ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ಬನ್ನೂರು ಸೇತುವೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗನಿಗೆ ಭಾರೀ ಅನಾಹುತವಾಗಿದೆ.
ಮೃತನನ್ನು ಮೈಸೂರಿನ ಬಿಎಂಶ್ರೀ ನಗರ ನಿವಾಸಿ ಶಂಕರ್ (21) ಎಂದು ಗುರುತಿಸಲಾಗಿದ್ದು, ನದಿಗೆ ಬಿದ್ದ ತಾಯಿಯನ್ನು ಪಾರ್ವತಿ (48) ಎಂದು ಗುರುತಿಸಲಾಗಿದೆ. ಮೃತರು ಮನೆ ದೇವರಿಗೆ ಪೂಜೆ ಸಲ್ಲಿಸಿ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಘಟನೆಯ ವಿವರಗಳಂತೆ, ತಾಯಿ ಹಾಗೂ ಮಗ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಶಂಕರ್ ಸ್ಥಳದಲ್ಲೇ ಮೃತಪಟ್ಟರೆ, ಹಿಂದೆ ಕುಳಿತಿದ್ದ ಪಾರ್ವತಿ ಡಿಕ್ಕಿಯ ತೀವ್ರತೆಗೆ ನದಿಗೆ ಉರುಳಿದ್ದು , ನಾಪತ್ತೆಯಾಗಿದ್ದಾರೆ.
ಪ್ರಸ್ತುತ ಪಾರ್ವತಮ್ಮನಿಗಾಗಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳಕ್ಕೆ ಬನ್ನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.