- – ವಿಷಪ್ರಾಶನ ಶಂಕೆ, ತನಿಖೆಗೆ ಆದೇಶ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ತಾಯಿ ಹುಲಿ ಹಾಗೂ ಅದರ ನಾಲ್ಕು ಮರಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಮೃತ ಹುಲಿಗಳ ಮೃತದೇಹಗಳು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ವಿಷಪ್ರಾಶನದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮೋಲ್ನೋಟಕ್ಕೆ ಈ ಘಟನೆ ಜನರ ದುಷ್ಕೃತ್ಯದಿಂದ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಈ ಘಟನೆಯ ಬಗ್ಗೆ ಗಂಭೀರವಾಗಿ ಸ್ಪಂದಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಸತ್ಯಾಂಶ ತಿಳಿಯುವಂತೆ ಆದೇಶ ನೀಡಿದ್ದಾರೆ.
ಅದೇ ರೀತಿ, ಈ ಸಾವುಗಳು ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಂಭವಿಸಿದ್ದರೆ, ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೊತೆಗೆ, ವಿದ್ಯುತ್ ಸ್ಪರ್ಶ ಅಥವಾ ವಿಷ ಪ್ರಾಯೋಗದಿಂದ ಸಾವಾಗಿದ್ದರೆ, ಅದಕ್ಕೆ ಹೊಣೆವಾಹಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ.ಇದನ್ನು ಓದಿ –ಜುಲೈ 15ರಿಂದ ದ್ವಿಚಕ್ರ ವಾಹನಗಳಿಗೆ ಟೋಲ್ ತೆರಿಗೆ ಕಡ್ಡಾಯ
ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ ಮೂರು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಇಲಾಖೆಗೆ ಕಟ್ಟು ನಿಟ್ಟಾದ ಸೂಚನೆ ನೀಡಲಾಗಿದೆ. ಈ ಘಟನೆಯು ರಾಜ್ಯದ ವನ್ಯಜೀವಿ ಸಂರಕ್ಷಣೆಗೆ ಗಂಭೀರ ಎಚ್ಚರಿಕೆಯನ್ನು ನೀಡಿದಂತಾಗಿದೆ.