ಬೆಂಗಳೂರು: ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ದರ ಏರಿಕೆ ಕುರಿತು ನಡೆದ ಚರ್ಚೆಗೆ ಕೊನೆಗೂ ತೆರೆ ಬಿದ್ದಿದ್ದು, ಶೀಘ್ರದಲ್ಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ. ಆಟೋ ಚಾಲಕರ ಬೇಡಿಕೆ, ಪ್ರಯಾಣಿಕರ ಅನುಕೂಲತೆ ಹಾಗೂ ಸರ್ಕಾರದ ನೀತಿಯ ಆಧಾರದಲ್ಲಿ ಈ ನಿರ್ಧಾರ ತಗೊಳ್ಳಲಾಗಿದೆ.
ಹಳೆಯ ದರ – ಹೊಸದರಲ್ಲಿ ಬದಲಾವಣೆ ಏನು?
- ಮೊದಲ 1.9 ಕಿ.ಮೀ.ಗೆ ದರ ₹30 ಇತ್ತು, ಈಗ ಅದನ್ನು ₹36ಕ್ಕೆ ಏರಿಸಲಾಗಿದೆ.
- ನಂತರದ ಪ್ರತಿ ಕಿಲೋಮೀಟರ್‌ಗೆ ₹15 ಬದಲು ₹18 ದರ ವಿಧಿಸಲಾಗುತ್ತದೆ.
- ಒಟ್ಟಾರೆ ಶೇ.20ರಷ್ಟು ದರ ಏರಿಕೆಯಾಗಿದೆ.
ಆಟೋ ಚಾಲಕರ ಬೇಡಿಕೆ ಮತ್ತು ಸರ್ಕಾರದ ಪ್ರತಿಕ್ರಿಯೆ:
ಆಟೋ ಚಾಲಕರ ಪ್ರಮುಖ ಸಂಘಗಳಾದ ARDU ಮತ್ತು AATDU, ಮೂಲ ದರ ₹40 ಮತ್ತು ಪ್ರತಿ ಕಿ.ಮೀ.ಗೆ ₹20 ಆಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಆಧಾರವಾಗಿ ನಿರ್ವಹಣಾ ವೆಚ್ಚ, ಇಂಧನದ ಬೆಲೆ, ವಾಹನದ ಮೇಂಟೆನನ್ಸ್ ಮೊದಲಾದ ಅಂಶಗಳನ್ನು ಅವರು ಉಲ್ಲೇಖಿಸಿದ್ದರು.
ಈ ಕುರಿತಾಗಿ ಐದು ಸದಸ್ಯರ ಸಮಿತಿ ನಡೆಸಿದ ಅಧ್ಯಯನದ ವರದಿಯ ಆಧಾರದ ಮೇಲೆ ಡಿಟಿಎ ಶಿಫಾರಸು ಸಲ್ಲಿಸಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದಕ್ಕೆ ಅನುಮೋದನೆ ನೀಡಿದ್ದಾರೆ. ನಂತರದ ಹಂತವಾಗಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ.
ಶೇ.20ರಷ್ಟು ಏರಿಕೆಯ ಹಿಂದಿರುವ ಲೆಕ್ಕಾಚಾರ:
ಆಟೋ ಚಾಲಕರ ಪೂರ್ಣ ಬೇಡಿಕೆಗೆ ಸರ್ಕಾರ ತಕ್ಷಣ ಸಮ್ಮತಿಯಾಗದ ಪ್ರಮುಖ ಕಾರಣವೆಂದರೆ, ಬೈಕ್ ಟ್ಯಾಕ್ಸಿ ಹಾಗೂ ಆಪ್ ಆಧಾರಿತ ಸೇವೆಗಳ ಪರಿಣಾಮ. ದರ ಹೆಚ್ಚಿಸಿದರೆ ಪ್ರಯಾಣಿಕರು ಇತರ ಮಾರ್ಗಗಳನ್ನು ಆರಿಸಬಹುದು ಎಂಬ ಆತಂಕ ಸರ್ಕಾರದಲ್ಲಿತ್ತು. ಆದರೆ ಜೂನ್ 16ರಿಂದ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳ ಸೇವೆ ನಿಷೇಧಿಸಿದ ಬಳಿಕ ಆಟೋ ದರ ಪರಿಷ್ಕರಣೆ ಸುಲಭವಾಯಿತು.ಇದನ್ನು ಓದಿ –20ಕ್ಕೂ ಅಧಿಕ ಕೋತಿಗಳು ವಿಷ ಸೇವಿಸಿ ಸಾವು
ಮುಂದಿನ ಹಂತ ಏನು?
ಡಿಟಿಎ ಶಿಫಾರಸುಗಳಿಗೆ ಈಗಾಗಲೇ ಸಚಿವರ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ದೃಢೀಕರಣ ದೊರಕುವ ನಿರೀಕ್ಷೆಯಿದೆ. ಸರ್ಕಾರದ ಮೂಲಗಳ ಪ್ರಕಾರ, ಈ ಹೊಸ ದರಗಳನ್ನು ಬಹುತೇಕ ತ್ವರಿತವಾಗಿ ಅಧಿಕೃತವಾಗಿ ಪ್ರಕಟಿಸಲಾಗುವುದು.