ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಒದಗಿಸಲು, ಕಣ್ವ ಡ್ಯಾಂ ಜಂಕ್ಷನ್ ಬಳಿ ಹೊಸ ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ.
ಈ ಯೋಜನೆಯ ಭಾಗವಾಗಿ, ಇಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಮಂಜುನಾಥ್ ಹಾಗೂ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ, ಪ್ರಸ್ತಾವಿತ ಎಕ್ಸಿಟ್-ಎಂಟ್ರಿ ಸ್ಥಳ ಹಾಗೂ ಇದರ ಪರಿಣಾಮಕಾರಿತ್ವದ ಬಗ್ಗೆ ಚರ್ಚೆ ನಡೆಸಲಾಯಿತು.
ಡಾ. ಮಂಜುನಾಥ್ ಮಾಧ್ಯಮಗಳಿಗೆ ಮಾತನಾಡುತ್ತಾ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಸ್ಥಳೀಯರ ಸುಲಭ ಸಂಚಾರಕ್ಕಾಗಿ ಈ ಎಂಟ್ರಿ-ಎಕ್ಸಿಟ್ ಅತೀ ಅಗತ್ಯವಿದೆ ಎಂದರು. ಮೊದಲಿಗೆ ಚನ್ನಪಟ್ಟಣದ ರಾಂಪುರದ ಬಳಿ ಈ ಯೋಜನೆಗಾಗಿ ಜಾಗ ಪರಿಶೀಲನೆ ನಡೆದರೂ, ಅಲ್ಲಿ ಸೂಕ್ತ ಜಾಗವಿಲ್ಲದ ಕಾರಣ ಕಣ್ವ ಜಂಕ್ಷನ್‌ನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಹೊಸ ಎಕ್ಸಿಟ್ ಮೂಲಕ ಕಣ್ವ ಡ್ಯಾಂ, ಕೆಂಗಲ್ ಆಂಜನೇಯ ದೇವಾಲಯ ಮತ್ತು ಹಳೆಯ ಬೆಂಗಳೂರು-ಮೈಸೂರು ರಸ್ತೆಗೆ ನೇರ ಸಂಪರ್ಕ ಸಿಗಲಿದೆ. ಇದರಿಂದ ಪ್ರವಾಸೋದ್ಯಮಕ್ಕೂ ದೊಡ್ಡ ಧಕ್ಕೆಯಾಗಲಿದೆ.
ಇದೇ ವೇಳೆ, ಮೂರು ಕಡೆಗಳಲ್ಲಿ ನಿರ್ಮಾಣದಲ್ಲಿ ಇರುವ ಸ್ಕೈವಾಕ್ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದರು. ಜೊತೆಗೆ, ಚನ್ನಪಟ್ಟಣದ ಬಳಿ ಟಾಯ್ಸ್ ಪಾರ್ಕ್ ಅಭಿವೃದ್ಧಿಗೆ ಭೂಮಿ ಗುರುತಿಸಲಾಗಿದ್ದು, ಈ ಯೋಜನೆ ಕೂಡಾ ಜವಾಬ್ದಾರಿತ್ವದಿಂದ ಮುನ್ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಇದನ್ನು ಓದಿ –ಮೈಸೂರು ಜಿಲ್ಲೆಯಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್’ ಪರೀಕ್ಷೆ
ಪಹಲ್ಗಾಮ್ ಉಗ್ರ ದಾಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ಉಗ್ರರ ವಿರುದ್ಧ ಕಠಿಣ ಪ್ರತಿಕ್ರಿಯೆ ನೀಡುವುದು ಮುಖ್ಯ. ಭದ್ರತಾ ವೈಫಲ್ಯ ಕುರಿತು ಚರ್ಚೆ ನಂತರ ಮಾಡಬಹುದು. ಯುದ್ಧದಂತಹ ಸೂಕ್ಷ್ಮ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಬೌದ್ಧಿಕ ಜವಾಬ್ದಾರಿಯ ವಿಚಾರ ಎಂದರು.