ಚಾಮರಾಜನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಉಗ್ರ ದಾಳಿಯ ಬೆನ್ನಲ್ಲೇ, ಚಾಮರಾಜನಗರ ಜಿಲ್ಲೆಯ ಜಿಲ್ಲಾಡಳಿತ ಭವನಕ್ಕೆ ಬಾಂಬ್ ಬೆದರಿಕೆ ಬಂದಿದೆ.
ಇ-ಮೇಲ್ ಮೂಲಕ ಬಂದ ಈ ಬೆದರಿಕೆಯಿಂದ ಅಧಿಕಾರಿಗಳಲ್ಲಿ ಆತಂಕ ಮನೆಮಾಡಿದ್ದು, ಕಚೇರಿಯ ಸಿಬ್ಬಂದಿ ತಾತ್ಕಾಲಿಕವಾಗಿ ಭವನದ ಹೊರಗೆ ಸ್ಥಳಾಂತರಗೊಂಡಿದ್ದಾರೆ.
ಘಟನೆಯ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು, “ಬಾಂಬ್ ಬೆದರಿಕೆ ಇ-ಮೇಲ್ ಮೂಲಕ ಬಂದಿದ್ದು, ತಕ್ಷಣವೇ ಪರಿಶೀಲನಾ ಕ್ರಮಗಳನ್ನು ಆರಂಭಿಸಿದ್ದೇವೆ. ಭದ್ರತಾ ಕ್ರಮ ಹೆಚ್ಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಬೆದರಿಕೆಯು ರಾಷ್ಟ್ರದ ಭದ್ರತೆಯ ಕುರಿತು ಗಂಭೀರ ಚಿಂತನೆ ಉಂಟುಮಾಡಿದ್ದು, ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಹಲ್ಗಾಮ್ ದಾಳಿಯ ಹಿನ್ನೆಲೆ:
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಭಯೋತ್ಪಾದಕರ ಗುಂಪು ಪ್ರವಾಸಿಗರ ಮೇಲೆ ಕ್ರೂರ ದಾಳಿ ನಡೆಸಿತು. ಈ ದಾಳಿಯಲ್ಲಿ ಇಸ್ರೇಲ್ ಹಾಗೂ ಇಟಲಿಯ ತಲಾ ಒಬ್ಬರು, ಕರ್ನಾಟಕದ ಇಬ್ಬರು ಸೇರಿದಂತೆ ಒಟ್ಟು 26 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ದಾಳಿ ವೇಳೆ ಉಗ್ರರು ಪ್ರವಾಸಿಗರ ಹೆಸರು, ಗುರುತಿನ ಚೀಟಿ ಕೇಳುತ್ತಾ ಹಿಂದೂಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ ಘಟನೆ ವರದಿಯಾಗಿದೆ. ಇದರಿಂದಾಗಿ ಈ ದಾಳಿ ಧರ್ಮಾಧಾರಿತ ಎಂದು ಶಂಕಿಸಲಾಗಿದೆ. ದುರ್ಘಟನೆಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಸಂಭಂಧ ಹೊಂದಿರುವ ‘ದಿ ರೆಸಿಸ್ಟನ್ಸ್ ಫ್ರಂಟ್’ ಪಡೆದುಕೊಂಡಿದೆ.
ಪಹಲ್ಗಾಮ್‌ನಿಂದ 6 ಕಿ.ಮೀ ದೂರದಲ್ಲಿರುವ ಬೈಸರನ್ ಕಣಿವೆಯ ಹುಲ್ಲುಗಾವಲಿನಲ್ಲಿ ಮಂಗಳವಾರ ಮಧ್ಯಾಹ್ನ 2:30ರ ಸುಮಾರಿಗೆ ಈ ದಾಳಿ ನಡೆಯಿತು. ಜಗತ್ತಿನಾದ್ಯಾಂತ ಈ ಕ್ರೂರ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಭಯೋತ್ಪಾದಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಚಾಮರಾಜನಗರದ ಬಾಂಬ್ ಬೆದರಿಕೆ ಕೂಡ ಈ ದಾಳಿಯ ಪರಿಣಾಮವಾಗಿ ಉಂಟಾದ ಭೀತಿಯ ಪರಿಣಾಮವೆಂಬ ಅನಿಸಿಕೆ ವ್ಯಕ್ತವಾಗಿದೆ.ಇದನ್ನು ಓದಿ –SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಕಲಬುರಗಿ ಕೊನೆಯ ಸ್ಥಾನ
ಸದ್ಯ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ ನಿರೀಕ್ಷೆಯಲ್ಲಿದ್ದೇವೆ.