ಡೆಹ್ರಾಡೂನ್: ಗಂಗಾ ನದಿಯ ಮೂಲ ತೊರೆಗಳಲ್ಲಿ ಒಂದಾದ ಗಂಗೋತ್ರಿಯತ್ತ ಹೋಗುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭಾಗೀರಥಿ ನದಿ ಬಳಿ ಪತನಗೊಂಡು ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಸಂಭವಿಸಿದ ಅವಘಡದಲ್ಲಿ ಹೆಲಿಕಾಪ್ಟರ್‌ನಲ್ಲಿ ಒಟ್ಟು ಏಳು ಮಂದಿ ಇದ್ದರೆಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದ್ದು, ಈ ಪೈಕಿ ಐವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಘಟನೆ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು, ಸೇನಾ ಸಿಬ್ಬಂದಿ, ವಿಪತ್ತು ನಿರ್ವಹಣಾ ತಕ್ಷಣಿಕ ಪ್ರತಿಕ್ರಿಯಾ ತಂಡ (QRT), 108 ಆಂಬ್ಯುಲೆನ್ಸ್, ಭಟ್ವಾರಿಯ ಬ್ಲಾಕ್ ಅಭಿವೃದ್ಧಿ ಅಧಿಕಾರಿ (BDO) ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಅಪಘಾತದ ಮೂಲಕಾರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.ಇದನ್ನು ಓದಿ –ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ
ಇದೊಂದು ಭೀಕರ ದುರ್ಘಟನೆವಾಗಿದ್ದು, ಸ್ಥಳೀಯರಲ್ಲಿ ಭೀತಿಯ ವಾತಾವರಣವಿದೆ.