ಮಕ್ಕಳ ಅತ್ಯಂತ ಪ್ರಿಯ ಪುಸ್ತಕಗಳಲ್ಲಿ ಚಂದಮಾಮ ಕೂಡ ಒಂದು. ಅದರಲ್ಲಿ “ಶ್ರೀ ಜಗನ್ನಾಥ ಚರಿತ್ರೆ” ಎಂಬ ಒಂದು ಕತೆ, ಧಾರಾವಾಹಿಯಾಗಿ ಬರುತ್ತಿತ್ತು. ಅಲ್ಲಿ ವಿದ್ಯಾಪತಿ ಎಂಬೊಬ್ಬ ಮಂತ್ರಿ ಕಾಡಿನಲ್ಲಿದ್ದ ಒಬ್ಬ ವನವಾಸಿ ಸಮುದಾಯ ಸೇರಿ, ಅಲ್ಲಿ ಆ ಸಮುದಾಯದಲ್ಲಿ ಪೂಜಿಸಲ್ಪಡುತ್ತಿದ್ದ ದೇವನಮೂರ್ತಿಯನ್ನು ರಾಜನ ಬಳಿಗೆ ತಂದನು.
ಅದನ್ನಿಡಲು ಸೂಕ್ತ ವ್ಯವಸ್ಥೆಯನ್ನು ಮಾಡುತ್ತಿದ್ದಾಗ, ಸಾಗರದಲ್ಲಿ ತೇಲಿ ಬಂದ ಮರದ ದಿಮ್ಮಿಯನ್ನು ಉಪಯೋಗಿಸಿ, ಮರದ ಮೂರ್ತಿ ಮಾಡಬೇಕೆಂದಾಯಿತು. ಸ್ವತಃ ವಿಶ್ವಕರ್ಮನು ಅದನ್ನು ಕೆತ್ತುವ ಕೆಲಸವನ್ನೆತ್ತಿಕೊಂಡನು. ತನ್ನನ್ನು ಒಬ್ಬಂಟಿಯಾಗಿ ಬಿಡಬೇಕೆಂದು ಶರ್ತ ವಿಧಿಸಿದ ವಿಶ್ವಕರ್ಮ, ಮೂರ್ತಿಯ ಕಟ್ಟಕಡೆಯ ಕೆಲಸವನ್ನು ಮಾಡುತ್ತಿರುವಾಗ ಕುತೂಹಲ ತಾಳಲಾರದ ರಾಣಿಯು, ಒಳ ಇಣುಕಿ ನೋಡಿದಾಗ ವಿಶ್ವಕರ್ಮನು ಅಲ್ಲಿ ಅಂತರ್ಧಾನನಾಗುತ್ತಾನೆ.
ಆಗ ಉಳಿದ ಮೂರ್ತಿಯ ರೂಪವೇ ಈಗಲೂ ಉಳಿದುಕೊಂಡು ಬಂದಿದೆ. ಹಾಗೆ ದೊರಕಿದ ಮೂರ್ತಿಗಳೇ ನಾವೀಗ ಕಾಣುತ್ತಿರುವ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ಮೂರ್ತಿಗಳು. ಎಂಟು, ಹನ್ನೆರಡು ಅಥವಾ ಹತ್ತೊಂಭತ್ತು ವರ್ಷಗಳಿಗೊಮ್ಮೆ ಈ ಮೂರ್ತಿಗಳನ್ನು ಬದಲಾಯಿಸಲಾಗುತ್ತದೆ. ಇದಕ್ಕೆ “ನವಕಲೇವರ” ಎಂದು ಕರಯುತ್ತಾರೆ. ಈ ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರು ತಮ್ಮ ತಾಯಿಯ ಮನೆಗೆ ಹೋಗುವ ಪಯಣವೇ ರಥಯಾತ್ರೆ.
ರಥಯಾತ್ರೆ ಯಾವಾಗ ನಡೆಯುತ್ತದೆ?
ಪುರಿ ಜಗನ್ನಾಥ ರಥಯಾತ್ರೆ – ಆಶಾಢ ಶುದ್ಧ ದ್ವಿತೀಯಕ್ಕೆ ಪುರಿಯಲ್ಲಿ ಜರುಗುವ ಈ ಉತ್ಸವವು, ವಿಶ್ವದಾದ್ಯಾಂತ ಭಕ್ತರನ್ನು ಆಕರ್ಷಿಸುತ್ತದೆ. ೨೦೨೫ರಲ್ಲಿ, ರಥಯಾತ್ರೆ ಜೂನ್ ೨೯ರಂದು ಬರುವುದಾಗಿ ನಿರೀಕ್ಷಿಸಲಾಗಿದೆ. ಜಗನ್ನಾಥನು ತನ್ನ ಭಕ್ತರಿಗೆ ದರ್ಶನ ನೀಡುತ್ತಾ. ತನ್ನ ತಾಯಿ ಮನೆಗೆ ಹೋಗುವ ಈ ಪ್ರಯಾಣವು, ಆತ್ಮದ ಮುಕ್ತಿಗೆ ಇರುವ ಪಥವನ್ನೂ ಪ್ರತಿನಿಧಿಸುತ್ತದೆ. ಕಿತ್ತಳೆ, ನಿಲಿ, ಹಸಿರು ಬಣ್ಣದ ಮೂರು ಭವ್ಯ ರಥಗಳಲ್ಲಿ ದೇವತೆಗಳು ಪುರಿಯ ಬೀದಿಗಳಲ್ಲಿ ಸಂಚರಿಸುತ್ತವೆ. ಇದು ಹಿಂದೂ ಧರ್ಮದಲ್ಲಿ ಸರ್ವಸಾಮಾನ್ಯ ಭಕ್ತಿಗೆ ಸೂಚನೆಯೂ ಹೌದು. ರಥವನ್ನು ಮನಸ್ಸಿಗೆ ಹೋಲಿಸುವ ಪರಿಪಾಠ, ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ವೇದೋಪನಿಷತ್ತುಗಳಲ್ಲಿ ಇದಕ್ಕೆ ಬೇಕಾದ ಹಲವು ನಿದರ್ಶನಗಳು ದೊರೆಯುತ್ತವೆ.
ರಥಗಳ ತಯಾರಿ ಹೇಗೆ
ಇನ್ನು ರಥಗಳ ಬಗ್ಗೆ ನೋಡುವುದಾದರೆ, ಜಗನ್ನಾಥ ಸ್ವಾಮಿಯ ರಥದ ಹೆಸರು ನಂದಿಘೋಷ (ಅಥವಾ ಚಕ್ರಧ್ವಜ). ಇದರ ಎತ್ತರ ೪೫ ಅಡಿಗಳಾದರೆ, ಚಕ್ರಗಳು ಒಟ್ಟು ೧೬. ಬಲಭದ್ರನ ರಥದ ಹೆಸರು ತಾಳಧ್ವಜ. ಇದಕ್ಕೆ ೧೪ ಚಕ್ರಗಳು ಮತ್ತು ಎತ್ತರ ೪೪ ಅಡಿ. ಸುಭದ್ರೆಯ ರಥದ ಹೆಸರು ದರ್ಪದಲನ (ಅಥವಾ ಪದ್ಮಧ್ವಜ). ಇದಕ್ಕೆ ೧೨ ಚಕ್ರಗಳು ಹಾಗೂ ೪೩ ಅಡಿ ಎತ್ತರ. ಪುರಿಯ ಜಗನ್ನಾಥರ ರಥಗಳನ್ನು ಪ್ರತಿವರ್ಷವೂ ಪಾರಂಪರಿಕ ಕಾರ್ಮಿಕರು ನಿರ್ಮಿಸುತ್ತಾರೆ. ಈ ಕಾರ್ಮಿಕರು “ಮಹಾರಣ” ಎಂಬ ಹೆಸರಿನಿಂದ ಪರಿಚಿತರು. ನಿರ್ದಿಷ್ಟವಾದ ಮರಗಳನ್ನು ಆರಿಸಿ, ಪವಿತ್ರವಾಗಿ ಕತ್ತರಿಸಿ, ಅವರಿಗೆ ನಿಯೋಜಿತ ಸ್ಥಳವಾದ ರಥಖಲಾದಲ್ಲಿ ರಥವನ್ನು ನಿರ್ಮಿಸುತ್ತಾರೆ. ರಥ ನಿರ್ಮಾಣವು ಶ್ರದ್ಧೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿದೆ. ರಥಕ್ಕೆ ಬೇಕಾದ ಮರವನ್ನು ಒಡಿಶಾ ಅರಣ್ಯ ಇಲಾಖೆಯು ಒದಗಿಸುತ್ತದೆ. ಇದಕ್ಕೆ ಹಳೆಯ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ನೇರವಾದ ಕಾಂಡ ಮತ್ತು ಯಾವುದೇ ಹಾನಿಯಿರದ ಮರಗಳನ್ನು ಬಳಸಲಾಗುತ್ತದೆ. ಮರವನ್ನು ಶುದ್ಧಗೊಳಿಸಿ ನಂತರದಲ್ಲಿ ರಥದ ವಿವಿಧ ಭಾಗಗಳನ್ನು ತಯಾರಿಸಲಾಗುತ್ತದೆ. ರಥಯಾತ್ರೆಗೆ ಸುಮಾರು ಎರಡು ತಿಂಗಳ ಮೊದಲು, ಅಕ್ಷಯತೃತೀಯ ದಿನದಂದು (ಏಪ್ರಿಲ್-ಮೇ) ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತದೆ. ಬಡಗಿಗಳಲ್ಲದೆ, ಕಮ್ಮಾರರು ಲೋಹದ ಭಾಗಗಳನ್ನು ತಯಾರಿಸಲು, ವರ್ಣಚಿತ್ರಕಾರರು ಮತ್ತು ದರ್ಜಿಗಳು, ಅಲಂಕರಿಸಲು ಮತ್ತು ಬಟ್ಟೆಯ ಮೇಲಾವರಣಗಳನ್ನು ಹೊಲಿಯಲು ತೊಡಗಿಸಿಕೊಳ್ಳುತ್ತಾರೆ. ರಥಯಾತ್ರೆಯ ಸಮಯದಲ್ಲಿ, ಪೂರ್ವದಲ್ಲಿ ಮೂಡುವ ಸೂರ್ಯಭಗವಾನನ್ನು ನಿತ್ಯವೂ ನೋಡುವ ಜಗನ್ನಾಥ ಸ್ವಾಮಿಗೆ ಇಷ್ಟೆಲ್ಲಾ ಸಂಭ್ರಮ! ಅವನನ್ನು ಒಂದುದಿನ ತಾವು ಕಟ್ಟಿದ ರಥದಲ್ಲಿ ಎಳೆದು ನೋಡುವ ಸಂಭ್ರಮ ಮಾನವರದ್ದು.
ಪುರಿ ಶಬ್ದದ ಅರ್ಥ
“ಪುರಿ” ಎಂಬ ಪದದ ಮೂಲ ಸಂಸ್ಕೃತದ “ಪುರ” ಅಥವಾ “ಪುರಿ” ಎಂಬ ಶಬ್ದವಾಗಿದೆ, ಇದಕ್ಕೆ “ನಗರ” ಅಥವಾ “ದೇವರ ವಾಸಸ್ಥಳ” ಎಂಬ ಅರ್ಥವಿದೆ. ಜಗನ್ನಾಥ ದೇವರ ವಾಸಸ್ಥಳವಿರುವ ಕಾರಣ ಇದನ್ನು ಶ್ರೀಕ್ಷೇತ್ರ, ಜಗನ್ನಾಥ ಧಾಮ, ಅಥವಾ ನೀಲಾಚಲ ಎಂಬ ನಾಮಗಳಿಂದಲೂ ಕರೆಯಲಾಗುತ್ತದೆ. ಇತಿಹಾಸದಲ್ಲಿ ಇದನ್ನು ಪುರುಷೋತ್ತಮ ಕ್ಷೇತ್ರ ಎಂದು ಉಲ್ಲೇಖಿಸಲಾಗಿದೆ. ನಂತರದಲ್ಲಿ ಅದೇ ಪದವು ಸಣ್ಣರೂಪವಾಗಿ ಪುರಿ ಎಂದು ಪ್ರಸಿದ್ಧಿಯಾಯಿತು. ಇನ್ನೊಂದು ರೀತಿಯಲ್ಲಿ ನೋಡಿದರೆ ನಮ್ಮ ದೇಹವನ್ನು ಕೂಡ ಪುರ ಎಂದು ಕರೆಯಬಹುದು. ಅದರಲ್ಲಿರುವ ಒಡೆಯ ಜಗನ್ನಾಥ. ಹೇಗೆ ನೋಡಿದರೂ ಇದು ಅಧ್ಯಾತ್ಮ ದಾರಿಯಲ್ಲಿ ಮಾನವನಿಗೆ ದಾರಿ ತೋರುವ ಕ್ಷೇತ್ರ.
ಏನಿದು ಚೇರ ಪಹಾರಾ?
ರಥಯಾತ್ರೆಯ ಸಂದರ್ಭದಲ್ಲಿ ಒಂದು ವಿಶಿಷ್ಟವಾದ ಸಂಪ್ರದಾಯ ಇಲ್ಲಿ ಪಾಲಿಸಲಾಗುತ್ತದೆ. ಪುರಿಯ ರಾಜ ಗಜಪತಿ “ಚೇರ ಪಹಾರಾ” ಎಂಬ ಆಚರಣೆಯನ್ನು ಪಾಲಿಸುತ್ತಾರೆ. ಚಿನ್ನದ ಪೊರಕೆಯಿಂದ ರಥಗಳನ್ನು ಗುಡಿಸುತ್ತಾರೆ. ಇದು ಜಗನ್ನಾಥನ ಮುಂದೆ ನಮ್ರತೆ ಮತ್ತು ಸಮಾನತೆಯನ್ನು ಸಂಕೇತಿಸುತ್ತದೆ. ಈ ಆಚರಣೆಯು ಭಗವಂತನ ದೃಷ್ಟಿಯಲ್ಲಿ, ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ. ಇದರ ಹಿಂದೆ ಕೂಡ ಒಂದು ಕತೆ ಇದೆ. ಪುರಿಯ ರಾಜ ಪುರುಷೋತ್ತಮ ದೇವ, ಸಾಲ್ವದ ರಾಣಿಯನ್ನು ಮದುವೆಯಾಗುವ ಸಂದರ್ಭದಲ್ಲಿ, ತಪ್ಪು ಮಾಹಿತಿಯಿಂದಾಗಿ ಮದುವೆ ಕೈತಪ್ಪಿ ಹೋಗುತ್ತದೆ. ಕಸ ಗುಡಿಸುವವನಿಗೆ ತನ್ನ ಮಗಳನ್ನು ಕೊಡುವುದಿಲ್ಲ ಎಂದ ಸಾಲ್ವ ರಾಜನ ಮೇಲೆ ರಾಜ ಪುರುಷೋತ್ತಮ ದೇವ ದಂಡೆತ್ತಿ ಹೋಗಿ, ಮೊದಲ ಬಾರಿಗೆ ಸೋಲೊಪ್ಪಬೇಕಾಗುತ್ತದೆ. ನಂತರ ಶ್ರೀಕೃಷ್ಣ ಬಲರಾಮರೇ ಯದ್ಧಕ್ಕೆ ಜೊತೆಯಾಗಿ ನಿಂದು, ಅವನಿಗೆ ಜಯವಾಗುತ್ತದೆ. ಆಗ ಸಾಲ್ವದ ರಾಜಕುಮಾರಿಯನ್ನು ಯಾವನೋ ಕಸ ಗುಡಿಸುವವನಿಗೆ ಮದುವೆ ಮಾಡಿಕೊಡಲು ತನ್ನ ಮಂತ್ರಿಗೆ ಹೇಳುತ್ತಾನೆ. ಆದರೆ ಮಂತ್ರಿ ಬುದ್ಧಿವಂತಿಕೆಯಿಂದ ಹಾಗೆ ಮಾಡದೆ, ಮುಂದಿನ ವರ್ಷದ ರಥಯಾತ್ರೆಯ ಸಂದರ್ಭದಲ್ಲಿ, ಕಸ ಗುಡಿಸುವ ರಾಜನಿಗೆ ಅವಳನ್ನು ಮದುವೆ ಮಾಡುತ್ತಾನೆ. ಏನೇ ಆಗಲಿ, ಇದೊಂದು ಸಾಮಾಜಿಕ ನ್ಯಾಯದ ನಿದರ್ಶನವಾಗಿ ಕಾಣುತ್ತದೆ.
ಆರ್ಥಿಕ ದಾರಿ
ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಒಡಿಶಾ ರಾಜ್ಯಕ್ಕೆ ಸುಮಾರು ₹೩೦೦ ರಿಂದ ₹೫೦೦ ಕೋಟಿ ಆದಾಯ ಉಂಟಾಗುತ್ತದೆ. ಇದರಲ್ಲಿ ಪ್ರವಾಸೋದ್ಯಮ, ಉಪಹಾರಮಂದಿರಗಳು, ಹೋಟೆಲುಗಳು, ಕೈಕುಸುರಿ ಕಲೆಗಳ ವ್ಯಾಪಾರಗಳು, ಪ್ರವಾಸ ಸೇರಿವೆ. ಇದು ಸ್ಥಳೀಯ ಜನರ ಜೀವನೋಪಾಯಕ್ಕೂ ಬೃಹತ್ ಪ್ರಭಾವ ಬೀರುತ್ತದೆ. ರಥಯಾತ್ರೆ ಒಡಿಶಾ ಆರ್ಥಿಕತೆಯ ಪಾಲಿಗೆ ಒಂದು ಅತಿ ಪ್ರಮುಖ ಕಾಲಘಟ್ಟವಾಗಿದೆ. ಒಂದು ಕೋಟಿಗೂ ಮೀರಿ ಜನರು ಇಲ್ಲಿಗೆ ಭೇಟಿಕೊಡುವ ಸಾಧ್ಯತೆಗಳಿವೆ.ಇದನ್ನು ಓದಿ –ಹಸುಗಳ ಮೇಲೆ ವಿಷ ಹಾಕಿ ಹುಲಿಗಳನ್ನು ಹತ್ಯೆ ಮಾಡಿರಬಹುದು : ಸಚಿವ ಈಶ್ವರ್ ಖಂಡ್ರೆ
ಆಧ್ಯಾತ್ಮಿಕತೆಯೊಳಗಿನ ಐಕ್ಯತೆ
ಪುರಿ ಜಗನ್ನಾಥ ರಥ ಯಾತ್ರೆ ಕೇವಲ ಒಂದು ಉತ್ಸವವಲ್ಲ – ಇದು ಆಧ್ಯಾತ್ಮಿಕ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಂಯೋಜಿಸುವ ಸಂಪ್ರದಾಯವಾಗಿದೆ. ದೇವಾಲಯದ ಭವ್ಯ ಇತಿಹಾಸದಿಂದ ಹಿಡಿದು, ಛೇರಾ ಪಹಾರದಂತಹ ಆಚರಣೆಗಳವರೆಗೆ, ಪ್ರತಿಯೊಂದು ಅಂಶವು ಭಕ್ತಿ, ನಮ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಶ್ರದ್ಧಾಭರಿತ ಕುಶಲಕರ್ಮಿಗಳಿಂದ ವಾರ್ಷಿಕ ರಥ ನಿರ್ಮಾಣ, ಕೋಟ್ಯಂತರ ಜನರ ಭಾಗವಹಿಸುವಿಕೆ ಮತ್ತು ಅದರ ಗಮನಾರ್ಹ ಆರ್ಥಿಕ ಪರಿಣಾಮವು ಈ ಆಚರಣೆಯನ್ನು ಭಾರತದ ನಾಗರಿಕತೆಯ ಶಕ್ತಿ ಮತ್ತು ಏಕತೆಯ ಸಂಕೇತವನ್ನಾಗಿ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ರಥ ಯಾತ್ರೆಯು, ಎಲ್ಲಾ ಹಂತಗಳ ಜನರನ್ನು ಒಟ್ಟಿಗೆ ಸೇರಿಸಿ, ದೈವಿಕ ಪ್ರಯಾಣಕ್ಕೆ ಅನುಗೊಳಿಸುತ್ತದೆ. ಭಕ್ತಿಯ ಮಾರ್ಗದಲ್ಲಿ, ಬ್ರಹ್ಮಾಂಡದ ಪ್ರಭು – ಜಗನ್ನಾಥನ ಮುಂದೆ ಎಲ್ಲರೂ ಸಮಾನರು ಎಂದು ನಮಗೆ ನೆನಪಿಸುತ್ತದೆ.

ಸಚಿನ್ ಮುಂಗಿಲ