ಬೆಂಗಳೂರು: ಕೋರ್ಟ್ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನೂರಾರು ಜನರಿಗೆ ಮೋಸ ಮಾಡಿದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ. ಇವರು ನಿರುದ್ಯೋಗಿಗಳು ಹಾಗೂ ಖಾಸಗಿ ಉದ್ಯೋಗದಲ್ಲಿದ್ದವರನ್ನು ಗುರಿಯಾಗಿಸಿಕೊಂಡು, ಕೋರ್ಟ್ನಲ್ಲಿ ‘ಡಿ’ ಗ್ರೂಪ್ ಕೆಲಸ ಕೊಡಿಸುವುದಾಗಿ ಹೇಳಿ ಪ್ರತಿ ವ್ಯಕ್ತಿಯಿಂದ 10ರಿಂದ 25 ಲಕ್ಷ ರೂ. ವರೆಗೆ ಹಣ ಪಡೆದು ವಂಚಿಸಿದ್ದಾರೆ. ಈ ಮೂಲಕ ಸುಮಾರು 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದರೆಂದು ತಿಳಿದುಬಂದಿದೆ.
ಜನರನ್ನು ನಂಬಿಸಲು ನ್ಯಾಯಾಧೀಶರ ಸಹಿಯನ್ನು ನಕಲು ಮಾಡಿ ನಕಲಿ ಆದೇಶ ಪತ್ರಗಳನ್ನು ತೋರಿಸುತ್ತಿದ್ದರು. ಕೆಲಸದ ವಿಚಾರ ಕೇಳಿದಾಗ ನಾಳೆ, ನಾಡಿದ್ದು ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಬಳಿಕ ಕರೆ ಸ್ವೀಕರಿಸುವುದನ್ನೂ ನಿಲ್ಲಿಸುತ್ತಿದ್ದರು.
ವಂಚನೆಗಾಗಿ ಆರೋಪಿಗಳು ಏಜೆಂಟ್ಗಳ ಜಾಲವನ್ನೇ ನಿರ್ಮಿಸಿಕೊಂಡಿದ್ದು, ಖಾಸಗಿ ಹೋಟೆಲ್ಗಳಲ್ಲಿ ದಾಖಲೆ ಪರಿಶೀಲನೆ ಹೆಸರಿನಲ್ಲಿ ಜನರನ್ನು ಕರೆಸಿ ನಕಲಿ ಆಫರ್ ಲೆಟರ್ ತೋರಿಸಿ ಮೋಸ ಮಾಡುತ್ತಿದ್ದರು.
ಮೋಸವಾಗಿರುವುದು ಗೊತ್ತಾದ ಬಳಿಕ ಸಂತ್ರಸ್ತರು ಸಿಸಿಬಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ಇದಕ್ಕೂ ಮೊದಲು ಸಹ ಸರ್ಕಾರಿ ಉದ್ಯೋಗ ಹೆಸರಿನಲ್ಲಿ ವಂಚನೆ ನಡೆಸಿದ್ದ ಆರೋಪಿಗಳು 2024ರಲ್ಲಿ ಬಂಧನಕ್ಕೊಳಗಾಗಿ ಹೊರಬಂದ ಬಳಿಕ ಮತ್ತೆ ಅದೇ ಚಟುವಟಿಕೆ ಮುಂದುವರಿಸಿರುವುದು ಬೆಳಕಿಗೆ ಬಂದಿದೆ.








