ಬೆಂಗಳೂರು: ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ಪ್ರಯಾಣಿಕರಿಗೆ ಹೆಮ್ಮೆಗೇರ್ಪಟ್ಟ ಸುದ್ದಿ – ಈಗ ಟಿಕೆಟ್ ಪಡೆಯುವುದು ಹೆಚ್ಚು ವೇಗವಾಗಿ, ಸುಲಭವಾಗಿ ಮತ್ತು ಡಿಜಿಟಲ್ ರೀತಿಯಲ್ಲಿ ಸಾಧ್ಯವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಹೊಸ ಸ್ವಯಂಸೇವಾ QR ಟಿಕೆಟ್ ಯಂತ್ರಗಳು (Self-Service Ticket Machines) ಅಳವಡಿಸಿದೆ.
ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಹಾಗೂ ಡಿಜಿಟಲ್ ಸೇವೆಗಳನ್ನು ಪ್ರೋತ್ಸಾಹಿಸಲು BMRCL ಬದ್ಧವಾಗಿದೆ. ಈ ನಿಟ್ಟಿನಲ್ಲಿ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ನೂತನ ಸ್ವಯಂಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ಈ ಯಂತ್ರಗಳ ಮೂಲಕ QR ಆಧಾರಿತ ಟಿಕೆಟ್‌ಗಳನ್ನು ತ್ವರಿತವಾಗಿ ಮತ್ತು ಸಂಪರ್ಕರಹಿತವಾಗಿ ಪಡೆಯಬಹುದು. ಇವು ಸಾಂಪ್ರದಾಯಿಕ ಟೋಕನ್ ವ್ಯವಸ್ಥೆಯ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದ್ದು, ಮೆಟ್ರೋ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ತರಲಿದೆ.
ಟಿಕೆಟ್ ಪಡೆಯುವ ಸರಳ ಪ್ರಕ್ರಿಯೆ:
- ಗಮ್ಯಸ್ಥಾನ ಆಯ್ಕೆ: ಪ್ರಯಾಣಿಕರು ಡ್ರಾಪ್‌ಡೌನ್ ಮೆನು ಅಥವಾ ನಕ್ಷೆಯ ಮೂಲಕ ಗಮ್ಯಸ್ಥಾನ ಆಯ್ಕೆಮಾಡಬಹುದು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಭಾಡೆ ಪರಿಶೀಲಿಸಬಹುದು.
- ಪಾವತಿ ಪ್ರಕ್ರಿಯೆ: ಯಾವುದೇ UPI ಆಧಾರಿತ ಮೊಬೈಲ್ ಆಪ್‌ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪಾವತಿ ಯಶಸ್ವಿಯಾದ ತಕ್ಷಣ ಪೇಪರ್ ಆಧಾರಿತ QR ಟಿಕೆಟ್ ತಕ್ಷಣವೇ ದೊರೆಯುತ್ತದೆ.
ಈ ಟಿಕೆಟ್‌ಗಳನ್ನು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬಳಸಬಹುದು. ಪ್ರಯಾಣದ ಬಳಿಕ, ಪ್ರಯಾಣಿಕರು ಟಿಕೆಟ್‌ಗಳನ್ನು ನಿರ್ದಿಷ್ಟ ಕಸದ ಬಾಕ್ಸ್‌ಗಳಲ್ಲಿ ಹಾಕುವಂತೆ BMRCL ಮನವಿ ಮಾಡಿದೆ – ಇದು ಪರಿಸರ ಸ್ನೇಹಿ ಕ್ರಮವಾಗಿದೆ.