ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಪೈಶಾಚಿಕ ದಾಳಿಯಲ್ಲಿ ಕನಿಷ್ಠ 27ಕ್ಕೂ ಹೆಚ್ಚು ಪ್ರವಾಸಿಗರು ಜೀವ ಉಳಿಸಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನದ ವೇಳೆ, ಪಹಲ್ಗಾಮ್‌ನ ಬೈಸರನ್‌ನ ಹಸಿರು ಹೊಲಗಳಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ಪ್ರವಾಸಿಗರ ಬಳಿಗೆ ಸೇನಾ ಸಮವಸ್ತ್ರ ಧರಿಸಿದ್ದ ಭಯೋತ್ಪಾದಕರು ಬಂದು, ಆತ್ಮೀಯವಾಗಿ ಮಾತನಾಡುವಂತೆ ನಾಟಕವಾಡಿ ಅಚಾನಕವಾಗಿ ಗುಂಡು ಹಾರಿಸಿದ್ದಾರೆ. ಈ ಕ್ರೂರ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ಸೇರಿದಂತೆ ಹಲವು ಮಂದಿ ಸಾವಿಗೀಡಾಗಿದ್ದಾರೆ.
ದಾಳಿಯ ತೀವ್ರತೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆಮಾಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಬಳಿಕ ಅಮಿತ್ ಶಾ ತುರ್ತು ಸಭೆ ನಡೆಸಿದ್ದು, ಈ ಸಭೆಯಲ್ಲಿ ಗೃಹ ಕಾರ್ಯದರ್ಶಿ, ಐಬಿ ಅಧಿಕಾರಿಗಳು ಮತ್ತು ಇತರ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಕೂಡ ಸಭೆಯಲ್ಲಿ ವರ್ಚುವಲ್ ರೂಪದಲ್ಲಿ ಭಾಗಿಯಾಗಿದ್ದಾರೆ.
ಈ ಭಯಾನಕ ಘಟನೆಯ ಕುರಿತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಕಿಡಿಕಾರಿದ್ದು, “ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಮಾನವೀಯತೆಗೂ ವಿರುದ್ಧವಾದ ಪಾಪಕೃತ್ಯ” ಎಂದು ಹೇಳಿದ್ದಾರೆ.ಇದನ್ನು ಓದಿ –UPSC ಫಲಿತಾಂಶ 2025 ಪ್ರಕಟ: ಶಕ್ತಿ ದುಬೆಗೆ ಮೊದಲ ಸ್ಥಾನ
ಸದ್ಯ ಭದ್ರತಾ ಪಡೆಗಳು ಹಲ್ಲೆಗಾರರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಆರಂಭಿಸಿವೆ. ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.