ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ?
ಅಂದು ಸರಿ ಸುಮಾರು ಮಧ್ಯಾಹ್ನ 12:00 ಆಗಿತ್ತು. ಮಟಮಟ ಮಧ್ಯಾಹ್ನ ಉರಿಬಿಸಿಲು ಬೇರೆ. ರಮೇಶ್ (ಹೆಸರು ಬದಲಿಸಲಾಗಿದೆ) ಬಂದವರೇ “ಮೇಡಂ ಏನೋ ಹೇಳಬೇಕಿತ್ತು” ಎಂದರು. ಆದರೆ ಅವರ ಧ್ವನಿ ಮಾಮೂಲಿನಂತೆ ಇರಲಿಲ್ಲ.
”ಏನಾಯ್ತು ಸರ್ ಯಾಕೆ ಡಲ್ಲಾಗಿದ್ದೀರಾ?” ಎಂದು ಕೇಳಿದೆ . ಒಂದು ಕ್ಷಣ ಆತ ಸುತ್ತ ಮುತ್ತ ನೋಡಿದರು. ಪರಿಚಯದವರು ಯಾರಾದರೂ ಇದ್ದಾರೆಯೇ ಎನ್ನುವಂತೆ. “ಪರವಾಗಿಲ್ಲ ಮೇಡಂ ಇನ್ನು ಸ್ವಲ್ಪ ಹೊತ್ತು ಆಗಲಿ, ನಿಮ್ಮ ಕೆಲಸ ಮಾಡಿಕೊಳ್ಳಿ, ಆಮೇಲೆ ಹೇಳುತ್ತೇನೆ” ಎಂದರು .
ನನಗೆ ಸೂಕ್ಷ್ಮತೆ ತಿಳಿಯಿತು. ಬಹುಶಃ ಬೇರೆ ಯಾರಿಗೂ ತಿಳಿಯದಂತಹ ಯಾವುದೋ ವಿಚಾರ ಹೇಳಲು ಇರಬಹುದು ಎಂದು. ಸರಿ ನಾಲ್ಕಾರು ಜನ ಹೋದ ಮೇಲೆ ಹತ್ತಿರ ಬಂದು “ಮೇಡಂ ನನ್ನ ಅಕೌಂಟಿನಿಂದ ದಿನ 200, 300, 400 ಹೋಗುತ್ತಿದೆ” ಎಂದರು .
“ಹೌದಾ ಯಾರು ಅಕೌಂಟಿಗೆ ಹೋಗುತ್ತಿದೆ ನೋಡೋಣ. ನಿಮ್ಮ ಅಕೌಂಟ್ ನಂಬರ್ ಕೊಡಿ” ಎಂದು ಕೇಳಿ ಅವರ ಅಕೌಂಟ್ ಡೀಟೇಲ್ಸ್ ನೋಡಿದಾಗ ಹಣ ಅವರ ಮಗನ ಖಾತೆಗೆ ಹೋಗುತ್ತಿತ್ತು .
“ನಿಮ್ಮ ಮಗನ ಖಾತೆಗೆ ಹೋಗುತ್ತಿದೆಯಲ್ಲಾ” ಎಂದೆ. “ನನಗೂ ಅದೇ ಹೆಸರು ಬಂದಿದೆ ಆದರೆ ಮಗ ಹೇಳುತ್ತಿದ್ದಾನೆ ನನ್ನ ಖಾತೆಗೆ ಬಂದಿಲ್ಲಪ್ಪ ಎಂದು. ಅವನ ಫೋನ್ ಪೇ ಹಿಸ್ಟರಿ ಕೂಡ ತೋರಿಸಿದ. ಅದರಲ್ಲೂ ಕೂಡ ಅವನಿಗೆ ಯಾವುದೇ ಜಮೆ ಆಗಿಲ್ಲ” ಎಂದರು. ಈ ಹಿಂದೆ ನನ್ನ ಗೆಳತಿಯ ಮಗನೇ ಅಪ್ಪನ ಫೋನ್ ಪೇ ಇಂದ ಆಗಾಗ ಹಣ ವರ್ಗಾಯಿಸಿಕೊಂಡು ಹಿಸ್ಟರಿ ಡಿಲೀಟ್ ಮಾಡಿ ನೋಡೀಪ್ಪಾ ನನ್ನ ಖಾತೆಗೆ ಹಣ ಬಂದೇ ಇಲ್ಲ ಎಂದಿದ್ದು, ಅವನ ಖಾತೆ ಬೇರೆ ಬ್ಯಾಂಕಿನಲ್ಲಿದ್ದು ಅಲ್ಲಿ ಚೆಕ್ ಮಾಡಿದಾಗ ಹಣ ಅವನಿಗೇ ಹೋಗಿದ್ದು, ನನ್ನ ಗೆಳತಿಯ ಗಂಡ ನಮ್ಮಲ್ಲೇ ತಮ್ಮ ಫೋನ್ ಪೇ ಲಾಕ್ ಮಾಡಿಸಿ ಮೇಡಂ ಈ ವಿಷಯ ನಿಮ್ಮಲ್ಲೇ ಇರಲಿ. ಇರುವುದೊಬ್ಬನೇ ಮಗ ನಾವು ಏನಾದರು ಹೆಚ್ಚು ಕೇಳಿ, ಆತ ಹೆದರಿ ಅಥವಾ ನಾಚಿ ಆತ್ಮಹತ್ಯೆ ಮಾಡಿಕೊಂಡರೆ ಏನು ಮಾಡುವುದು ಮೆಲ್ಲನೆ ಬ್ಲಾಕ್ ಮಾಡಿಸಿ ಏನೂ ಗೊತ್ತಾಗದ ಹಾಗೆ ಇದ್ದುಬಿಡುತ್ತೇನೆ ಎಂದದ್ದು ನನ್ನ ನೆನಪಿಗೆ ಬಂದಿತು.
“ಸರ್ ಒಮ್ಮೆ ಮನೆಯಲ್ಲಿ ವಿಚಾರಿಸಿ ನೋಡಿ: ಎಂದೆ. ಇದಾಗಿ ಒಂದು ವಾರಕ್ಕೆ ಮತ್ತೆ ಆತ ಬಂದರು. “ಮೇಡಂ ಈಗಲೂ ದಿನ ನನ್ನ ಖಾತೆಯಿಂದ ನನ್ನ ಮಗನ ಹೆಸರಿಗೆ ಹೋಗುತ್ತಿದೆ. ಏನು ಮಾಡಲಿ ಮನೆಯಲ್ಲಿ ಜೋರಾಗಿ ಕೇಳಿದರೆ ಎಲ್ಲಿ ಅವನು ನೊಂದುಕೊಳ್ಳುತ್ತಾನೋ ಎನ್ನುವ ಭಯ” ಎಂದರು. “ ಸರಿ ಯುಪಿಐ ಬ್ಲಾಕ್ ಮಾಡಿಬಿಡಿ ಸರ್” ಎಂದೆ. ಆತ ಅರ್ಜಿ ಕೊಟ್ಟರು. ನಾವು ಯುಪಿಐ ಬ್ಲಾಕ್ ಮಾಡಿದ್ದೆವು.
“ಇನ್ನು ಮೇಲಿನ ಭಯ ಇಲ್ಲ. ನಿಮ್ಮ ಖಾತೆಯಿಂದ ಫೋನ್ ಪೇ ಗೂಗಲ್ ಪೇ ಯಾವುದು ಆಗುವುದಿಲ್ಲ ಆರಾಮವಾಗಿರಿ” ಎಂದೆ.
ಇದಾಗಿ ಮೂರ್ನಾಲ್ಕು ದಿನಕ್ಕೆ ಆತ ಮತ್ತೆ ಮುಖ ಸಣ್ಣದು ಮಾಡಿಕೊಂಡು ಬಂದರು. “ಏನಾಯ್ತು ಸರ್?” ಎಂದೆ. ಆ ವ್ಯಕ್ತಿಯನ್ನು ನಾನು ಕಡೆಯ ಪಕ್ಷ 20 ವರ್ಷಗಳಿಂದ ಬಲ್ಲೆ. ತುಂಬಾ ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದವರು. ಹಣದ ಬೆಲೆ ತಿಳಿದವರು ಬಡತನದಿಂದ ಬಂದ ಕುಟುಂಬದವರಾದರೂ ಈಗ ಒಳ್ಳೆಯ ವ್ಯಾಪಾರಸ್ಥರಾಗಿ ಚೆನ್ನಾಗಿ ದುಡಿದು ಹೆಂಡತಿ ಮಕ್ಕಳನ್ನು ಜೊತೆಗೆ ತಾಯಿಯನ್ನು ತುಂಬಾ ಸುಖವಾಗಿ ನೋಡಿಕೊಳ್ಳುತ್ತಾ ಇರುವವರು. 20 ವರ್ಷಗಳ ಹಿಂದೆ ಸಣ್ಣ ಮೊತ್ತದ ಆರ್.ಡಿಯನ್ನು ಮುಂದೆ ಉಪಯೋಗವಾಗುತ್ತದೆ ಮಾಡಿ ಸರ್ ಎಂದು ನಾನೇ ಬಲವಂತದಿಂದ ಮಾಡಿಸಿದ್ದೆ.
ನಾನು ಎಂಟು ವರ್ಷ ಆ ಶಾಖೆಯಲ್ಲಿ ಇರಲಿಲ್ಲ ಬೇರೆ ಬೇರೆ ಶಾಖೆಗಳನ್ನು ಸುತ್ತಿಕೊಂಡು ವಾಪಸ್ ಬಂದ ಒಂದು ವಾರದಲ್ಲಿ ಈ ವ್ಯಕ್ತಿ ಬ್ಯಾಂಕಿಗೆ ಬಂದಾಗ ನನ್ನನ್ನು ನೋಡಿ ತುಂಬಾ ಸಂತೋಷಪಟ್ಟು “ಮೇಡಂ ನೀವು ಅಂದು ಮಾಡಿಸಿದ ಆರ್.ಡಿ ದುಡ್ಡು ಬೆಳೆದು ಬೆಳೆದು ಲಕ್ಷಗಟ್ಟಲೆಯಾಗಿದೆ. ನಾನು ನನ್ನ ತಾಯಿ ಸದಾ ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾ ಇರುತ್ತೇವೆ” ಎಂದರು ನನ್ನನ್ನು ನೋಡಿದ ಕೂಡಲೇ ಹೀಗೆ ಹೇಳಿ ಹೊರಗೆ ಹೋಗಿ ಐದು ನಿಮಿಷ ನಂತರ ಬಂದು ಕೈನಲ್ಲಿ ದೊಡ್ಡ ಪ್ಯಾಕೆಟ್ ಕಡಲೆ ಮಿಠಾಯಿಯನ್ನು ತಂದುಕೊಟ್ಟರು. “ಸರ್ ಇದೇಕೆ” ಎಂದು ಕೇಳಿದಾಗ “ ಮೇಡಂ, ಎಷ್ಟೋ ವರ್ಷಗಳ ನಂತರ ಪುನಃ ನೀವು ನಮ್ಮ ಶಾಖೆಗೆ ಬಂದಿದ್ದೀರಿ. ನಿಮ್ಮನ್ನು ಸಿಹಿ ಕೊಟ್ಟು ಸ್ವಾಗತಿಸಬೇಕು ಎನಿಸಿತು ಇದನ್ನು ನಾನು ಹೋಲ್ಸೇಲ್ ವ್ಯಾಪಾರ ಮಾಡುತ್ತಿದ್ದೀನಿ. ಇದರ ಜೊತೆಗೆ ಬೇರೆ ಬೇರೆ ಅನೇಕ ವ್ಯವಹಾರಗಳಿವೆ. ನನಗೆ ಈಗ ಮುಂಚಿನಷ್ಟು ಕಷ್ಟ ಇಲ್ಲ ಮೇಡಂ. ನಿಮ್ಮೆಲ್ಲರ ಸಹಕಾರವನ್ನು ನಾನು ಸದಾ ನೆನೆಯುತ್ತಾ ಇರುತ್ತೇನೆ” ಎಂದರು. ಆ ಅಭಿಮಾನವನ್ನು ನಿರಾಕರಿಸಲಾಗದೆ ಅಂದು ಆತ ಕೊಟ್ಟ ಚಿಕ್ಕಿಯನ್ನು ಮನೆಗೆ ತಂದು ತಿಂದಿದ್ದೆ. ತೀರಾ ಗಟ್ಟಿಯೂ ಅಲ್ಲದ ಗರಿಗರಿಯಾಗಿದ್ದ ಚಿಕ್ಕಿ ತುಂಬಾ ಸೊಗಸಾಗಿತ್ತು.
ಈಗ ಅದೇ ಮನುಷ್ಯ ಇಂದು ಸಪ್ಪಗಾಗಿ ಬಂದು ನಿಂತಿರುವುದನ್ನು ನೋಡಿ ನನಗೆ ಪೆಚ್ಚು ಎನಿಸಿತು. “ಮತ್ತೆ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗುತ್ತಿದೆಯಾ?” ಎಂದು ಕೇಳಿದೆ. ಹೌದು ಎಂದರು. ಮನೆಯಲ್ಲಿ ಮಗ ಈಗಲೂ ಅವನ ಖಾತೆಗೆ ಹೋಗುತ್ತಿರುವುದನ್ನು ಒಪ್ಪುತ್ತಿಲ್ಲ ಎಂದೂ ಹೇಳಿದರು .
“ಹಾಗಿದ್ದರೆ ನಿಮ್ಮ ಮಗನ ಸಹವಾಸ ಸರಿ ಇಲ್ಲದಿರಬಹುದು ಅಥವಾ ಯಾವುದಾದರೂ ಗೇಮ್ಸ್ ಹುಚ್ಚು ಹತ್ತಿಸಿಕೊಂಡಿರಬಹುದು. ಸ್ವಲ್ಪ ಎಚ್ಚರಿಕೆಯಿಂದ ಅವನನ್ನು ಗಮನಿಸಿ ಸರ್” ಎಂದು ಮೆಲ್ಲನೆ ಹೇಳಿದೆ
ಆದರೆ ಆತ *ನನಗೆ ಗೊತ್ತು ಮೇಡಂ ಅವನಿಗೆ ಅಂತ ಸಹವಾಸಗಳಾಗಲಿ ಅಥವಾ ಗೇಮ್ ಗಳಾಗಲಿ ಅಡಿಕ್ಷನ್ ಇಲ್ಲ. ಅವನಿಗೆ ದಿನಾ ಹೊರಗೆ ತಿನ್ನುವ ಕ್ರೇಝ್. ಕೇಳಿದರೆ ನಾ ಕೊಡುವುದಿಲ್ಲವೇ? ನಾ ದುಡಿಯುತ್ತಿರುವುದೇ ಹೆಂಡತಿ, ಮಕ್ಕಳಿಗಾಗಿ. ಅವರು ಕೇಳಿದರೆ ನಾನು ಇಲ್ಲ ಎನ್ನುವುದಿಲ್ಲ. ಆದರೆ ಅದೇ ಅಭ್ಯಾಸವಾಗಬಾರದು ಎಂದು ಏನಕ್ಕೆ ದುಡ್ಡು ಬೇಕು ಎಂದು ಕೇಳಿ ಕೊಡುತ್ತೇನೆ. ಹಾಗೆ ಕೇಳಬಾರದು ಎಂದು ಅವರು ನಿರೀಕ್ಷಿಸಿದರೆ ತಂದೆ ತಾಯಿಗಳಾಗಿ ನಾವು ಮತ್ತೇನು ಮಾಡಬಹುದು? ಮಕ್ಕಳು ಅಡ್ಡದಾರಿ ಹಿಡಿಯಬಾರದು ಎಂದು ಪ್ರಶ್ನಿಸುತ್ತೇವೆ. ಹಾಗೆ ಕೇಳುತ್ತೇವೆ ಎಂದು ಮುಜುಗರ ಪಟ್ಟುಕೊಂಡು ಈ ರೀತಿ ಅಡ್ಡದಾರಿ ಹಿಡಿದರೆ ನಾವು ಏನು ಮಾಡಬೇಕು ಮೇಡಂ? ಮಕ್ಕಳನ್ನು ನಾವು ಹೇಗೆ ಬೆಳೆಸುವುದು?” ಇಷ್ಟು ಹೇಳುವಷ್ಟರಲ್ಲಿ ಆತನ ಕಣ್ಣು ತುಂಬಿ ಗಂಟಲು ಬಿಗಿದಿತ್ತು. ಆತ ಕಣ್ಣೊರೆಸಿಕೊಳ್ಳುವುದನ್ನೇ ನಾನು ನೋಡುತ್ತಾ ಕುಳಿತಿದ್ದೆ.
“ಇರಲಿ ಮೇಡಂ ಇವೆಲ್ಲ ನಮ್ಮ ಹಣೆಯ ಬರಹ. ಹೋಗಲಿ ಏನು ಮಾಡಬೇಕು ಹೇಳಿ” ಎಂದು ಕೇಳಿದರು.
“ನನಗೆ ತಿಳಿದಷ್ಟು ನಾನು ಹೇಳಿದ್ದೇನೆ ಸರ್. ಯುಪಿಐ ಬ್ಲಾಕ್ ಮಾಡಿದ್ದರೂ ಹೇಗೆ ಹೋಗುತ್ತಿದೆ ಎಂದು ನನಗೆ ಗೊತ್ತಿಲ್ಲ” ಎಂದು ಹೇಳಿ ನನ್ನ ಪಕ್ಕದಲ್ಲಿ ಇದ್ದ ಸ್ವಲ್ಪ ಚಿಕ್ಕ ವಯಸ್ಸಿನ ಆಫೀಸರ್ ಒಬ್ಬರನ್ನು ತೋರಿಸಿದೆ. ರಮೇಶ್ ಅವರು ಅವರ ಬಳಿ ಹೋಗಿ ಕೇಳಿದಾಗ ನಮ್ಮ ಆಫೀಸರ್ ಬಹುಶಃ ಆಟೋ ಡೆಬಿಟ್ ಕೊಟ್ಟಿದ್ದರೆ ಹೀಗಾಗುತ್ತದೆ ಎಂದು ಹೇಳಿ ಅವರಿಗೆ ತಿಳಿದಿದ್ದ ಜ್ಞಾನದಲ್ಲಿ ಇವರ ಮೊಬೈಲ್ ನಿಂದ ಆಟೋ ಡಿಬಿಟ್ಟನ್ನು ನಿಲ್ಲಿಸಿದರು.
ಇದಾಗಿ ಎರಡು ದಿನಗಳ ನಂತರ ರಮೇಶ್ ಮತ್ತೆ ಬ್ಯಾಂಕಿಗೆಗೆ ಬಂದರು. ಅವರಿಗೆ ನೂರೆಂಟು ವ್ಯವಹಾರ ಇರುವುದರಿಂದ ಆಗಾಗ ಬರುತ್ತಾ ಇರುತ್ತಾರೆ. ಹಿಂದೆಲ್ಲಾ ಆದರೆ ದೂರದಲ್ಲಿ ನಿಂತು ವಿಶ್ ಮಾಡುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ನಮ್ಮ ಸೆಕ್ಷನ್ಗೂ ಬಂದು ಹೀಗಾಯಿತು ಹೀಗಾಯಿತು ಎಂದು ಹೇಳುತ್ತಿದ್ದರು.
ಆದರೆ ಮೊನ್ನೆ ಬಂದಾಗ “ಮೇಡಂ ಯಾಕೋ ಮಗ ಮುಖ ಸಪ್ಪಗೆ ಮಾಡಿಕೊಂಡಿದ್ದಾನೆ. ಬಹುಶಃ ನನ್ನ ಖಾತೆಯಿಂದ ಅವನ ಖಾತೆಗೆ ಹೋಗುವುದು ನಿಂತಿದ್ದರಿಂದ ಇರಬಹುದು. ನಾನೇನು ಮಾಡಲಿ ಹೇಳಿ. ಖಾತೆಯಿಂದ ಹೋಗುವುದು ನಿಂತಾದ ಮೇಲೂ ಅವನ ಪಕ್ಕ ಕೂಡಿಸಿಕೊಂಡು ಪ್ರೀತಿಯಿಂದ ಕೇಳಿದೆ ಏನಾದರೂ ದುಡ್ಡು ಬೇಕಿತ್ತಾ ಖರ್ಚು ಇದೆಯಾ ಎಂದು ಆತ ಉತ್ತರ ಕೊಟ್ಟಿಲ್” ಎಂದರು .
“ಅವನ ಅಕ್ಕನ ಜೊತೆ ಅವನಿಗೆ ತುಂಬಾ ಒಳ್ಳೆಯ ಒಡನಾಟ ಇದೆಯಲ್ಲ ಅವಳ ಬಳಿ ಅವನು ಮನಸ್ಸು ಬಿಚ್ಚಿ ಮಾತನಾಡಬಹುದು ಕೇಳಿಸಿ ನೋಡಿ” ಎಂದೆ. ಅದಕ್ಕೆ ಆತ ಅದನ್ನೂ ಮಾಡಿಯಾಯಿತು ಮೇಡಂ. ಅಕ್ಕನ ಬಳಿಯೂ ಏನೂ ಬಿಟ್ಟುಕೊಡಲಿಲ್ಲ. ಹೆಚ್ಚು ದುಡ್ಡು ಕೊಟ್ಟು ಬಿಟ್ಟರೆ ಕೇಳದೆ ಕೊಟ್ಟುಬಿಟ್ಟರೆ ಎಲ್ಲಿ ಹಾಳಾಗಿ ಬಿಡುತ್ತಾರೋ ಎಂಬ ಭಯ; ಕೊಡದೆ ಹೋದರೆ ಮನಸ್ಸು ಚಿಕ್ಕದು ಮಾಡಿಕೊಂಡು ಬೇಸರ ಮಾಡಿಕೊಂಡು ಮೌನವಾಗಿ ಕುಳಿತರೆ ನೋಡಲು ಕಷ್ಟ; ಜೋರಾಗಿ ಹೇಳಿದರೆ ಎಲ್ಲಿ ಮನೆ ಬಿಟ್ಟು ಹೋಗುತ್ತಾರೋ ಅಥವಾ ಅಪಾಯ ತಂದುಕೊಳ್ಳುತ್ತಾರೋ ಎನ್ನುವ ಭಯ. ಬರೀ ಭಯದಲ್ಲಿ ನೋವಿನಲ್ಲಿ ಸಂಕಟದಲ್ಲಿ ಬದುಕುವುದಾದರೆ ಬದುಕು ಏನಕ್ಕೆ ಅನಿಸುತ್ತದೆ ಹಿಂದೆಲ್ಲ ಮಕ್ಕಳನ್ನು ಸಾಕುವುದು ದೊಡ್ಡ ಕಷ್ಟವೇ ಆಗಿರಲಿಲ್ಲ . ಕೂಡು ಕುಟುಂಬ ಹತ್ತಾರು ಮಕ್ಕಳು ಅದು ಹೇಗೆ ಊಟ ಮಾಡುತ್ತಿದ್ದರೋ ಹೇಗೆ ಆಟವಾಡುತ್ತಿದ್ದರೋ ಹೇಗೆ ಬೆಳೆಯುತ್ತಿದ್ದರೋ ಗೊತ್ತೇ ಆಗುತ್ತಿರಲಿಲ್ಲ. ಯಾರೋ ಒಬ್ಬರು ಕೈ ತುತ್ತು ಹಾಕುತ್ತಿದ್ದರು, ಯಾರೋ ಬಟ್ಟೆ ಹಾಕುತ್ತಿದ್ದರು, ಇನ್ಯಾರೋ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಟ್ಟಿನಲ್ಲಿ ಎಲ್ಲ ಮಕ್ಕಳು ಒಂದೇ ಎನ್ನುವ ಹಾಗೆ ಬೆಳೆಯುತ್ತಿದ್ದರು. ಆಗ ಈ ರೀತಿಯ ಸಾಕುವ ಕಷ್ಟಗಳಿರುತ್ತಿರಲಿಲ್ಲ. ಆಗೆಲ್ಲ ಬಡತನವೇ ದೊಡ್ಡ ಕಷ್ಟವಾಗಿತ್ತು. ಈಗ ನೋಡಿದರೆ ಮಕ್ಕಳನ್ನು ಬೆಳೆಸುವಲ್ಲಿ ಬಡತನಕ್ಕಿಂತ ಬಹು ದೊಡ್ಡ ದೊಡ್ಡ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ನೋಡೋಣ ಮೇಡಂ ಬರ್ತೇನೆ” ಎಂದು ಹೇಳಿ ಹೋದರು.
ಆತ ಹೋದ ಎಷ್ಟೋ ಸಮಯದ ಬಳಿಕವೂ ನನ್ನ ತಲೆಯಲ್ಲಿ ಅದೇ ಗುನುಗುನಿಸುತ್ತಿತ್ತು. ಹೌದು ನಾವು ಮಕ್ಕಳನ್ನು ಬೆಳೆಸುವಲ್ಲಿ ಎಲ್ಲಿ ಎಡವುತ್ತಿದ್ದೇವೆ ಎಂದು ಯೋಚಿಸುತ್ತಿದ್ದಾಗ ನನ್ನ ಬ್ಯಾಂಕಿನ ಒಳಗಡೆ ನಮ್ಮ ಸುತ್ತಮುತ್ತಲಿ ನಡೆದ ಅನೇಕ ಪ್ರಸಂಗಗಳು ನನ್ನ ಕಣ್ಮುಂದೆ ಬಂದವು.
ನಮ್ಮಲ್ಲೇ ಕಾಂಟ್ರ್ಯಾಕ್ಟ್ ಕೆಲಸ ಮಾಡುವ ಪಲ್ಲವಿ ತನ್ನ ಮಗಳು ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಾಗ “ಅಕ್ಕಾ ಮುಂದೇನು ಓದಿಸಬೇಕಕ್ಕಾ? ನಿಮಗೆ ಗೊತ್ತಿದ್ದರೆ ಹೇಳಿ” ಎಂದು ಹೇಳಿ ಕೂಡಲೇ “ನನ್ನ ಮಗಳು ಏನು ಓದಿದರೂ ಓದದಿದ್ದರೂ ಪರವಾಗಿಲ್ಲ. ಆದರೆ ಅವಳ ಅನ್ನವನ್ನು ಅವಳು ದುಡಿದುಕೊಳ್ಳುವಷ್ಟು ಶಕ್ತಿ ಪಡೆದುಕೊಂಡರೆ ಸಾಕು.
ಮೊನ್ನೆ ಪೇಪರ್ ನಲ್ಲಿ ನೋಡಿದ್ರಾ ಅಕ್ಕಾ? ನೀನು ಹೆಚ್ಚಿನ ಅಂಕ ತೆಗೆದುಕೊಂಡೇ ಇರಬೇಕು ಎಂದು ಸದಾ ಸದಾ ಅಪ್ಪ ಮಕ್ಕಳಿಗೆ ಹೇಳುತ್ತಾ ಇದ್ದನಂತೆ. ಆ ಮಗು ಮೊದಲನೇ ಪರೀಕ್ಷೆ ಬರೆದು ಮರುದಿನದ ಪರೀಕ್ಷೆಗೆ ಮುಂಚೆ ಪತ್ರ ಬರೆದು ಅಪ್ಪಾ ನಾನು ನಿನ್ನ ಆಸೆಯನ್ನು ಪೂರೈಸಲಾಗಲಿಲ್ಲ. ಹೆಚ್ಚಿನ ನಂಬರ್ ತೆಗೆದುಕೊಳ್ಳುತ್ತೇನೆ ಎಂಬ ನಂಬಿಕೆ ನನಗೆ ಇಲ್ಲ. ನಿಮ್ಮ ಆಸೆಯನ್ನು ಉಳಿದ ಇಬ್ಬರ ಮಕ್ಕಳಿಂದ ಪೂರೈಸಿಕೊಳ್ಳಿ. ನಾನು ಈ ಒತ್ತಡ ತಾಳಲಾರದೆ ಸಾಯುತ್ತಿದ್ದೇನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿತಂತೆ.
ಅದಕ್ಕೆ ನಾನು ಇಷ್ಟೇ ಅಂಕ ತೆಗೆದುಕೋ ಅದನ್ನೇ ಓದು ಎಂದು ಹೇಳುವುದಿಲ್ಲ.
ನಮ್ ಸಂಬಂಧಿಕರೊಬ್ಬರ ಮಗನದ್ದು ಹತ್ತನೇ ಕ್ಲಾಸ್ ಮುಗಿಯುತ್ತಾ ಇದೆ. ನಿನ್ ಮಗನ್ನ ಏನು ಓದಿಸ್ತೀ ಅಂದ್ರೆ ’ಕಾಸಿಗೊಬ್ಬರು ಕೊಸರಿಗೊಬ್ಬರು ಇಂಜಿನಿಯರ್ ಡಾಕ್ಟರ್ ಲಾಯರು ಇದ್ದಾರೆ. ಛೀ ನಾನು ನನ್ ಮಗನ್ನ ಇಂಜಿನಿಯರ್ ಲಾಯರ್ ಮಾಡಲ್ಲ. ತುಂಬಾ ದುಡ್ಡು ದುಡೀಬೇಕು, ತುಂಬಾ ಚಿನ್ನ ಮಾಡ್ಕೋಬೇಕು, ತುಂಬಾ ಆಸ್ತಿ ಮಾಡ್ಕೋಬೇಕು ಅಂಥಾದ್ದು ಏನಾದ್ರೂ ಕೆಲಸಕ್ಕೆ ಸೇರುವ ಹಾಗೆ ಓದಿಸುತ್ತೇನೆ. ಏನು ಓದಿಸಬೇಕು ಅಂತ ಹುಡುಕ್ತಾ ಇದೀನಿ’ ಅಂದ. ಮಕ್ಕಳನ್ನು ಒಳ್ಳೆಯ ಸಂಸ್ಕಾರವಂತರನ್ನಾಗಿ ಮಾಡಿದರೆ ಸಾಕಲ್ವಾ?
ಅವನ ಎರಡನೇ ಮಗು “ಅಮ್ಮ ನೀನು ನಮ್ ಮನೆ ಕೆಲಸದವಳು” ಎನ್ನುತ್ತಂತೆ. ಯಾಕಂದ್ರೆ ಆವಯ್ಯನಿಗೆ ಅತಿಯಾದ ಕ್ಲೀನ್ ಹುಚ್ಚು. ಸದಾ ಗುಡಿಸುತ್ತಾ ಇರಬೇಕು, ಸದಾ ಒರೆಸುತ್ತಾ ಇರಬೇಕು. ಎಲ್ಲೂ ಚೂರೂ ಧೂಳು ಕಾಣಬಾರದು. ಅವನ ಹೆಂಡತಿ ದಿನಕ್ಕೆ ಮೂರು ಬಾರಿಯಾದರೂ ಮನೆ ಕ್ಲೀನ್ ಮಾಡಬೇಕು. ಹಾಗೆ ಮಾಡದೇ ಹೋದರೆ ಊರೆಲ್ಲ ಕೇಳುವಂತೆ ಕಿರುಚಾಡುವುದು. ಆ ಕಿರುಚಾಟಕ್ಕೆ ಹೆದರಿ ಆಕೆ ಸದಾ ಪೊರಕೆ ಬಟ್ಟೆ ಹಿಡಿದೇ ಇದ್ದರೆ ಮಗು ಕೆಲಸದವಳು ಎನ್ನದೆ ಇನ್ನೇನು ಅನ್ನುತ್ತೆ. ಮಕ್ಕಳ ಮನಸ್ಸಿಗೆ ಏನು ಪರಿಣಾಮ ಆಗುತ್ತೆ ಅನ್ನುವ ಸಾಮಾನ್ಯ ಜ್ನಾನವೂ ಇಲ್ಲದೇ ಹೀಗೆಲ್ಲಾ ಮಾತನಾಡಿದರೆ ಆ ಮಗು ತಾಯಿಯ ಮೇಲೆ ಏನು ಗೌರವ ಇಟ್ಟುಕೊಳ್ಳುತ್ತೆ?
ನಮ್ಮ ಕುಟುಂಬದಲ್ಲಿ ಸುಮಾರು ಎಲ್ಲರೂ ಡಾಕ್ಟರ್ ಗಳೇ. ನನ್ನ ಮಗಳನ್ನೂ ಡಾಕ್ಟರ್ ಆಗು ಎನ್ನಲು ಆಗುತ್ತಾ? ನನ್ನ ಗಂಡ ನನ್ನ ಚಿಕ್ಕ ವಯಸ್ಸಿನಲ್ಲಿಯೇ ತೀರಿ ಹೋಗಿದ್ದರಿಂದ ನಾನು ಈ ಕೆಲಸಕ್ಕೆ ಬರಬೇಕಾಯಿತು. ನನ್ನ ಮಗಳು ಯಾರ ಮುಂದೂ ಕೈಚಾಚದ ಹಾಗೆ ಇಂಡಿಪೆಂಡೆಂಟ್ ಆಗಿರುವಷ್ಟು ಓದಿ ಒಂದು ಕೆಲಸ ಹಿಡಿದರೆ ಸಾಕು. ಅವಳಿಗೆ ಗಾಡಿ ಓಡಿಸುವುದನ್ನು ಕಲಿಸಿದ್ದೇನೆ. ಅವಳು ಮುಂದೆ ತಮ್ಮನನ್ನೋ ಗಂಡನನ್ನೋ ಮಗನನ್ನೋ ಎಲ್ಲದಕ್ಕೂ ಕಾಯಬಾರದು. ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿರಬೇಕು ಅಷ್ಟೇ” ಎಂದದ್ದು ನೆನಪಿಗೆ ಬಂದಿತು. ಈ ತಾಯಿ ತನ್ನ ಮಗಳನ್ನು ಎಷ್ಟು ಸ್ವಾಭಿಮಾನಿಯಾಗಿ ಬೆಳೆಸುತ್ತಿದ್ದಾಳೆ ಎಂದು ಹೆಮ್ಮೆಯೂ ಆಯಿತು.
ಜೊತೆಗೆ ಮತ್ತೊಬ್ಬ ತಾಯಿಯ ನೆನಪೂ ಬಂದಿತು. ಆಕೆಯ ಮನೆಯ ಕೆಲಸ ಮಾಡುವಾಕೆ ನಮ್ಮ ಗ್ರಾಹಕಿ. ನನಗೆ ಆ ತಾಯಿಯೂ ಗೊತ್ತು, ಆಕೆಯ ಕೆಲಸದಾಕೆಯೂ ಗೊತ್ತು. ಹಾಗಾಗಿ ಆಕೆ ಕೆಲವೊಮ್ಮೆ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿದ್ದಳು.
ಆ ತಾಯಿಗೆ ಐದು ವರ್ಷದ ಮಗ ಇದ್ದ. ಆಕೆ ತುಂಬಾ ಗೌರವರ್ಣೆ, ಅಕೆಯ ಮಗುವೂ. ಆಕೆ ಹೇಳುವ ಹಾಗೆ ಆಕೆಯ ಕುಟುಂಬದವರೆಲ್ಲರೂ ಒಳ್ಳೆಯ ಬಣ್ಣದವರಂತೆ. ಮಗು ಮಧ್ಯಾಹ್ನವೇ ಶಾಲೆಯಿಂದ ಮನೆಗೆ ಬರುತ್ತಿತ್ತು. ತಾಯಿ ಕೆಲಸ ಮುಗಿಸಿ ಮನೆಗೆ ಹೋಗುವ ತನಕ ಮಗುವನ್ನು ನೋಡಿಕೊಳ್ಳಲೆಂದು ಕೆಲಸದವಳನ್ನು ನೇಮಿಸಿದ್ದರು. ಮನೆಯಲ್ಲಿ ಸಿ.ಸಿ ಟಿ.ವಿ ಇತ್ತು. ಆ ತಾಯಿ ಕೆಲಸದವಳು ಮಗುವನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂಬುದನ್ನು ಆಫೀಸಿನಲ್ಲಿ ಕುಳಿತು ನೋಡುತ್ತಲೇ ಇರುತ್ತಿದ್ದಳಂತೆ. ಆ ಮಗು ಕೆಲಸದಾಕೆಗೆ “ನೀನು ಕಂದು ಬಣ್ಣ. ಯು ಆರ್ ಬ್ಲಾಕ್. ಕಣ್ಣಿನ ಸುತ್ತ ಕಪ್ಪಾಗಿದೆ. ನೀನು ನನಗೆ ಇಷ್ಟ ಇಲ್ಲ ಹೊರಟು ಹೋಗು ಐ ಡೋಂಟ್ ಲೈಕ್ ಯು” ಎಂದು ಹೇಳುತ್ತಿತ್ತಂತೆ. ದಿನವೂ ಯು ಆರ್ ಬ್ಲಾಕ್ ಐ ಡೋಂಟ್ ಲೈಕ್ ಯು ಎನ್ನುವುದನ್ನು ಕೇಳೀ ಕೇಳೀ ಮನನೊಂದು ಆಕೆ ಒಮ್ಮೆ ತಾಯಿಯ ಬಳಿ ಹೇಳಿದಾಗ ’ಮಗೂ ಹಾಗೆಲ್ಲಾ ಅನ್ನಬಾರದು. ಬಣ್ಣ ಮುಖ್ಯವಲ್ಲ ಗುಣ ಮುಖ್ಯ. ಆಂಟಿ ದೊಡ್ಡವರಲ್ವಾ ನಿನ್ನ ಎಷ್ಟೊಂದು ಕೇರ್ ಮಾಡುತ್ತಾರೆ, ಆಟ ಆಡಿಸುತ್ತಾರೆ, ಅನ್ನ ತಿನ್ನಿಸುತ್ತಾರೆ, ಅವರಿಗೆ ರೆಸ್ಪೆಕ್ಟ್ ಕೊಡಬೇಕು’ ಎಂದು ಮಗುವಿಗೆ ಹೇಳುತ್ತಾರೆ ಎಂದುಕೊಂಡರೆ ’ಅದು ಮಗು ಅಲ್ವಾ ಏನು ಗೊತ್ತಾಗುತ್ತೆ. ನೀವೇ ಅಡ್ಜಸ್ಟ್ ಮಾಡಿಕೊಳ್ಳಬೇಕು’ ಎಂದರಂತೆ ಆ ಮಹಾತಾಯಿ. ಅನೇಕ ಬಾರಿ ಈಕೆ ಮನೆಗೆ ಹೋಗಿ ಬಾಗಿಲು ಬಡಿಯುವಾಗ ಇವಳನ್ನು ನೋಡಿ ಮನೆಯೊಳಗಿನ ಚಿಲುಕ ಹಾಕಿಕೊಂಡು ಎಷ್ಟು ಕೂಗಿದರೂ ತೆಗೆಯುತ್ತಾ ಇರಲಿಲ್ಲವಂತೆ. ತಾಯಿ ಸಿ.ಸಿ ಟಿ.ವಿ ನೋಡಿ ಕೆಲಸದವಳು ಹೊರಗೆ ನಿಂತಿದ್ದಾಳೆ ಎಂದು ಮಗುವಿಗೆ ಫೋನ್ ಮಾಡಿ ತಿಳಿಸಿದಾಗ ಬಂದು ಬಾಗಿಲು ತೆಗೆಯುತ್ತಿತ್ತು. ಕೆಲವೊಮ್ಮೆ ಕೆಲಸದವಳು ಪಕ್ಕದ ಮನೆಗೆ ಹೋಗಿ ತಾಯಿಗೆ ಫೋನ್ ಮಾಡಿಸಲು ಹೋಗುವಷ್ಟರಲ್ಲಿ ತೆಗೆದಿರುತ್ತಿತ್ತು. ಅಷ್ಟು ಚಾಲಾಕಿ ಮಗು ಅದು. ಕೆಲವೊಮ್ಮೆ ಈಕೆ ಪಾತ್ರೆ ತೊಳೆಯುತ್ತಿರುವಾಗ ಚಿಲುಕ ತೆಗೆದು ಮಹಡಿಯ ಮೇಲೆ ಓಡಿಹೋಗುತ್ತಿತ್ತಂತೆ. ಈಕೆಯ ಗಮನಕ್ಕೆ ಬಂದ ಕೂಡಲೇ ಕೆಲಸ ಬಿಟ್ಟು ಓಡಿ ಹೋಗಿ ಕರೆತರಬೇಕಿತ್ತು. ಪ್ಯಾರಾಪೀಟ್ ವಾಲ್ ಚಿಕ್ಕದಾಗಿದ್ದರಿಂದ ಮಗುವೇನಾದರೂ ಮೇಲಿನಿಂದ ಬಿದ್ದುಬಿಟ್ಟರೆ ತನ್ನ ಗತಿ ಏನು ಎಂಬ ಭಯ ಆಕೆಗೆ. ಒಮ್ಮೆಯಂತೂ ಮಗು ನೀನು ಕೆಲಸ ಬಿಟ್ಟು ನನ್ನ ಜೊತೆ ಮಹಡಿಗೆ ಬರಬೇಕು ನನ್ನ ಜೊತೆ ಆಟ ಆಡಬೇಕು ಇಲ್ಲದಿದ್ದರೆ ಈ ಗೊಂಬೆಯನ್ನು ಒಡೆದುಬಿಟ್ಟು ಅಮ್ಮ ಬಂದ ಮೇಲೆ ನೀನೇ ಒಡೆದೆ ಎಂದು ಹೇಳುತ್ತೇನೆ ಎಂದು ಹೆದರಿಸಿತಂತೆ. ಆಕೆ ಸಿ.ಸಿ ಟಿ.ವಿ ಇದೆಯಲ್ಲಾ ಅಮ್ಮ ನೋಡಲಿ ಬಿಡು ಎಂದರೆ ಸಿ.ಸಿ ಟಿ.ವಿ ಯನ್ನೂ ಒಡೆದುಬಿಡುತ್ತೇನೆ ಎಂದಿತಂತೆ. ಇದಾದ ಮೇಲೆ ಕೆಲಸದಾಕೆ ಇದ್ಯಾಕೋ ಗ್ರಹಚಾರಕ್ಕೆ ಬೀಳುವ ಹಾಗಿದೆಯಲ್ಲಾ. ಮರ್ಯಾದೆ ಉಳಿಸಿಕೊಂಡರೆ ಸಾಕು ಎಂದು ಮೆಲ್ಲನೆ ಆ ಮನೆಯ ಕೆಲಸದಿಂದ ಜಾರಿಕೊಂಡಳಂತೆ. ಇದನ್ನೆಲ್ಲಾ ಆಕೆ ಒಮ್ಮೆ ಹಣ ಹಿಂಪಡೆಯಲು ಬಂದಾಗ ಹೇಳಿದಳು.
ಇದಾಗಿ ಎರಡೇ ದಿನಕ್ಕೆ ಇದಕ್ಕೆ ವಿರುದ್ಧವಾದ ಒಂದು ಪ್ರಸಂಗ ನಡೆಯಿತು.
ಈ ಪ್ರಸಂಗ ಬ್ಯಾಂಕಿನೊಳಗೆ ನಡೆದದ್ದು ಅಲ್ಲ ಆದರೆ ಈ ಅನೇಕ ಪ್ರಸಂಗಗಳು ನಡೆದ ಬೆನ್ನಲ್ಲೇ ನನ್ನ ಅರಿವಿಗೆ ಬಂದದ್ದರಿಂದ ಹೇಳುತ್ತಿರುವೆ.
ನನ್ನ ಗೆಳತಿಯ ಎರಡನೆಯ ಮಗಳ ಮದುವೆ. ಎರಡೂ ದಿನಗಳು ಬರಲೇಬೇಕೆಂಬ ಒತ್ತಾಯ ಅವಳದ್ದು. ಎಷ್ಟಾದರೂ ಚಿಕ್ಕಂದಿನಿಂದ ನೋಡಿ ಬೆಳೆದವರು ಆಡಿ ಬೆಳೆದವರು ಹೋಗದೇ ಇರಲಾದೀತೇ? ರಜೆ ಸಿಗುವ ಪರಿಸ್ಥಿತಿ ಇರದಿದ್ದರಿಂದ ಬ್ಯಾಂಕ್ ಮುಗಿಸಿ ಸಂಜೆ ರಿಸೆಪ್ಶನ್ ಗೆ ಹೋಗಿ ಮರುದಿನ ಬೆಳಿಗ್ಗೆ ಧಾರೆಯ ಹೊತ್ತಿಗೆ ಹೋಗಿ ಅಲ್ಲಿಂದ ಮತ್ತೆ ಬ್ಯಾಂಕಿಗೆ ಬಂದೆ.
ನನ್ನ ಗೆಳತಿಯ ಮೊದಲನೇ ಮಗಳು ಹುಟ್ಟಿದಾಗಲಿಂದ ನಾನು ನೋಡಿದ್ದೆ. ಆ ಹುಡುಗಿ ತುಂಬಾ ಮುದ್ದಾಗಿದ್ದಳು. ಗೆಳತಿಯನ್ನು ನಾನು ಆಗಾಗ ಚುಡಾಯಿಸುತ್ತಿದ್ದೆ. ನಿನ್ನ ನೋಡಲು ನಾ ಬರುತ್ತಿಲ್ಲ ನಿನ್ನ ಮಗಳನ್ನು ನೋಡಲು ನಾನು ಬರುತ್ತಾ ಇರುತ್ತೇನೆ ಎಂದು. ಆಗ ನನಗಿನ್ನು ಮದುವೆಯಾಗಿರಲಿಲ್ಲ. ನಮ್ಮ ತಾಯಿಯ ಮನೆಯ ರಸ್ತೆಯಲ್ಲೇ ಅವಳ ತಾಯಿಯ ಮನೆ ಇದ್ದುದ್ದರಿಂದ ಆಕೆ ಬಾಣಂತಿತನ ನಮ್ಮ ತಾಯಿಯ ಮನೆಯ ಹತ್ತಿರವೇ ಆಗಿತ್ತು. ಹಾಗಾಗಿ ಆಗಾಗ ನಾ ಮಗುವನ್ನು ಹೋಗಿ ನೋಡುತ್ತಿದ್ದೆ.
ಈಗ ಆಕೆ ಬೆಳೆದು ಎರಡು ಮಕ್ಕಳಾಗಿವೆ. ಈಗಲೂ ಕೂಡ ಅಷ್ಟೇ ಮುದ್ದಾಗಿದ್ದಾಳೆ. ಎರಡು ಮಕ್ಕಳ ತಾಯಿ ಎಂದು ಹೇಳುವ ಹಾಗೆಯೇ ಇಲ್ಲ. ಆ ಹುಡುಗಿಯ ಮೊದಲ ಮಗಳನ್ನು ನಾನು ಚಿಕ್ಕದಿದ್ದಾಗ ನೋಡಿದ್ದೆ. ಈಗ ಆ ಮಗುವಿಗೆ ಆಗಲೇ ಮೂರು ವರ್ಷವಾಗಿದೆ. ಮತ್ತೊಂದು ಪುಟ್ಟ ಕೂಸು ಮಡಿಲಲ್ಲಿದೆ. ದೊಡ್ಡ ಮಗುವನ್ನು ಈಗ ನೋಡಬೇಕು ಎಂದು ಆಸೆಪಟ್ಟು ಧಾರೆಯ ದಿನ ಎಲ್ಲಿ ಆ ಮಗು ಎಂದು ಕೇಳಿದೆ. ಹೊರಗೆ ಆಟವಾಡುತ್ತಿದ್ದಾಳೆ ಎಂದು ತಾಯಿ ಹೇಳಿದಳು. ನಾನು ಬ್ಯಾಂಕಿಗೆ ಹರಡುವ ಸಮಯಕ್ಕೆ ಹೊರಗೆ ಬಂದಾಗ ಆ ಮಗು ಫೋಟೋ ಶೂಟ್ನಲ್ಲಿ ಇತ್ತು.
ನಾನು ಆಕೆಯ ಬಳಿ ಮಂಡಿ ಊರಿ ಕುಳಿತೆ. ನಾನು ಮಂಡಿ ಊರಿದಾಗ ಆಕೆಯ ಮುಖ ನನ್ನ ಮುಖ ಒಂದೇ ಸಮ ಬರುತ್ತಿತ್ತು. ಅಷ್ಟು ಪುಟ್ಟ ಮಗು. “ನಾನ್ಯಾರೆಂದು ಗೊತ್ತಾ ನಿನಗೆ” ಎಂದು ಸುಮ್ಮನೆ ಕೇಳಿದೆ. ಗೊತ್ತಿರಲು ಹೇಗೆ ಸಾಧ್ಯ? ಏಕೆಂದರೆ ಅದು ನಾಲ್ಕು ಐದು ತಿಂಗಳು ಮಗುವಿದ್ದಾಗ ನಾನು ನೋಡಿದ್ದು. ಅದಾದ ಮೇಲೆ ನೋಡೇ ಇರಲಿಲ್ಲ. ನನ್ನ ನಿರೀಕ್ಷೆಯೂ ಕೂಡ ಗೊತ್ತಿಲ್ಲ ಎನ್ನುತ್ತದೆ ಎಂದೇ ಇತ್ತು. ಆದರೆ ಆ ಮಗು “ನಂಗೆ ಗೊತ್ತು” ಎಂದಿತು. ನಾನು ಆಶ್ಚರ್ಯದಿಂದ “ಯಾರು ಹೇಳು ನೋಡೋಣ” ಎಂದು ಕೇಳಿದೆ. “ಅಮ್ಮಮನ ಫ್ರೆಂಡು” ಎಂದು ಹೇಳಿತು.
ಬಹಳ ಆಶ್ಚರ್ಯದಿಂದ “ನಿನಗೆ ನಾ ಗೊತ್ತಾ? ನಿಮ್ಮ ಅಮ್ಮಮ್ಮ ಫೋಟೋ ತೋರಿಸಿ ನನ್ನನ್ನು ಪರಿಚಯ ಮಾಡಿದ್ದಾಳಾ?” ಎಂದು ಕೇಳಿದೆ. ಅದು ಇಲ್ಲ ಎಂದು ಹೇಳಿ ತಲೆ ಆಡಿಸಿತು. “ಮತ್ತೆ ನಿನಗೆ ನಾನು ಹೇಗೆ ಗೊತ್ತು” ಎಂದು ಕುತೂಹಲದಿಂದ ಮರು ಪ್ರಶ್ನೆಸಿದೆ.
ಆಗ ನಾನು ಆ ಮಗುವನ್ನು ತಬ್ಬಿ ಮಂಡಿಯೂರಿಯೇ ಕುಳಿತಿದ್ದೆ. ಬಹುಶಃ ನನ್ನ ಗೆಳತಿ ಅಥವಾ ಆಕೆಯ ಮಗಳು ಆಲ್ಬಮ್ ತೋರಿಸುವಾಗ ಇದು ನನ್ನ ಫ್ರೆಂಡು ಎಂದು ಹೇಳಿದ್ದಿರಬಹುದು ಅಥವಾ ಮೊಬೈಲ್ ನೋಡುವಾಗ ವಾಟ್ಸಪ್ ನ ಡಿಪಿ ನೋಡಿ ತೋರಿಸಿದ್ದಿರಬಹುದು. ಆದರೆ ಮಗು ಹೇಳಿದ ಉತ್ತರ ಬೇರೆಯೇ ಇತ್ತು.
“ನೀವು ನನ್ನ ಮನಸ್ಸಿನಲ್ಲಿ ಇದ್ದೀರಾ ಅದಕ್ಕೆ ನನಗೆ ಗೊತ್ತು” ಎಂದಿತು. ಆ ಪುಟ್ಟ ಮಗುವಿನ ಬಾಯಿಂದ ಆ ಮಾತು ಕೇಳಿ ನನ್ನ ಮಾತು ನಿಂತು ಹೋಯಿತು. ಹೃದಯ ತುಂಬಿ ಕಣ್ಣಿಂದ ಇಣುಕಿತು. ಮತ್ತೊಂದು ಬಾರಿ ಗಟ್ಟಿಯಾಗಿ ಮುತ್ತಿಟ್ಟು ’ಐ ಲವ್ ಯ” ಎಂದು ಹೇಳಿದೆ. ’ಮೀ ಟೂ ಲವ್ ಯು ಅಮ್ಮಮ್ಮ’ ಎಂದು ಹೇಳಿ ಅದೂ ಮುತ್ತಿಕ್ಕಿತು.
ಒಲ್ಲದ ಮನಸ್ಸಿನಿಂದ ನಾನು ಹೊರಟು ಬ್ಯಾಂಕಿಗೆ ಬಂದೆ. ಬರುವ ದಾರಿಯುದ್ದಕ್ಕೂ ಮತ್ತು ಆ ಇಡೀ ದಿನವೆಲ್ಲ ನನಗೆ ಆ ಮಗುವಿನ ಮಾತೇ ರಿಂಗಣಿಸುತ್ತಿತ್ತು.
ಎಂಥ ಸಂಸ್ಕಾರವಂತ ಮಗುವದು, ಎಷ್ಟು ಪ್ರೀತಿಯ ಮಾತನ್ನು ಅದು ಕಲಿತಿದೆ, ಅದರ ತಾಯಿ ತಂದೆ ಅಜ್ಜಿ ತಾಯಂದಿರು ಆ ಮಗುವನ್ನು ಬೆಳೆಸುತ್ತಿರುವ ರೀತಿ ತಿಳಿದು ಮನಸ್ಸು ತುಂಬಿ ಬಂತು.
ನಾವೇಕೆ ಮಕ್ಕಳ ಮನಸ್ಸಿನಲ್ಲಿ ದ್ವೇಷ ಅಸೂಯೆ ಸ್ಪರ್ಧೆಗಳನ್ನು ತುಂಬುತ್ತಿದ್ದೇವೆಯೋ ಕಾಣೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವ ಹಾಗೆ, ಇವ ನಮ್ಮವ ಇವ ನಮ್ಮವ ಎನ್ನುವ ಬಸವಣ್ಣನವರ ಮಾತಿನ ಹಾಗೆ ಎಲ್ಲರೂ ನಮ್ಮವರು ಎಂಬ ಪ್ರೀತಿಯನ್ನು ಬೆಳೆಸಿಕೊಂಡರೆ ಜಗತ್ತು ಇಷ್ಟು ಸುಂದರವಾಗಿರುತ್ತದೆ ಅಲ್ಲವೇ?
ಅತಿಯಾದ ಮುದ್ದಿನಿಂದಾಗಿ ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ನಾವು ಎಡವುತ್ತಿದ್ದೇವೆಯೇ ಸೌಕರ್ಯ ಒದಗಿಸುವ ಭರದಲ್ಲಿ ಸಂಸ್ಕಾರ ಕೊಡುವುದನ್ನು ಮರೆಯುತ್ತಿದ್ದೇವೆಯೇ? ಎಂಬ ಪ್ರಶ್ನೆ ಸಕಾಲಿಕವಾಗಿ ಕಣ್ಮುಂದೆ ನಿಂತಿದೆ.

-ಡಾ.ಶುಭಶ್ರೀಪ್ರಸಾದ್, ಮಂಡ್ಯ.