ಬೆಂಗಳೂರು: ಕನ್ನಡಿಗರ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಪ್ರಕರಣವನ್ನು ಕನ್ನಡ ಪರ ಹೋರಾಟಗಾರರು ದಾಖಲಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 352(1), 351(2), ಮತ್ತು 353 ರಡಿ ದ್ವೇಷಕ್ಕೆ ಪ್ರೇರಣೆ, ಕ್ರಿಮಿನಲ್ ಮಾನಹಾನಿ ಹಾಗೂ ಭಾಷಾ ಭಾವನೆಗಳನ್ನು ಕೆರಳಿಸಿದ ಆರೋಪಗಳ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮತ್ತು ನೋವನ್ನು ಉಂಟುಮಾಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿವಾದವು ಏಪ್ರಿಲ್ 25 ಹಾಗೂ 26 ರಂದು ಬೆಂಗಳೂರಿನ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಉದ್ಭವಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕನು ಗಾಯಕನಿಗೆ ಕನ್ನಡದಲ್ಲಿ ಹಾಡಲು ಕೇಳಿದ್ದಕ್ಕೆ ಪ್ರತಿಸ್ಪಂದಿಸಿದ ಸೋನು ನಿಗಮ್, “ಇದಕ್ಕಾಗಿಯೇ ಪಹಲ್ಗಾಮ್ ದಾಳಿ ನಡೆಯಿತು” ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂದರ್ಭ ನಾರಾಯಣ ಗೌಡ ಮಾತನಾಡಿ, “ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಕನ್ನಡಿಗರಲ್ಲಿ ಬೆಳೆದ ಗಾಯಕ ಸೋನು ನಿಗಮ್ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಇದನ್ನು ಓದಿ –ಯೂನಿಯನ್ ಬ್ಯಾಂಕ್‌ನಲ್ಲಿ 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ವಿಚಾರ ಇದೀಗ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ಮುಂದಿನ ಕ್ರಮದತ್ತ ಸರ್ವರ ನೋಟ ಹೊಂದಿದೆ.