ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ, ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದೀಗ ಡ್ಯಾಂ ಪೂರ್ಣ ಭರ್ತಿಯಾಗಲು ಕೇವಲ 1 ಅಡಿ ಮಾತ್ರ ಬಾಕಿಯಿದೆ.
ಪ್ರಸ್ತುತ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 123.25 ಅಡಿಗೆ ತಲುಪಿದ್ದು, ಗರಿಷ್ಠ ಮಟ್ಟವಾದ 124.80 ಅಡಿಗೆ ಇನ್ನೂ 1.55 ಅಡಿ ಮಾತ್ರವಿದೆ. ಡ್ಯಾಂ ನಿರ್ಮಾಣವಾಗಿ 93 ವರ್ಷಗಳು ಕಳೆದಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗಲಿರುವ ಸಾಧ್ಯತೆ ದಟ್ಟವಾಗಿದೆ. ಜೂನ್ ತಿಂಗಳಲ್ಲಿ ಈ ಮಟ್ಟದ ಭರ್ತಿಯು ಇದೇ ಮೊದಲ ಬಾರಿಗೆ ದಾಖಲಾಗಲಿದೆ.
ಡ್ಯಾಂಗೆ 73,811 ಕ್ಯೂಸೆಕ್ ನೀರು ಒಳಹರಿವು ಆಗಿದ್ದು, 38,983 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದುವರೆಗೆ 47.311 ಟಿಎಂಸಿ ನೀರನ್ನು ಸಂಗ್ರಹಿಸಿರುವ ಕೆಆರ್‌ಎಸ್ ಜಲಾಶಯದ ಗರಿಷ್ಠ ಸಾಮರ್ಥ್ಯ 49.452 ಟಿಎಂಸಿ ಆಗಿದ್ದು, ಇನ್ನೂ ಕೇವಲ 2 ಟಿಎಂಸಿ ನೀರಿಗಾಗಿ ನಿರೀಕ್ಷೆಯಲ್ಲಿದೆ.
ಅಲ್ಲದೇ, ಮಲೆನಾಡು ಹಾಗೂ ಕಾವೇರಿ ಉಗಮ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಮಧ್ಯಾಹ್ನದ ವೇಳೆಗೆ ಅಥವಾ ಶೀಘ್ರದಲ್ಲಿಯೇ ಕೆಆರ್‌ಎಸ್ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಬೆಳವಣಿಗೆ ಭಕ್ತರು, ಪ್ರವಾಸಿಗರು ಹಾಗೂ ಕೃಷಿಕರಲ್ಲಿ ಹರ್ಷ ಉಂಟುಮಾಡಿದ್ದು, ಜಿಲ್ಲಾಡಳಿತ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.