ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ದುರ್ಘಟನೆಯೊಂದು ನಡೆದಿದ್ದು, ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಬಾಲಕನು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ರಾರಾವಿ ಗ್ರಾಮದ ಭೀರಪ್ಪ (45) ಮತ್ತು ಸುನೀಲ್ (26) ಎಂಬವರು ಕುರಿ ಮೇಯಿಸಲು ಹೊಲಕ್ಕೆ ಹೋಗಿದ್ದರು. ಅವರ ಜೊತೆಗೆ ವಿನೋದ್ (14) ಎಂಬ ಬಾಲಕನೂ ಇದ್ದನು. ಈ ವೇಳೆ ಮಳೆಯಾಗಲು ಆರಂಭವಾದಾಗ ಮೂವರು ಸ್ಥಳೀಯ ಮರದ ಆಶ್ರಯ ಪಡೆದಿದ್ದರು. ಆದರೆ, ಆ ಕ್ಷಣದಲ್ಲೇ ಆ ಮರಕ್ಕೆ ಸಿಡಿಲು ಬಡಿದು, ಭೀರಪ್ಪ ಮತ್ತು ಸುನೀಲ್ ಸ್ಥಳದಲ್ಲೇ ಮೃತರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ವಿನೋದ್‌ನನ್ನು ತಕ್ಷಣವೇ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಶಾಕ್ ಅನುಭವಿಸಿರುವ ಕುಟುಂಬ ಮತ್ತು ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.ಇದನ್ನು ಓದಿ -2025–26ನೇ ಶೈಕ್ಷಣಿಕ ವರ್ಷದಿಂದಲೇ ರಾಜ್ಯ ಶಿಕ್ಷಣ ನೀತಿ (SEP) ಜಾರಿಗೆ: ಸಚಿವ ಡಾ. ಎಂ.ಸಿ. ಸುಧಾಕರ್
ಘಟನೆ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ದುರ್ಘಟನೆ ರಾರಾವಿ ಗ್ರಾಮದಲ್ಲಿ ಶೋಕಾಚರಣೆಯ ವಾತಾವರಣ ಸೃಷ್ಟಿಸಿದೆ.