ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಇರುವ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಸ್ಪಷ್ಟನೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್ ನೀಡಿದಂತಾಗಿದೆ.
“ನಾವು ಪ್ರತಿಮಾಸವೂ ಹಣ ಕೊಡುತ್ತೇವೆ ಎಂದಿಲ್ಲ,” ಎಂದು ಡಿಕೆಶಿ ಸರಳವಾಗಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, “ಈ ಹಣ ಕೂಡ ಬಂದಾಗ ಬರುತ್ತೆ. ಇದನ್ನು ನಾವು ಪ್ರತಿಮಾಸ ಕೊಡುತ್ತೇವೆ ಎಂದು ಯಾವುದೇ ಸಮಯದಲ್ಲೂ ಹೇಳಿಲ್ಲ,” ಎಂದರು. ಈ ಹೇಳಿಕೆಯಿಂದ ಸರ್ಕಾರದ ವಾಗ್ದಾನಗಳ ಬಗ್ಗೆ ಪ್ರಶ್ನೆ ಏರಿದೆ.
ಯೋಜನೆಯ ಹಣ ಬಾಕಿ: ಜನರಲ್ಲಿ ಅಸಮಾಧಾನ
ಕಳೆದ ಕೆಲ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಹಣ ಜಮೆಯಾಗದ ಹಿನ್ನೆಲೆ, ಸರಕಾರದ ವಿರುದ್ಧ ಮಹಿಳೆಯರು ಮತ್ತು ಸಾಮಾನ್ಯ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. ಪ್ರತಿ ತಿಂಗಳು ಹಣ ನೀಡಲಾಗುತ್ತಿದೆ ಎಂಬ ನಂಬಿಕೆಯಲ್ಲಿ ನಿರೀಕ್ಷೆಯಿಂದ ಕಾದಿದ್ದ ಫಲಾನುಭವಿಗಳಿಗೆ, ಡಿಕೆಶಿಯ ಈ ಹೇಳಿಕೆ ನಿರಾಶೆ ಮೂಡಿಸಿದೆ.
ಡಿಕೆಶಿಯ ಸ್ಪಷ್ಟನೆ:
“ನೀವು ತೆರಿಗೆಗಳನ್ನು ಕಟ್ಟುತ್ತಾ ಇರಬೇಕು, ನಾವು ಹಣ ಕೊಡುತ್ತಾ ಇರಬೇಕು ಅನ್ನೋ ನಿಯಮ ಇಲ್ಲ. ಗುತ್ತಿಗೆ ಕೆಲಸ ಮಾಡುವವರಿಗೆ ಕೂಡ ಹಣ ತಕ್ಷಣ ಬರುತ್ತದೆ ಎಂದು ಹೇಳಲು ಆಗಲ್ಲ. ಇದೇ ರೀತಿಯಲ್ಲಿ ಗೃಹಲಕ್ಷ್ಮಿ ಹಣವೂ ಸಮಯ ಬಂದಾಗ ಕೊಡಲಾಗುತ್ತದೆ,” ಎಂದು ಅವರು ಹೇಳಿದರು.
ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಸಜ್ಜು
ನಾಳೆ ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರದ ಎರಡು ವರ್ಷಗಳ ಸಾಧನೆಗಾಗಿ ಆಯೋಜಿಸಿರುವ ಸಮರ್ಪಣಾ ಸಂಕಲ್ಪ ಸಮಾವೇಶಕ್ಕೆ ಸಂಬಂಧಿಸಿದಂತೆ ಡಿಕೆಶಿ ತಯಾರಿ ಪರಿಶೀಲನೆ ನಡೆಸಿದರು. “ವಿಜಯನಗರದ ಇತಿಹಾಸದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಇಂದಿರಾ ಗಾಂಧಿ ಅವರ ಪುತ್ಥಳಿಯ ಲೋಕಾರ್ಪಣೆ ಕೂಡ ನಡೆಯಲಿದೆ,” ಎಂದು ಅವರು ಹೇಳಿದರು.
ವಿಜಯನಗರ: ಪೋಡಿ ಮುಕ್ತ ಜಿಲ್ಲೆ
ಡಿಕೆಶಿಯವರ ಪ್ರಕಾರ, ವಿಜಯನಗರದಲ್ಲಿ ಈಗಾಗಲೇ 79,000 ರೈತರಿಗೆ ಭೂಮಿಯ ಹಕ್ಕು ಪತ್ರ ನೀಡಲಾಗಿದ್ದು, ಜಿಲ್ಲೆಯನ್ನು ಪೋಡಿ ಮುಕ್ತವೆಂದು ಘೋಷಿಸಲಾಗಿದೆ. “ಇದು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವತ್ತ ಒಂದು ಹೆಜ್ಜೆ,” ಎಂದು ಅವರು ಹೇಳಿದರು.ಇದನ್ನು ಓದಿ –ಹಳ್ಳಕ್ಕೆ ಬಿದ್ದ KSRTC ಬಸ್ -ಸಬ್ ಇನ್ಸ್‌ಪೆಕ್ಟರ್ ದುರ್ಮರಣ
ಬೆಂಗಳೂರು ಮಳೆ ಸ್ಥಿತಿ: ಸರ್ಕಾರ ಸಜ್ಜು
ಬೆಂಗಳೂರು ಮಳೆ ಪರಿಸ್ಥಿತಿಯ ಕುರಿತು ಮಾತನಾಡಿದ ಡಿಕೆಶಿ, “ಬಿಬಿಎಂಪಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಮಳೆ ಪರಿಣಾಮವನ್ನು ನಿಯಂತ್ರಿಸಲು ಈಗಾಗಲೇ ಅಗತ್ಯ ಕ್ರಮಗಳು ಕೈಗೊಳ್ಳಲಾಗಿದೆ,” ಎಂದರು. ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜಕಾಲುವೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.