ಹಿಂದು ವರ್ಷದ ಆಷಾಢದಿಂದ ಹಿಡಿದು ಕಾರ್ತಿಕವಾಸದ 4 ತಿಂಗಳನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಈ ಸಮಯವನ್ನು ಪರಮಾತ್ಮನ ಯೋಗನಿದ್ರೆಯ ಸಮಯವೆಂದು ಆಗ ಅವನ ಕುರಿತು ಮಾಡಿದ ಪೂಜೆ ಮತ್ತು ಆರಾಧನೆ ಫಲಪ್ರದವೆಂದು ನಮ್ಮ ನಂಬಿಕೆಯಾಗಿದೆ. ಆಷಾಢ ಶುದ್ಧ ಏಕಾದಶಿಯದಿನದಂದು ಚಾತುರ್ಮಾಸದ ಆರಂಭವಾದರೆ ಕಾರ್ತೀಕ ಶುದ್ಧ ದ್ವಾದಶಿಯಂದು ಉತ್ಥಾನ ದ್ವಾದಶಿಯ ದಿನ ಮುಗಿಯುತ್ತದೆ.
ಚಾತುರ್ಮಾಸವು ಮಳೆಗಾಲದ ಸಮಯವಾಗಿದೆ. ಆ ಸಮಯದಲ್ಲಿ ಪ್ರಕೃತಿಯ ಅನೇಕ ಬದಲಾವಣೆ ಮತ್ತು ವೈಪರಿತ್ಯಗಳನ್ನು ನೋಡುತ್ತೇವೆ. ನಮ್ಮ ಪೂರ್ವಜರು ವರ್ಷದ ಈ ಸಮಯದಲ್ಲಿಯೇ ಚಾತುರ್ಮಾಸವನ್ನು ನಿರ್ಥರಿಸಿದ ಕಾರಣ ವಾತಾವರಣಕ್ಕೆ ಅನುಕೂಲವಾಗಿ ಬದುಕುವುದೇ ಆಗಿರಬಹುದು. ಚಾತುರ್ಮಾಸ ನಮ್ಮ ಪೂರ್ವಜರು ಅನೇಕ ಯುಗಗಳಿಂದ ನಡೆಸಿಕೊಂಡು ಬಂದಿರುವ ವ್ರತವಾಗಿದೆ. ವರಾಹ ಪುರಾಣದಲ್ಲಿ ಚಾತುರ್ಮಾಸದ ಸವಿವರ ವರ್ಣನೆ ಬರುತ್ತದೆ ಅಲ್ಲದೇ ಋಗ್ವೇದದ 10-99-6 ಋಕ್‌ಗಳಲ್ಲಿ, ತೈತಿರೀಯ ಉಪನಿಷತ್ತಿನ ; 6-1-5 ತೈತ್ತಿನಲ್ಲಿ, ಬ್ರಾಹ್ಮಣದ 1-1-13 ನೇ ತೈತ್ತಿನಲ್ಲಿ, ಅರಣ್ಯಕದ 10ದಲ್ಲಿ ವೇದದ ಅನೇಕೆ ಕಡೆಗಳಲ್ಲಿ ಉಲ್ಲೇಖವಿದೆ. ಇದಲ್ಲದೇ ಹರಿವಂಶ ಪುರಾಣ, ವಿಷ್ಣು ಪುರಾಣ, ಭಾಗವತ ಪುರಾಣಗಳಲ್ಲಿಯೂ ಚಾತುರ್ಮಾಸದ ಮಹತ್ವ ಮತ್ತು ಮಹಾತ್ಮೆಯನ್ನು ತಿಳಿಸುತ್ತಾರೆ.
ವರಾಹ ಪುರಾಣದಲ್ಲಿ 27 ಅಧ್ಯಾಯಗಳಲ್ಲಿ 2663 ಶ್ಲೋಕಗಳ ಮೂಲಕ ಚಾತುರ್ಮಾಸ ಮಹಾತ್ಮೆಯನ್ನು ಹೇಳುತ್ತಾರೆ. ವರಾಹ ದೇವರ ಬಳಿ ಧರಿಣಿ ದೇವಿಯು ಪ್ರಶ್ನೆಯ ಮೂಲಕ ಕೇಳಿ ನಮಗೆ ಚಾತುರ್ಮಾಸ ಎಂದರೇನು ಅದರ ಮಹಾತ್ಮೆ ಏನು ಹೇಗೆ ಆಚರಿಸಬೇಕೆಂದು ತಿಳಿಸುತ್ತಾಳೆ. ಆಷಾಢ ಶುದ್ಧ ಏಕಾದಶಿಯಾದ ಪರಿವರ್ತಿನೀ ಏಕಾದಶಿಯಂದು ಚಾತುರ್ಮಾಸದ ಸಮಯವು ಆರಂಭವಾಗುತತದೆ. ಅಂದಿನ ದಿನದಂದು ಚಾತುರ್ಮಾಸದ ಸಂಕಲ್ಪವನ್ನು ಮಾಡುತ್ತಾರೆ. ಸನ್ಯಾಸಿಗಳದ್ದು ಮತ್ತು ಲೌಕಿಕರ ಚಾತುರ್ಮಾಸ ಆಚರಣೆಯ ಪದ್ಧತಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ಸನ್ಯಾಸಿಗಳು ಲೌಕಿಕರು ಇಬ್ಬರೂ ಈ ವ್ರತವನ್ನು ಆಚರಿಸಲೇ ಬೇಕು.
ಚಾತುರ್ಮಾಸದಲ್ಲಿ ಅನೇಕ ವ್ರತ ಹಾಗೂ ನಿಯಮಗಳನ್ನು ಆಚರಿಸಲಾಗುತ್ತದೆ. ಊಟ ಮತ್ತು ಆಚರಣೆ ಎರಡರಲ್ಲೂ ವ್ರತದ ಮಹತ್ವವಿದೆ. ವೈಜ್ಞಾನಿಕವಾಗಿ ನೋಡುವುದಾದರೆ ಮೊದಲ ತಿಂಗಳು ಶಾಕವ್ರತ ಅಂದರೆ ಯಾವುದೇ ತರಕಾರಿ ಗಳನ್ನು ಸೇವಿಸುವ ಹಾಗಿಲ್ಲ. ಮಳೆಗಾಲದ ಸಮಯದಲ್ಲಿ ತರಕಾರಿಗಳಲ್ಲಿ ಹುಳಗಳು ಮತ್ತು ಅನಾರೋಗ್ಯಕರ ಗುಣ ಇರುವುದರಿಂಧ ಆ ಸಮಯದಲ್ಲಿ ಬೇಳೆಕಾಳಗಳನ್ನು ಮಾತ್ರ ಸೇವಿಸಬೇಕು. ಮನುಷ್ಯನಿಗೆ ಯಾವುದೇ ನಿಬಂಧ ಅಥವಾ ಷರತ್ತು ಇಲ್ಲದೇ ಯಾವ ಕೆಲಸವನ್ನು ಮಾಡುವ ಸ್ವಭಾವ ಇರುವುದಿಲ್ಲ ಆದ್ದರಿಂದ ನಮ್ಮ ಪೂರ್ವಜರು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇವರ ಪ್ರೀತಿಗಾಗಿ ಈ ಎಲ್ಲ ನಿಯಮಗಳನ್ನು ಮಾಡಬೇಕು ಎಂಧಾಗ ಸಂತಸದಿಂದ ಒಪ್ಪಿಕೊಳ್ಳುತ್ತಾರೆ, ಹೀಗಾಗಿ ಈ ವ್ರತಗಳು ಬಂದಿರಬಹುದು. ಎರಡನೇ ವ್ರತದಲ್ಲಿ ದಧಿ ಅಂದರೆ ಮೊಸರನ್ನು ತ್ಯಾಗ ಮಾಡಬೇಕು ಒಂದು ತಿಂಗಳುಗಳ ಕಾಲ ಮೊದಲಿಗೆ ತರಕಾರಿಗಳನ್ನು ತ್ಯಾಗ ಮಾಡಿದಂತೆ ಎರಡನೇ ತಿಂಗಳಿನಲ್ಲಿ ಮೊಸರನ್ನು ತಿನ್ನಬಾರದು. ಇನ್ನು ಮೂರನೇ ವ್ರತದಲ್ಲಿ ಕ್ಷೀರವನ್ನು ಅಂದರೆ ಹಾಲನ್ನು ಸೇವಿಸಬಾರದು. ನಾಲ್ಕನೇ ವ್ರತದಲ್ಲಿ ದ್ವಿದಳ ಧಾನ್ಯದ ಸೇವನೆಯನ್ನು ಮಾಡಬಾರದು.
ಚಾತುರ್ಮಾಸ ಸಮಯದಲ್ಲಿ ಅನೇಕ ಹಬ್ಬ ಹರಿದಿನಗಳು ಪೂಜೆ ವ್ರತಗಳು ಬರುತ್ತವೆ. ನಾಗರಪಂಚಮಿ, ಮಂಗಳ ಗೌರಿ, ವರಮಹಾಲಕ್ಷ್ಮಿ, ಶ್ರಾವಣ ಮಾಸದ ಗೌರಿ, ಕೃಷ್ಣಾಷ್ಟಮಿ, ನೂಲ ಹುಣ್ಣಿಮೆ, ಸಿರಿಯಾಳ ಷಷ್ಠಿ, ಗಣೇಶ ಚತುರ್ಥಿ, ಋಷಿ ಪಂಚಮಿ, ಜೇಷ್ಠಗೌರಿ ಪೂಜೆ, ಅನಂತ ಚತುರ್ದಶಿ, ನವರಾತ್ರಿ, ದೀಪವಾಳಿ ಹೀಗೆ ಅನೇಕ ಹಬ್ಬ ಹರಿದಿನಗಳು ಆಯಾ ಮಾಸದ ವಿಶೇಷತೆಗಳ ಪೂಜೆಯನ್ನು ಚಾತುರ್ಮಾಸದಲ್ಲಿ ಶ್ರಾದ್ಧ ಭಕ್ತಿಗಳಿಂದ ಮಾಡುತ್ತಾರೆ. ಇವುಗಳ ಜೊತೆಗೆ ಬೇರೆ ಬೇರೆ ವ್ರತ ನಿಯಮಗಳು ದಾನ ಧರ್ಮಗಳನ್ನು ಕೂಡ ಮಾಡುತ್ತಾರೆ.
ಚಾತುರ್ಮಾಸಲ್ಲಿ ಅನೇಕ ವ್ರತ ನೇಮಗಳು ಮಹತ್ವವನ್ನು ಪಡೆಯುತ್ತವೆ. ಅವುಗಳಲ್ಲಿ ಷಷ್ಟಕಾಲವ್ರತ, ಪರಾಕವ್ರತ, ಧಾರಣ-ಪಾರಣ ವ್ರತ, ಲಕ್ಷ ಬತ್ತಿ, ಲಕ್ಷ ಗೋಪದ್ಮ, ಲಕ್ಷ ನಮಸ್ಕಾರ, ಲಕ್ಷ ಪ್ರದಕ್ಷಿಣೆ, ಚಾತುರ್ಮಾಸ ರಂಗೋಲಿ, ತುಳಸಿ ಪೂಜೆ ಗೋ ಪೂಜೆ, ಗೋದಾನ ಹೀಗೆ ಅನೇಕ ವ್ರತಗಳನ್ನು ಮಾಡುವ ಸಂಕಲ್ಪವನ್ನು ಮಾಡುತ್ತಾರೆ. ನಮ್ಮ ನಿತ್ಯ ನೈಮಿತ್ಯಿಕ ಕರ್ಮಗಳನ್ನು ಬಿಟ್ಟು ವಿಶೇಷವಾದ ಪೂಜೆ ಮತ್ತು ಅರ್ಚನೆಗಳಿಂದ ಭಗವಂತನನ್ನು ಒಲಿಸಿಕೊಳ್ಳಲು ಚಾತುರ್ಮಾಸ ಬಹು ಪ್ರಶಸ್ತವಾದ ಸಮಯವಾಗಿರುತ್ತದೆ.
ಧಾರಣ ಪಾರಣ :
ಧಾರಣ ಪಾರಣ ವ್ರತವೆಂದರೆ ಒಂದು ದಿನ ಊಟ ಒಂದು ದಿನ ಉಪವಾಸ. ವ್ರತವನ್ನು ಮಹಿಳೆಯರು ಪುರುಷರು ಎಲ್ಲರೂ ಮಾಡುತ್ತಾರೆ. ಚಾತುರ್ಮಾಸದ ನಾಲ್ಕು ತಿಂಗಳಲ್ಲಿ ಒಂದು ದಿನ ಊಟ ಒಂದು ದಿನ ಉಪವಾಸ ಮಾಡುವ ಸಂಕಲ್ಪ ಮಾಡಿ ಈ ವ್ರತವನ್ನು ಮಾಡುತ್ತಾರೆ. ಅದರಂತೆ ಏಕಭುಕ್ತ, ಊಟದ ಸಮಯದಲ್ಲಿ ಮೌನ ವ್ರತ ನೆಲದ ಮೇಲೆ ಊಟ ಹೀಗೆ ಅನೇಕ ವ್ರತಗಳಿವೆ. ಏಕ ಭುಕ್ತದಲ್ಲಿ ಪ್ರತಿ ದಿನವೂ ಒಪ್ಪತ್ತು ಮಾತ್ರ ಊಟದ ನಿಯಮ, ಊಟ ಮಾಡುವಾಗ ಮಾತನಾಡದೇ ಇರುವುದು. ಒಂದು ಬಾರಿ ಹಾಕಿಸಿಕೊಂಡ ಭೋಜನದಲ್ಲಿಯೇ ಊಟ ಮುಗಿಸುವುದು, ನೆಲದ ಮೇಲೆ ಊಟ ಮಾಡುವುದು ಇವೆಲ್ಲವೂ ಚಾತುರ್ಮಾಸದಲ್ಲಿ ಮಾಡುವ ವ್ರತಗಳಾಗಿವೆ. ಹೀಗೆ ಮಾಡಿದ ವ್ರತಕ್ಕೆ ಹೋಮವನ್ನು ಮಾಡಿ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವ್ನನು ಮಾಡುವುದರಿಂದ ಬಂಧುಗಳನ್ನು ಕೊಂದ ಪಾಪನಿವಾರಣೆಯನ್ನು ಮಾಡುತ್ತದೆ ಎಂದು ಹೇಳಿ ಶ್ರೀ ರಾಮಚಂಧ್ರನು ಸುಗ್ರೀವನಿಗೆ ಹೇಳಿ ಮಾಡಿದಿದ್ದನೆಂದು ಈ ವ್ರತದ ಆಚರಣೆಯ ಮಹತ್ವದಲ್ಲಿ ತಿಳಿಸುತ್ತಾರೆ.
ಲಕ್ಷ ಪ್ರದಕ್ಷಿ ಮತ್ತು ಲಕ್ಷ ನಮಸ್ಕಾರ ವ್ರತ :
ಭಗವಂತನಿಗೆ ದೇವಸ್ಥಾನದಲ್ಲಿ ಆಗಲಿ ಮನೆಯಲ್ಲಿ ಆಗಲಿ ಲಕ್ಷ ಪ್ರದಕ್ಷಿಣೆ ಮತ್ತು ಲಕ್ಷ ನಮಸ್ಕಾರಗಳನ್ನು ಮಾಡಬೇಕು. ಈ ವ್ರತವನ್ನು ಕೂಡ ಸ್ತ್ರೀ ಪುರುಷರು ಇಬ್ಬರೂ ಮಾಡುತ್ತಾರೆ. ಪ್ರದಕ್ಷಿಣೆ ಮತ್ತು ನಮಸ್ಕಾರಗಳಿಂದ ನಮ್ಮ ದೇಹ ಹಾಗೂ ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ. ಚಂಚಲತೆ ಕಡಿಮೆಯಾಗುತ್ತದೆ. ಕಾಯಾ ವಾಚಾ ಮತ್ತು ಮನಸಾ ನಾವು ದೇವರನ್ನು ಮೊರೆ ಹೋಗಲು ಅನುಕೂಲವಾಗುತ್ತದೆ. 120 ದಿನಗಳಲ್ಲಿ ಲಕ್ಷ ಪ್ರದಕ್ಷಿಣೆ ಮತ್ತು ನಮಸ್ಕಾರಗಳನ್ನು ಮಾಡಲು ದಿನಂಪ್ರತಿ ಕನಿಷ್ಠ 850ರಿಂದ 860 ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಬೇಕು. ಏಕಾಗ್ರತೆಯನ್ನು ಪಡೆದು ಕಾಯಾ ನಮಸ್ಕಾರ ಮತ್ತು ಪ್ರದಕ್ಷಿಣೆಗಳನ್ನು ಮಾಡುತ್ತಾ ವಾಚಾ ಭಗವಂತನ ಸ್ತೋತ್ರಗಳನ್ನು ಮಾಡುತ್ತಾ ಮನಸಾ ಅವನಗುಣಗಳನ್ನು ನೆನಯುತ್ತಾ ಅವನಿಗೆ ಶರಣಾಗತಿಯನ್ನು ಹೊಂದಬೇಕು. ಈ ವ್ರತವನ್ನು ಮಾಡುವುದರಿಂದ ನಮ್ಮ ಅನೇಕ ಪಾಪಗಳು ನಾಶ ಹೊಂದುವವು ಎಂದು ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖವಿದೆ. ಪೂಜೆ ವ್ರತ ನಿಯಮ ಮಾಡುವಾಗ ಗಮನ ಕೇವಲ ನಮ್ಮ ಮತ್ತು ಭಗವಂತನ ಮಧ್ಯ ಇರುವುದರಿಂದ ಕೆಟ್ಟ ನಡೆ ಮಾತುಗಳಿಗೆ ಅವಕಾಶ ಇರುವುದಿಲ್ಲ.
ಪರಾಕವ್ರತ :
ಪರಾಕವ್ರತವನ್ನು ಚಾತುರ್ಮಾಸದಲ್ಲಿ 12 ದಿನಗಳಲ್ಲಿ ಉಪವಾಸವಿದ್ದು ಆಚರಿಸುವ ವ್ರತವಾಗಿದೆ ಇದನ್ನು ಮೂರು ವರ್ಷಗಳಕಾಲ ಆಚರಿಸಬೇಕು ಇದರಿಂದ ಬ್ರಹ್ಮಹತ್ಯಾ ಮೊದಲಾದ ಮಹಾನ್ ಪಾಪಗಳು ನಿವಾರಣೆಯಾಗುತ್ತವೆ.
ಷಷ್ಠಿಕಾಲ ವ್ರತ :
ಚಾತುರ್ಮಾಸ ಸಮಯದಲ್ಲಿ ಆರು ಹೊತ್ತಿಗೆ ಒಮ್ಮೆ ಊಟ ಮಾಡುವ ವ್ರತ. ಕೆಲವರು ಈ ರೀತಿಯಲ್ಲಿ ನಾಲ್ಕು ತಿಂಗಳೂ ವ್ರತವನ್ನು ಆಚರಿಸುತ್ತಾರೆ. ಕೆಲವರು ಆಷಾಢ ಮತ್ತು ಕಾರ್ತೀಕ ಮಾಸಗಳಲ್ಲಿ ಮಾತ್ರ ಈ ವ್ರತವನ್ನು ಆಚರಿಸುತ್ತಾರೆ.
ಚಾತುರ್ಮಾಸದಲ್ಲಿ ಕೆಲವು ವ್ರತಗಳನ್ನು ಕೇವಲ ಹೆಣ್ಣುಮಕ್ಕಳು ಮಾತ್ರ ಮಾಡುತ್ತಾರೆ. ಲಕ್ಷ ಬತ್ತಿ, ಲಕ್ಷ ಗೋಪದ್ಮ, ಚಾತುರ್ಮಾಸದ ರಂಗೋಲಿ, ತುಳಸಿ ಮತ್ತು ಗೋ ಪೂಜೆಗಳು ಇವುಗಳನ್ನು ಸಾಮಾನ್ಯವಾಗಿ ಕೇವಲ ಹೆಣ್ಣುಮಕ್ಕಳು ಮಾತ್ರ ಮಾಡುತ್ತಾರೆ. ಲಕ್ಷ ಬತ್ತಿಯನ್ನು ಮಾಡಿ ದೇವರಿಗೆ ಆ ಬತ್ತಿಯ ದೀಪವನ್ನು ಹಚ್ಚಿ ಅರ್ಪಿಸುತ್ತಾರೆ. ಲಕ್ಷ ಬತ್ತಿಗಳನ್ನ ತಾವು ಒಬ್ಬರೇ ಹಚ್ಚಲು ಆಗದೇ ಇದ್ದಾಗ ಮಾಡಿದ ಬತ್ತಿಗಳನ್ನು ತುಪ್ಪ ಅಥವಾ ಎಣ್ಣೆ ಪ್ರಣತಿ, ಹಿತ್ತಾಳೆ ಬೆಳ್ಳಿಯ ದೀಪಗಳೊಂದಿಗೆ ದಾನವನ್ನು ಕೂಡ ನೀಡುತ್ತಾರೆ.
ಲಕ್ಷ ಗೋಪದ್ಮ ಹಾಗೂ ಚಾತುರ್ಮಾಸ ರಂಗೋಲಿ ವ್ರತಗಳನ್ನು ಐದು ವರ್ಷಗಳಲ್ಲಿ ಮಾಡಿ ಉದ್ಯಾಪನೆಯನ್ನು ಮಾಡುತ್ತಾರೆ. ಚಾತುರ್ಮಾಸ ರಂಗೋಲಿಯ ವ್ರತವನ್ನು ಮಾಡಲು ಶ್ರೀಕೃಷ್ಣ ಪರಮಾತ್ಮನು ತನ್ನ ತಂಗಿ ಸುಭದ್ರಳಿಗೆ ಹೇಳಿ ಮಾಡಿಸಿದ್ದನೆಂದು ವ್ರತದ ಹಾಡಿನಲ್ಲಿ ಕೂಡ ಬರುತ್ತದೆ.ಇದನ್ನು ಓದಿ –ಪವಿತ್ರ ಪುರಿ: ಜಗತ್ತಿಗೆ ಜಗನ್ನಾಥನ ದರ್ಶನ
ಹೀಗೆ ಮಳೆಗಾಲದ ಈ ಸಮಯದಲ್ಲಿ ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡದೇ ಭಗವಂತನ ನಾಮ ಸ್ಮರಣೆ ವ್ರತ ನೇಮಾದಿಗಳನ್ನು ಮಾಡಿ ಉತ್ತಮ ಸಮಯವನ್ನು ಸಾರ್ಥಕ ಮಾಡಿಕೊಳ್ಳಬೇಕು.

ಮಾಧುರಿ ದೇಶಪಾಂಡೆ, ಬೆಂಗಳೂರು