- ಏ.22-ಮೇ 2 ರ ಸಂಪುಟ ಸಭೆಯಲ್ಲಿ ತಾರ್ಕಿಕ ಆಂತ್ಯ ?
ಮೈಸೂರು:ಒಕ್ಕಲಿಗ – ಲಿಂಗಾಯತ ಸಚಿವರ ಒತ್ತಡದ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾಸ್ಪದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿದ್ದ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.
ಈ ಕುರಿತು ಏಪ್ರಿಲ್ 22 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತು ಮೇ 2 ರಂದು ಬೆಂಗಳೂರುದಲ್ಲಿ ನಡೆಯುವ ಸಚಿವ ಸಂಪುಟ ಸಭೆಗಳಲ್ಲಿ ಇನ್ನೂ ಎರಡು ಸುತ್ತಿನ ಚರ್ಚೆ ನಡೆಸಿ ಜಾತಿ ಜನಗಣಿತಿಗೆ ತಾರ್ಕಿಕ ಅಂತ್ಯ ಹಾಡಲು ತೀರ್ಮಾನಿಸಿದ್ದಾರೆ.
ಕಳೆದ ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಚಿವರೊಬ್ಬರು ವರ್ತಮಾನಕ್ಕೆ ಮಾಹಿತಿ ನೀಡಿ , ಜಾತಿ ಜನಗಣತಿ ವರದಿಯ ಕುರಿತು ಸಂಪುಟದಲ್ಲಿ ಗಂಭೀರವಾದ ಭಿನ್ನಾಭಿಪ್ರಾಯವಿತ್ತು ಎಂದು ತಿಳಿಸಿದ್ದಾರೆ.
ಲಿಂಗಾಯತ/ವೀರಶೈವ ಮತ್ತು ಒಕ್ಕಲಿಗ ಸಮುದಾಯದ ಸಚಿವರು ಈ ವರದಿಯನ್ನು “ವೈಜ್ಞಾನಿಕವಲ್ಲ” ಎಂದು ಗಾಢವಾಗಿ ವಿರೋಧಿಸಿದ್ದಾರೆ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಂ ಸಮುದಾಯದ ಸಚಿವರು ತಕ್ಷಣವೇ ವರದಿಯನ್ನು ಯಾವುದೇ ಬದಲಾವಣೆಯಿಲ್ಲದೇ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಚರ್ಚೆಯ ವೇಳೆ ಗರಿಗೆದರಿದ ವಾಗ್ಯುದ್ಧ ಗಳು ನಡೆದಿದರೂ ಮುಖ್ಯಮಂತ್ರಿ ಮಾತ್ರ ಈ ವಿಚಾರದಲ್ಲಿ ತುಟಿಬಿಚ್ಚಿ ಅಭಿಪ್ರಾಯ ಹೇಳದೇ ಎಲ್ಲಾ ಸಚಿವರಿಗೂ ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಸೂಚಿಸಿರುವುದು ರಾಜಕೀಯದ ಜಾಣ ನಡೆಯನ್ನು ಎತ್ತಿ ತೋರಿಸುತ್ತದೆ
ಆ ಸಚಿವರ ಹೇಳಿಕೆಯಂತೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಚಿವರು ವರದಿಯಲ್ಲಿರುವ ಜನಸಂಖ್ಯಾ ಅಂಕಿ ಅಂಶಗಳು ಸಂಪೂರ್ಣ ತಪ್ಪಾಗಿದೆ ಎಂದು ಹೇಳಿ ಹೊಸ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ವರದಿ 10 ವರ್ಷಗಳ ಹಿಂದಿನದ್ದು .
ಈ ಅವಧಿಯಲ್ಲಿ ದೊಡ್ಡ ಮಟ್ಟದ ಜನಸಾಂಖ್ಯಿಕ ಬದಲಾವಣೆಗಳಾಗಿವೆ ಎಂಬುದನ್ನು ಅವರುಗಳು ಸೂಚಿಸಿದ್ದಾರೆ. ಇಂತಹ “ಅವೈಜ್ಞಾನಿಕ” ವರದಿಯನ್ನು ಜಾರಿಗೆ ತರಲು ಪ್ರಯತ್ನಿಸುವುದು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಗಳಲ್ಲಿ ಹಾನಿಕಾರಕವಾಗಬಹುದು ಎಂಬ ಎಚ್ಚರಿಕೆಯನ್ನು ಅವರುಗಳು ನೀಡಿ,
ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ವಿರೋಧ ಕಟ್ಟಿ ಕೊಂಡರೆ ಪಕ್ಷಕ್ಕೆ ತೀವ್ರ ಪರಿಣಾಮ ಉಂಟುಮಾಡಬಹುದು” ಎಂಬುದಾಗಿ ಅವರು ಹೇಳಿದರು.
ಕೆಲವರು ಎಲ್ಲಾ ಪ್ರಮುಖ ಸಮುದಾಯಗಳ ಪ್ರತಿನಿಧಿಗಳೊಂದಿಗೆ ತಜ್ಞ ಸಮಿತಿಯನ್ನು ರಚಿಸಿ ವರದಿಯನ್ನು ಪರಿಶೀಲಿಸುವುದಾಗಿ ಸಲಹೆ ನೀಡಿದರೂ, ಒಕ್ಕಲಿಗ ಮತ್ತು ಲಿಂಗಾಯತ ಸಚಿವರು ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಎರಡು ಗಂಟೆಗಳ ಚರ್ಚೆಯ ನಂತರ, ಈ ಕುರಿತ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಏಪ್ರಿಲ್ 22 ಮತ್ತು ಮೇ 2ರಂದು ನಡೆಯಲಿರುವ ವಿಶೇಷ ಸಂಪುಟ ಸಭೆಗಳಲ್ಲಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ವರದಿಯನ್ನು ಯಾವುದೇ ಬದಲಾವಣೆ ಇಲ್ಲದೇ ಅನುಮೋದಿಸಲು ಮುಖ್ಯಮಂತ್ರಿಗಳು ನಿರೀಕ್ಷೆ ಇಟ್ಟಿದ್ದರೂ, ಸಚಿವರುಗಳಿಂದ ಎದುರಾದ ತೀವ್ರ ವಿರೋಧದಿಂದಾಗಿ ಜಾತಿ ಜನಗಣತಿ ಜಾರಿ ಅಸಾಧ್ಯವಾಯಿತು. ಇದನ್ನು ಓದಿ –ಸಿದ್ದರಾಮಯ್ಯ ಕಾಲದಲ್ಲಿ ಬ್ರಾಹ್ಮಣರು ಸಾಫ್ಟ್ ಟಾರ್ಗೆಟ್: ಪ್ರತಾಪ್ ಸಿಂಹ
ಅಂತಿಮವಾಗಿ ಈ ವರದಿ ಜಾರಿಯಾದರೂ ಕಷ್ಟ. ಜಾರಿ ಮಾಡದಿದ್ದರೂ ಕಷ್ಟ. ಒಟ್ಟಾರೆ ಮುಖ್ಯಮಂತ್ರಿಗಳಿಗೆ ಬಿಸಿ ತುಪ್ಪವಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮಾಡುವ ಹಲವಾರು ತಂತ್ರಗಳು ಯಾವ ರೀತಿ ಫಲಿಸುತ್ತವೆ ಎನ್ನುವುದನ್ನು ಕಾದು ನೋಡಬೇಕು.