ವಿಶಾಖಪಟ್ಟಣ: ಅಶುತೋಷ್ ಶರ್ಮ ಮತ್ತು ವಿಪ್ರಾಜ್ ನಿಗಮ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದಿಂದ ಲಕ್ನೋ ಸೂಪರ್ ಜೈಂಟ್ಸ್ ಎದುರಿನ ಸೋಮವಾರದ ರೋಚಕ ಐಪಿಎಲ್ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಕೇವಲ 1 ವಿಕೆಟ್ ನಿಂದ ಗೆದ್ದು ಶುಭಾರಂಭ ಮಾಡಿದೆ.
ಲಕ್ನೋ 8 ವಿಕೆಟಿಗೆ 209 ರನ್ ಪೇರಿಸಿದರೆ, 7 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ಆರಂಭಿಕ ಆಘಾತದಿಂದ ಚೇತರಿಸಿಕೊಂದು 19.3 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಜಯ ತನ್ನದಾಗಿಸಿಕೊಂಡಿತು.
ಅಶುತೋಷ್ ಶರ್ಮ ಅಮೋಘ ಆಟವಾಡಿ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು. 31 ಎಸೆತಗಳಲ್ಲಿ 66 ರನ್ ಚಚ್ಚಿದರು. ಔಟಾಗದೆ ಕೊನೆಯವರಿಗೆ ಉಳಿದು ಗೆಲುವಿನ ದಡ ಸೇರಿಸಿದರು. ವಿಪ್ರಾಜ್ ನಿಗಮ್ 15 ಎಸೆತಗಳಲ್ಲಿ 39 ರನ್ ಕೊಡುಗೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್ ಅತ್ಯಮೂಲ್ಯ ಕೊಡುಗೆ ನೀಡಿ ನಿರ್ಗಮಿಸಿದರು.
ಲಕ್ನೋಗೆ ಮಿಚೆಲ್ ಮಾರ್ಷ್ ಮತ್ತು ಐಡನ್ ಮಾರ್ಕ್‌ರಮ್ ಸ್ಫೋಟಕ ಆರಂಭವಿತ್ತರು. ವೇಗಿ ಮಿಚೆಲ್ ಸ್ಟಾರ್ಕ್ ಎಸೆತಗಳಿಗೂ ಇವರು ಕ್ಯಾರೇ ಎನ್ನಲಿಲ್ಲ. ಸ್ಟಾರ್ಕ್ ಪಾಲಾದ 3ನೇ ಓವರ್‌ನಲ್ಲಿ 21 ರನ್ ಸೇರಿಹೋಯಿತು. ಇಬ್ಬರೂ ಸೇರಿ 2 ಸಿಕ್ಸರ್, 2 ಬೌಂಡರಿ ಬಾರಿಸಿದರು. ಆದರೆ ಸ್ಟಾರ್ಕ್ ಜತೆ ಬೌಲಿಂಗ್ ಆರಂಭಿಸಿದ ನಾಯಕ ಅಕ್ಷರ್ ಪಟೇಲ್ ಉತ್ತಮ ನಿಯಂತ್ರಣ ಸಾಧಿಸಿದರು.
ಲೆಗ್‌ಸ್ಪಿನ್ನರ್ ವಿಪ್ರಾಜ್ ನಿಗಮ್ ತಮ್ಮ ಮೊದಲ ಓವರ್‌ನಲ್ಲೇ ಡೆಲ್ಲಿಯ ಆರಂಭಿಕ ಜೋಡಿಯನ್ನು ಬೇರ್ಪಡಿಸಿದರು. ಮಾರ್ಕ್‌ರಮ್ (15) ಅವರನ್ನು ಸ್ಟಾರ್ಕ್‌ಗೆ ಕ್ಯಾಚ್ ಕೊಡಿಸಿದರು.
ಮಾರ್ಷ್ ಸಿಡಿತದ ಪರಿಣಾಮವಾಗಿ 5 ಓವರ್‌ಗಳಲ್ಲಿ ಲಕ್ನೋದ 50 ರನ್ ಪೂರ್ತಿಗೊಂಡಿತು. ಪವರ್ ಪ್ಲೇಯಲ್ಲಿ 64 ರನ್ ಒಟ್ಟುಗೂಡಿತು. ಮಾರ್ಷ್ 21 ಎಸೆತಗಳಲ್ಲಿ ಅರ್ಧ ಶತಕ ಪೂರ್ತಿಗೊಳಿಸಿದರು. ಪವರ್ ಪ್ಲೇ ಬಳಿಕ ಸಿಡಿದು ನಿಲ್ಲುವ ಸರದಿ ನಿಕೋಲಸ್ ಪೂರಣ್ ಅವರದ್ದಾಯಿತು. ವಿಪ್ರಾಜ್ ಅವರ ಓವರ್ ಒಂದರಲ್ಲಿ 25 ರನ್ ಹರಿದು ಬಂತು. ಇದು 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಬಳಿಕ ಟ್ರಿಸ್ಟನ್ ಸ್ಟಬ್ಸ್ ಓವರ್ ಒಂದರಲ್ಲಿ ಪೂರಣ್ 28 ರನ್ ಸಿಡಿಸಿದರು. ಇದು 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು. 30 ಎಸೆತಗಳಿಂದ 75 ರನ್ ಬಾರಿಸಿದ ಪೂರಣ್ ಲಕ್ನೋ ಸರದಿಯ ಟಾಪ್ ಸ್ಕೋರರ್. ಮಾರ್ಷ್ 36 ಎಸೆತಗಳಿಂದ 72 ರನ್ ಬಾರಿಸಿದರು. 6 ಬೌಂಡರಿ, 6 ಸಿಕ್ಸರ್ ಬಾರಿಸಿ ಭರಪೂರ ರಂಜನೆ ಒದಗಿಸಿದರು.
ಇವರಿಬ್ಬರನ್ನು ಹೊರತುಪಡಿಸಿದರೆ ಅಜೇಯ 27 ರನ್ ಮಾಡಿದ ಡೇವಿಡ್ ಮಿಲ್ಲರ್ ಅವರದೇ ಹೆಚ್ಚಿನ ಗಳಿಕೆ. ಇವರಿಗೆ ಕೊನೆಯಲ್ಲಿ ಯಾರಿಂದಲೂ ಬೆಂಬಲ ಲಭಿಸಲಿಲ್ಲ. ನಾಯಕ ರಿಷಭ್ ಪಂತ್ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು.
ಶಾರ್ದೂಲ್ ಅವಳಿ ಆಘಾತ
ಬದಲಿ ಆಟಗಾರನಾಗಿ ತಂಡಕ್ಕೆ ಬಂದ ಶಾರ್ದೂಲ್ ಠಾಕೂರ್ ಮೊದಲ ಓವರ್‌ನಲ್ಲೆ 2 ವಿಕೆಟ್ ಉಡಾಯಿಸಿ ಡೆಲ್ಲಿಗೆ ಆಘಾತವಿಕ್ಕಿದರು. ಮೆಕ್‌ಗರ್ಕ್ (1) ಮತ್ತು ಅಭಿಷೇಕ್ ಪೊರೆಲ್ (0) ವಿಕೆಟ್ ಠಾಕೂರ್ ಪಾಲಾದವು. ಸಮೀರ್ ರಿಝಿÌ (4) ಕೂಡ ವಿಫಲರಾದರು. 7 ರನ್ನಿಗೆ 3 ವಿಕೆಟ್ ಬಿತ್ತು.
ಡು ಪ್ಲೆಸಿಸ್ (29)-ಅಕ್ಷರ್ (22) ಮೊತ್ತವನ್ನು 50ರ ತನಕ ಕೊಂಡೊಯ್ದರು. 7ನೇ ವಿಕೆಟಿಗೆ ಜತೆಗೂಡಿದ ಅಶುತೋಷ್ ಶರ್ಮ-ವಿಪ್ರಾಜ್ ನಿಗಮ್ (39) 22 ಎಸೆತಗಳಿಂದ 55 ರನ್ ಜತೆಯಾಟ ನಡೆಸಿ ಪಂದ್ಯವನ್ನು ರೋಚಕ ಸ್ಪರ್ಶವಿತ್ತರು.
ಸಂಕ್ಷಿಪ್ತ ಸ್ಕೋರ್: ಲಕ್ನೋ-8 ವಿಕೆಟಿಗೆ 209 (ಪೂರಣ್ 75, ಮಾರ್ಷ್ 72, ಮಿಲ್ಲರ್ ಔಟಾಗದೆ 27, ಸ್ಟಾರ್ಕ್ 42ಕ್ಕೆ 3, ಕುಲದೀಪ್ 20ಕ್ಕೆ 2). ಡೆಲ್ಲಿ(ಅಶುತೋಷ್ ಶರ್ಮ 66*,ವಿಪ್ರಾಜ್ ನಿಗಮ್ 39, ಸ್ಟಬ್ಸ್ 34, ಡು ಪ್ಲೆಸಿಸ್ 29, ಅಕ್ಷರ್ 22, ದಿಗ್ವೇಶ್ ರಾಥಿ 31ಕ್ಕೆ 2, ಸಿದ್ಧಾರ್ಥ್ 39ಕ್ಕೆ 2)