ಭಜ ಗೋವಿಂದಂ ಭಜ ಗೋವಿಂದಂ|
ಗೋವಿದಂ ಭಜ ಮೂಢಮತೇ||
ಸಂಪ್ರಾಪ್ತೇ ಸನ್ನಿಹಿತೇ ಕಾಲೇ |
ನಹಿ ನಹಿ ರಕ್ಷತಿ ಡುಕೃಂಕರಣೇ|
(ಮೂರ್ಖ ಮನುಜನೇ,ಗೋವಿಂದನನ್ನು ಭಜಿಸು. ಮರಣಕಾಲ ಸಮೀಪಿಸಿದಾಗ ವ್ಯಾಕರಣದ ನಿಯಮಗಳು ಪ್ರಯೋಜನಕ್ಕೆ ಬರುವುದಿಲ್ಲ.)ಜಗದ್ಗುರು ಶಂಕರಾಚಾರ್ಯರ ಅನೇಕ ರಚನೆಗಳಲ್ಲಿ ಇದು ಸಾಮಾನ್ಯ ಜನರಿಗೂ ತಿಳಿದಿರುವ ಅದ್ಭುತ ಅರ್ಥವನ್ನೊಳಗೊಂಡ ಶ್ಲೋಕ.
ಕ್ರಿ. ಪೂ. ಆರನೆಯ ಶತಮಾನದ ಸಮಯದಲ್ಲಿ ಅನೇಕರು ಹಿಂದೂ ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾರದೇ,ಅದೊಂದು ಕ್ಲಿಷ್ಟಕರ ಸಂಪ್ರದಾಯ ಮತ್ತು ಆಚರಣೆಗಳ ಧರ್ಮವೆನ್ನುತ್ತಾ ಅದರಿಂದ ದೂರ ಸರಿಯತೊಡಗಿದ್ದರು.ಸನಾತನ ಹಿಂದೂಧರ್ಮದ ಪುನರುಜ್ಜೀವನಕ್ಕಾಗಿ ಅವತರಿಸಿದ ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಜನರಿಗೆ ಹಿಂದೂಧರ್ಮದ ಸಾರವನ್ನು ಸರಳವಾಗಿ ತಿಳಿಸಿಕೊಡುತ್ತಾ ಶಾಸ್ತ್ರ ಗ್ರಂಥಗಳನ್ನು ಬರೆದರಲ್ಲದೇ ಬ್ರಹ್ಮಸೂತ್ರ,ಉಪನಿಷತ್, ಭಗವದ್ಗೀತೆ (ಪ್ರಸ್ಥಾನತ್ರಯ) ಗಳಿಗೆ ಭಾಷ್ಯವನ್ನು ಬರೆದರು.
ಅಹಂ ಬ್ರಹ್ಮಾಸ್ಮಿ – ಜೀವಾತ್ಮ ಪರಮಾತ್ಮಗಳು ಬೇರೆಯಲ್ಲ ಎಂಬ ಅದ್ವೈತ ತತ್ತ್ವ ಸಿದ್ಧಾಂತ ಪ್ರತಿಪಾದಿಸುತ್ತಾ, ಸರ್ವಂ ಬ್ರಹ್ಮ ಮಯಂ ಜಗತ್ – ಇಡೀ ವಿಶ್ವವು ಪರಮಾತ್ಮನಿಂದಲೇ ಆವರಿಸಿದೆ ಬೇರೆಲ್ಲವೂ ಮಿಥ್ಯ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಜನಸಾಮಾನ್ಯರಿಗೂ ಹಿಂದೂ ಧರ್ಮದ ಸಾರ ಮತ್ತು ಸರಳತೆಯನ್ನು ಮನವರಿಕೆ ಮಾಡಿಕೊಟ್ಟರು.
ಸನಾತನ ಹಿಂದೂ ಧರ್ಮದ ಪೋಷಣೆ ಮತ್ತು ಪ್ರಚಾರದ ಉದ್ದೇಶದಿಂದ ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ,ನಾಲ್ಕು ವೇದಗಳನ್ನು ಪ್ರತಿನಿಧಿಸುವಂತೆ ನಾಲ್ಕು ಮಠಗಳನ್ನು ಸ್ಥಾಪಿಸಿದರು.ಈ ನಾಲ್ಕು ಪೀಠಗಳನ್ನು ಆಮ್ನಾಯ ಪೀಠಗಳೆನ್ನಲಾಗುತ್ತದೆ.
ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಶಂಕರಾಚಾರ್ಯರಿಗೆ ನಾಲ್ವರು ಪ್ರಮುಖ ಶಿಷ್ಯರಿದ್ದರು. ಅನನ್ಯ ಭಕ್ತಿಗಾಗಿ ಪದ್ಮಪಾದರು ,ಸೇವೆಗಾಗಿ ತೋಟಕರು,ಪರಮಾತ್ಮ ಸಾಕ್ಷಾತ್ಕಾರಕ್ಕಾಗಿ ಹಸ್ತಮಲಕರು,ಮತ್ತು ಆಳವಾದ ಅಧ್ಯಯನಕ್ಕೆ ಸುರೇಶ್ವರರು,
ಈ ನಾಲ್ವರನ್ನು ಈ ನಾಲ್ಕು ಪೀಠಗಳಿಗೆ ಪೀಠಾಧಿಕಾರಿಗಳನ್ನಾಗಿ ನೇಮಿಸಿದ್ದರು.ಈ ನಾಲ್ಕು ಆಮ್ನಾಯ ಪೀಠಗಳು ತಮ್ಮದೇ ಆದ ತೀರ್ಥಗಳು, ದೇವತೆಗಳು,ಸಂಪ್ರದಾಯಗಳನ್ನು ಹೊಂದಿದ್ದು ಇಂದಿಗೂ ಪ್ರಸ್ತುತವಾಗಿದ್ದು ,ಅದ್ವೈತ ವೇದಾಂತ ಮತ್ತು ಸನಾತನ ಧರ್ಮದ ಪ್ರಚಾರದ ಕೈಂಕರ್ಯವನ್ನು ಮಾಡುತ್ತಿವೆ.
1.ಪೂರ್ವದಲ್ಲಿ ಪುರಿ ಪೀಠ – ಪೂರ್ವ ಗೋವರ್ಧನ ಪೀಠವು ಋಗ್ವೇದವನ್ನು ಪ್ರತಿನಿಧಿಸುತ್ತದೆ.
ಈ ಮಠದ ಮಹಾ ವಾಕ್ಯ – ಪ್ರಜ್ಞಾನಂ ಬ್ರಹ್ಮ ಶಂಕರರು ತಮ್ಮ ಶಿಷ್ಯರಾದ ಹಸ್ತಮಲಕಚಾರ್ಯರನ್ನು ಇಲ್ಲಿನ ಪ್ರಥಮ ಪೀಠಾಧಿಪತಿಯಾಗಿ ನೇಮಿಸಿದರು. ವಿಷ್ಣುವಿನ ಪವಿತ್ರಧಾಮವಾದ ಒಡಿಶಾದ ಜಗನ್ನಾಥ ಪುರಿಯಲ್ಲಿ
ಈ ಪೀಠವಿದೆ.ಇಲ್ಲಿನ ತೀರ್ಥ ಮಹೋದಧಿ.
2.ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮಮಠ /ಕಾಳಿಕಾ ಪೀಠ.ಈ ಪೀಠವು ಸಾಮವೇದವನ್ನು ಪ್ರತಿನಿಧಿಸುತ್ತದೆ.
ಈ ಮಠದ ಧ್ಯೇಯವಾಕ್ಯ – ತತ್ವಮಸಿ ಶಂಕರರು ಪದ್ಮಪಾದಾಚಾರ್ಯರನ್ನು ಇಲ್ಲಿನ ಪ್ರಥಮ ಪೀಠಾಧಿಪತಿಯನ್ನಾಗಿ ನೇಮಿಸಿದ್ದರು.ಗುಜರಾತಿನ ದ್ವಾರಕೆಯ ಈ ಪೀಠದ ತೀರ್ಥ ಗೋಮತಿ ನದಿ.
3.ಉತ್ತರದಲ್ಲಿ ಬದರಿ ಪೀಠ – ಉತ್ತರ ಜ್ಯೋತಿರ್ಮಠ ಈ ಪೀಠವು ಅಥರ್ವ ವೇದವನ್ನು ಪ್ರತಿನಿಧಿಸುತ್ತದೆ.ಇಲ್ಲಿಯ ಧ್ಯೇಯ ವಾಕ್ಯ – ಅಯಮಾತ್ಮಾ ಬ್ರಹ್ಮ ತೋಟಕಾಚಾರ್ಯರು ಈ ಮಠದ ಮೊದಲ ಪೀಠಾಧಿಪತಿಯಾಗಿ ಶಂಕರಾಚಾರ್ಯರಿಂದ ನೇಮಿಸಲ್ಪಟ್ಟಿದ್ದರು.
ಉತ್ತರದ ಸುಂದರ ಹಾಗೂ ಪವಿತ್ರ ತಾಣವಾದ ಉತ್ತರಾಂಚಲದ ಬದರೀಕಾಶ್ರಮದಲ್ಲಿ ಅಲಕಾನಂದ ನದಿ ತೀರ್ಥವಿದೆ.
- ದಕ್ಷಿಣದಲ್ಲಿ ಶೃಂಗೇರಿ ಪೀಠ – ಶೃಂಗೇರಿ ಮಠ ಈ ಪೀಠವು ಯಜುರ್ವೇದವನ್ನು ಪ್ರತಿನಿಧಿಸುತ್ತದೆ.ಈ ಮಠದ ಧ್ಯೇಯ ವಾಕ್ಯ – ಅಹಂ ಬ್ರಹ್ಮಾಸ್ಮಿ ಆದಿ ಶಂಕರರು ತಮ್ಮ ಶಿಷ್ಯರಲ್ಲಿ ಪ್ರಮುಖರಾದ ಸುರೇಶ್ವರಾಚಾರ್ಯರನ್ನು ಇಲ್ಲಿನ ಮಠಾಧೀಶರನ್ನಾಗಿ ನೇಮಿಸಿದ್ದರು.ಇದು ಪವಿತ್ರವಾದ ತುಂಗಾನದಿ ತೀರ್ಥ ತಟದಲ್ಲಿದೆ.
ಕರ್ನಾಟಕದ ಮಲೆನಾಡಿನ ಸುಂದರ ತಾಣ ಶೃಂಗೇರಿಯ ಶಾರದಾ ಪೀಠವು ದಕ್ಷಿಣಾಮ್ನಾಯ ಶಾರದಾ ಪೀಠವೆಂದು ಪ್ರಸಿದ್ಧಿಗಳಿಸಿ ಸಾವಿರಾರು ಭಕ್ತರನ್ನು ಆಕರ್ಷಿಸುವ ಶಾರದಾ ದೇವಿಯ ಪವಿತ್ರ ಸನ್ನಿಧಿಯೂ ಆಗಿದೆ.
ಮಹಾ ಮಹಿಮರಾದ ಆದಿ ಶಂಕರಾಚಾರ್ಯರು ಭೌತಿಕವಾಗಿ ಈ ಜಗತ್ತಿನಲ್ಲಿದ್ದ್ದು ಕೇವಲ 32 ವರ್ಷಗಳಾದರೂ, ಸಹಸ್ರಾರು ವರ್ಷಗಳ ಸಾಧನೆಯನ್ನೂ ಮೀರಿಸುವಷ್ಟು ಅಗಾಧ ಸಾಧನೆಗಳನ್ನು ಮಾಡಿದ್ದರು..
ಅಲ್ಪಾಯುಷ್ಯದಲ್ಲೇ ಅಪಾರ ಕಾರ್ಯಸಾಧನೆಗೈದು ವಿಶ್ವಮಾನ್ಯರಾದರು.ಇವರು ತೋರಿಸಿದ ಹಾದಿಯಲ್ಲಿ ನಡೆಯುತ್ತಾ ಸನಾತನ ಧರ್ಮದ ಒಳಿತುಗಳನ್ನು ತಿಳಿದು,ಪಾಲಿಸುತ್ತಾ ಬಾಳೋಣ.

ಜ್ಯೋತಿ ಪ್ರಸಾದ್
ಹವ್ಯಾಸಿ ಲೇಖಕಿ ಮತ್ತು ಕವಯಿತ್ರಿ