆ ಕಷ್ಟದಲ್ಲಿ, ಸಂಕಟದಲ್ಲಿ, ನೋವಿನಲ್ಲಿ ಬೆಂದು ನರಳುವವರಿಗೆ ಮಾತು ಜಾಸ್ತಿ. ಹೇಳಿಕೊಂಡಾಗ ಹೃದಯ ಹಗುರಾಗುವಂತೆ ಅಂಥವರಲ್ಲಿ ಕಥೆಯೂ ಹೆಚ್ಚು. ಅಂಥ ಅನುಭವದ ಕಥೆಗಳೇ ಸಮಾಜವನ್ನು ಕಟ್ಟುವುದು.
ಕಥೆ ಹುಟ್ಟುವುದೇ ಹೀಗೆ
ಬಿಡಿಸಿದ ಅವರೆಕಾಳು ಹಾಗೆಯೇ ಇದ್ದರೆ ಅದು ಸುಮ್ಮನೆ ಕುಳಿತಿರುತ್ತದೆ. ಅದೇ ಅವರೇಕಾಳನ್ನು ಕುದಿವ ನೀರಿಗೆ ಹಾಕಿದರೆ ಕುಣಿಯುತ್ತದೆ ಹೊರಳಿ ನರಳುತ್ತದೆ. ಹಾಗೆಯೇ ನೋವಿನಲ್ಲಿ ಬೇಯುವವರಿಗೆ ಕುದಿತ, ಕಥೆ, ಮಾತು, ಕುಣಿತ ಎಲ್ಲವೂ ಹೆಚ್ಚು.
ಹೆಣ್ಣು ಮಕ್ಕಳ ಮನಸ್ಥಿತಿಯನ್ನು ಅತ್ಯಂತ ಆಳವಾಗಿ ಗಮನಿಸಿರುವ ಕಾದಂಬರಿಕಾರರು ಒಂದೇ ಮನೆಯಲ್ಲಿರುವ ಮೂರು ಹೆಂಗಸರ ಕುರಿತಾಗಿ ಕೆಲವೇ ಕೆಲವು ವಾಕ್ಯಗಳಲ್ಲಿ ಹೇಳುತ್ತಾರೆ. ರಂಗನಾಯಕಿ, ಗೋದಾಬಾಯಿ ಮತ್ತು ಗೋದೆಯ ತಾಯಿ. ಗೋದೆಯ ತಾಯಿ ಇಡೀ ಮನೆಯ ನಿಯಂತ್ರಕಿ. ಒಂದು ರೀತಿ ಅಧಿಕಾರಶಾಹಿ ಮನೋಭಾವದವಳು. ’ ಕೈಯಲ್ಲಿ ಯಾವಾಗಲೂ ಬೀಸಣಿಗೆ ಇದ್ದೇ ಇರುತ್ತಿತ್ತು. ಚಳಿಗಾಲದಲ್ಲೂ, ಮಳೆಗಾಲದಲ್ಲಿ ಕೂಡ. ಗಾಳಿ ಬೀಸಿಕೊಳ್ಳದಿದ್ದರೂ ಮಾತನಾಡುವ ಅಧಿಕಾರದ ಶೈಲಿಯ ಭಾಗವಾಗಿ ಬೀಸಣಿಗೆ ಕೈಯಲ್ಲಿ ಇರಬೇಕು. ಅದನ್ನು ತನಗೆ ಬೇಕಾದ ಹಾಗೆ ಆಡಿಸುತ್ತಾ ಮಾತನಾಡುವುದು. ಮಾತೆಂದರೆ ಗೊಣಗುವುದು ಬಯ್ಯುವುದು. ರಂಗನಾಯಕಿಗೆ ದರ್ಬಾರ್ ಇಷ್ಟವಾಗುತ್ತಿರಲಿ.ಲ್ಲ ಅತ್ತೆಯನ್ನು ಯಾವ ರೀತಿಯಲ್ಲಿಯೂ ನಿಯಂತ್ರಿಸಲಾಗದೆ ರಂಗನಾಯಕಿ ಆ ಸಿಟ್ಟನ್ನೆಲ್ಲಾ ಗೋದಾದೇವಿಯ ಮೇಲೆ ತಿಳಿಸಿಕೊಳ್ಳುತ್ತಿದ್ದರು. ಒಂದೇ ಮನೆಯಲ್ಲಿ ಮೂವರು ಹೆಂಗಸರು ಪೈಪೋಟಿ ಕಿತ್ತಾಟ’
ಈ ಮಾತುಗಳಿಗೆ ಇಡೀ ಕಾದಂಬರಿಯನ್ನು ನಿಯಂತ್ರಿಸುವ ಶಕ್ತಿ ಇದೆ. ಹೆಂಗಸರು ಎಂದೂ ಅನುಸೂಯರಾಗಲು ಸಾಧ್ಯವೇ ಇಲ್ಲ. ಅತ್ತೆಯ ಮೇಲಿನ ಸಿಟ್ಟು ಕೊತ್ತಿಯ ಮೇಲೆ ಎನ್ನುವ ಹಾಗೆ ಒಬ್ಬರ ಸಿಟ್ಟನ್ನು ಮತ್ತೊಬ್ಬರ ಮೇಲೆ ತೀರಿಸುತ್ತಾ ಎದೆಯನ್ನು ಹಗುರಾಗಿಸಿಕೊಳ್ಳುತ್ತಾ ತಾನು ಅಂತದೇ ಹೆಂಗಸಿನಂತೆ; ನನ್ನ ನೋವು ಅವಳಿಗೂ ಆಗುತ್ತದೆ ಎನ್ನುವ ಸೂಕ್ಷ್ಮವನ್ನು ಅರಿಯದೆ ಪರರ ಮೇಲೆ ತನ್ನ ಭಾರವನ್ನು ಹೇರುವ ಪರಿಯನ್ನು ಕಾದಂಬರಿಕಾರರು ಅತ್ಯಂತ ಸೊಗಸಾಗಿ ಚಿತ್ರಿಸಿದ್ದಾರೆ.
ಪುಟ 83
ಈ ಕಾದಂಬರಿಯಲ್ಲಿ ಶ್ರೀದೇವಿ ಎನ್ನುವ ಹುಡುಗಿಯ ಪಾತ್ರ ಪ್ರಸ್ತುತವಾಗಿ ಚಿತ್ರಿತವಾಗಿದೆ. ಸಮಯಕ್ಕೆ ಸರಿಯಾಗಿ ಬಣ್ಣ ತೊಟ್ಟು ಯಾರಿಗೂ ನಿಷ್ಠುರವಾಗದೆ ತನ್ನ ಕೆಲಸವನ್ನು ಸಾಧಿಸಿಕೊಳ್ಳುವ ಈಗಿನವರ ವರ್ತನೆಗೆ ಶ್ರೀದೇವಿಯ ಪಾತ್ರ ಸಮರ್ಥವಾಗಿ ಬಿಂಬಿಸುತ್ತದೆ.
ಶ್ರೀದೇವಿಯ ಪರಿಸ್ಥಿತಿಯ ಬಗ್ಗೆ ವಿಮಲಾಬಾಯಿ ನೊಂದುಕೊಂಡು ’ಗೋವಿಂದರಾಜು ಅವಳಿಗೆ ಗಂಡು ಹುಡುಕುವಿದಿಲ್ಲ. ನನ್ನ ಹಾಗೆ ಅವಳು ಇದ್ದುಬಿಡುತ್ತಾಳೆ ಅನ್ನುವ ಭಯ. ಬದುಕು ಯಾವತ್ತೂ ಏನೂ ಬದಲಾಯಿಸೋಲ್ಲ. ಎಲ್ಲರೂ ಅವರವರ ಪಾಲಿಗೆ ಬಂದ ಕಷ್ಟ ಸುಖ ಅನುಭವಿಸುತ್ತಾ ಹೆಣಗಾಡಿಕೊಂಡು ಇದ್ದುಬಿಡುತ್ತಾರೆ. ಯಾವುದೂ ಮುಂದಕ್ಕೆ ಹೋಗಲ್ಲ; ಹಿಂದಕ್ಕೆ ಬರಲ್ಲ. ಗೋವಿಂದರಾಜು ಮನೆ ಕೂಡ ಹಾಗೇನೆ. ಗೋವಿಂದರಾಜು ಮನೆ ಯಾಕೆ ಎಲ್ಲ ಮನೆಗಳು ಎಲ್ಲಾ ಸಂಸಾರಗಳು ಹಾಗೇನೇ. ದೂರದಿಂದ ನೋಡೋಕೆ ಎಲ್ಲಾ ಮನೆಗಳು ಫ್ಯಾಮಿಲಿಗಳು ಬೇರೆ ಬೇರೆ ತರ’ಈ ಮನೆಯವರಿಗಿಂತ ಆ ಮನೆಯವರು ಆ ಮನೆಯವರಿಗಿಂತ ನಮ್ಮ ಮನೆಯವರು ಎಲ್ಲರೂ ಎಷ್ಟು ಸುಖವಾಗಿದ್ದಾರೆ, ಎಷ್ಟೊಂದು ನಯ ನಾಜೂಕು ಅನಿಸುತ್ತೆ. ಆದರೆ ಹತ್ತಿರ ಹೋಗಿ ನೋಡಿದರೆ ನಾಲ್ಕು ಸಲ ಅವರ ಮನೆಗೆ ಹೋಗಿ ಬಂದರೆ ಪರಿಚಯ ಸಂಬಂಧ ಚೆನ್ನಾಗಿ ಆದರೆ, ಇಲ್ಲ ಇಲ್ಲ ಇವರು ಕೂಡ ನಮ್ಮ ತರಾನೇ ಅನಿಸುತ್ತೆ ಹಾಗೆ ಒಂದು ರೀತಿಯ ಸಮಾಧಾನ ಸಂತೋಷವೂ ಆಗುತ್ತದೆ ’ ಕಾಣುತ್ತವೆ’ ಎಂದು ಹೇಳುವಾಗ ಹೊರನೋಟದ ಕಂಪ್ಯಾರಿಸನ್ ಎನ್ನುವ ಪೆಡಂಭೂತ ಇದೆಯಲ್ಲ ಅದರ ಬಗೆಗೆ ಸೂಚ್ಯವಾಗಿ ಹೇಳುತ್ತದೆ. ಜೊತೆಗೆ ಹತ್ತಿರ ಹೋದರೆ ಹಡಕುನಾತ ಎನ್ನುವ ಸತ್ಯವನ್ನೂ, ನಾವೇನೂ ಭಿನ್ನರಲ್ಲ ಎನ್ನುವ ಸಮಾಧಾನವನ್ನೂ ತೋರುತ್ತದೆ.
ಈ ಕಾದಂಬರಿ ಅನೇಕ ಸಾರ್ವತ್ರಿಕ ಸತ್ಯಗಳನ್ನು ಹಲಸಿನ ತೊಳೆಗಳ ತರಹ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಆದರೆ ಅದು ಒಂದೇ ಬಾರಿಗೆ ದಕ್ಕುವುದಿಲ್ಲ ನಿಧಾನವಾಗಿ ಹೆಕ್ಕುತ್ತಾ ಹೆಕ್ಕುತ್ತಾ ಹೋದರೆ ಅನೇಕ ಸತ್ಯಗಳು ಗೋಚರಿಸುತ್ತವೆ.
ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಕುಟುಂಬಗಳು ಬಹುತೇಕ ಒಂದೇ ರೀತಿಯಲ್ಲಿವೆ. ಒಂದು ಸಾಮಾನ್ಯ ತಳಹದಿ ಎನ್ನಬಹುದು. ಹೊರಗಿಂದ ನೋಡಲು ಹೋದರೆ ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಬೇರೆಯವರೆಲ್ಲರೂ ಸುಖವಾಗಿದ್ದಾರೆ ನಮಗಿಂತ ಎಂದುಕೊಂಡರೂ ಹತ್ತಿರ ಹೋಗಿ ನೋಡಿದಾಗ ಅಲ್ಲಿನ ಥಳುಕು ಮೇಲಿನದು, ಒಳಗೆ ಹುಳುಕೇ. ನಮ್ಮ ಮನೆ ಬೇರೆಯಲ್ಲ ಅವರ ಮನೆ ಬೇರೆಯಲ್ಲ ಎನಿಸುತ್ತದೆ ಅಥವಾ ಕೆಲವೊಮ್ಮೆ ಧನಾತ್ಮಕವಾಗಿ ತೆಗೆದುಕೊಂಡರೆ ಅವರಿಗಿಂತ ನಾವೇ ವಾಸಿ ಎನಿಸಿಬಿಡುತ್ತದೆ. ಬದುಕೆಂದರೆ ಹೀಗೆ… ಕಷ್ಟ ಸುಖ ಎರಡನ್ನು ಮಾರುವ ಸಂತೆ ಇದು. ನಾವು ಯಾವುದನ್ನು ಕೊಳ್ಳಲು ಹೋಗುತ್ತೇವೋ ಅದೇ ಸಿಗುತ್ತದೆ ಎಂದೇನಿಲ್ಲ. ಸಿಹಿಯಾದ ಮಾವಿನ ಹಣ್ಣನ್ನು ಕೊಂಡುಕೊಂಡೆವೆಂದು ಭರ್ಜರಿ ಹಣ ತೆತ್ತು ತೆಗೆದು ಬಂದರೂ ತಿನ್ನುವಾಗ ಅದು ಹುಳಿಯಾಗಿರಬಹುದು ಅಥವಾ ನಿಕೃಷ್ಟವಾಗಿ ಕಂಡು ಕಾಸಿಗೊಂದು ಕೊಸರು ಎಂದು ನಮ್ಮ ಮಡಿಲಿಗೆ ಎಸೆದರೂ ಅದು ಸಿಹಿಯಾಗಿಯೂ ಇರಬಹುದು. ಬಹುತೇಕ ಎಲ್ಲವೂ ನಾವು ಪಡೆದುಕೊಂಡ ಬಂದ ಭಾಗ್ಯ.
ಭಾರತೀಯ ನಂಬಿಕೆಯ ಪ್ರಕಾರ ಜನ್ಮಜನ್ಮಾಂತರಗಳಿವೆ. ಪೂರ್ವಜನ್ಮದ ಸುಕೃತವಾಗಿ ಕೆಲವರಿಗೆ ಪುಣ್ಯವೇ ಭಾಗ್ಯವಾದರೆ ಮತ್ತೆ ಕೆಲವರಿಗೆ ಪೂರ್ವ ಜನ್ಮದ ಕರ್ಮಗಳು ಕಾಡಿ ಜನ್ಮವೇ ಸಾಕೆನಿಸಿಬಿಡುತ್ತವೆ. ಹಾಗೆ ನಂಬಿದರೆ ನಾವು ಬದುಕಿರುವ ಈಗಲಾದರೂ ನಾಲ್ಕು ಜನರಿಗೆ ಉಪಕಾರಿಯಾಗಿ ಮತ್ತೊಬ್ಬರಿಗೆ ಕೆಡುಕನ್ನು ಎಣಿಸದೆ ಬದುಕಬೇಕು. ಅಷ್ಟಾದರೆ ಮಾತ್ರ ಇಂಥ ನಂಬಿಕೆಗೆ ಸಾರ್ಥಕತೆ ಸಿಗುತ್ತದೆ.
ಪುಟ 87
ಎಲ್ಲರೂ ಒಂದೇ ಸೂರಿನಡಿಯಲ್ಲಿ ಬದುಕುತ್ತಿರಬಹುದು. ಒಂದೇ ಮನೆಯವರಾಗಿರಬಹುದು ಒಂದೇ ಒಲೆಯಲ್ಲಿ ಅಡುಗೆ ಮಾಡಬಹುದು. ಆದರೆ ಒಳಗೊಳಗೆ ಒಬ್ಬೊಬ್ಬರು ತಮ್ಮ ತಮ್ಮ ವ್ಯವಹಾರ ಬದುಕನ್ನು ತಮ ತಮಗೆ ಬೇಕಾದ ರೀತಿಯಲ್ಲಿ ಲೆಕ್ಕ ಹಾಕ್ತಾ ಇರುತ್ತಾರೆ. ಒಟ್ಟಿಗೆ ಇದ್ದರೂ ಪ್ರೀತಿ ವಿಶ್ವಾಸ ನಂಬಿಕೆ ಇರುವುದಿಲ್ಲ. ಇದು ಕೂಡ ನನಗೆ ಚೆನ್ನಾಗಿ ಮನದಟ್ಟಾದದ್ದು ಗೋವಿಂದರಾಜು ಮನೆ ಜಗಳಗಳಿಂದಲೇ ಎಂದು ವಿಮಲಾಬಾಯಿ ಹೇಳುವ ಮಾತುಗಳು ನಮ್ಮನ್ನು ಮತ್ತೆ ಒಳಗಿನಿಂದ ವಿಮರ್ಶೆ ಮಾಡಿಕೊಳ್ಳಲು ನೆರವಾಗುತ್ತದೆ. ಒಂದೇ ಸೂರಿನೆಡೆ ಬದುಕುವುದು ಮುಖ್ಯವಲ್ಲ ಒಂದು ಮನಸ್ಸಿನಿಂದ ಬದುಕುವುದು ಮುಖ್ಯ ಎನ್ನುವ ತತ್ವವನ್ನು ತಿಳಿಹೇಳುತ್ತದೆ.
ಒಗ್ಗಟ್ಟು ಎನ್ನುವುದು ಹರತೋರ್ಕೆ ಅಲ್ಲ; ಒಳತೋರ್ಕೆ . ಒಳಗೊಂದು ತೊರೆ ಹರಿಯುತ್ತದಲ್ಲ ಅದನ್ನು ಸದಾ ಜೀವಂತವಾಗಿ ಇರಿಸಿಕೊಳ್ಳುವ ಬಗೆ. ಪ್ರೀತಿಯ ಒರತೆ ಬತ್ತದ ಹಾಗೆ. ನಂಬಿಕೆಯ ಚಿಲುಮೆ ಗಟ್ಟಿಯಾಗಿರುವ ಹಾಗೆ ನೋಡಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ .
ಯಾವಾಗ ಮನುಷ್ಯ ಹಣದ ಜೊತೆ ಸಂಬಂಧ ಬೆಳೆಸಿಕೊಳ್ಳುತ್ತಾ ಹೋದನೋ ಆಗೆಲ್ಲ ಮನುಷ್ಯರೊಂದಿಗಿನ ಸಂಬಂಧ ಸಡಿಲವಾಗುತ್ತಾ ಹೋಯಿತು.
ತನ್ನ ಹಣ ತನ್ನ ಮನೆ ತನ್ನ ಆಸ್ತಿ ಎಂದು ನನ್ನದು ನನ್ನದು ಎನ್ನುವ ಆಸೆ ದುರಾಸೆ ಹೆಚ್ಚುತ್ತಾ ಹೋದಂತೆ ಅವರ ಜಗತ್ತಿನ ಜೊತೆಗೆ ಸಂಬಂಧ ವಿರಳವಾಗುತ್ತಾ ಹೋಗುತ್ತೆ.
ನಾನು ಬೇರೆ ನೀನು ಬೇರೆ ಎನ್ನುವ ಭಾವ ಮೂಡಿದಾಗ ಮಧ್ಯದೊಂದು ಸಣ್ಣ ಗೋಡೆ ಏಳುತ್ತಾ ಹೋಗುತ್ತದೆ. ಹಿಂದೆಲ್ಲ ಅಣ್ಣ-ತಮ್ಮಂದಿರು ಒಂದೇ ಮನೆಯಲ್ಲಿ ನನ್ನದು ನಿನ್ನದು ಎನ್ನುವ ಭೇದ ಇರದೆ ದುಡಿದು, ದುಡಿದುದೆಲ್ಲವನ್ನೂ ಒಂದೆಡೆ ಕೂಡಿ ಇಡೀ ಮನೆಯವರ ಜವಾಬ್ದಾರಿ ಎಲ್ಲವೂ ಎಲ್ಲರದ್ದೂ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದು. ಯಾವಾಗ ನನ್ನ ಭಾಗ ನಿನ್ನ ಭಾಗ ಎಂದು ಬಂದಿತೋ ನಾನು ಹೆಚ್ಚು ಗಳಿಸಬೇಕು ಹೆಚ್ಚು ಸಿರಿವಂತನಾಗಬೇಕು, ಹೆಚ್ಚು ಕೀರ್ತಿವಂತನಾಗಬೇಕು, ಅಧಿಕಾರ ನನ್ನದಾಗಬೇಕು ಎಂದು ಮನುಷ್ಯ ಬಯಸಿದನೋ ಆಗ ನಾನು ಎನ್ನುವುದೇ ನಿಂತು ಅವನು ಇತರರಿಂದ ಬೇರೆಯಾಗುತ್ತಾ ಹೋಗುತ್ತಾನೆ.
’ಈ ಕ್ಷಣದ ಮಟ್ಟಿಗೆ ಮನಸ್ಸು ಹಗುರವಾಗುವುದು. ಇನ್ನು ನೂರು ವರ್ಷ ಹೋದರೂ ನಾನು ಹೀಗೆಯೇ ಇರುತ್ತೇನೆ. ನನ್ನ ಸುತ್ತ ಇರುವ ಜನರು ಕೂಡ ಹೀಗೆಯೇ ಇರ್ತಾರೆ’ ಎನ್ನುವ ಸಾಲುಗಳು ಈ ಕಾದಂಬರಿಯ ಕೆಲವು ಹೈಲೈಟ್ ಸಾಲುಗಳಲ್ಲಿ ಒಂದು. ನಿಜಾ ಈ ಕ್ಷಣ ಹೀಗೇ ಇರುವುದಿಲ್ಲ ಅದು ಸುಖವಾಗಲಿ ದುಃಖವಾಗಲಿ ಎನ್ನುವ ಒಂದು ನುಡಿಯಂತೆ ಇನ್ನು ನೂರು ವರ್ಷ ಹೋದರೂ ನಾನು ಹೀಗೆಯೇ ಇರ್ತೀನಿ ನನ್ನ ಸುತ್ತ ಜನರು ಹೀಗೆಯೇ ಇರ್ತಾರೆ ಎನ್ನುವ ಮಾತು ಕಾಲಕ್ಕೆ ತಕ್ಕಂತೆ ಹೊರಗಿನಿಂದ ಮನುಷ್ಯ ಮತ್ತು ಸಮಾಜ ಬದಲಾದರೂ, ಜನರೇಷನ್ ಗ್ಯಾಪ್ ಎಂದಿಗೂ ಉಳಿದುಕೊಂಡೇ ಇರುತ್ತದೆ. ಒಳಗಿನಿಂದ ಬದಲಾಗದ ಮನುಷ್ಯರ ಆಸೆ, ದುರಾಸೆ, ದುಷ್ಟತನ, ಭ್ರಷ್ಟತನ, ನೀಚತನಗಳು ಹುತ್ತದಿಂದ ಆಗಾಗ ಹೊರಬಂದು ಬುಸುಗುಟ್ಟಿ ವಿಷಕಕ್ಕಿ ಮತ್ತೆ ಹುತ್ತ ಸೇರುವ ಸರ್ಪದಂತೆ (ಹಾವು ಕೂಡ ತನಗೆ ತೊಂದರೆ ಮಾಡದವರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಮನುಷ್ಯ ಸ್ವಾರ್ಥಕ್ಕಾಗಿ ಮಾಡುತ್ತಾನೆ ಬಿಡಿ) ಅವರಿವರ ಮೇಲೆ ತನ್ನ ಕೆಟ್ಟತನವ ತೋರಿ ಅವರನ್ನು ಹಾಳುಗೆಡವಿ, ತನ್ನ ಕೆಲಸವನ್ನು ಸಾಧಿಸಿಕೊಂಡುಬಿಡುತ್ತಾನೆ.
’ಹಿಂದೆ ಏನು ಹಾಗೆ ಇಲ್ಲ ಎಂಬಂತೆ ನನ್ನ ಹಿತೈಷಿ ಎಂಬಂತೆ ತಪ್ಪು ಮಾಡಿ ಮೋಸ ಮಾಡಿ ದ್ರೋಹ ಬಗೆದು ಕೂಡ ಏನೂ ಆಗದವರಂತೆ ಇರೋದು ಗಂಡಸರಿಗೆ ಮಾತ್ರ ಸಾಧ್ಯವೇನೋ’ ಎಂದು ವಿಮಲಾಬಾಯಿಯ ಬಾಯಲ್ಲಿ ಕಾದಂಬರಿಕಾರರು ಹೇಳಿಸುವಾಗ ಹೆಣ್ಣು ಮನವನ್ನು ಹೊಕ್ಕು ಮಾತನಾಡುತ್ತಿದ್ದಾರೆ ಎನಿಸುತ್ತದೆ.
ಹೌದು ಕವಿಯಾಗಿರಬಹುದು, ಸಾಹಿತಿಯಾಗಿರಬಹುದು, ಕಥೆಗಾರ ಕಾದಂಬರಿಕಾರ ಯಾರಾದರೂ ಆಗಿರಲಿ ಗಂಡೂ ಆಗಬೇಕಾಗುತ್ತದೆ, ಹೆಣ್ಣೂ ಆಗಬೇಕಾಗುತ್ತದೆ. ದೈಹಿಕವಾಗಷ್ಟೇ ಈ ಲಿಂಗ ಭೇಧ. ಆದರೆ ಮಾನಸಿಕವಾಗಿ ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಮಯ ಸಂದರ್ಭಕ್ಕೆ ತಕ್ಕಂತೆ ಗಂಡು ಹೆಣ್ಣು ಮನವನ್ನು ಹೊಕ್ಕಬೇಕಾಗುತ್ತದೆ; ಹೆಣ್ಣು ಗಂಡು ಮನವನ್ನು ಒಕ್ಕಬೇಕಾಗುತ್ತದೆ. ಆಗ ಮಾತ್ರ ನಿರ್ಭೀತಿಯಿಂದ ಪಕ್ಷಾತೀತವಾಗಿ ಲಿಂಗಾತೀತವಾಗಿ ಪಾತ್ರಗಳಿಗೆ ನ್ಯಾಯವನ್ನು ಒದಗಿಸಲು ಸಾಧ್ಯ ಎಂಬುದನ್ನು ಕಾದಂಬರಿಕಾರರು ಇಲ್ಲಿ ಸಾಕ್ಷೀಕರಿಸಿದ್ದಾರೆ.
”ಯಾಕೆ ನನಗೆ ಸಿಗುವ, ನನ್ನ ಸಮೀಪ ಬರುವ ಗಂಡಸರೆಲ್ಲ ಒಂದೇ ತರ ಇರುತ್ತಾರೆ, ಪುಕ್ಕಲರಾಗಿದ್ದಾರೆ, ಹಿಂದೆ ಸರಿಯುವವರಾಗಿರುತ್ತಾರೆ? ಇಲ್ಲ ಇಲ್ಲ ಎಲ್ಲ ಗಂಡಸರು ಹೀಗೇ ಇರಬೇಕು. ಅವರ ಅಪ್ಪ ಅಮ್ಮ ಹುಡುಕಿದ ಹುಡುಗಿಯರನ್ನು ಮದುವೆಯಾಗಿ ಮಕ್ಕಳನ್ನು ಮಾಡಿಕೊಂಡು ಸಂಸಾರ ಮಾಡಿಕೊಂಡು ಹೋಗುತ್ತಿರುವುದರಿಂದ ಅವರೆಲ್ಲ ನಮಗೆ ಧೈರ್ಯವಂತರಾಗಿ ನೀತಿವಂತ ಗಂಡಸರಾಗಿ ಕಾಣ್ತಾ ಇರಬಹುದು. ನಿಮ್ಮ ನಿಮ್ಮ ಹೆಂಗಸರನ್ನು ನೀವೇ ಹುಡುಕಿಕೊಳ್ಳಿ ಅನ್ನುವ ಸಮಾಜ ಬಂದರೆ ಆವಾಗ ಸರ್ವೋತ್ತಮ, ಪುಟ್ಟರಾಜು, ವಿಶ್ವನಾಥನಂತಹವರು ಅಂತಹ ಸಮಾಜದಲ್ಲಿ ಇರುವುದೇ ಇಲ್ಲವೇನೋ’ ಎಂದು ವಿಮರ್ಶೆ ಮಾಡುವ ನಾಯಕಿ ಅಂಪೈರ್ ಮೇಡಂ ವಿದೇಶದ ಸಾಂಸಾರಿಕ ಪರಿಕಲ್ಪನೆ ಭಾರತಕ್ಕೆ ಬಂದುಬಿಟ್ಟರೆ ಆಗುವ ಅಪಾಯದ ಮುನ್ಸೂಚನೆಯನ್ನು ಕೊಡುತ್ತಾರೆ.
ಗಂಡು ಪ್ರಪಂಚ ಹೆಣ್ಣು ಪ್ರಪಂಚ ಎನ್ನುವುದು ಬೇರೆ ಬೇರೆ. ಏಕೆಂದರೆ ಒಬ್ಬರ ಮನಸ್ಸಿನೊಳಗಿನ ಭಾವಗಳು ಮತ್ತೊಬ್ಬರಿಗೆ ಸುಲಭವಾಗಿ ದಕ್ಕಲಾರದು. ಏಕೆಂದರೆ ಅವರಲ್ಲಿರುವ ಹಾರ್ಮೋನ್ಗಳು, ಯೋಚಿಸುವ ರೀತಿ, ಅವರ ಪ್ರಪಂಚ, ಬದುಕಿನ ಅನುಭವಗಳು ಬೇರೆ ಬೇರೆ. ಸಾಮಾನ್ಯವಾಗಿ ಗಂಡಸರು ಒಳಗೊಂದು ಹೊರಗೊಂದು ಎನ್ನುವಂತೆ ವಿಶ್ವ ಅನುಮಾನಿಸುತ್ತದೆ. ಈ ಕಾದಂಬರಿಯ ಗಂಡು ಪಾತ್ರಗಳು ಕೂಡ ಮದುವೆಯಾಗದ ವಿಮಲಾಭಾಯಿಯಂಥವರ ಹಿಂದೆ ಮುಂದೆ ಸುತ್ತಿ ತಮ್ಮ ಆಸೆ ತೀರಿಸಿಕೊಳ್ಳಲು ಪ್ರಯತ್ನಿಸುವರೇ ಹೊರತು ಧೈರ್ಯವಾಗಿ ಮುಂದೆ ಬಂದು ಬದುಕು ಕೊಡಲು ಯತ್ನಿಸಿದವರು ಯಾರೂ ಇಲ್ಲ .
ಹಾಗೆಂದ ಮಾತ್ರಕ್ಕೆ ಹೆಂಗಸರು ಮಾತ್ರ ಸತ್ಯವಂತರೆಂದು ಏನಲ್ಲ.
ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಕಂಡುಹಿಡಿಯಬಹುದು, ಆದರೆ ಹೆಂಗಸಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಹಾಗೆ ವಿಮಲಾಬಾಯಿ ಕೂಡ ಕೆಲವೊಮ್ಮೆ ಅಂತ ಆಸೆಯ ಕಣ್ಣುಗಳಿಗೆ ಆಹಾರವಾಗಿ ಮತ್ತು ಆ ಕಣ್ಣುಗಳಿಗೆ ಪೂರಕವಾಗಿ ನಡೆದುಕೊಂಡರೂ ಸಮಾಜದಲ್ಲಿ ಕೆಟ್ಟ ಹೆಸರು ತೆಗೆದುಕೊಳ್ಳಬಾರದು ಎಂದು ಆಸೆ ಪಡುವುದು ಉಂಟು. ವಿಮಲಾಬಾಯಿ ಇಲ್ಲಿ ಅನೇಕರ ಪ್ರತಿನಿಧಿ ಮಾತ್ರವೇ. ಹಾಗೆ ನೋಡಿದರೆ ಸಾಹಿತ್ಯದ ಎಲ್ಲ ಪಾತ್ರಗಳೂ ಒಬ್ಬರಲ್ಲದೆ ಒಬ್ಬರನ್ನು ಪ್ರತಿನಿಧಿಸುತ್ತಾ ಹೋಗಿತ್ತದೆ. ಓದುಗನಿಗೆ ಅದು ತಾನೇ ಎಂದು ಅನಿಸಿದರೆ ಅಚ್ಚರಿಯೇನಲ್ಲ.
ಇದು ಮನುಷ್ಯನ ಸಹಜ ಪ್ರವೃತ್ತಿ. ಕಾದಂಬರಿಕಾರರು ಹೇಳುವ ಹಾಗೆ ನಿಮ್ಮ ನಿಮ್ಮ ಹೆಂಗಸರನ್ನು ನೀವೇ ಹುಡುಕಿಕೊಳ್ಳಿ ಎಂದು ಹೇಳಿದರೆ ಅವರೇ ಹೇಳುವ ಹಾಗೆ ಸರ್ವೋತ್ತಮ ಪುಟ್ಟರಾಜು ವಿಶ್ವನಾಥ ನಂಥವರು ಅಂತಹ ಸಮಾಜದಲ್ಲಿ ಇರುವುದಿಲ್ಲ. ಏಕೆಂದರೆ ಅವರವರಿಗೆ ಬೇಕಾದುದನ್ನು ಧೈರ್ಯವಾಗಿ ಪಡೆದುಕೊಂಡ ಮೇಲೆ ಮತ್ತೆ ಈ ರೀತಿ ಅಡ್ಡದಾರಿ ಹಿಡಿಯುವ ಪ್ರಮೇಯವೇ ಬರುವುದಿಲ್ಲ. ಮತ್ತು ಸುವ್ಯವಸ್ಥಿತ ಭಾರತೀಯ ಕೌಟುಂಬಿಕ ವ್ಯವಸ್ಥೆ ಎಂಬುದೇ ಉಳಿಯುವುದಿಲ್ಲ.
ಪ್ರೀತಿ, ಪ್ರೇಮ ಎಂದು ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ವ್ಯವಸ್ಥೆಯೊಂದು ಕಡೆ ಇದ್ದರೆ, ಪ್ರೀತಿ ಎನ್ನುವ ಹೆಸರಿನಲ್ಲಿ ಕೇವಲ ಆಕರ್ಷಣೆಯನ್ನು ಮಾತ್ರವೇ ಉಳಿಸಿಕೊಂಡು ಹಣ ವಸೂಲಿ ಮಾಡುವ ವ್ಯವಸ್ಥೆ ಒಂದು ಕಡೆ ಇದೆ. ದೈಹಿಕ ಕಾಮನೆಯನ್ನು ಮಾತ್ರವೇ ಬಯಸುವ – ಕೊಡುವ ಪರ್ಯಾಯ ವ್ಯವಸ್ಥೆಯೂ ಧಾರಾಳವಾಗಿಯೇ ಉಳಿದಿದೆ.
ಆಕರ್ಷಣೆಯನ್ನೇ ಪ್ರೀತಿಯೆಂದು ಭ್ರಮಿಸಿ ಅಥವ ಭ್ರಮಿಸುವಂತೆ ಮಾಡುವ ಜಾಲದ ಬಿಂಬವಾಗಿ ಸುಂದರಮ್ಮ ಈ ಕಾದಂಬರಿಯಲ್ಲಿ ಕಾಣುತ್ತಾಳೆ. ಇಂಥವರಿಗೆ ಪ್ರೀತಿ ಎನ್ನುವುದು ಅಡ್ಡದಾರಿ. ಸಮಾಜ ಒಪ್ಪುವ ದಾರಿಯಲ್ಲಿ ಇರುವವರಿಗೆ ಆಕರ್ಷಣೆ ಮಾತ್ರದ ಹಾದಿಯೇ ಅಡ್ಡದಾರಿ. ಅವರವರಿಗೆ ಅವರವರದ್ದೇ ಸರಿ ಎನ್ನುವ ಧೋರಣೆ.
ಪುಟ್ಟರಾಜುವಿನ ಮೊದಲ ಹೆಂಡತಿ ಅಂದರೆ ಓಡಿಹೋದ ರತ್ನಿಯ ತಾಯಿ ಸುಂದರಮ್ಮ ಹೇಳುವ ಮಾತುಗಳು ’ನಾನು ಅವನನ್ನು ಬಯ್ಯೊಲ್ಲ. ಗಂಡಸರು ಇರುವುದೇ ಹಾಗೆ ಇರಬೇಕಾದ್ದೇ ಹಾಗೆ. ನನ್ನ ಮಗಳೇ ಸದರ ಬಿದ್ದು ಪ್ರೀತಿ ಮಾಡ್ತೀನಿ ಲಗ್ನ ಮಾಡ್ಕೋತೀನಿ ಇಲ್ಲದೆ ಹೋದರೆ ನೇಣು ಹಾಕೋತೀನಿ ಅಂತ ಅಡ್ಡ ದಾರಿ ಹಿಡಿದು ಕೂತರೆ ನಾನೇನು ಮಾಡೋಕಾಗುತ್ತೆ? ತೋಟದ ಮರದಲ್ಲಿ ಹಣ್ಣು ಬಿಟ್ಟರೆ ತೋಟದ ಸಾಹುಕಾರರು ಇಲ್ಲ ಬೇಲಿ ಕಾಯುವವನು ಪತ್ತೆ ಇಲ್ಲ ಎಂದರೆ ಯಾರು ಬೇಕಾದರೂ ಹಣ್ಣು ತಿಂದೇ ತಿನ್ನುತ್ತಾರೆ ತಿಂದು ಬಾಯಿ ಚಪ್ಪರಿಸುತ್ತಾರೆ. ಗಂಡಸರನ್ನು ನಿಭಾಯಿಸಬೇಕೆ ಹೊರತು ಪ್ರೀತಿ ಗೀತಿ ಅಂತ ಅಡ್ಡದಾರಿ ಹಿಡಿಯಬಾರದು. ತಾಯಿಯಾದವಳಿಗೆ ಯಾವಾಗಲೂ ಮಗಳ ಬಗ್ಗೆ ಎದೆ ಹೊಡೆದುಕೊಳ್ಳುತ್ತಲೇ ಇರುತ್ತೆ ಅಂತ ಮಗಳಿಗೆ ಗೊತ್ತಾಗದೆ ಹೋದರೆ ನಾನು ಏನು ಮಾಡಬೇಕು. ಇಲ್ಲ ಇಲ್ಲ ನನ್ನ ಎದೆ ಹೊಡೆದುಕೊಳ್ಳುವುದು ದಿನಾ ಚೂರು ಚೂರೇ ಒಡೆದು ಹೋಗ್ತಿರೋದು, ರತ್ನ ಕಿವಿಗೆ ಕೇಳುತ್ತೆ ಚೆನ್ನಾಗಿ ಕೇಳಿಸುತ್ತೆ. ಇಲ್ಲ ಇಲ್ಲ ನನಗೆ ಏನೂ ಕೇಳಿಸ್ತಾ ಇಲ್ಲ ಅಂತ ಚೆನ್ನಾಗಿ ನಾಟಕ ಮಾಡ್ತಾಳೆ. ನನ್ನ ಗ್ರಹಚಾರ ನಾಟಕಾನ ಸ್ಟೇಜ್ ಮೇಲೆ ಮಾಡಬೇಕು ವಿಮಲಾ ಬಾಯಿ ಮನೆಯೊಳಗಿನ ನಾಲ್ಕು ಗೋಡೆ ಒಳಗೆ ಮಾಡಬಾರದು’.
ಸುಂದರಮ್ಮನ ಬಾಯಿಯಲ್ಲಿ ಕಾದಂಬರಿಕಾರರು ಅಂತರೀಕ್ಷಣೆ ಮಾಡಿಕೊಳ್ಳಬೇಕಾದ ಮಾತುಗಳನ್ನೂ ಹೇಳಿಸಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ಮುಖವಾಡ ಹಾಕಿಕೊಂಡೇ ಬದುಕುತ್ತಾರೆ. ಅವರೊಳಗಿನ ಅಂತಃಸಾಕ್ಷಿಗೆ ಮಾತ್ರ ಅವರೇನು ಎಂಬುದು ಗೊತ್ತು. ಉಳಿದ ವಿಶ್ವಕ್ಕೆ ಅವರೆಂದೂ ಸಾಚಾಗಳಾಗಿಯೇ ಇರುತ್ತಾರೆ.
ಸ್ಟೇಜ್ ಮೇಲೆ ನಾಟಕ ಮತ್ತು ಬದುಕಿನಲ್ಲಿ ನಾಟಕ ಮತ್ತು ನಾಲ್ಕು ಗೋಡೆಯೊಳಗಿನ ನಾಟಕ ಹಾಗೂ ಮನದೊಳಗಿನ ನಾಟಕ – ಇವೆಲ್ಲವನ್ನು ಒಂದಕ್ಕೊಂದು ಪರಿಶೀಲಿಸುತ್ತಾ ಹೋದರೆ ಸ್ಟೇಜ್ ಮೇಲೆ ನಟಿಸುವುದು ಕೀರ್ತಿಗೆ ಹಣಕ್ಕೆ ಮತ್ತು ಸಂತೋಷಕ್ಕೆ; ಬದುಕಿನಲ್ಲಿ ನಾಟಕ ಮಾಡುವುದು ತನ್ನ ಹೆಚ್ಚುಗಾರಿಕೆ ತನ್ನ ನಿಯತ್ತು ತನ್ನ ನೀತಿವಂತಿಕೆಯನ್ನು ಜಗತ್ತಿಗೆ ತೋರಿಸಲೆಂದು; ನಾಲ್ಕು ಗೋಡೆಯೊಳಗೆ ನಾಟಕವಾಡುವಾಗ ಅದು ನಾಟಕವೆಂದು ಸುತ್ತಲಿನವರಿಗೆ ತಿಳಿದಿದೆಯೋ ಇಲ್ಲವೋ ಎಂಬುದರ ವಿವೇಚನೆ ಕೆಲವೊಮ್ಮೆ ಇರುತ್ತದೆ ಕೆಲವೊಮ್ಮೆ ಇರುವುದಿಲ್ಲ, ತಮ್ಮವರನ್ನೇ ಮೆಚ್ಚಿಸಲು ನಂಬಿಸಲು ಮತ್ತು ತಾನು ಸರಿಯಾಗಿದ್ದೇನೆ ತನಗೆ ನೋವು ಸಂಕಟ ಚಿಂತೆ ಇಲ್ಲ ಎಂದು ತೋರಿಸಲು ನಾಲಗೆ ಕಣ್ಣು ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕವಾಡುವುದು; ಎಲ್ಲವನ್ನು ಮೀರಿ ತಾನು ಮಾಡುವುದು ಸರಿಯಲ್ಲ ಎಂದು ಮನಸ್ಸಾಕ್ಷಿ ಹೇಳಿದರೂ ಅದರ ಬಾಯಿಯನ್ನು ಮುಚ್ಚಿಸಿ ಅದಕ್ಕೆ ಕೂಡ ಇಲ್ಲ ನಾನು ಮಾಡುತ್ತಿರುವುದು ಸರಿಯಾಗಿದೆ ಎಂದು ಮನದ ಮತ್ತೊಂದು ಕವಾಟದಿಂದ ಹೇಳಿಸಿ ಭಂಡತನದಿಂದ ನಾಟಕ ಮಾಡುವುದು .
ಈ ಎಲ್ಲಾ ನಾಟಕಕ್ಕೂ ತೀರ್ಪು ಹೇಳುವುದು ಭಗವಂತನ ನ್ಯಾಯಾಲಯದಲ್ಲಿ ಎನ್ನುವುದು ಅಸ್ತಿಕರ ನಂಬಿಕೆ.
ಈ ಕಾದಂಬರಿಯ ಅನೇಕ ಪಾತ್ರಗಳು ಬದುಕಿನ ಸತ್ಯವನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ಒಂದು ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಮತ್ತು ಹೆಣ್ಣು ಮಕ್ಕಳ ಬದುಕಿನ ಸುತ್ತ ತಿರುಗಾಡುವ ಈ ಕಾದಂಬರಿಯ ವಸ್ತು ವಸ್ತುಸ್ಥಿತಿಯನ್ನು ಬಿಂಬಿಸುತ್ತಾ ಹೋಗುತ್ತದೆ.
ವಿಮಲಾಭಾಯಿ ಅವರ ಬದುಕಿನ ಮತ್ತೊಂದು ಮಗ್ಗುಲು ಎಂದರೆ ಶ್ರೀನಿವಾಸ್ ಕಿರಂಗೂರು ಅವರ ಭೇಟಿ. ಇಡೀ ಕಿರಂಗೂರಿನಲ್ಲಿಯೂ ಬೆಂಗಳೂರಿನ ಯಾರೂ ಆಕೆಯ ಕೆಲಸವನ್ನು ಮೆಚ್ಚುವುದು ತಿಳಿಯದಿದ್ದರೂ ಇವಳನ್ನು ಉಡಾಫೆಯಿಂದ ನೋಡುತ್ತಿದ್ದರು. ಒಂದು ಗುಂಪು ನಾಯಕಿಗೆ ಅರಿಯದ ಹಾಗೆ ಇವರ ಕೆಲಸಗಳನ್ನು ಮೆಚ್ಚುಗೆಯಿಂದ ನೋಡುತ್ತಾ ಇವರನ್ನು ವಿದ್ಯಾ ಸರಸ್ವತಿ ಎಂದು ಆರಾಧಿಸುತ್ತಾ ಬೆಳೆದು ದೊಡ್ಡವರಾಗಿ ಬೇರೆ ದೇಶಕ್ಕೆ ಹೋಗಿ ಅಲ್ಲಿ ತಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಸೇರಿಸುವಾಗಲು ವಿಮಲಾಬಾಯಿ ಮಕ್ಕಳಿಗೆ ಎಷ್ಟು ಪ್ರೀತಿಯಿಂದ ಪಾಠ ಹೇಳುತ್ತಿದ್ದುದನ್ನು ನೆನಪು ಮಾಡಿಕೊಂಡು ಅದನ್ನು ವಿಮಲ ಬಾಯಿಗೆ ಮತ್ತೆ ಹೇಳುವುದು.
ಈ ರೀತಿಯ ಒಂದು ಹೊಗಳಿಕೆ, ಯಾರೋ ಗಮನಿಸಿ ಮೆಚ್ಚುಗೆ ಹೊಂದಿದ್ದಾರೆ ಮತ್ತು ಅದನ್ನು ಈಗ ವ್ಯಕ್ತಪಡಿಸುತ್ತಿದ್ದಾರೆ ಎನ್ನುವುದು ನೀಡುವ ಧೈರ್ಯ ಭರವಸೆ ಬದುಕನ್ನು ಮುನ್ನಡೆಸುವ ಊರುಗೋಲಾಗುತ್ತದೆ ಎಂಬ ದೊಡ್ಡ ತತ್ವವನ್ನು ಕಾದಂಬರಿಕಾರರು ಮೂರನೆಯ ಭಾಗದಲ್ಲಿ ಹೇಳುತ್ತಾರೆ. ಮನುಷ್ಯನ ಮೂಲ ಗುಣ ಅಡಗಿರುವುದೇ ಇಲ್ಲಿ. ತನ್ನ ಅಸ್ತಿತ್ವದ ಪ್ರಶ್ನೆ. ತನಗೆ ಅಸ್ತಿತ್ವವೇ ಇಲ್ಲ ಎನ್ನುವುದು ಅರಿವಾದರೆ ಬದುಕುವ ಉತ್ಸಾಹ ಕುಗ್ಗಿಹೋಗುತ್ತದೆ. ಆದರೆ ತನಗೊಂದು ಅಸ್ತಿತ್ವ ಇದೆ, ತನ್ನ ಒಳ್ಳೆಯ ಕೆಲಸವನ್ನು ಯಾರೋ ಗುರುತಿಸಿ ಮೆಚ್ಚಿದ್ದಾರೆ ಎಂದಾದರೆ ಕೆಲಸ ಮಾಡುವ ಉತ್ಸಾಹ ದ್ವಿಗುಣಗೊಳ್ಳುತ್ತದೆ. ಇದನ್ನೇ ಈಗ ಜಗತ್ತು ಪರ್ಫಾರ್ಮೆನ್ಸ್ ಬೇಸ್ಡ್ ಇನ್ಸೆಂಟಿವ್ ಎನ್ನುವ ದೊಡ್ಡ ಶಬ್ದಗಳಲ್ಲಿ ಹೇಳುತ್ತಾ ಅದರೊಟ್ಟಿಗೆ ಚಮಚಾಗಿರಿಯನ್ನೂ ಪೋಷಿಸುತ್ತಿದೆ.
ಅಂತೆಯೇ ನಿಸ್ವಾರ್ಥವಾಗಿ ಶಾಲೆಯ ಕೆಲಸವನ್ನು, ಮಕ್ಕಳ ಕೆಲಸವನ್ನೆಲ್ಲ ಪ್ರೀತಿಯಿಂದ ಮಾಡುತ್ತಿದ್ದ ಹೊನ್ನಮ್ಮ ಇದ್ದಕ್ಕಿದ್ದ ಹಾಗೆ ಊರು ಬಿಟ್ಟು ಹೋದಾಗ ಆಕೆ ಉಳಿಸಿ ಹೋದ ಸಾಬೂನು ಚೂರುಗಳು ಸ್ವಚ್ಛತೆಯ ಸಂಕೇತವಾಗಿ ನಿಲ್ಲುತ್ತದೆ. ನಿಸ್ವಾರ್ಥತೆಗೂ ಸ್ವಚ್ಛತೆಗೂ ಇರುವ ಅಂತರ್ಸಂಬಂಧವನ್ನು ಸೂಚ್ಯವಾಗಿ ಹೇಳುತ್ತದೆ.
ತಾವು ಹುಟ್ಟಿದ ಊರು ತಾವು ಬೆಳೆದ ಜನ ಗುರುತಿರುವ ಜನ ಎನ್ನುವುದು ಕನಸಿನಲ್ಲಿಯೂ ಕೂಡ ಕಾಣುತ್ತದೆ ಕಾಡುತ್ತದೆ. ತಮ್ಮ ಬಾಲ್ಯದ ನೆನಪುಗಳನ್ನು ಬಿಡಿಸಿಕೊಂಡು ಹೋಗಲು ಯಾರಿಗೂ ಸಾಧ್ಯವೇ ಇಲ್ಲ. ಇದರೊಟ್ಟಿಗೆ ತಾವು ಪ್ರೀತಿಯಿಂದ ಕೆಲಸ ಮಾಡಿದ ಸ್ಥಳದ ಮೋಹವನ್ನು ತೊರೆಯಲೂ ಸಾಧ್ಯವಿಲ್ಲ. ನಾಲ್ಕನೆಯ ಭಾಗದಲ್ಲಿ ಅಣ್ಣನೊಡನೆ ಜಗಳ ಮಾಡಿಕೊಂಡು ಬೆಂಗಳೂರಿಗೆ ಹೋಗಿ ತಿರುಗಿ ಕಿರಂಗೂರಿಗೆ ಬರುವ ವಿಮಲಾಬಾಯಿ, ಮಂಡ್ಯಕ್ಕೆ ಹೋಗಿ ಮತ್ತೆ ತಿರುಗಿ ಕಿರಂಗೂರಿಗೆ ಬಂದು ’ನಾನು ಮಂಡ್ಯಕ್ಕೆ ಹೋಗಬಾರದಿತ್ತು. ಎಲ್ಲ ಗೊತ್ತಿರುವ ಮುಖ ಇಲ್ಲಿಯೇ ಇರಬೇಕಿತ್ತು’ ಎಂದು ದುಃಖಿಸುವ ಗೋದಾಭಾಯಿಯರು ಬಹುತೇಕರ ಮನಗಳಿಗೆ ಹಿಡಿದ ಕೈಗನ್ನಡಿಯಂತೆ ಕಾಣುತ್ತದೆ.
ಮೋಡ ಹೆಚ್ಚು ಹೆಪ್ಪುಗಟ್ಟಷ್ಟು ಸುರಿವ ಭಾರದ ಹೊರೆ ಹೆಚ್ಚಾಗುತ್ತದೆ. ಸುರಿಯದೆ ಹೋದರೆ ತಳಮಳ ಸಂಕಟವನ್ನು ಅದು ತಾಳಲಾರದು. ಅಂತೆಯೇ ಮನುಷ್ಯರು ಒಳಗೆ ಹೆಪ್ಪುಗಟ್ಟಿದ ನೋವನ್ನು ತೋಡಿಕೊಂಡು ಹಗುರಾಗಲು ಯಾರನ್ನಾದರೂ ಹುಡುಕಾಡುತ್ತಲೇ ಇರುತ್ತಾರೆ . ಹಾಗೆ ಯಾರನ್ನಾದರೂ ಏನನ್ನಾದರೂ ಹುಡುಕುತ್ತಲೇ ಇರುವುದೇ ಬದುಕು. ’ ಎಲ್ಲರೂ ಎಲ್ಲ ಮನೆಯಲ್ಲೂ ಹೀಗೆ ಯಾರನ್ನಾದರೂ ಹುಡುಕುತ್ತಲೇ ಇರುತ್ತಾರೆ ಅಂತ ಕಾಣುತ್ತೆ ತೋಡಿಕೊಳ್ಳಲು’ ಎಂದು ಕಾದಂಬರಿಕಾರರು ಹೇಳುತ್ತಾರೆ.
ಈ ಕಾದಂಬರಿ ಎಲ್ಲೋ ಒಂದು ಕಥೆಯನ್ನು ಹೇಳುವುದಕೆಂದು ಸೀಮಿತವಾಗಿದೆ ಎಂದು ಅನಿಸುವುದಿಲ್ಲ. ಗಡಿಯಾರ ಸುತ್ತ ಸುತ್ತುವ ಹಾಗೆ ಸುತ್ತಿಕೊಂಡು ಮತ್ತೆ ಅಲ್ಲೇ ಬಂದು ನಿಲ್ಲುವ ಹಾಗೆ ಸುತ್ತಿ ಸುತ್ತಿ ಬಂದು ಕಿರಂಗೂರಿನ ಹೆಸರಿನಲ್ಲಿ ಜಗತ್ತಿನ ವ್ಯಾಪಾರದ ಸುತ್ತ ಸುತ್ತುತ್ತಲೇ ನಿಲ್ಲದ ಓಟದಲ್ಲಿ ಚಲನಶೀಲತೆಯನ್ನು ಉಳಿಸಿಕೊಳ್ಳುತ್ತದೆ.
ಮದುವೆಯಾಗದ ಹೆಣ್ಣು ಮಗಳೊಬ್ಬಳ ಬದುಕನ್ನು ಕೇಂದ್ರೀಕರಿತವಾಗಿಟ್ಟುಕೊಂಡರೂ ಒಬ್ಬ ಗಂಡಸಿನ ಪ್ರೀತಿ ಆಸರೆ ಹೆಣ್ಣಿಗೆ ಎಷ್ಟು ಮುಖ್ಯವೋ ಗಂಡಿಗೂ ಹೆಣ್ಣಿನ ಆಸರೆ ಅಷ್ಟೇ ಮುಖ್ಯ ಎನ್ನುವುದನ್ನು ಪಾತ್ರಗಳು ಹೇಳುತ್ತಾ ಹೋಗುತ್ತವೆ. ಅಂತರ್ ಅವಲಂಬನೆಯ ಮಹತ್ವದ ಕುರಿತಾಗಿ ಕಾದಂಬರಿಯಲ್ಲಿ ಹಲವು ಎಳೆಗಳು ಇವೆ.
ಬದುಕಿನದ್ದಕ್ಕೂ ಟೀಚರ್ ಆಗಿದ್ದ ವಿಮಲಾಬಾಯಿಯ ಮತ್ತೊಂದು ಹೊರಳು ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುವುದು. ಇದು ಅನೇಕರ ಬದುಕಿನಲ್ಲಿ ಹೊಸ ಹೊಸ ಸಾಧ್ಯತೆಗಳತ್ತ ಹೊರಳಬಹುದು ಎಂಬುವತ್ತ ಬೆಳಕು ತೋರುತ್ತದೆ.
ಎಂದಿಗೂ ತನ್ನ ಮನದಾಳವನ್ನು ಯಾರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದೆ ತೊಳಲಾಡುವ ವಿಮಲಾಬಾಯಿ, ಹಂಚಿಕೊಂಡ ಸಂಕಟ ಕಡಿಮೆಯಾಗುತ್ತದೆ ಎಂಬುದನ್ನು ಮನಗಂಡರೂ ಹೇಳಿಕೊಳ್ಳಲಾಗದೆ ಹೋಗುವ ಅನೇಕ ವಿಮಲಾಬಾಯಿಯರ ಮುಖವಾಗಿ ತೋರುತ್ತಾಳೆ
ತನ್ನನ್ನು ಮೆಚ್ಚಿದ ಪುಟ್ಟರಾಜು ಮತ್ತೊಬ್ಬರನ್ನು ಮದುವೆಯಾಗಿ ಅವಳಿಂದ ಮಕ್ಕಳಾಗಲಿಲ್ಲವೆಂದು ಮತ್ತೊಂದು ಮದುವೆಯಾಗಿ ಇವಳನ್ನು ತೀರಾ ನೆನಪಿಲ್ಲದಂತೆ ವರ್ತಿಸುವುದು, ಅಂತಹ ಪು ರಾಜುವಿನ ಮಗಳ ಮದುವೆ ಹಾಸನದಲ್ಲಿ ನಡೆಯುತ್ತಿದೆ ಎನ್ನುವಾಗ ಹಾಸನದ ಎಲ್ಲ ಕಥೆಗಳು ವಿಮಲಾಬಾಯಿಗೆ ನೆನಪಿಗೆ ಬಂದು ಮತ್ತೆ ಪುಟ್ಟರಾಜುವಿನೊಂದಿಗೆ ಓಡಾಡುವ ಕಲ್ಪನೆ ಮಾಡಿಕೊಳ್ಳುವ ಸಾಧ್ಯತೆಯನ್ನು ಕಾದಂಬರಿ ಕೊನೆಗೆ ತೋರಿಸಿ, ಅವನ ಚಲನವಲನಗಳ ಮೇಲೆ ನಿಗಾ ಇರಿಸಿ ಅಂಪೈರ್ ಮೇಡಂ ಎನ್ನುವ ಟೈಟಲ್ಗೆ ಅನ್ವರ್ಥವಾಗಿ ಕಾದಂಬರಿ ನಿಂತು ಹೋಗುತ್ತದೆ.
ಸಮಾಜಕ್ಕೆ ಹೆದರುವ, ಸಮಾಜದ ಮಾತುಗಳಿಗೆ ಬೆಚ್ಚುವ ಸಾಮಾನ್ಯ ವರ್ಗದ ಮನಸ್ಥಿತಿಯನ್ನೂ, ಸಿರಿವಂತರ ಆದ್ಯತೆಗಳನ್ನೂ ಅತ್ಯಂತ ಮನಮುಟ್ಟುವ ಹಾಗೆ ಹೇಳುತ್ತಾ ಈ ಕಾದಂಬರಿ ಹಳ್ಳಿ ಬದುಕನ್ನೂ, ಶಹರದ ಬದುಕನ್ನೂ, ಅವುಗಳ ಮೇಲ್ಪದರದ ಒಳಗನ್ನು ಬಿಡಿಸಿಡುವಲ್ಲಿ ಸಫಲವಾಗಿದೆ.
ಸಾಹಿತ್ಯದ ಯಾವುದೇ ಪ್ರಕಾರ ಸಫಲವಾಗುವುದು ಅದರ ಕಥೆಯ ರಂಜಕತೆ ಮಾತ್ರದಿಂದಲ್ಲ, ಅದರ ಒಳನೋಟಗಳಿಂದ; ಪರರ ಅನುಭವಗಳನ್ನು ತಮ್ಮದಾಗಿಸಿಕೊಂಡು ಒಡೆದ ಹಾಲನ್ನು ರಸಗುಲ್ಲ ಮಾಡಿ ಸಾರ್ಥಕ ಮಾಡುವ ಹಾಗೆ ಹಾ(ಜಾ)ಳಾದ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಲು ಸಹಕಾರಿಯಾಗುವುದರಿಂದ; ಒಳಿತಾವುದು ಕೆಡಕಾವುದು ಎಂವುದನ್ನು ಅರ್ಥೈಸಿಕೊಳ್ಳಲು ಮಾಧ್ಯಮವಾಗುವುದರಿಂದ ಮತ್ತು ಒಳಗೆ ಅಡಗಿರುವ ಮನುಷ್ಯತ್ವದ ಕುಸುಮ ಪರಿಮಳ ಸೂಸಿ ಸುತ್ತ ಮುತ್ತ ಕಂಪು ಹರಡುವ ಹಾಗೆ ಮಾಡಲು ಪೂರಕವಾಗುವುದರಿಂದ.
ಈ ಕಾದಂಬರಿಯೂ ಈ ನಿಟ್ಟಿನಲ್ಲಿ ಹೆಜ್ಜೆಯೂರಿರುವುದು ಗಮನೀಯ.

-ಡಾ.ಶುಭಶ್ರೀಪ್ರಸಾದ್, ಮಂಡ್ಯ.
೯೮೪೪೪೯೮೪೩೨, ೯೪೮೩೫೩೧೭೭೭