ಜಗತ್ತಿನ ಬಹುತೇಕ ಎಲ್ಲ ನಾಗರಿಕತೆಗಳೂ ‘ಸತ್ಯ ಏನು?’ ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಹೊರಡುತ್ತವೆ. ‘ನಾನು ಯಾರು?’, ‘ಈ ಜಗತ್ತಿನ ವಾಸ್ತವವೇನು?’, ‘ನನಗೂ ಈ ಜಗತ್ತಿಗೂ ಇರುವ ಸಂಬಂಧವೇನು?’ ಅಂತೆಯೇ ‘ಅವೆರಡಕ್ಕೂ ಕಾರಣರೂಪವಾದ, ಮೂಲವಾದ ಯಾವುದಾದರೂ ಶಕ್ತಿಯಿದೆಯೇ?’ ಇವಿಷ್ಟು ಆಹಾರ-ನಿದ್ರಾ-ಭಯ-ಮೈಥುನಗಳೆಂಬ ಪ್ರಾಣಿಸಹಜಪ್ರವೃತ್ತಿಗಳಿಂದ ಮೇಲೆದ್ದು ಹೊರಟವರನ್ನು ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳು. ಎಲ್ಲ ದೇಶಗಳೂ, ಎಲ್ಲ ನಾಗರಿಕತೆಗಳೂ ಇವುಗಳಿಗೆ ಭಿನ್ನಭಿನ್ನವಾದ ಉತ್ತರಗಳನ್ನು ಕಂಡುಕೊಂಡಿವೆ. ಪಾಶ್ಚಾತ್ಯಪ್ರಪಂಚವು ಅದನ್ನು ‘ಫಿಲಾಸಫಿ’ ಎನ್ನುತ್ತದೆ. ಭಾರತವು ಕೊಂಚ ಭಿನ್ನವಾಗಿ ಅದನ್ನೇ ‘ತತ್ತ್ವಶಾಸ್ತ್ರ’ ಅಥವಾ ‘ದರ್ಶನಶಾಸ್ತ್ರ’ ಎನ್ನುತ್ತದೆ.
ಭಾರತದ ವಿಶೇಷತೆಯೆಂದರೆ ಇಲ್ಲಿ ದರ್ಶನಗಳನ್ನು ಸಮಾಜಕ್ಕೆ ಅಳವಡಿಸಲಾಗಿದೆ. ವರ್ಣಾಶ್ರಮಾದಿ ಧರ್ಮಗಳ ರೂಪದಲ್ಲಿ. ಅದು ಉಳಿದ ಕಡೆಗಳಲ್ಲಿ ಕಂಡುಬರುವುದಿಲ್ಲ. ಆದರೆ ಸಾಂಸ್ಥೀಕರಣದ ಸಮಸ್ಯೆಯೆಂದರೆ ಅದರಲ್ಲಿ ಆಗಾಗ ವಿಪ್ಲವಗಳು ತೋರುತ್ತಿರುತ್ತವೆ. ಸುದೈವವಶಾತ್ ಭಾರತದಲ್ಲಿ ಯಾವ್ಯಾವಾಗಲೆಲ್ಲ ಅಂಥ ಆಪತ್ತು ಒದಗಿದೆಯೋ ಆಗಾಗಲೆಲ್ಲ ಮಹಾಪುರುಷರ, ಪುನರುತ್ಥಾನಕಾರರ ಮತ್ತು ಕ್ರಾಂತಿಕಾರಿಗಳ ಉದ್ಭವವೂ ಉಂಟಾಗಿದೆ. ಅಂಥ ಕ್ರಾಂತಿಪುರುಷರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲಬಲ್ಲವರು ಶ್ರೀ ಶ್ರೀ ಶಂಕರಭಗವತ್ಪಾದಾಚಾರ್ಯರು.
ಕಾಲಟಿಯಲ್ಲಿ ಅಂಬೆಗಾಲಿಡುತ್ತಿದ್ದ ಈ ಸಂತರು ಕೇವಲ ಮೂವತ್ತೆರಡು ವರ್ಷಗಳೊಳಗೇ ದೇಶಾದ್ಯಂತ ಸಂಚರಿಸಿ, ತಾವು ಭೌತಿಕವಾಗಿ ಕಾಲವಶರಾದ ಸಾವಿರಾರು ವರ್ಷಗಳ ನಂತರವೂ ಜಗತ್ತಿನ ಜ್ಞಾನಪರಂಪರೆ ಮತ್ತು ತತ್ತ್ವಶಾಸ್ತ್ರಪರಂಪರೆಗಳಲ್ಲಿ ಉಂಟಾಗುತ್ತಿರುವ ಚಿಂತನೆಗಳಿಗೂ, ಚರ್ಚೆಗಳಿಗೂ, ಹೊಸ ಹೊಸ ಅರ್ಥಗಳ ಮಥನಕ್ಕೂ ಪ್ರೇರಕರಾದವರು. ಸದ್ಯ ಅವರ ದೇಶ-ಕಾಲಾದಿ ವಿಚಾರಗಳು ಮತ್ತು ದಿಗ್ವಿಜಯಗ್ರಂಥಗಳಲ್ಲಿ ಅವರ ಕುರಿತಾಗಿ ವಿವೃತವಾಗಿರುವ ಅಲೌಕಿಕ ಸಂಗತಿಗಳಲ್ಲಿ ಸತ್ಯವೆಷ್ಟು ಇತ್ಯಾದಿ ವಿವರಗಳೆಲ್ಲ ತತ್ತ್ವವನ್ನು ಅರಿಯಲು ಹೊರಡುವ ಜಿಜ್ಞಾಸುಗಳಿಗೆ ಅಪ್ರಸ್ತುತವಾದ ಕಾರಣ ನೇರವಾಗಿ ಅವರ ಭಾಷ್ಯಗಳಲ್ಲಿನ ಕೆಲವು ವೈಶಿಷ್ಟ್ಯಗಳತ್ತ ಹೊರಳೋಣ.
ಶಾಂಕರಭಾಷ್ಯಗಳ ಮೊತ್ತಮೊದಲ ಸೌಂದರ್ಯವಿರುವುದು ಅವುಗಳಲ್ಲಿ ಬಳಕೆಯಾಗಿರುವ ಭಾಷೆಯಲ್ಲಿ. ಅಲ್ಲೆಲ್ಲೂ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಬೇಕೆಂಬ ತುಡಿತವಿಲ್ಲ. ಪ್ರಸ್ಥಾನತ್ರಯಗಳು ಸಾಮಾನ್ಯರ ಅರಿವಿಗೆ ನಿಲುಕದ್ದರಿಂದಲೇ ಅವುಗಳ ಕುರಿತಾದ ಅಜ್ಞಾನ ಮತ್ತು ವಿಪರೀತಜ್ಞಾನಗಳನ್ನು ದೂರ ಮಾಡಲಿಕ್ಕಾಗಿ ತಾವು ಭಾಷ್ಯಗಳನ್ನು ರಚಿಸುತ್ತಿರುವುದೆಂಬ ಅರಿವು ಅವರಲ್ಲಿದೆ. ಹಾಗಾಗಿ ಅಲ್ಲಿನ ಭಾಷೆ ಸರಳ ಮತ್ತು ಲಲಿತವಾಗಿದೆ. ಇನ್ನು ಇಡೀ ಗ್ರಂಥವು ಏನನ್ನು ಹೇಳಲು ಹೊರಟಿದೆ ಎನ್ನುವುದನ್ನು ಉಪೋದ್ಘಾತದಲ್ಲಿಯೇ ಅತ್ಯಂತ ಸಂಕ್ಷಿಪ್ತವಾಗಿ ಆದರೆ ಪರಿಣಾಮಕಾರಿಯಾಗಿ ವಿವರಿಸಿ ಮುಂದೆ ಮುಖ್ಯಭಾಷ್ಯಕ್ಕೆ ದೃಷ್ಟಿಕೋಣವನ್ನು ರೂಪಿಸಿಕೊಡುವುದು ಆಚಾರ್ಯರ ಮತ್ತೊಂದು ವೈಶಿಷ್ಟ್ಯ.
ಇದಕ್ಕೊಂದು ಉದಾಹರಣೆಯಾಗಿ ಭಗವದ್ಗೀತಾಭಾಷ್ಯದ ಉಪೋದ್ಘಾತವನ್ನು ನೋಡಬಹುದು.
ಮೊದಲಿಗೆ ನಾರಾಯಣನನ್ನು ಸೃಷ್ಟಿಮೂಲ ಎನ್ನುವುದಾಗಿ ಸ್ತುತಿಸುವ ಆಚಾರ್ಯರು ಆನಂತರ ಆತ ತನ್ನ ಸೃಷ್ಟಿಯು ಸುಗಮವಾಗಿ ನಡೆಯಲೆಂದು ಪ್ರವೃತ್ತಿ ಮತ್ತು ನಿವೃತ್ತಿಗಳೆಂಬ ಇಬ್ಬಗೆಯ ಧರ್ಮಗಳನ್ನು ರೂಪಿಸಿದ್ದನ್ನು ನೆನೆಯುತ್ತಾರೆ. ಪ್ರವೃತ್ತಿ ಎಂದರೆ ಲೌಕಿಕ ಕಾರ್ಯಗಳಿಗೆ ಬೇಕಾದ ವರ್ಣಾಶ್ರಮಾದಿ ಧರ್ಮಗಳು. ನಿವೃತ್ತಿ ಎಂದರೆ ಇವುಗಳನ್ನು ಮೀರಿ ಜ್ಞಾನ ಮತ್ತು ವೈರಾಗ್ಯಗಳನ್ನು ರೂಢಿಸಿಕೊಳ್ಳುವುದು. ಪ್ರವೃತ್ತಿಯಿಂದ ಉತ್ತಮಲೋಕಗಳು, ಧನಾದಿಸಮೃದ್ಧಿ ಇತ್ಯಾದಿಗಳನ್ನು ನೀಡಿದರೆ ನಿವೃತ್ತಿಯು ಮುಕ್ತಿಯನ್ನು ನೀಡುತ್ತದೆ. ಆಚಾರ್ಯರೆನ್ನುವಂತೆ ಮೊದಲೆಲ್ಲ ಜನರು ಇವುಗಳನ್ನು ಸರಿಯಾಗಿ ಆಚರಿಸುತ್ತಿದ್ದರಂತೆ. ಕಾಲಕ್ರಮೇಣ ಅವರಲ್ಲಿ ಶ್ರದ್ಧೆ ಕಮ್ಮಿಯಾಯಿತಂತೆ. ಆಗ ಉಂಟಾದ ಅಧರ್ಮದ ಏಳ್ಗೆಯನ್ನು ತಪ್ಪಿಸಲು ಭಗವಂತನು ಕೃಷ್ಣನಾಗಿ ಅವತರಿಸಿ ಧರ್ಮದ ರಕ್ಷಣೆಯನ್ನು ಮಾಡಿದನಂತೆ.
‘ನಾನು ಕೇವಲ ಸಾಕ್ಷೀ’ ಎಂದ ಭಗವಂತನೇ ಏಕೆ ಅವತರಿಸಿ ಬಂದ? ಮತ್ತು ಆತ ಅವ್ಯಯ ಎಂದಮೇಲೆ ಅವತಾರ ಎತ್ತುವುದು ಹೇಗೆ ಸಾಧ್ಯ ಎನ್ನುವುದಕ್ಕೆ ಶಂಕರರೆನ್ನುತ್ತಾರೆ, “ವೈಷ್ಣವೀಂ ಸ್ವಾಂ ಮಾಯಾಂ ಮೂಲಪ್ರಕೃತಿಂ ವಶೀಕೃತ್ಯ ಅಜೋಽವ್ಯಯೋ ಭೂತಾನಾಮೀಶ್ವರೋ ನಿತ್ಯಶುದ್ಧಬುದ್ಧಮುಕ್ತಸ್ವಭಾವೋಽಪಿ ಸನ್ ಸ್ವಮಾಯಯಾ ದೇಹವಾನಿವ, ಜಾತ ಇವ ಚ ಲೋಕಾನುಗ್ರಹಂ ಕುರ್ವನ್ ಲಕ್ಷ್ಯತೇ।“ ಅರ್ಥಾತ್ ಆತನಿಗೆ ನಿಜವಾಗಿ ದೇಹವೂ ಇಲ್ಲ ಜನ್ಮವೂ ಇಲ್ಲ. ಅವನು ಕೇವಲ ತನ್ನ ಮಾಯೆಯಿಂದ ಅವತರಿಸಿದಂತೆ ಕಂಡುಬರುತ್ತಾನೆ. ಮುಂದುವರಿದು ಆತ ತನಗೆ ಯಾವುದೇ ಪ್ರಯೋಜನವಿಲ್ಲದಿದ್ದರೂ ಲೋಕಕ್ಕೆ ಅನುಗ್ರಹವನ್ನು ಮಾಡಬೇಕು ಎನ್ನುವ ಇಚ್ಛೆಯಿಂದ ಪ್ರವೃತ್ತಿ ಮತ್ತು ನಿವೃತ್ತಿ ಧರ್ಮಗಳನ್ನು ಅರ್ಜುನನಿಗೆ ಬೋಧನೆ ಮಾಡಿದ. ಹೀಗೆನ್ನುವಾಗ ಶಂಕರರಿಲ್ಲಿ ಒಂದು ಮಟ್ಟಕ್ಕೆ ಇಡೀ ಭಗವದ್ಗೀತೆಯ ಸಾರವನ್ನೇ ಧ್ವನಿಸಿದಂತಿದೆ. ಯೋಗಿಯಾದವನು, ಜ್ಞಾನಿಯಾದವನು ‘ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ’ ಎನ್ನುವುದಾಗಿ ಕೃಷ್ಣನು ಅರ್ಜುನನಿಗೆ ಬೋಧಿಸುವಂತೆ ಲೋಕಹಿತಕ್ಕಾಗಿ ಕರ್ಮಗಳನ್ನು ಯಾವುದೇ ಅಂಟಿಕೊಳ್ಳುವಿಕೆಯಿಲ್ಲದೆ ಮಾಡಬೇಕು ಮತ್ತು ಎನ್ನುವುದು ವಾಸ್ತವವಾಗಿ ಭಗವದ್ಗೀತೆಯ ತಿರುಳೇ ಸರಿ.
ಅರ್ಜುನನಿಗೇ ಏಕೆ ಗೀತೆಯು ಬೋಧಿಸಲ್ಪಟ್ಟಿತು? ಆಚಾರ್ಯರ ಪ್ರಕಾರ, “ಗುಣಾಧಿಕೈರ್ಹಿ ಗೃಹೀತೋಽನುಷ್ಠೀಯಮಾನಶ್ಚ ಧರ್ಮಃ ಪ್ರಚಯಂ ಗಮಿಷ್ಯತೀತಿ“ ಉತ್ತಮರಾದವರು ಸ್ವೀಕರಿಸಿ ಆಚರಿಸಿದ ಧರ್ಮವು ಪ್ರಚುರಗೊಳ್ಳುತ್ತದೆ ಮತ್ತು ಲೋಕದಲ್ಲಿ ಸ್ಥಿರವಾಗುತ್ತದೆ ಎನ್ನುವ ಕಾರಣದಿಂದ. ಈ ಅಭಿಪ್ರಾಯದಲ್ಲಿ ಕೃಷ್ಣನೇ ಗೀತೆಯಲ್ಲಿ ಹೇಳುವ ‘ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ’ ಎನ್ನುವ ಮಾತಿನ ಛಾಯೆ ಹುದುಗಿದೆ.
ಶಂಕರರು ತಮ್ಮ ಪೂರ್ವಸೂರಿಗಳನ್ನು ಮರೆಯುವುದಿಲ್ಲವೆಂಬುದಕ್ಕೂ ಇಲ್ಲಿಯೇ ಆಧಾರವು ದೊರೆಯುತ್ತದೆ. ಈ ಗೀತಾಶಾಸ್ತ್ರವನ್ನು ಈ ಹಿಂದೆಯೂ ಅನೇಕರು ಪದವಿಭಾಗ, ಪದಾರ್ಥವಿವರಣೆ, ಯುಕ್ತಿ ಮುಂತಾದ ವಿಧಾನಗಳಿಂದ ವ್ಯಾಖ್ಯಾನಿಸಿದ್ದಾರೆ. ಆದರೆ ಜನರು ಪರಸ್ಪರವಿರುದ್ಧವಾಗಿರುವ ಆ ಭಾಷ್ಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸೋಲುತ್ತಿರುವ ಕಾರಣ ತಾನು ಸಂಕ್ಷಿಪ್ತವಾಗಿ ಪ್ರಕೃತ ಗ್ರಂಥಕ್ಕೆ ಭಾಷ್ಯವನ್ನು ರಚಿಸುತ್ತಿದ್ದೇನೆ ಎನ್ನುವುದು ಅವರ ಒಕ್ಕಣೆ. ಈ ಮಾತಿನಲ್ಲಿ ಭಗವದ್ಗೀತೆಯ ಭಾಷ್ಯರಚನೆಯ ಇತಿಹಾಸವೇ ಅಡಗಿದೆ.
ಹೀಗೆ ಕೆಲವಲ್ಲಿ ಹಲವನ್ನು ಬಣ್ಣಿಸಿದ ಶಂಕರರು ನಮ್ಮೊಳಗಿನ ಜಿಜ್ಞಾಸುವನ್ನು ಎಚ್ಚರಿಸಲಿ. ಸಾಕ್ಷಾತ್ಕಾರದೆಡೆಗಿನ ನಮ್ಮ ಪಥವನ್ನು ಬೆಳಗಲಿ.

ನಚಿಕೇತ್ ಹೆಗಡೆ