ಬೆಂಗಳೂರು: ಬೆಂಗಳೂರಿನ ಹಳೇ ವಿಮಾನ ನಿಲ್ದಾಣದ ಮುರುಗೇಶಪಾಳ್ಯ ಸಿಗ್ನಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಬಿಎಂಟಿಸಿ (BMTC) ಬಸ್ ಇಬ್ಬರನ್ನು ಹೊಡೆದು ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಪಾದಚಾರಿ ಮತ್ತು ಬೈಕ್ ಸವಾರರು ಈ ದುರಂತಕ್ಕೆ ಬಲಿಯಾಗಿದ್ದು, ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹಳೇ ವಿಮಾನ ನಿಲ್ದಾಣದ ಮುರುಗೇಶಪಾಳ್ಯ ಸಿಗ್ನಲ್‌ನಲ್ಲಿ ಇ-ಕಾಮರ್ಸ್ ಡೆಲಿವರಿ ಕೆಲಸ ಮಾಡುತ್ತಿದ್ದ ಬೈಕ್ ಸವಾರರು ಯೂ-ಟರ್ನ್ ತೆಗೆದುಕೊಳ್ಳುತ್ತಿದ್ದಾಗ, ಜಿಮ್ ಮುಗಿಸಿ ಮನೆಗೆ ಮರಳುತ್ತಿದ್ದ ಪಾದಚಾರಿ ರಸ್ತೆ ದಾಟಲು ಯತ್ನಿಸುತ್ತಿದ್ದರು. ಈ ವೇಳೆ KA51 AJ6167 ನಂಬರ್‌ನ ಬಿಎಂಟಿಸಿ ಬಸ್ ಅವರು ಇಬ್ಬರಿಗೂ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ನಂತರ ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ. ಜೀವನ್ ಭೀಮಾನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಗುರುತು ಪತ್ತೆಹಚ್ಚಲು ಮತ್ತು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ತನಿಖೆ ಮುಂದುವರಿಸಿದ್ದಾರೆ.