ಮಂಡ್ಯ: ಸಿಇಟಿ ಪರೀಕ್ಷೆಗೆ ಹಾಜರಾದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿ, ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭೆಯ ನೇತೃತ್ವದಲ್ಲಿ ಮಂಗಳವಾರ ಮಂಡ್ಯ ನಗರದಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ಸರ್ ಎಂ. ಪ್ರತಿಮೆ ಎದುರು ನಡೆಯಿದ ಈ ಪ್ರತಿಭಟನೆ ಬಳಿಕ, ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ವಿದ್ಯಾರ್ಥಿಗಳ ಧಾರ್ಮಿಕ ಗುರುತಿಗೆ ಅಡ್ಡಿಯುಂಟು ಮಾಡಿದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ, ಬೀದರ್, ಸಾಗರ ಸೇರಿದಂತೆ ಹಲವು ಕೇಂದ್ರಗಳಲ್ಲಿ, ಅಧಿಕಾರಿಗಳು “ಜನಿವಾರ ತೆಗೆದುಹಾಕಿದರೆ ಮಾತ್ರ ಪರೀಕ್ಷೆಗೆ ಬಿಡುತ್ತೇವೆ” ಎಂಬ ನಿಬಂಧನೆಗಳನ್ನು ವಿಧಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಂಚಿಸಿರುವುದಾಗಿ ಆರೋಪಿಸಿದರು. ಜನಿವಾರ, ಶಿವದಾರ, ಕಾಶಿದಾರಗಳಂತಹ ಧಾರ್ಮಿಕ ಸಂಕೇತಗಳು ಯಾವುದೇ ನಕಲು ಉಪಕರಣಗಳಿಗೆ ಅವಕಾಶ ನೀಡುವುದಿಲ್ಲ ಎಂಬುದು ಸಾಮಾನ್ಯ ಬುದ್ಧಿ ಎಂದು ಪ್ರತಿಭಟನಾಕಾರರು ನುಡಿದರು.
ಕೇವಲ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಅವರ ಧಾರ್ಮಿಕ ಆಚರಣೆಗೆ ತೊಂದರೆ ನೀಡಿರುವುದು ದುರುದ್ದೇಶಪೂರ್ಣ ಎಂದು ತೀವ್ರವಾಗಿ ಖಂಡಿಸಿದರು. ಇಂತಹ ನಿಲುವು ಹೊಂದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳು ಈ ವಿಷಯದಲ್ಲಿ ತಕ್ಷಣದ ಮಧ್ಯಸ್ಥಿಕೆ ವಹಿಸಿ, ಸಮಾಜದ ಶಾಂತಿಗೆ ಧಕ್ಕೆ ತರುವ ಮನಸ್ಥಿತಿಯವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಜೊತೆಗೆ, ಪರೀಕ್ಷೆಗೆ ಅವಕಾಶ ಲಭಿಸದೇ ಹಾನಿಗೊಳಗಾದ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತ ಸೀಟು ನೀಡಬೇಕು ಮತ್ತು ಘಟನೆಯ ಬಗ್ಗೆ ಕ್ಷಮೆಯಾಚಿಸಬೇಕು ಎಂದು ತಿಳಿಸಿದರು.ಇದನ್ನು ಓದಿ –ಅಕ್ರಮ ಹಣ ವರ್ಗಾವಣೆ ಪ್ರಕರಣ: ತೆಲುಗು ನಟ ಮಹೇಶ್ ಬಾಬುಗೆ ಇ.ಡಿ ಸಮನ್ಸ್
ಈ ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭೆಯ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಗೋಪಾಲಕೃಷ್ಣ ಶೆಣೈ, ಶಂಕರನಾರಾಯಣ ಶಾಸ್ತ್ರಿ ಹಾಗೂ ಹಲವಾರು ಪ್ರತಿನಿಧಿಗಳು ಭಾಗವಹಿಸಿದ್ದರು.