- ದೀರ್ಘಾವಧಿ ವೀಸಾಧಾರಿತ 91 ಮಂದಿ ಇನ್ನೂ ರಾಜ್ಯದಲ್ಲೇ
ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ, ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕಿಸ್ತಾನ ಪ್ರಜೆಗಳನ್ನು ಕರ್ನಾಟಕದಿಂದ ಗಡಿಪಾರು ಮಾಡಲಾಗಿದೆ. ದೀರ್ಘಾವಧಿ ವೀಸಾ ಹೊಂದಿರುವ ಪಾಕಿಸ್ತಾನ ಪ್ರಜೆಗಳ ಗಡಿಪಾರಿಗೆ ಕೇಂದ್ರದಿಂದ ಯಾವುದೇ ನಿರ್ದೇಶನ ಬಂದಿಲ್ಲದ ಕಾರಣ, 91 ಮಂದಿ ಪಾಕ್ ಪ್ರಜೆಗಳು ರಾಜ್ಯದಲ್ಲಿಯೇ ತಂಗಿದ್ದಾರೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಪರಿಶೀಲನೆ ವೇಳೆ, ಈ ಪಾಕ್ ಪ್ರಜೆಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವುದು ಬೆಳಕಿಗೆ ಬಂದಿದೆ. ಇವರ ಪೈಕಿ ಐದು ಮಂದಿ ವೈದ್ಯಕೀಯ ವೀಸಾ ಆಧಾರಿತರಾಗಿದ್ದು, ಅವರಿಗೆ ಏಪ್ರಿಲ್ 29ರವರೆಗೆ ಭಾರತದಲ್ಲಿ ತಂಗಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಈ ಅವಧಿ ಮುಗಿದ ಬಳಿಕ, ನಿಯಮಾನುಸಾರ ಅವರನ್ನು ಗಡಿಪಾರು ಮಾಡಲಾಗುವುದು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ ಹೆಚ್ಚು ಇದ್ದು, ಭಟ್ಕಳದಲ್ಲಿ 14 ಮಂದಿ ಹಾಗೂ ಕಾರವಾರದಲ್ಲಿ ಒಬ್ಬ ವ್ಯಕ್ತಿ ಸೇರಿ ಒಟ್ಟಾರೆ 15 ಮಂದಿ ವಾಸಿಸುತ್ತಿದ್ದಾರೆ. ಇವರಲ್ಲಿ 12 ಮಂದಿ ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಭಟ್ಕಳದ ನವಾಯತ್ ಸಮುದಾಯದಲ್ಲಿ ಪಾಕಿಸ್ತಾನಿಯರೊಂದಿಗೆ ವಿವಾಹವಾಗುವ ಸಂಪ್ರದಾಯವಿರುವುದರಿಂದ, ಇವರಿಗೆ ದೀರ್ಘಾವಧಿ ವೀಸಾ ನೀಡಲಾಗಿದೆ.
ಇದೇಂತೆ ಬೆಂಗಳೂರು, ಮಂಗಳೂರು, ಮೈಸೂರು, ಕಲಬುರಗಿ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಪಾಕ್ ಪ್ರಜೆಗಳು ನೆಲೆಸಿದ್ದಾರೆ. ದಾವಣಗೆರೆಯಲ್ಲಿ ಒಬ್ಬ ಪಾಕಿಸ್ತಾನಿ ವಿದ್ಯಾರ್ಥಿ ಶಿಕ್ಷಣ ವೀಸಾ ಮೇಲೆ ಭಾರತಕ್ಕೆ ಬಂದು, ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ವೀಸಾ ಅವಧಿ ಇನ್ನೂ ಮುಗಿದಿಲ್ಲ.
ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರು, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಘೋಷಿಸಿದ್ದರು.