- ಮುಖ ಪುಸ್ತಕದಲ್ಲಿ ಓದಿದ ಈ ಕಥೆ ನಿಜವಾಗಿಯೂ ಬದುಕಿನ ಕುರಿತ ವಿಭಿನ್ನ ಚಿಂತನೆಗೆ ಅವಕಾಶ ಮಾಡಿಕೊಟ್ಟಿದೆ.
ಇದೊಂದು ಚೀನಿ ಕಥೆ. ಓರ್ವ ರೈತ ಕುದುರೆ ಯೊಂದನ್ನು ಸಾಕಿದ್ದ. ಒಂದು ದಿನ ಆತನ ಕುದುರೆ ಕಾಣೆಯಾಯಿತು. ಆತನ ಮನೆಯ ಸುತ್ತಲ ಜನ ಬಂದು ಆತನನ್ನು ಭೇಟಿಯಾಗಿ ಆತನಿಗೆ ನಿನ್ನ ಕುದುರೆ ಕಳೆದುಹೋದದ್ದನ್ನು ಕೇಳಿ ದುಃಖವಾಯಿತು, ಸಮಾಧಾನ ತಂದುಕೊ ಎಂದು ಸಾಂತ್ವನ ಹೇಳಿದರು. ಸುಮ್ಮನೆ ಗೋಣಾಡಿಸಿದ ರೈತನನ್ನು ಕಂಡು ಆತನ ನೋವು ತೀವ್ರವಾಗಿದೆ ಎಂದು ಭಾವಿಸಿದ ಅವರು ಇದಕ್ಕಿಂತ ನಿನಗೆ ಒಳ್ಳೆಯ ಕುದುರೆ ಸಿಗಬಹುದು ಎಂದು ಸಮಾಧಾನ ಹೇಳಿದರು. ಇದಕ್ಕೆ ಆ ರೈತ ಅತ್ಯಂತ ಸರಳವಾಗಿ ‘ಹೌದು ಇರಬಹುದು’ ಎಂದು ಹೇಳಿದ.
ಮರುದಿನ ಆತನ ಕುದುರೆ ಮರಳಿ ಬಂತು… ಆದರೆ ಆ ಕುದುರೆಯ ಜೊತೆ ಏಳು ಕಾಡು ಕುದುರೆಗಳು ಕೂಡ ಬಂದಿದ್ದವು. ಸುತ್ತಲ ಮನೆಯವರು ನೋಡಿದೆಯಾ ನಾವು ಹೇಳಿದಂತೆಯೇ ಆಯಿತು, ನಿನಗೆ ಒಂದು ಕುದುರೆಯ ಬದಲಾಗಿ ಏಳು ಕುದುರೆಗಳು ದೊರೆಯಿತು ಒಳ್ಳೆಯದೇ ಅಲ್ವಾ ಎಂದು ಹೇಳಿದ.
ಇರಬಹುದು ಎಂದು ಮತ್ತೆ ಅಷ್ಟೇ ಸರಳವಾಗಿ ರೈತ ಉತ್ತರಿಸಿದ.
ಮರುದಿನ ರೈತನ ಮಗ ಕಾಡು ಕುದುರೆಗಳಲ್ಲಿ ಒಂದು ಕುದುರೆಯನ್ನು ಊರಲು ಪ್ರಯತ್ನಿಸಿ ವಿಫಲನಾಗಿ ಕುದುರೆಯ ಮೇಲಿಂದ ಬಿದ್ದು ಕಾಲು ಮುರಿದುಕೊಂಡ. ಆಗ ಆತನ ಸುತ್ತಣ ಜನ ಅಯ್ಯೋ ನಿನಗೆ ಈ ಕಾಡು ಕುದುರೆಗಳಿಂದ ತೊಂದರೆಯಾಯಿತು ಅಲ್ಲವೇ ಎಂದು ಕೇಳಿದರು. ರೈತನದು ಮತ್ತದೇ ಉತ್ತರ ‘ಇರಬಹುದು’ ಎಂದಾಗಿತ್ತು.
ಕೆಲ ದಿನಗಳ ನಂತರ ಚೀನಾದ ಸೇನೆಯ ಮುಖಂಡನ ನೇತೃತ್ವದಲ್ಲಿ ಎಲ್ಲ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಕರೆದೊಯ್ದರು. ಆದರೆ ಕಾಲು ಮುರಿದ ಕಾರಣ ರೈತನ ಮಗನನ್ನು ಬಿಟ್ಟು ಹೋದರು.
ತಮ್ಮ ಮಕ್ಕಳನ್ನು ಕಳಿಸಿದ ನೆರೆಹೊರೆಯ ಜನ ರೈತನ ಮಗ ಸೇನೆಯನ್ನು ಸೇರುವುದು ತಪ್ಪಿದ ಕಾರಣ ಆತನನ್ನು ಅಭಿನಂದಿಸಿದರು.ರೈತ ಮತ್ತದೇ ಮುಗ್ಧ ನಗುವನ್ನು ಸೂಚಿಸುತ್ತಾ ಹೇಳಿದ ಇರಬಹುದು ಎಂದು.
ಇಂದು ಯಾವ ವಿಷಯಗಳು ನಮ್ಮನ್ನು ಹಿಂಜರಿಯುವಂತೆ ಮಾಡುತ್ತವೆಯೋ ಅದೇ ಮುಂದೆ ನಮಗೆ ಗೆಲುವಿಗೆ ದಾರಿಯಾಗುತ್ತದೆ. ಇಂದು ಗೆಲುವೆಂದು ತೋರಿದ್ದು ಮುಂದೆ ಸೋಲಿಗೆ ದಾರಿಯಾಗಬಹುದು ಮತ್ತು ಇಂದು ಸೋಲಾಗಿದ್ದು ನಾಳೆ ಗೆಲುವಿಗೆ ದಾರಿಯಾಗಬಹುದು.. ಯಾವುದೇ ವಿಷಯಕ್ಕೂ ಅತ್ಯಂತ ತೀವ್ರವಾಗಿ ಪ್ರತಿಕ್ರಿಯಿಸುವುದಾಗಲಿ, ನಿರ್ಣಯಿಸುವುದಾಗಲಿ ಮಾಡಬಾರದು. ಇಂದಿನ ಸೋಲೇ ನಾಳಿನ ಗೆಲುವಿಗೆ ಸೋಪಾನ. ಶಾಂತವಾಗಿ ಗುರಿಯೆಡೆಗೆ ತೀವ್ರವಾದ ಲಕ್ಷವಿಟ್ಟು ಸಮಾಧಾನದಿಂದ ನಿಮ್ಮ ಪ್ರಯತ್ನವನ್ನು ನಿರಂತರವಾಗಿ ಮಾಡಿ, ಫಲ ಖಂಡಿತವಾಗಿಯೂ ದೊರೆಯುತ್ತದೆ.
ಬೇಕಿದ್ದಂತಹ ಬದುಕು ನಮಗೆ ಯಾವಾಗಲೂ ಸಿಗುವುದಿಲ್ಲ ಬದುಕಿನಲ್ಲಿ ಬರುವ ಕಷ್ಟಗಳನ್ನು ನಮಗೆ ಒದಗಿದ ಪರೀಕ್ಷೆಗಳೆಂದು, ಸುಖವನ್ನು ನಾವು ಮಾಡಿರುವ ಪರಿಶ್ರಮಕ್ಕೆ ತಕ್ಕ ಫಲವೆಂದು ಅರಿತು ಜೀವಿಸಬೇಕು. ‘ಸುಖ-ದುಃಖ ಸಮೇಕೃತಾ’ ಎಂಬ ಸಂಸ್ಕೃತ ಉಕ್ತಿಯಂತೆ ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ ಬದುಕಿ ತೋರಬೇಕು.
ಇದ್ದಾಗ ಅತಿಯಾಗಿ ವರ್ತಿಸದೆ ಕಳೆದುಕೊಂಡಾಗ ಗೋಳಾಡದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು.
ಬಡವನನ್ನು ತಿರಸ್ಕರಿಸದೆ ಶ್ರೀಮಂತರನ್ನು ಪುರಸ್ಕರಿಸದೆ ಅವರ ಗುಣಕ್ಕೆ ಬೆಲೆ ನೀಡಬೇಕೆ ಹೊರತು ಅವರ ಐಹಿಕ ಜೀವನ ಶೈಲಿಗೆ ಅಲ್ಲ ಎಂಬ ಮಾತು ಸದಾ ನೆನಪಿನಲ್ಲಿರಬೇಕು.
ಎಲ್ಲ ಬಡವರನ್ನು ನಿಕೃಷ್ಟವಾಗಿ ಎಲ್ಲ ಶ್ರೀಮಂತರನ್ನು ಉತ್ಕೃಷ್ಟರಾಗಿ ಒಂದೇ ತಕ್ಕಡಿಯಲ್ಲಿ ತೂಗಬಾರದು. ಇಲ್ಲಿ ಗುಣವೇ ಮುಖ್ಯ, ಉಳಿದೆಲ್ಲವೂ ಗೌಣ.
ಹಂಸವೊಂದು ನೀರನ್ನು ಬೆರೆಸಿದ ಹಾಲಿನಲ್ಲಿ ಕೇವಲ ಹಾಲನ್ನು ಮಾತ್ರ ಸ್ವೀಕರಿಸುವ ಹಂಸಕ್ಷಿರ ನ್ಯಾಯದಂತೆ ನಾವು ಕೆಟ್ಟವರಲ್ಲಿನ ಒಳ್ಳೆಯ ಗುಣಗಳನ್ನು ಮಾತ್ರ ಗುರುತಿಸಬೇಕು.
ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಸಾಯಲೇಬೇಕು. ರಾಜಾಧಿರಾಜರು ಧನ-ಕನಕಗಳನ್ನು, ವಜ್ರ- ವೈಡೂರ್ಯಗಳನ್ನು, ಕುದುರೆ ಆನೆಗಳ ಚತುರಂಗ ಬಲವನ್ನು ತಮ್ಮ ಸಾವಿನೊಂದಿಗೆ ಒಯ್ಯುವುದಿಲ್ಲ. ಬಡವರೂ ಅಷ್ಟೇ. ಹುಟ್ಟುವಾಗ ನಗ್ನತೆಯನ್ನು ಹೊತ್ತು ಬಂದಷ್ಟೇ ಸಹಜವಾಗಿ ಸಾವಿನಲ್ಲೂ ಕೂಡ ನಾವು ಎಲ್ಲವನ್ನು ತೊರೆದೇ ಹೋಗುತ್ತೇವೆ.
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
ಎಂಬ ಕವನದಂತೆ ನಾವು ಕೂಡ ನಮ್ಮ ಬದುಕಿನಲ್ಲಿ
ಮುನ್ನಡೆಯಬೇಕು.
ಅಲ್ಲವೇ ಸ್ನೇಹಿತರೆ??

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್