ಇತ್ತೀಚೆಗೆ ನನ್ನ ಮೆಸೆಂಜರ್ ನಲ್ಲಿ ಪರಿಚಿರೊಬ್ಬರು ” ವಿದ್ಯೆಗೂ ವಿವೇಕಕ್ಕೂ ತುಂಬಾ ವ್ಯತ್ಯಾಸವಿದೆ ” ಎಂದು ನಿಮ್ಮ ಯಾವುದೋ ಒಂದು ಬರಹದಲ್ಲಿ ಓದಿದ್ದೆ. ಹಾಗೆಂದರೆ ಏನು ” ಎಂದು ಕೇಳಿದ್ದರು.
ಇದಕ್ಕೆ ಸ್ಪಷ್ಟ ವ್ಯಾಖ್ಯಾನ ಕೊಡುವಷ್ಟು ಪದಜ್ಞಾನ, ಬುದ್ದಿಶಕ್ತಿ ನನ್ನಲ್ಲಿಲ್ಲವಾದರೂ, ನಮ್ಮ ದಿನನಿತ್ಯದ ಒಂದು ಘಟನೆಯನ್ನೇ ಉದಾಹರಿಸಿ ಅದಕ್ಕೆ ಅರ್ಥ ಹುಡುಕಲು ಯತ್ನಿಸಿದ್ದೆ.
ಒಬ್ಬ ಡಬಲ್ ಡಿಗ್ರೀ ಮಾಡಿರುವ ವಿದ್ಯಾವಂತನಿಗೆ ಮತ್ತು ಕೇವಲ ಮೂರನೇ ಕ್ಲಾಸು ಓದಿರುವ ಇನ್ನೊಬ್ಬನಿಗೆ ಒಂದು ಅತ್ಯಂತ ಸೂಕ್ಷ್ಮವಾದ ಮೆಸೇಜು ಅವರ ವಾಟ್ಸಪ್ ನಲ್ಲಿ ಬರುತ್ತದೆ ಎಂದಿಟ್ಟುಕೊಳ್ಳಿ. ಅದು ಎಂತಹ ಸೂಕ್ಷ್ಮ ಮೆಸೇಜು ಅಂದರೆ ಅದು ತುಂಬಾ ವೈರಲ್ ಆದಷ್ಟೂ ಎರಡು ಧರ್ಮ ಅಥವಾ ಜಾತಿಗಳ ನಡುವೆ ಬೆಂಕಿಯೇ ಹತ್ತಿ ಉರಿದು ಸಾಮಾಜಿಕ ಅಶಾಂತಿಗೆ ಕಾರಣವಾಗುವಂತಹ ಯಾರೋ ಕಿಡಿಗೇಡಿಗಳು ವೈರಲ್ ಮಾಡಿರುವ ಫ಼ೇಕ್ ಮೆಸೇಜು .
ಡಿಗ್ರೀ ಮಾಡಿರುವ ಒಳ್ಳೆಯ ಉದ್ಯೋಗದಲ್ಲೂ ಇರುವ ವಿದ್ಯಾವಂತ ಅದನ್ನು ಓದಿ ಅಥವಾ ಓದದೆಯೂ ಹಿಂದೆ ಮುಂದೆ ನೋಡದೇ ಇತರೆ ಇನ್ನೊಂದಷ್ಟು ಮಂದಿಗೆ ಬ್ಲೈಂಡಾಗಿ ಫ಼ಾರ್ವರ್ಡ್ ಮಾಡುತ್ತಾನೆ. ಅವನಿಗಿರುವ ವಿದ್ಯೆ-ಬುದ್ದಿಯನ್ನು ಬಳಸಿಕೊಂಡು ತನಗೆ ಬಂದಿರುವ ಮೆಸೇಜ್ ನ ಸತ್ಯಾಸತ್ಯತೆ , ನೈಜತೆ ಅಥವಾ ಮೂಲದ ಅಧಿಕೃತತೆಯನ್ನು ಪರಿಶೀಲಿಸಿ, ಬಂದಿರುವುದು ಫ಼ೇಕ್ ಸುದ್ದಿಯೋ ಅಲ್ಲವೋ ಎಂದು ತಿಳಿಯುವಷ್ಟು ಬುದ್ದಿಶಕ್ತಿ ಅವನಲ್ಲಿದ್ದರೂ , ಜೊತೆಗೆ ಆ ರೀತಿ ಫ಼ಾರ್ವರ್ಡ್ ಮಾಡುವುದರಿಂದ ಸಮಾಜಕ್ಕೆ ಸುಳ್ಳು ಸುದ್ದಿ ಹರಡಿ ಅಶಾಂತಿಯುಂಟಾಗಲಿದೆ ಎಂಬ ಸಣ್ಣಮಟ್ಟದ ಅರಿವಿದ್ದರೂ ಆತ ಅದನ್ನು ಶೇರ್ ಮಾಡುತ್ತಾನೆ.
ಮತ್ತೊಬ್ಬ ಮೂರನೇ ಕ್ಲಾಸು ಓದಿರುವವನಲ್ಲಿ ವಿದ್ಯೆ ಕಡಿಮೆಯಿದ್ದರೂ ಆ ಮೆಸೇಜು ನೋಡಿ ಅದರ ಸೂಕ್ಷ್ಮ ಅಂಶಗಳನ್ನು ತನ್ನ ಯೋಚನಾಶಕ್ತಿಗೆ ತಕ್ಕಂತೆ ಅರಿತು ಅದರಿಂದಾಗಬಹುದಾದ ಸಾಮಾಜಿಕ ದುಷ್ಪರಿಣಾಮಗಳನ್ನು ಕಾಮನ್ ಸೆನ್ಸ್ ನಿಂದ ಮನಗಂಡು ಅದನ್ನು ಡಿಲಿಟ್ ಮಾಡಿ ಸುಮ್ಮನಾಗುತ್ತಾನೆ.
ತನಗೆ ಬಂದಿರುವ ಸೂಕ್ಷ್ಮ ಸಂದೇಶವನ್ನು ಮುಂದಾಲೋಚನೆಯಿಲ್ಲದೇ ಫ಼ಾರ್ವರ್ಡ್ ಮಾಡಿದ ಡಬಲ್ ಡಿಗ್ರೀ ಮಾಡಿರುವವನಲ್ಲಿ ಸಾಕಷ್ಟು ವಿದ್ಯೆ ಇದೆ, ಆದರೆ ಕಿಂಚಿತ್ತೂ ವಿವೇಕವಿಲ್ಲ.
ಆದರೆ ಜಾತಿ- ಧರ್ಮಗಳ ನಡುವೆ ಗಲಭೆಯೆಬ್ಬಿಸ ಬಹುದಾದ ಅಥವಾ ಸಾಮಾಜಿಕ ಕ್ಷೋಭೆಗೆ ಕಾರಣವಾಗಬಹುದಾದ ಸಂದೇಶವನ್ನು ಮುಂಜಾಗ್ರತೆಯಿಂದ ಡಿಲಿಟ್ ಮಾಡಿದವನಲ್ಲಿ ವಿದ್ಯೆ ಇಲ್ಲ, ಆದರೆ ವಿವೇಕವೆಂಬುದು ಸಾಕಷ್ಟಿದೆ. ಇವನು ನನ್ನ ಪ್ರಕಾರ ಉನ್ನತ ವಿದ್ಯೆಯನ್ನು ಹೊಂದಿ ಉನ್ನತ ಹುದ್ದೆಯಲ್ಲಿರುವ ಬುದ್ದಿವಂತನಿಗಿಂತಲೂ ಹೆಚ್ಚು ಜ್ಞಾನಿ….ವಿವೇಕಿ .!
ಈಗ ಹೇಳಿ ? ಯಾವುದು ವಿವೇಕ…, ಯಾವುದು ವಿದ್ಯೆ ಹಾಗೂ ಸಮಾಜಕ್ಕೆ ಎಂತಹ ವಿದ್ಯೆ ಬೇಕೆಂದು ?
ಮರೆಯುವ ಮುನ್ನ
ನಾವಿಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಖ್ಯೆಯ ಫ಼ಾರ್ವರ್ಡೆಡ್ ಮೆಸೇಜು, ಎಡಿಟೆಡ್ ಮೆಸೇಜು, ಕೃತಕ ಬುದ್ದಿಮತ್ತೆ ( AI ) ಬಳಸಿ ಸೃಷ್ಟಿಸಿರುವ ಫೋಟೋ, ಇತ್ಯಾದಿಗಳನ್ನು ನೋಡುತ್ತಲೇ ಇರುತ್ತೇವೆ. ಅವುಗಳಲ್ಲಿ ಬಹುಪಾಲು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಲಕ್ಷಾಂತರ ಜನರನ್ನು ತಲುಪಿ, ಬೇಡವೆಂದರೂ ನೂರಾರು ಬಾರಿ ಫ಼ಾರ್ವರ್ಡ್ ಆಗಿ ನಮಗೆ ಬರುತ್ತವೆ. ಅದರಲ್ಲೂ ಚುನಾವಣೆ, ಯುದ್ಧ, ಹತ್ಯೆ, ಕೋಮು ಗಲಭೆ, ಜಾತಿ ಸಂಘರ್ಷ, ಕೊರೋನಾ , ಸೆಲೆಬ್ರಿಟಿಗಳ ಸುದ್ದಿ , ಧಾರ್ಮಿಕ ಅವಹೇಳನ ಹಾಗೂ ರಾಜಕೀಯ ನಾಯಕರ ಹೇಳಿಕೆಗಳನ್ನು ಉಲ್ಟಾ ಮಾಡಿ ಕೆರಳಿಸುವಂತೆ ಅರ್ಥ ಬರುವ ಫ಼ಾರ್ವರ್ಡೆಡ್ ಸಂದೇಶಗಳಲ್ಲಿ ಮುಕ್ಕಾಲು ವಾಸಿ ಎಡಿಟ್ ಮಾಡಿರುವ ಫ಼ೇಕು ಸಂದೇಶಗಳೇ ತುಂಬಿರುತ್ತವೆ. ಇತಿಹಾಸವನ್ನೇ ಬದಲಿಸುವ ಎಡಿಟೆಡ್ ಮೆಸೇಜುಗಳೂ ಸಾಕಷ್ಟು ಬರುತ್ತಲೇ ಇವೆ.
ಈ ರೀತಿ ಸಾಮಾಜಿಕ ಕ್ಷೋಭೆಯನ್ನುಂಟುಮಾಡುವ, ಸಮಾಜದಲ್ಲಿ ಜನರ ಸೂಕ್ಷ್ಮ ಭಾವನೆಗಳನ್ನು ಕೆರಳಿಸುವ, ತಪ್ಪುದಾರಿಗೆಳೆಯುವ ಫ಼ೇಕು ಸಂದೇಶಗಳನ್ನು ಸೃಷ್ಟಿಸಲೆಂದೇ ಆಯಾ ರಾಜಕೀಯ ಪಕ್ಷಗಳು, ಸಂಘಟನೆಗಳು, ಗುಂಪುಗಳು ಅಂತಹ ದೊಡ್ಡ ಕಾರ್ಖಾನೆಗಳನ್ನೇ ತೆರೆದಿಟ್ಟು ಒಂದಷ್ಟು ಫ಼ೇಕ್ ತಜ್ಞರನ್ನು ಸಿಕ್ಕಾಪಟ್ಟೆ ಹಣ ಕೊಟ್ಟು ಸಾಕುತ್ತಿರುತ್ತವೆ. ಇವರ ಕೆಲಸವೇ ಆಯಾ ಸಿದ್ದಾಂತಗಳಿಗೆ ವಿರುದ್ಧವಾದವರನ್ನು ಗುರಿಯಾಗಿಸಿ ಸುಳ್ಳು ಸುದ್ದಿಗಳನ್ನು ಸಮಾಜದಲ್ಲಿ ಹರಡಿ ಜನರಲ್ಲಿ ದ್ವೇಷ ಸೃಷ್ಟಿಸುವುದು. ಅಲ್ಲದೇ ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿ ಸಂದೇಶವನ್ನು ಲಕ್ಷಾಂತರ ಜನರು ಓದುವಂತೆ ಮಾಡುವುದು.
ನಮ್ಮ ಬಹಳಷ್ಟು ಜನರಲ್ಲಿ ಹಾಗೆ ಬಂದ ಮೆಸೇಜುಗಳನ್ನು ಫ಼್ಯಾಕ್ಟ್ ಚೆಕ್ ಮಾಡದೇ ತಮ್ಮ ಸಿದ್ದಾಂತ ಹಾಗೂ ಮನೋಭಾವಕ್ಕನುಗುಣವಾಗಿ ಫ಼ಾರ್ವರ್ಡ್ ಮಾಡುವ ವೀಕ್‌ನೆಸ್ ಚೆನ್ನಾಗಿ ಗೊತ್ತಿರುವುದರಿಂದಲೇ ಇವರೆಲ್ಲಾ ಹೀಗೆ ಸುಳ್ಳುಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಲೇ ಬಂದಿದ್ದಾರೆ.
ಈಗ ಮೊನ್ನೆ ಕಾಶ್ಮೀರದಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ಇಪ್ಪತ್ತಾರು ಅಮಾಯಕರನ್ನು ಹತ್ಯೆಗೈದ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಫ಼ಾರ್ವರ್ಡೆಡ್ ಸಂದೇಶಗಳು, ವಿಡಿಯೋಗಳು ಬರುತ್ತಿವೆಯೆಂದರೆ ಅದರ ನೈಜಾಂಶ ಅರಿಯದೇ ಲಕ್ಷಾಂತರ ಬಾರಿ ಅವು ಫ಼ಾರ್ವರ್ಡ್ ಆಗಿಬರುತ್ತಿವೆ. AI ತಂತ್ರಜ್ಞಾನ ಬಳಸಿ ಬದುಕಿರುವವರನ್ನೂ ಸಾಯಿಸಿರುವ ಫೋಟೋಗಳೂ ಬಂದಿವೆ. ಆದರೆ ಅಂತಹ ಸಂದೇಶಗಳ, ಚಿತ್ರಗಳ ವಸ್ತುಸ್ಥಿತಿ, ಒರಿಜಿನಾಲಿಟಿ ಅರಿಯದೇ ಅವುಗಳನ್ನು ಯಾವ್ಯಾವುದೋ ಕಾರಣಕ್ಕೆ ಹಂಚಿಕೊಳ್ಳುತ್ತಲೇ ನಾವೂ ಸಹಾ ಸಾಮಾಜಿಕ ಭಯೋತ್ಪಾದನೆಗೆ ಕ್ಷೋಭೆಗೆ ಕಾರಣರಾಗುತ್ತಿದ್ದೇವೆ.
ನಾಡಿನಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ನಿಜ. ಆದರೆ ವಿವೇಕವಿಲ್ಲದ ವಿದ್ಯೆ, ವಿನಯವಿಲ್ಲದ ವಿದ್ವತ್ತು, ಸಂಸ್ಕಾರವಿಲ್ಲದ ಜ್ಞಾನ, ಸಾಮಾನ್ಯಜ್ಞಾನವಿಲ್ಲದ ಅಧಿಕಾರ….ಇವೆಲ್ಲವೂ ಸಮಾಜದ ಪಾಲಿಗೆ ನಾಯಿಮೊಲೆ ಹಾಲಿದ್ದಂತೆ !!
ಪ್ರೀತಿಯಿಂದ…..

ಹಿರಿಯೂರು ಪ್ರಕಾಶ್.