– ನಾಳೆ ಸಿಎಂ ಸಿದ್ದರಾಮಯ್ಯನವರಿಂದ ಕಾವೇರಿ ಬಾಗಿನ ಅರ್ಪಣೆ
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಜೂನ್ 30) ಕಾವೇರಿ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಈ ಮೂಲಕ ಜೂನ್‌ನಲ್ಲಿ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ಬರೆದವರು ಆಗಲಿದ್ದಾರೆ.
ಈ ವಿಶೇಷ ಸಂದರ್ಭಕ್ಕೆ ಕಾವೇರಿ ನೀರಾವರಿ ನಿಗಮದಿಂದ ಭರಪೂರ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಡ್ಯಾಂ ಸುತ್ತಲೂ ಸುಣ್ಣ ಬಣ್ಣದ ಅಲಂಕಾರ, ಡ್ಯಾಂ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳ ಅಣಿಕೆ ಮುಗಿದಿದ್ದು, ಸಂಪೂರ್ಣ ಕಾರ್ಯಕ್ರಮಕ್ಕೆ ಮಾದರಿ ಸಿದ್ಧತೆ ನಡೆಯುತ್ತಿದೆ.
ಬಾಗಿನ ಕಾರ್ಯಕ್ರಮದ ವಿವರ:
- ದಿನಾಂಕ: ಜೂನ್ 24, ಸೋಮವಾರ
- ಸಮಯ: ಬೆಳಗ್ಗೆ 11:30ರ ಅಭಿಜಿತ್ ಮುಹೂರ್ತ
- ಸ್ಥಳ: ಕೆಆರ್‌ಎಸ್ ಡ್ಯಾಂ
- ಪೂಜೆ ನೇತೃತ್ವ: ವೈದಿಕ ಭಾನುಪ್ರಕಾಶ್ ಶರ್ಮ
ಬಾಗಿನ ಅರ್ಪಣೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ತಾಯಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈಗಾಗಲೇ 40 ಜೊತೆ ಬಾಗಿನಗಳನ್ನು ತಯಾರಿಸಲಾಗಿದ್ದು, ಪ್ರತಿಯೊಂದರಲ್ಲೂ ನವಧಾನ್ಯ, ಅರಿಶಿಣ, ಕುಂಕುಮ, ಸೀರೆ, ಬಳೆ ಮೊದಲಾದ ಪೂಜೆ ಸಾಮಗ್ರಿಗಳನ್ನು ಮೊರದಲ್ಲಿ ಇಟ್ಟು ಸಿದ್ಧಪಡಿಸಲಾಗಿದೆ.
ತುರ್ತು ಕ್ರಮದಲ್ಲಿ ಈ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದು, ಅದು ಜಿಲ್ಲೆಯ ಜನತೆ ಹಾಗೂ ನೀರಾವರಿ ಕ್ಷೇತ್ರಕ್ಕೆ ಇತಿಹಾಸದ ಪುಟದಲ್ಲಿ ಹೊಸ ಅಧ್ಯಾಯವಾಗಿ ದಾಖಲಾಗಲಿದೆ.