-ಮೂವರು ಮೃತ್ಯು, ಹಲವರು ಕಣ್ಮರೆಯಾದ ಸ್ಥಿತಿ
ಶ್ರೀನಗರ: ಜಮ್ಮು-ಕಾಶ್ಮೀರ ರಾಜ್ಯದಲ್ಲಿ ನಿರಂತರ ಧಾರಾಕಾರ ಮಳೆಯ ಪರಿಣಾಮ ಉಂಟಾದ ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. ಮನೆಯೊಂದು ಸೇರಿದಂತೆ ಹಲವು ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಹಲವರು ಇನ್ನೂ ಕಣ್ಮರೆಯಾಗಿರುವುದು ಆತಂಕಕಾರಿ ಸ್ಥಿತಿಯನ್ನುಂಟುಮಾಡಿದೆ.
ರಾಂಬನ್ ಜಿಲ್ಲೆಯಲ್ಲಿ ಸಂಭವಿಸಿದ ದಿಡೀರ್ ಭೂ ಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟು, 40ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ಹೊರತೆಗೆದು ಸಾವು ದೃಢಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಮತ್ತು ಭೂ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಮಾರ್ಗಗಳಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಜಿಲ್ಲೆಯ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ.
ಕಳೆದ 48 ಗಂಟೆಗಳ ಕಾಲ ನಡೆದ ಭಾರಿ ಮಳೆಯು ರಾಜ್ಯದ ಹಲವೆಡೆ ತೀವ್ರತೆ ಪಡೆದಿದ್ದು, ಮುಂದಿನ 24 ಗಂಟೆಗಳ ಕಾಲ ಮಳೆಯ ಮುಂದುವರಿಕೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರವಾಹದಿಂದ ತೊಂದರೆಗೊಳಗಾದ ಜನರಿಗಾಗಿ ಸರ್ಕಾರಿ ಶಾಲೆಗಳಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆಯ ಜವಾಬ್ದಾರಿಯನ್ನು ಜಿಲ್ಲಾಡಳಿತ ಹೊತ್ತಿಕೊಂಡಿದೆ.ಇದನ್ನು ಓದಿ –ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ₹25,000 ದಂಡ
ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಹಾಗೂ ಹಲವಾರು ಸ್ವಯಂ ಸೇವಕರು ತುರ್ತು ನೆರವಿನ ಕಾರ್ಯದಲ್ಲಿ ತೊಡಗಿದ್ದು, ಜನರ ಜೀವರಕ್ಷಣೆಗಾಗಿ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.