ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದಲ್ಲಿ 6 ವರ್ಷದ ಬಾಲಕನೊಬ್ಬ ಲೋ ಬಿಪಿ (ಕಡಿಮೆ ರಕ್ತದೊತ್ತಡ)ದಿಂದ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮಹೇಶ್ ಮತ್ತು ಸುಮಾ ದಂಪತಿಯ ಪುತ್ರ ಆರ್ಯ ಮೃತಪಟ್ಟ ಬಾಲಕ. ಬನ್ನಿತಾಳಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಥಮ ತರಗತಿಯಲ್ಲಿ ಓದುತ್ತಿದ್ದ ಆರ್ಯ, ಶಾಲೆಯಿಂದ ಮನೆಗೆ ಬಂದ ಬಳಿಕ ಜ್ವರ ಕಾಣಿಸಿಕೊಂಡಿತ್ತು.
ತಕ್ಷಣವೇ ಪೋಷಕರು ಆರ್ಯನನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು “ಬಿಪಿ ಕಡಿಮೆಯಾಗುತ್ತಿದೆ, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ” ಎಂದು ಸಲಹೆ ನೀಡಿದರು. ಆದರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದರೂ ಬಾಲಕ ಪ್ರಾಣಾಪಾಯದಿಂದ ಪಾರಾಗಲಿಲ್ಲ.