ಮೈಸೂರು: ಅಂತಾರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕ ಡಾ. ಮೈಸೂರು ಮಂಜುನಾಥ್ ಅವರ ಪುತ್ರಿ, ಉದಯೋನ್ಮುಖ ಪಿಟೀಲು ವಾದಕಿ ಮಾಳವಿ ಮಂಜುನಾಥ್ ಅವರ ಪಿಟೀಲು ವಾದನ ಕಾರ್ಯಕ್ರಮವು ನೇಪಾಳದ ಕಠ್ಮಂಡುವಿನಲ್ಲಿರುವ ತ್ರಿಭುವನ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಏಪ್ರಿಲ್ 22 ರಂದು ನಡೆಯಲಿದೆ.
ತ್ರಿಭುವನ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ ಮಾಳವಿ ಮಂಜುನಾಥ್ ಅವರು ಈ ಕಾರ್ಯಕ್ರಮ ನಡೆಸಿಕೊಡುವರು. ನೇಪಾಳದಲ್ಲಿ ಅವರು ಅತುಲ್ ಸ್ಮೃತಿ ಗುರುಕುಲ ಅಕಾಡೆಮಿ ಆಹ್ವಾನದ ಮೇರೆಗೆ ಪೋಖಾರದಲ್ಲಿಯೂ ಪಿಟೀಲು ವಾದನ ಕಛೇರಿಯನ್ನು ನಡೆಸಿಕೊಡುವರು.
ಮಾಳವಿ ಮಂಜುನಾಥ್ ಅವರು ಕಳೆದ ಜನವರಿಯಲ್ಲಿ ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿಯ ಆಹ್ವಾನದ ಮೇರೆಗೆ ಪ್ರತಿಷ್ಠಿತ ಜಾಫ್ನಾ ಸಾಂಸ್ಕೃತಿಕ ಕೇಂದ್ರ, ಬಟ್ಟಿಕಲೋವಾದ ಈಸ್ಟ್ರನ್ ವಿಶ್ವವಿದ್ಯಾನಿಲಯದಲ್ಲಿ ಪಿಟೀಲು ವಾದನ ಕಛೇರಿಯನ್ನು ನಡೆಸಿಕೊಟ್ಟಿದ್ದಾರೆ.
ಮಾಳವಿ ಮಂಜುನಾಥ್ ಅವರು ಬಾಲ್ಯದಿಂದಲೇ ಕರ್ನಾಟಕ ಸಂಗೀತವನ್ನು ಕಲಿತವರು. ಮಾಳವಿ ಅವರು ತಮ್ಮ ತಾತ ವಿದ್ವಾನ್ ಎಸ್.ಮಹದೇವಪ್ಪ ಮತ್ತು ತಂದೆ ಡಾ.ಮೈಸೂರು ಮಂಜುನಾಥ್ ಅವರಿಂದ ತರಬೇತಿ ಪಡೆದವರು. ಮಾಳವಿ ಅವರು ಕರ್ನಾಟಕ ಹಾಗೂ ದೇಶದ ಇತರ ಭಾಗಗಳಲ್ಲಿ ಈಗಾಗಲೇ ಪಿಟೀಲು ವಾದನದ ಕಛೇರಿಯನ್ನು ನಡೆಸಿಕೊಟ್ಟಿದ್ದಾರೆ.ಇದನ್ನು ಓದಿ –“ಈ ಸಲ ಕಪ್ ನಮ್ದೇ ಅಂತ ಹೇಳ್ಬೇಡಿ, ಹೇಳಿದರೆ ತೊಂದ್ರೆ ಆಗುತ್ತೆ!”
ಮಾಳವಿ ಮಂಜುನಾಥ್ ಅವರು ಮೈಸೂರಿನ ವಿಜಯವಿಠ್ಠಲ ಶಾಲೆಯಲ್ಲಿ ಓದಿದವರು.
ಅವರು ಅನೇಕ ಪ್ರಶಸ್ತಿಗಳ ಪುರಸ್ಕೃತರು.