ಚಾಮರಾಜನಗರ:ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಬಳಿ ಭೀಕರ ಘಟನೆ ನಡೆದಿದ್ದು, 20ಕ್ಕೂ ಅಧಿಕ ಕೋತಿಗಳು ವಿಷ ಸೇವಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಕಂದೇಗಾಲ-ಕೊಡಸೋಗೆ ರಸ್ತೆ ಬಳಿ ಎರಡು ಚೀಲಗಳಲ್ಲಿ ಈ ಕೋತಿಗಳ ಶವಗಳನ್ನು ತ್ಯಜಿಸಿರುವ ಘಟನೆ ದಾರಿಹೋಗುವವರ ಗಮನಕ್ಕೆ ಬಿದ್ದು, ಅವರು ಕೂಡಲೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ದೌಡಾಯಿಸಿದ ಬಫರ್ ವಲಯದ ಡಿ.ಆರ್.ಎಫ್.ಓ. ಶಿವಕುಮಾರ್ ಅವರು ಸ್ಥಳ ಪರಿಶೀಲನೆ ನಡೆಸಿ, ಕೋತಿಗಳಿಗೆ ವಿಷ ಪ್ರಾಶನ ಮಾಡಿರುವುದು ಮೊದಲ ದೃಷ್ಟಿಗೆ ತೋರುತ್ತಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಸದ್ಯ ತನಿಖೆ ಆರಂಭವಾಗಿದೆ.
ಇದೇ ವೇಳೆ, ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಕೆಲವು ದಿನಗಳ ಹಿಂದೆ 5 ಹುಲಿಗಳು ವಿಷ ಸೇವಿಸಿ ಮೃತಪಟ್ಟ ಘಟನೆ ಕೂಡ ಇತ್ತೀಚೆಗೆ ನಡೆದಿದೆ. ಇದೀಗ ಇದೇ ರೀತಿಯ ಘಟನೆ ಪುನರಾವೃತವಾಗಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಇದನ್ನು ಓದಿ –ಕೇಂದ್ರದಿಂದ ಬೈಕ್ ಟ್ಯಾಕ್ಸಿಗೆ ಅನುಮತಿ – ಮಾರ್ಗಸೂಚಿ ಬಿಡುಗಡೆ
ಪರಿಸರವಾದಿಗಳು ಬಸವಣ್ಣ ಹಾಗೂ ಶಂಭು ಅವರು, ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.