-ಶಂಕಿತ ಉಗ್ರರ ಮನೆಯಲ್ಲಿ 20 ಕೆಜಿ ಬಾಂಬ್, ನಕ್ಷೆ ಹಾಗೂ ಸ್ಫೋಟಕ ವಸ್ತುಗಳು ಪತ್ತೆ
ಅಮರಾವತಿ: ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನ್ನಮಯ್ಯ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಶಂಕಿತ ಉಗ್ರರು ಅಬೂಬಕ್ಕರ್ ಸಿದ್ಧಿಕ್ ಮತ್ತು ಮೊಹಮ್ಮದ್ ಅಲಿ ಎಂಬವರನ್ನು ಬಂಧಿಸಲಾಗಿದೆ. ಇವರ ಮನೆಗಳಲ್ಲಿ ತೀವ್ರ ಶೋಧ ನಡೆಸಿದ ಪೊಲೀಸರು ಐಇಡಿ (Improvised Explosive Device), 20 ಕೆಜಿ ತೂಕದ ಸೂಟ್‌ಕೇಸ್ ಬಾಂಬ್, ವಿವಿಧ ನಗರಗಳ ನಕ್ಷೆಗಳು, ಅಮೋನಿಯಂ ನೈಟ್ರೇಟ್, ಸ್ಲರಿ ಸ್ಫೋಟಕಗಳು ಹಾಗೂ ಪಿಇಟಿಎನ್ (PETN) ಭರಿತ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಿಷೇಧಿತ ಉಗ್ರ ಸಂಘಟನೆ ಅಲ್-ಉಮ್ಮಾ ಜೊತೆ ಸಂಪರ್ಕ ಹೊಂದಿರುವ ಈ ಇಬ್ಬರು ಆರೋಪಿಗಳು, ಕಳೆದ 20 ವರ್ಷಗಳಿಂದ ರಾಯಚೋಟಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಸ್ಥಳೀಯ ಮಹಿಳೆಯರೊಂದಿಗೆ ವಿವಾಹವಾಗಿ ಕುಳಿತುಕೊಂಡಿದ್ದರು. ಇವರ ವಿರುದ್ಧ ಈಗಾಗಲೇ ರಾಯಚೋಟಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ದಾಳಿ ವೇಳೆ ಉಗ್ರ ಅಬೂಬಕರ್ ಪತ್ನಿ ಸಾಯಿರಾ ಬಾನು ಹಾಗೂ ಮೊಹಮ್ಮದ್ ಅಲಿ ಪತ್ನಿ ಶೇಖ್ ಶಮೀಮ್ ಪೊಲೀಸ್ ಸಿಬ್ಬಂದಿಗಳ ವಿರುದ್ಧ ರಂಪಾಟ ನಡೆಸಿದ್ದು, ಮಹಿಳಾ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಡೆಸಿದ ಕರ್ಣೂಲ್ ಡಿಐಜಿ ಡಾ. ಕೋಯ ಪ್ರವೀಣ್ ಅವರು, “20 ಕೆಜಿಯ ಬಾಂಬ್ ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಆಘಾತಕಾರಿ ಯೋಜನೆ ರೂಪಿಸಲಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.ಇದನ್ನು ಓದಿ –ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೆಸ್ಕಾಂ ಜೆಇ
ಈ ಪ್ರಕರಣದ ಹಿನ್ನೆಲೆ ಭಯೋತ್ಪಾದನೆ ವಿರುದ್ಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತಷ್ಟು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.