ನವದೆಹಲಿ: ಭಾರತವು ಜಾಗತಿಕ ಆರ್ಥಿಕ ಶ್ರೇಣಿಯಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಮುಟ್ಟಿದ್ದು, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ. ಈ ಕುರಿತಂತೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅವರ ಮಾತುಗಳಲ್ಲಿ, “ಭಾರತದ ಒಟ್ಟು ಜಿಡಿಪಿ ಈಗ 4 ಟ್ರಿಲಿಯನ್ ಅಮೆರಿಕನ್ ಡಾಲರ್ ಅನ್ನು ತಲುಪಿದೆ. ಇದರೊಂದಿಗೆ ಭಾರತವು ಜಾಗತಿಕ ಆರ್ಥಿಕ ಶ್ರೇಣಿಯಲ್ಲಿ ಅಮೆರಿಕ, ಚೀನಾ ಮತ್ತು ಜರ್ಮನಿಯ ನಂತರ ನಾಲ್ಕನೇ ಸ್ಥಾನ ಪಡೆದಿದೆ. ಇತ್ತೀಚಿನ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜುಗಳು ಇದಕ್ಕೆ ಸ್ಪಷ್ಟ ಸಾಕ್ಷಿ” ಎಂದು ಹೇಳಿದರು.
ದೇಶೀಯ ಸುಧಾರಣೆಗಳು, ಹಾಗೂ ಭಾರತದ ಪರವಾಗಿ ಜಾಗತಿಕವಾಗಿ ನಿರ್ಮಾಣವಾಗುತ್ತಿರುವ ಅನೂಕೂಲ ಪರಿಸ್ಥಿತಿ ಈ ಸಾಧನೆಗೆ ಕಾರಣವೆಂದು ಅವರು ವಿವರಿಸಿದರು. “ನಾವು ಈ ವೇಗದಲ್ಲಿ ಮುಂದುವರಿದರೆ, ಮುಂದಿನ 2.5 ರಿಂದ 3 ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ರೂಪುಗೊಳ್ಳಲಿದೆ” ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಉತ್ಪಾದನೆಯ ಬಗ್ಗೆ ಮಾಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯಂ, “ಭವಿಷ್ಯದಲ್ಲಿ ಅಮೆರಿಕದ ಸುಂಕ ನೀತಿಯ ಸ್ಥಿತಿಗತಿಗಳು ಸ್ಪಷ್ಟವಾಗದಿದ್ದರೂ, ಭಾರತವು ಖರ್ಚು ಮತ್ತು ಸ್ಪರ್ಧಾತ್ಮಕ ಉತ್ಪಾದನಾ ಕೇಂದ್ರವಾಗಿ ಮುಂದುವರಿಯುವುದು ನಿಶ್ಚಿತ” ಎಂದರು.ಇದನ್ನು ಓದಿ –ಮೈಸೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು
ಇದೀಗ ಭಾರತವು ‘ಮೇಕ್ ಇನ್ ಇಂಡಿಯಾ’ ಮುಂತಾದ ಕಾರ್ಯತಂತ್ರಗಳ ಮೂಲಕ ಪೂರೈಕೆ ಸರಪಳಿಯಲ್ಲಿ ತನ್ನ ಪಾತ್ರವನ್ನು ಬಲಪಡಿಸುತ್ತಿದ್ದು, ಜಾಗತಿಕ ಹೂಡಿಕೆದಾರರಿಗೆ ಗುರಿಯಾಗುತ್ತಿದೆ. ಈ ನಡುವೆ ಭಾರತ ಈ ಪ್ರಶಂಸನೀಯ ಆರ್ಥಿಕ ಸಾಧನೆ ಸಾಧಿಸಿದ್ದು, ದೇಶದ ಬೆಳವಣಿಗೆಗೆ ಮತ್ತಷ್ಟು ನಂಬಿಕೆ ನೀಡಿದೆ.