- – ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇನ್ನುಮುಂದೆ ಸರ್ಕಾರಿ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡ್ಡಾಯವಾಗಿದೆ. 1963ರ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮದ ಅನ್ವಯ, ಕನ್ನಡವನ್ನು ರಾಜ್ಯದ ಅಧಿಕೃತ ಆಡಳಿತ ಭಾಷೆಯಾಗಿ ಬಳಸಬೇಕು ಎಂಬುದಾಗಿ ಸರ್ಕಾರ ನಿಶ್ಚಿತ ಆದೇಶ ನೀಡಿದೆ.
ಇದೀಗ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಸರ್ಕಾರದ ಎಲ್ಲಾ ಕಚೇರಿಗಳ ನಾಮಫಲಕಗಳು, ಪತ್ರ ವ್ಯವಹಾರ, ಅಧಿಕೃತ ಸೂಚನೆಗಳು, ವಿಧಾನಮಂಡಲ ಚಟುವಟಿಕೆಗಳು ಸೇರಿದಂತೆ ಎಲ್ಲವೂ ಕನ್ನಡದಲ್ಲೇ ಇರಬೇಕು. ಯಾವುದೇ ಅರ್ಜಿ ಅಥವಾ ಪತ್ರವನ್ನು ಕನ್ನಡದಲ್ಲಿ ಸ್ವೀಕರಿಸಿದರೆ, ಅದಕ್ಕೆ ಉತ್ತರವೂ ಕನ್ನಡದಲ್ಲಿಯೇ ನೀಡಬೇಕೆಂದು ಸೂಚಿಸಲಾಗಿದೆ.
ರಾಜ್ಯದ ನೇಮಕಾತಿ, ವರ್ಗಾವಣೆ, ರಜೆ ಮಂಜೂರಾತಿ ಸೇರಿದಂತೆ ಎಲ್ಲಾ ಸರ್ಕಾರಿ ಆದೇಶಗಳು ಕನ್ನಡದಲ್ಲಿ ಹೊರಬರಬೇಕು. ಕೆಲ ಇಲಾಖೆಗಳು ಇನ್ನೂ ಇಂಗ್ಲಿಷ್ ಭಾಷೆಯಲ್ಲಿ ದಾಖಲೆಗಳು, ಫೈಲ್ ಟಿಪ್ಪಣಿಗಳನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಚನೆ ನೀಡಿದ್ದಾರೆ.
ಸಭೆಗಳ ಸೂಚನೆ, ಕಾರ್ಯಸೂಚಿ, ಟಿಪ್ಪಣಿಗಳು ಸೇರಿದಂತೆ ಎಲ್ಲ ದಾಖಲಾತಿಗಳು ಈಗಿನಿಂದ ಕನ್ನಡದಲ್ಲಿಯೇ ತಯಾರಾಗಬೇಕು. ಇಂಗ್ಲಿಷ್ ನಮೂನೆಗಳು ಇದ್ದರೂ ಅವುಗಳನ್ನು ಕನ್ನಡದಲ್ಲಿ ಭರ್ತಿ ಮಾಡಬೇಕೆಂದು ಸೂಚನೆ ಇದೆ. ಆಡಳಿತದಲ್ಲಿ ಕನ್ನಡವನ್ನು ಉಲ್ಲೇಖಿಸದೆ ಕೆಲಸ ಮಾಡಿದರೆ, ಕಡತಗಳನ್ನು ಹಿಂದಿರುಗಿಸಬೇಕು ಮತ್ತು ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಬೇಕು ಎಂಬೂ ಸೂಚಿಸಲಾಗಿದೆ.
ಕನ್ನಡ ಭಾಷೆಯ ಕಡ್ಡಾಯ ಬಳಕೆಗೆ ಸಂಬಂಧಿಸಿದ ಈ ಆದೇಶ ಎಲ್ಲಾ ಇಲಾಖೆ, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಅನುದಾನಿತ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಅಧಿಕಾರಿಗಳು ಮತ್ತು ನೌಕರರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಮನವರಿಕೆ ಮಾಡಿಸಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳು, ಸಿಇಒಗಳು ಕೆಡಿಪಿ ಸಭೆಗಳ ಕಾರ್ಯಸೂಚಿಯನ್ನು ಇಂಗ್ಲಿಷ್‌ನಲ್ಲಿ ನೀಡುತ್ತಿರುವುದಾಗಿ ವರದಿಯಾಗಿದ್ದು, ಇನ್ನುಮುಂದೆ ಅದು ಕನ್ನಡದಲ್ಲಿಯೇ ನೀಡಬೇಕೆಂಬ ಖಡಕ್ ಸೂಚನೆ ಸರ್ಕಾರದಿಂದ ಬಂದಿದೆ. ಜೊತೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ದಾಖಲಾತಿಗಳನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಉಲ್ಲೇಖಿಸಿ ಅವರಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.
ನಿಯಮದ ಪ್ರಕಾರ, ಕೇಂದ್ರ ಸರ್ಕಾರ, ಇತರ ರಾಜ್ಯಗಳು ಹಾಗೂ ನ್ಯಾಯಾಂಗ ಸಂಬಂಧಿತ ಕಾರ್ಯವ್ಯವಹಾರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಧಿಕೃತ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸುವುದು ಕಡ್ಡಾಯವಾಗಿದೆ.ಇದನ್ನು ಓದಿ –ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ – ಏಳು ಮಂದಿ ಅರೆಸ್ಟ್
ಈ ನಿಯಮಗಳ ಉಲ್ಲಂಘನೆ ಮುಂದುವರಿದರೆ, ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ವೈಯಕ್ತಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ.