ಮೈಸೂರು: ಜಾನುವಾರು ರಕ್ಷಣೆ ಎಂಬ ಹೆಸರಿನಲ್ಲಿ ಹಣ ವಸೂಲಿಸುತ್ತಿದ್ದ ಒಂದು ಗ್ಯಾಂಗನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಹಾಗೂ ಒಬ್ಬ ಮಹಿಳೆಯೂ ಸೇರಿದ್ದಾರೆ.
ಈ ಗ್ಯಾಂಗ್, ಜಾನುವಾರು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಜಾನುವಾರುಗಳನ್ನು ಕಸಾಯಿಖಾನೆಗೆ ಕಳಿಸುತ್ತಿದ್ದೀರಾ ಎಂಬ ಆರೋಪ ಹಾಕಿ ಹಣ ವಸೂಲಿಸುತ್ತಿತ್ತೆಂದು ವರದಿಯಾಗಿದೆ. ಆರೋಪಿಗಳಿಂದ ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಘಟನೆ ಹೀಗೆ ನಡೆದಿದೆ – ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಸಂತೆಯಲ್ಲಿ ರತ್ನಪುರಿಯ ಕಿರಣ್ ಎಂಬವರು ಮೂರು ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಆರೋಪಿಗಳು ಕಾರಿನಲ್ಲಿ ಹಿಂಬಾಲಿಸಿ, ಹುಣಸೂರಿನ ಕಟ್ಟೆಮಳಲವಾಡಿ ಬಳಿ ವಾಹನವನ್ನು ತಡೆದು ನಿಲ್ಲಿಸಿದರು. ಜಾನುವಾರುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದ್ದೀರಾ? ಎಂಬ ಆರೋಪ ಹಾಕಿ ಚಾಲಕನಿಗೆ ಬೆದರಿಕೆ ಹಾಕಿ ₹25,000 ಹಣ ಬೇಡಿಕೆ ಇಟ್ಟಿದ್ದರು.
ಕಿರಣ್ ಅವರು ಜಾನುವಾರುಗಳನ್ನು ವ್ಯವಸಾಯಕ್ಕಾಗಿ ಕೊಂಡು ಸಾಗಿಸುತ್ತಿರುವುದಾಗಿ ಸ್ಪಷ್ಟನೆ ನೀಡಿದರೂ ಆರೋಪಿಗಳು ಬಿಟ್ಟಿಲ್ಲ. ಬಳಿಕ ₹20,000 ಕೊಟ್ಟರೆ ಬಿಟ್ಟುಕೊಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಗಲಾಟೆ ನಡೆಯುತ್ತಿದ್ದಾಗ ರಸ್ತೆಯಲ್ಲಿ ಸಾರ್ವಜನಿಕರು ಸೇರಿ ಆರೋಪಿಗಳನ್ನು ಪ್ರಶ್ನಿಸಿ ಗೂಸಾ ನೀಡಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.ಇದನ್ನು ಓದಿ –ಕಬಿನಿ ಜಲಾಶಯದಿಂದ 25 ಸಾವಿರ ಕ್ಯುಸೆಕ್ ನೀರು ಬಿಡುಗಡೆ
ಕಿರಣ್ ನೀಡಿದ ದೂರು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ, ರಾಮಕೃಷ್ಣ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.