- ಬಿಯರ್, ವಿಸ್ಕಿ, ಬ್ರ್ಯಾಂಡಿ ಬೆಲೆಯಲ್ಲಿ 15 ರೂ.ವರೆಗೆ ಏರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯಂತೆ, ಮೇ 15ರ ಗುರುವಾರದಿಂದ ಮದ್ಯದ ದರಗಳಲ್ಲಿ ಪರಿಷ್ಕರಣೆ ಜಾರಿಯಾಗಿದ್ದು, ಭಾರತೀಯ ಮದ್ಯ (IML) ಮತ್ತು ಬಿಯರ್‌ಗಳ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ “ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) ಎರಡನೇ ತಿದ್ದುಪಡಿ ನಿಯಮಗಳು – 2025” ಅಧಿಸೂಚನೆಯಂತೆ, ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ (AED) ಹೆಚ್ಚಳವಾಗಿದ್ದು, ಇದರ ಪರಿಣಾಮವಾಗಿ ಮದ್ಯಪ್ರಿಯರಿಗೆ ಇನ್ನು ಮುಂದೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ.
ಭಾರತೀಯ ಮದ್ಯಗಳ ತೆರಿಗೆ ಸ್ಲ್ಯಾಬ್‌ಗಳಲ್ಲಿ ಸಂಪೂರ್ಣ ಬದಲಾವಣೆ ಆಗಿದ್ದು, ಮೊದಲು ಇದ್ದ 18 ತೆರಿಗೆ ಸ್ಲ್ಯಾಬ್‌ಗಳನ್ನು ಈಗ 16ಕ್ಕೆ ಇಳಿಸಲಾಗಿದೆ. ಇದರ ಜೊತೆಗೆ ಮೊದಲ ನಾಲ್ಕು ಸ್ಲ್ಯಾಬ್‌ಗಳ ಗರಿಷ್ಠ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಇದರ ಪರಿಣಾಮವಾಗಿ 180 ಎಂಎಲ್ ಬಾಟಲಿ ಮತ್ತು ಸ್ಯಾಷ್‌ಗಳ ಮೇಲೆ ಗರಿಷ್ಠ 15 ರೂ.ವರೆಗೆ ಬೆಲೆ ಏರಿಕೆಯಾಗಿದೆ.
ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ ಮೊದಲಾದ ಮದ್ಯಪಾನ ಪಾನೀಯಗಳ ಬೆಲೆ ವಿಶೇಷವಾಗಿ ಏರಿಕೆಯಾಗಲಿದ್ದು, ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಮದ್ಯವು ಈಗ ಅಧಿಕ ದರಕ್ಕೆ ಲಭ್ಯವಾಗಲಿದೆ.
ಬಿಯರ್‌ಗಳ ಮೇಲೂ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರ್ಯಾಂಡ್‌ಗಳ ಉತ್ಪಾದನಾ ವೆಚ್ಚದ ಆಧಾರದಲ್ಲಿ, ಪ್ರತಿ ಬಾಟಲಿಗೆ ಸರಾಸರಿ 5ರಿಂದ 15 ರೂ.ವರೆಗೆ ದರ ಏರಿಕೆಯಾಗಲಿದೆ. ಆದರೆ ಕೆಲ ಅಗ್ಗದ ಬಿಯರ್‌ಗಳ ಬೆಲೆಯಲ್ಲಿ 25 ರೂ.ವರೆಗೆ ಕಡಿತವಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.ಇದನ್ನು ಓದಿ –ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ದಾಳಿ: 48 ಗಂಟೆಗಳಲ್ಲಿ 6 ಉಗ್ರರು ಎನ್‌ಕೌಂಟರ್
ಈ ಬದಲಾವಣೆಗಳಿಂದ ರಾಜ್ಯದ ಮದ್ಯ ದರಗಳಲ್ಲಿ ಗಮನಾರ್ಹ ಬದಲಾವಣೆ ಸಂಭವಿಸಿದ್ದು, ಗ್ರಾಹಕರ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.