ಹಾವೇರಿ: ರಾಜ್ಯದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಈ ಬಾರಿಗೆ ₹1 ಲಕ್ಷ 33 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ₹650 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹಾವೇರಿ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಮತ್ತು ಅಧ್ಯಾತ್ಮದಲ್ಲಿ ಶ್ರೇಷ್ಠ ಸ್ಥಾನ ಹೊಂದಿದೆ ಎಂದು ಪ್ರಶಂಸಿಸಿದರು.
“ಈ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆದ್ದಿದೆ ಎನ್ನುವುದು ಹೆಮ್ಮೆನಿಸುವ ವಿಷಯ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹಾವೇರಿಯಲ್ಲಿ ನಾವು ಗೆಲುವು ಸಾಧಿಸೋಣ ಎಂಬ ವಿಶ್ವಾಸವಿದೆ,” ಎಂದು ಸಿಎಂ ಹೇಳಿದರು.
“ಚುನಾವಣೆಗೂ ಮೊದಲು ನೀಡಿದ್ದ ಐದು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಇದು ಜನರ ಮತದ ಘನತೆಗೆ ನಾವು ನೀಡಿರುವ ಗೌರವ. ಬಿಜೆಪಿಯವರು ಮತ್ತು ಜೆಡಿಎಸ್ ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಹಸಿ ಸುಳ್ಳುಗಳನ್ನು ಹರಡುತ್ತಿದ್ದಾರೆ.
ಆದರೆ ಈ ಬಾರಿಯ ಬಜೆಟ್ ಗಾತ್ರವು ಕಳೆದ ವರ್ಷಕ್ಕಿಂತ ₹38 ಸಾವಿರ ಕೋಟಿ ಹೆಚ್ಚಾಗಿದೆ. ಬಂಡವಾಳ ವೆಚ್ಚವನ್ನೂ ₹31 ಸಾವಿರ ಕೋಟಿ ಹೆಚ್ಚಿಸಿದ್ದು, ಒಟ್ಟು ₹83 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಾಗಿದೆಯೆಂದು ಅವರು ಸ್ಪಷ್ಟಪಡಿಸಿದರು. ಗ್ಯಾರಂಟಿಗಳಿಗೆ ಮಾತ್ರವೇ ಹೆಚ್ಚುವರಿಯಾಗಿ ₹50 ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ,” ಎಂದರು.
ಆರ್. ಅಶೋಕ್ ಮತ್ತು ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ನಕಲಿ ಜನಾಕ್ರೋಶ ಸಭೆಗಳನ್ನು ನಡೆಸುತ್ತಿರುವುದನ್ನು ಟೀಕಿಸಿದ ಸಿಎಂ, “ಯಾವುದಾದರೂ ಮಾನ ಮರ್ಯಾದೆ ಇದ್ದರೆ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. ಇಂದು ಜನರ ಆಕ್ರೋಶ ಬಿಜೆಪಿಯವರ ಮೇಲೆಯೇ ಇದೆ. ಇದನ್ನು ಆರ್. ಅಶೋಕ್ ಮತ್ತು ವಿಜಯೇಂದ್ರ ಅವರು ಅರಿಯಬೇಕು,” ಎಂದು ಗುಡುಗಿದರು.ಇದನ್ನು ಓದಿ –ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಕುರಿತು ಇಂದು ವಿಶ್ವಸಂಸ್ಥೆಯಲ್ಲಿ ಮಹತ್ವದ ಸಭೆ
ಹೀಗೆಯೇ ಶಾಸಕ ಶ್ರೀನಿವಾಸ್ ಮಾನೆಯವರನ್ನು ಮೆಚ್ಚಿದ ಸಿಎಂ, “ಮಾನೆಯವರು ಕ್ಷೇತ್ರದ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಕ್ಷೇತ್ರದ ಜನರು ಸದಾ ಅವರ ಬೆಂಬಲದಲ್ಲಿ ನಿಲ್ಲಬೇಕು,” ಎಂದು ಮನವಿ ಮಾಡಿದರು.