ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ದೊಡ್ಡ ಪ್ರಮಾಣದ ಮಾಹಿತಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಸದಸ್ಯ ಅನ್ನಪೂರ್ಣ ಈ. ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿದ ಉತ್ತರದ ಪ್ರಕಾರ, ರಾಜ್ಯದ 45 ಇಲಾಖೆಗಳಲ್ಲೂ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ.
ಇವುಗಳಲ್ಲಿ 96,844 ಹುದ್ದೆಗಳು ಗುತ್ತಿಗೆ ಅಥವಾ ಹೊರಗುತ್ತಿಗೆಯ ಮೂಲಕ ಭರ್ತಿಯಾಗಿದ್ದು, ನಿವ್ವಳವಾಗಿ 1,88,037 ಹುದ್ದೆಗಳು ಇನ್ನೂ ಖಾಲಿಯಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ಅತಿ ಹೆಚ್ಚು 79,694 ಹುದ್ದೆಗಳು ಖಾಲಿಯಾಗಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 37,572, ಒಳಾಡಳಿತ (ಪೊಲೀಸ್/ಹೋಂ) ಇಲಾಖೆಯಲ್ಲಿ 28,188 ಹುದ್ದೆಗಳು ಖಾಲಿ ಇವೆ. ಉನ್ನತ ಶಿಕ್ಷಣ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲೂ ಸಾವಿರಾರು ಹುದ್ದೆಗಳು ಖಾಲಿಯಾಗಿವೆ.
ವರ್ಗವಾರು ನೋಡಿದರೆ ‘ಸಿ’ ವೃಂದದ ಹುದ್ದೆಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಖಾಲಿ ಇದ್ದು, ಒಟ್ಟು 1,72,190 ಹುದ್ದೆಗಳು ಈ ವರ್ಗಕ್ಕೆ ಸೇರಿವೆ. ‘ಎ’ ವೃಂದದಲ್ಲಿ 16,171, ‘ಬಿ’ ವೃಂದದಲ್ಲಿ 17,180 ಮತ್ತು ‘ಡಿ’ ವೃಂದದಲ್ಲಿ 79,340 ಹುದ್ದೆಗಳು ಖಾಲಿ ಇವೆ.ಇದನ್ನು ಓದಿ –ಒಂದೇ ಸರ್ವೆ ನಂಬರ್‌ನಲ್ಲಿ ಅರಣ್ಯ–ಕಂದಾಯ ಭೂಮಿ ಇದ್ದರೆ ಜಂಟಿ ಸರ್ವೆ: ಸಚಿವ ಖಂಡ್ರೆ
ಈ ಪ್ರಮಾಣದ ಖಾಲಿ ಹುದ್ದೆಗಳು ರಾಜ್ಯದ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದ್ದು, ಶೀಘ್ರ ನೇಮಕಾತಿ ಮಾಡುವ ಅಗತ್ಯತೆ ಒತ್ತಿಹೇಳಲಾಗಿದೆ.








