ಮೈಸೂರು: ಮೈಸೂರಿನ ವಿನೋಬ ರಸ್ತೆಯಲ್ಲಿರುವ ಎಂಕೆ ಹಾಸ್ಟೆಲ್‌ಗೆ ವಕ್ಫ್ ಮಂಡಳಿ ನೋಟಿಸ್ ನೀಡಿರುವುದನ್ನು ಖಂಡಿಸಿ, ವಿನೋಬ ರಸ್ತೆಯ ವರ್ತಕರು, ಕನ್ನಡ ಪರ ಸಂಘಟನೆ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ಮುಂಭಾಗ ಜಮಾಯಿಸಿದ ನೂರಾರು ಮಂದಿ ವಕ್ಫ್ ಮಂಡಳಿ ನಿರ್ಧಾರಕ್ಕೆ ಮೌನವಾಗಿರುವ ರಾಜ್ಯ ಸರ್ಕಾರಕ್ಕೆ ದಿಕ್ಕಾರ, ವಕ್ಫ ಬೋರ್ಡ್ ರದ್ದುಗೊಳಿಸಿ, ಅನಧಿಕೃತ ನೋಟಿಸ್ ತೆರವುಗೊಳಿಸಿ, ಸನಾತನ ಹಿಂದೂ ಧರ್ಮಕ್ಕೆ ಜೈ, ನಮ್ಮದೂ ನಮ್ಮದೂ ಎಂಕೆ ಹಾಸ್ಟಲ್ ನಮ್ಮದ್ದು ಎಂದು ಘೋಷಣೆ ಕೂಗಿದರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಸ್ಟೆಲ್ ಗೋಡೆ ಮೇಲೆ ಅಂಟಿಸಿದ್ದ ನೋಟಿಸ್ ಮೇಲೆ ಬರೆಯುವ ಮೂಲಕ ಅದನ್ನು ವಿರೋಧಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ೧೦೯ ವರ್ಷಗಳ ಇತಿಹಾಸ ವಿರುವ ಎಂಕೆ ಹಾಸ್ಟೆಲ್ ಗೋಡೆ ಮೇಲೆ ಏಕಾಏಕಿ ವಕ್ಫ್ ಮಂಡಳಿ ನೋಟಿಸ್ ಅಂಟಿಸಿ, ನಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ಮೈಸೂರಿನಲ್ಲಿ ಮಹಾರಾಜರ ಹಿನ್ನೆಲೆ ಇದೆಯೇ ಹೊರತು ಹೈದರಾಲಿ, ಟಿಪ್ಪು ಸುಲ್ತಾನ್ ಅವರ ಇತಿಹಾಸವಿಲ್ಲ ಎಂದರು.
೨೦೧೩ರ ವಕ್ಫ್ ಕಾಯ್ದೆ ತಿದ್ದುಪಡಿಯಲ್ಲಿ ಖಾಸಗಿ ಜಮೀನು, ಸರ್ಕಾರಿ ಜಮೀನು ಅಥವಾ ಯಾರದ್ದೇ ಜಮೀನು ಆದರೂ ಕಬಳಿಸಲು ಅವಕಾಶ ನೀಡಲಾಗಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ನೇತೃತ್ವದಲ್ಲಿ ಈ ತಿದ್ದುಪಡಿ ಮಾಡಲಾಗಿತ್ತು. ಅದಕ್ಕೇ ಈಗ ಪ್ರಧಾನಿ ಮೋದಿ ಹೊಸ ವಕ್ಫ್ ತಿದ್ದುಪಡಿ ಕಾನೂನು ತಂದಿದ್ದಾರೆ. ಖಾಸಗಿ ಆಸ್ತಿಯನ್ನು ಕಬಳಿಸಲು ವಕ್ಫ್ ಮಂಡಳಿ ಮುಂದಾಗಿದೆ, ಇದಕ್ಕೆ ಖಂಡಿತ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು.
ದೇವರಾಜು ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂದು ಹೇಳಿದ್ದರು. ಅದು ಈಗ ಏಕೆ ಅನ್ವಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿ, ವಕ್ಫ್ ನವರು ಹಾಸ್ಟೆಲ್ ಮಾಲೀಕ ಮನ್ನಾರ್ ಕೃಷ್ಣಶೆಟ್ಟಿ ಅವರಿಗೆ ಹುಟ್ಟಿದ್ದಾರಾ ಅಥವಾ ಅವರ ಕುಟುಂಬಕ್ಕೆ ಸೇರಿದ್ದಾರಾ? ಎಂದು ಅವರು ಕೇಳಿದರು. ಸಿದ್ದರಾಮಯ್ಯ ಅವರು ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆ, ಇದಕ್ಕೆಲ್ಲ ನಾವು ಅವಕಾಶ ಮಾಡಿ ಕೊಡುವುದಿಲ್ಲ, ಇದನ್ನು ಇಲ್ಲೇ ಹರಿದು ಬಿಸಾಕುತ್ತೇವೆ ಎಂದರು.

ಎಂಕೆ ಹಾಸ್ಟೆಲ್ ಮಾಲೀಕರಾದ ಸಿ.ವಿ. ರಾಮಚಂದ್ರ ಶೆಟ್ಟಿ ಮಾತನಾಡಿ, “ನಮ್ಮ ಜಾಗದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಅವರ ಬಳಿ ಏನು ದಾಖಲೆಗಳಿವೆಯೋ ಅದನ್ನು ತೋರಿಸಲಿ, ನಾವು ಕೋರ್ಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇತ್ತೀಚೆಗೆ ವಕ್ಫ್ ಮಂಡಳಿ ಸಾರ್ವಜನಿಕ ಸ್ಥಳಗಳನ್ನು ಮತ್ತು ಖಾಸಗಿ ಆಸ್ತಿಗಳನ್ನು ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ವಕ್ಫ್ ಮಂಡಳಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. “ಅದು ನಮ್ಮ ಆಸ್ತಿ ಅಂತ ಒಂದೇ ಒಂದು ದಾಖಲೆ ಇದ್ದರೇ ತೋರಿಸಲಿ. ನಾವು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.ಇದನ್ನು ಓದಿ –ನದಿಯಲ್ಲಿ ಈಜಲು ಹೋದ ಮೂವರು ಕಾಲೇಜು ವಿದ್ಯಾರ್ಥಿಗಳು ನೀರುಪಾಲು
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಮಾಜಿ ನಗರಪಾಲಿಕೆ ಸದಸ್ಯರಾದ ಪ್ರಶಾಂತ್‌ಗೌಡ,, ಪ್ರಮೀಳ ಭರತ್, ಕನ್ನಡಪರ ಹೋರಾಟಗಾರರಾದ ಮೈಕಾ ಪ್ರೇಮ್ ಕುಮಾರ್, ತೇಜಸ್ ಲೋಕೇಶ್ ಗೌಡ, ಎಸ್.ಕೆ.ದಿನೇಶ್, ಹೋಟಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಾರಾಯಣಗೌಡ, ನವೀನ್ ಹೆಬ್ಬಾಳ್, ನೇಹ ಮತ್ತಿತರರು ಪಾಲ್ಗೊಂಡಿದರು.