ಮೈಸೂರು: ಸಾಹಿತ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಸಮಾಜದಲ್ಲಿ ನಿರಂತರವಾದ ಬದಲಾವಣೆಯನ್ನು ತಂದುಕೊಡಲು ಸಾಧ್ಯ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ಎಸ್.ಪಿ. ಉಮಾದೇವಿ ಅಭಿಪ್ರಾಯ ಪಟ್ಟರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ವರ್ಣಿಕಾ’- ಪ್ರತಿಭಾ ಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ವೃದ್ಧಿಸಲು ಸಾಹಿತ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಓದಿನಿಂದ ಜ್ಞಾನವಂತರಾಗಬಹುದು. ವಿದ್ಯೆಯಿಂದ ಸಂಸ್ಕಾರ ಕಲಿಯಬಹುದು. ಉತ್ತಮ ಶಿಕ್ಷಣದಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಬಹುದು ಎಂದು ಆಶಿಸಿದರು.
ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಮಾಡಿದರೂ ಶ್ರದ್ದೆಯಿಂದ ಮಾಡಬೇಕು. ಕರ್ತವ್ಯಕ್ಕೆ ಚ್ಯುತಿ ತರುವ ಹಾಗೆ ಕೆಲಸ ಮಾಡಬಾರದು. ಯಾವುದೇ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಹಾಗೂ ದುಃಖಗಳಿರುತ್ತದೆ. ಸಂತೋಷದಲ್ಲಿ ಇದ್ದಾಗ ಬದುಕು ಸುಂದರವಾಗಿ ಕಾಣುತ್ತದೆ. ಅದೇ ದುಃಖದಲ್ಲಿ ಇದ್ದಾಗ ಅನುಭವ ಸಿದ್ಧಿಸುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಎಂಬುದು ಸುಪ್ತವಾಗಿ ಅಡಗಿರುತ್ತದೆ. ಆದರೆ, ಅದನ್ನು ಸರಿಯಾಗಿ ಗುರುತಿಸಿ ಪ್ರೋತ್ಸಾಹ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಬೇಕು. ಕಲೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಶಾಸೀಯವಾಗಿ ಕಲಿತರೆ ಎಲ್ಲವೂ ಎಲ್ಲರಿಗೆ ಒಲಿಯುವುದಿಲ್ಲಘಿ. ಕುರಿಗಾಹಿ ಯುವಕನಲ್ಲೂ ಅದ್ಭುತವಾಗಿ ಹಾಡುವ ಸಾಮರ್ಥ್ಯವಿರುತ್ತದೆ. ಕಲೆ ಸರ್ವವ್ಯಾಪಿಯಾದದ್ದು ಎಂದು ಬಣ್ಣಿಸಿದರು.
ನಮ್ಮ ಕಾಲದಲ್ಲಿ ಓದು ಎನ್ನುವುದು ಸೆಕೆಂಡರಿ ವಿಷಯವಾಗಿತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೆವು. ಆದರೆ ಇಂದು ಓದಿನಲ್ಲಿ ಸ್ಪರ್ಧೆ ಉಂಟಾಗಿರುವುದರಿಂದ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಬಗ್ಗೆ ಗಮನ ನೀಡುತ್ತಿಲ್ಲ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳ ಮೇಲೂ ನಿಗಾವಹಿಸಬೇಕು ಎಂದು ಕಿವಿಮಾತು ಹೇಳಿದರು.
ಜೆಎಸ್‌ಎಸ್ ಕಾಲೇಜಿನ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ ಬದುಕಿನ ಮೌಲ್ಯಗಳನ್ನು ಇವತ್ತಿಗೂ ಬಿತ್ತರಿಸುತ್ತಿರುವ ರಾಮಾಯಣ, ಮಹಾಭಾರತಗಳಂತಹ ಜನಪ್ರಿಯ ಕೃತಿಗಳೇ ಒಂದು ಹಂತದಲ್ಲಿ ಕಾಣೆಯಾಗಬಹುದು ಎನಿಸುತ್ತಿದೆ. ಅಜ್ಜ–ಅಜ್ಜಿ ಕಥೆಗಳೂ ದೂರ ಸರಿದಿವೆ. ಕಥೆ ಹೇಳುವ ಇವರೇ ಟಿ.ವಿ. ದಾಸರಾದಾಗ ಮಕ್ಕಳಾದರೂ ಏನು ಮಾಡಿಯಾರು, ಅಲ್ಲವೇ ಎಂದರು. ಇದನ್ನು ಓದಿ –ಧರ್ಮ ಒಡೆಯಲು ಹೊರಟಿರುವ ಸಿದ್ದು: ಪ್ರತಾಪ ಸಿಂಹ
ಸಂತ ಶಿಶುನಾಳ ಷರೀಫ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಮಲ್ಲಣ, ನಟ ಹಾಗೂ ನಿರ್ದೇಶಕ ವಿಕ್ಕಿ ವರುಣ್, ಜೆಎಸ್‌ಎಸ್ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಪ್ರಾಂಶುಪಾಲ ರೇಚಣ್ಣ ಸೇರಿದಂತೆ ಇತರರು ಹಾಜರಿದ್ದರು.