ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಐಇಡಿ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಪಟ್ಟ 2023ರ ಪ್ರಕರಣದಲ್ಲಿ ಸ್ಲೀಪರ್ ಸೆಲ್ ಸದಸ್ಯರೆಂದು ಶಂಕೆ ಇರುವ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಇಂಡೋನೇಷ್ಯಾದ ಜಕಾರ್ತಾ ನಗರದ ಮೂಲಕ ಭಾರತಕ್ಕೆ ಮರಳುತ್ತಿದ್ದಾಗ, ಮುಂಬೈ ವಿಮಾನ ನಿಲ್ದಾಣದಲ್ಲಿ ಎನ್‌ಐಎ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಈ ಇಬ್ಬರು ಶಂಕಿತರು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಗೆ ಸೇರಿದವರಾಗಿದ್ದು, ಪುಣೆಯಲ್ಲಿ ಐಇಡಿ (ವಿಸ್ಫೋಟಕ ಸಾಧನ) ಗಳನ್ನು ತಯಾರಿಸಿ ಪರೀಕ್ಷೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿಗಳು ದೇಶಕ್ಕೆ ಮರಳುತ್ತಿದ್ದ ವೇಳೆ ಎನ್‌ಐಎ ಅವರ ಮೇಲ್ವಿಚಾರಣೆಯಲ್ಲಿ ಅವರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಇದನ್ನು ಓದಿ -‘ಕಲ್ಯಾಣ ಕರ್ನಾಟಕ’ ಅಭಿವೃದ್ಧಿಗೆ ₹5,000 ಕೋಟಿ ಮೀಸಲು: ಮುಖ್ಯಮಂತ್ರಿ ಸಿದ್ದರಾಮಯ್ಯ
ಎನ್‌ಐಎ ಅಧಿಕಾರಿಗಳ ಪ್ರಕಾರ, ಬಂಧಿತರು ಐಸಿಸ್ ಸಂಚುಗಳಲ್ಲಿ ತೊಡಗಿಸಿಕೊಂಡಿರುವ ಸಾಕ್ಷ್ಯಾಧಾರಗಳಿದ್ದು, ಅವರ ಪೈಕಿ ಕೆಲವರು ವಿದೇಶದಿಂದ ಕಾರ್ಯಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿತ್ತು. ಈಗ ಈ ಬಂಧನೆಯಿಂದ ತನಿಖೆಗೆ ಹೊಸ ದಿಕ್ಕು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.