ಮೈಸೂರು: ಚಾಮರಾಜನಗರ ಜಮೀನಿನ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ, ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಯಾರ ಜಮೀನನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ರಾಜಮಾತೆ ಪ್ರಮೋದದೇವಿ ಒಡೆಯರ್ ಸ್ಪಷ್ಟಪಡಿಸಿದರು.
ಮೈಸೂರು ಅರಮನೆಯಲ್ಲಿ ಚಾಮರಾಜನಗರ ಜಮೀನಿಗೆ ಸಂಬಂಧಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜವಂಶಸ್ಥರಿಗೆ ಸೇರಿದ ಜಮೀನನ್ನು 1950ನೇ ಇಸವಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮೋದಿಸಿ ನೀಡಿದ ದಾಖಲೆಗಳ ಆಧಾರದ ಮೇಲೆ ಚಾಮರಾಜನಗರದ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ತಹಶೀಲ್ದಾರ್ ಹಾಗೂ ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಈ ಪತ್ರಕ್ಕೆ ಈವರೆಗೂ ಜಿಲ್ಲಾಧಿಕಾರಿಗಳು ಪ್ರತಿಕ್ರಯಿಸಿಲ್ಲ ಎಂದರು.
ಈ ಹಿಂದೆ ಮಹಾರಾಜರು ಕೆಲವು ಜಮೀನನ್ನು ರೈತರಿಗೆ ದಾನ ಕೊಟ್ಟಿದ್ದಾರೆ ಎಂದು ಮಾದ್ಯಮಗಳ ಹೇಳಿಕೆಯಿಂದ ತಿಳಿಯಿತು. ರೈತರ ಬಳಿ ದಾಖಲೆಗಳಿದ್ದರೆ ಅಥವಾ ಈ ಸಂಬಂಧ ರೈತರಿಗೆ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ಅರಮನೆ ಕಚೇರಿಯನ್ನು ಸಂಪರ್ಕಿಸಬಹುದು. ಹಾಗೊಂದು ವೇಳೆ ನಮ್ಮ ಜಾಗದಲ್ಲಿ ಸಾರ್ವಜನಿಕರು ಮನೆ ನಿರ್ಮಿಸಿಕೊಂಡಿದ್ದರೂ ನಮ್ಮಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಯಾರೊಬ್ಬರೂ ಆತಂಕ ಪಡಬೇಕಿಲ್ಲ. ಆದರೆ, ನಮ್ಮ ಜಾಗ ಯಾವುದೆಲ್ಲಾ ಎಂಬುದನ್ನು ಗುರುತಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದಲ್ಲೇ ಇದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ಇವೆ ಎಂದು ಹೇಳಿದರು.
“ಸರ್ಕಾರ ಕಂದಾಯ ಗ್ರಾಮ ಮಾಡುವುದಾಗಿ ಹೇಳಿದ್ದು, ಅದಕ್ಕೆ ನಮ್ಮ ವಿರೋಧವಿದೆ. ಆ ಕಾರಣಕ್ಕೆ ನಮ್ಮ ಜಮೀನು ಯಾವುದು ಎಂದು ತಿಳಿಯಲು, ಚಾಮರಾಜನಗರದ ಗ್ರಾಮಗಳ ಸುಮಾರು 4,500 ಎಕರೆಗಳಿಗಿಂತಲೂ ಹೆಚ್ಚಿನ ಜಮೀನಿನ ದಾಖಲೆಗಳು ನಮ್ಮ ಬಳಿ ಇವೆ. ಅದರನ್ವಯ ಆ ಜಮೀನಿನನ್ನು ಗುರುತು ಮಾಡಿ, ಖಾತೆ ಮಾಡಿಕೊಡುವಂತೆ ಪತ್ರ ಬರೆದಿದ್ದೇನೆ. ಈ ವಿಚಾರದಲ್ಲಿ ರೈತರು ಮತ್ತು ನಾವು ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ” ಎಂದರು.
“ಈ ವಿಚಾರದಲ್ಲಿ ಸರ್ಕಾರದ ಮಧ್ಯಸ್ಥಿಕೆ ಬೇಡ. ಮಹಾರಾಜರು ನೀಡಿರುವ ದಾನಪತ್ರ ಹಾಗೂ ಇತರ ದಾಖಲೆಗಳಿದ್ದರೆ ನೇರವಾಗಿ ಅರಮನೆ ಕಚೇರಿಯನ್ನು ಸಂಪರ್ಕಿಸಬಹುದು. ಇದರಲ್ಲಿ ಗೊಂದಲಗಳು ಉಂಟಾಗಿವೆ. ಈ ಗೊಂದಲಗಳಿಗೆ ಯಾರೂ ಕಿವಿಗೊಡಬಾರದೆಂದು ಕೋರಿದರು. ಇನ್ನೂ ಈ ವಿಚಾರವಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು, ಅವರು ನಮ್ಮ ಜಾಗ ಗುರುತಿಸಿಕೊಡುವ ವಿಶ್ವಾಸವಿದೆ ಎಂದು ಹೇಳಿದರು.