ಮೈಸೂರು: ಮೈಸೂರಿನ ಎಸ್‌ಪಿ ಕಚೇರಿ ಬಳಿಯ ರಸ್ತೆಯಲ್ಲಿನ ಮರಗಳನ್ನು ಏಕಾಏಕಿ ಕಡಿದಿರುವ ಘಟನೆ ಖಂಡಿಸಿ ಏ.೧೮ ರಂದು ಸಂಜೆ ೬.೩೦ಕ್ಕೆ ಮರಗಳು ಕಡಿಯಲ್ಪಟ್ಟ ಸ್ಥಳದಲ್ಲಿ ಕಪ್ಪು ಪಟ್ಟಿ ಧರಿಸಿ, ಮೊಂಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲು ಪರಿಸರ ಉಳಿವಿಗಾಗಿ ಕ್ರಿಯಾ ಸಮಿತಿ ನಿರ್ಧರಿಸಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡ ಈ ವಿಷಯ ತಿಳಿಸಿ, ಮೈಸೂರಿನ ತಾಪಮಾನ ಕಳೆದ ವರ್ಷ ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕಾದ ಅರಣ್ಯ ಇಲಾಖೆ ಸುಮಾರು ೪೦ ದೊಡ್ಡ ಮರಗಳನ್ನು ಕಡಿಯಲು ಅನುಮತಿ ನೀಡಿದುದು ಸರಿಯಲ್ಲ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಅಮಾನುಷವಾಗಿ ಮರಗಳನ್ನು ಕಡಿಯಲಾಗಿದೆ. ಇಲ್ಲಿ ರಸ್ತೆ ಅಗಲೀಕರಣವೇ ಅಗತ್ಯವಿರಲಿಲ್ಲ. ಅನಿವಾರ್ಯವಾಗಿದ್ದಲ್ಲಿ ಲಲಿತ ಮಹಲ್ ಹತ್ತಿರದ ಎಟಿಐ ಮುಂಭಾಗದಲ್ಲಿ ಅನುಸರಿಸಿರುವ ವಿಧಾನ ಸೂಕ್ತವಾಗಿತ್ತು ಎಂದರು.
ಈ ಕೃತ್ಯ ಖಂಡಿಸಿ ಏ.೧೮ ರಂದು ಪ್ರತಿಭಟನೆ ಹಮ್ಮಿಕೊಂಡು ಮರಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಆದ್ದರಿಂದ ನಾಗರೀಕರು, ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಏ.೨೪ರಂದು ಮರಗಳಿ ತಿಥಿ ಕಾರ್ಯ ಮಾಡಿ ನಂತರ ಮೈಸೂರಿನಲ್ಲಿ ಈ ರೀತಿ ಘಟನೆಗಳು ಎಂದು ನಡೆಯದಂತೆ ಮನವಿ ಪತ್ರವನ್ನು ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಹಾಗೇ ಅರಣ್ಯ ಇಲಾಖೆಯೂ ಮುಂದಿನ ದಿನಗಳಲ್ಲಿ ಮರ ಕಟ್ಟಾವು ಮಾಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳ ಬಗ್ಗೆ ವಿಶೇಷ ಸಮಿತಿ ಅನುಮತಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ೪೦ ಮರಗಳ ಹನನ ಮಾಡಿರುವುದು ಸಾಲುವುದಿಲ್ಲ ಎಂದು ಉತ್ತನಹಳ್ಳಿ ದೇವಾಲಯದ ದ್ವಾರದ ಮುಂಭಾಗದ ರಸ್ತೆಯಲ್ಲಿ ೨೫ ಮರಗಳನ್ನು ಕಡಿಯಲು ನಿರ್ಧರಿಸಿ, ಮರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಮುಂದುವರೆದರೆ ಮೈಸೂರಲ್ಲಿ ತೀವ್ರ ರೂಪದಲ್ಲಿ ಪರಿಸರ ಪ್ರೇಮಿಗಳು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.ಇದನ್ನು ಓದಿ –ಗಾಳಿ, ಮಳೆಯ ವೇಳೆ ವಿದ್ಯುತ್ ಅನಾಹುತ ತಪ್ಪಿಸಲು ಸೆಸ್ಕ್ ಸನ್ನದ್ಧ
ಮೈಸೂರು ಮಹಾನಗರ ಪಾಲಿಕೆಯೂ ಮೈಸೂರು ನಗರದಲ್ಲಿ ಕಿರಿದಾದ ರಸ್ತೆಗಳಿಗೆ ಅಗಲಿಕರಣ ಮಾಡಲಿ ಅದನ್ನು ಬಿಟ್ಟು ಅನಗತ್ಯವಾಗಿ ೪೦ ವರ್ಷದಿಂದ ಸಮೃದ್ದಿಯಿಂದ ಬೆಳೆದು ಆಮ್ಲಜನಕ, ವಿವಿಧ ಪಕ್ಷಿ, ಕೀಟಗಳಿಗೆ ಆಹಾರ, ವಾಸಸ್ಥಾನವಾಗಿದ ಮರಗಳನ್ನು ಕಡಿಯುತ್ತಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಕಮಲ್ ಗೋಪಿನಾಥ್, ಗಂಟಯ್ಯ, ಗೋಕುಲ್, ಕುಸುಮಾ ಆಯರಹಳ್ಳಿ ಉಪಸ್ಥಿತರಿದ್ದರು.