ಹೊಸದಿಲ್ಲಿ: ದೇಶದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅತಿದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ. ಸಿಬಿಐ ನಡೆಸಿದ ತನಿಖೆಯಲ್ಲಿ ಭಾರತದೆಲ್ಲೆಡೆ 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಅಕ್ರಮವಾಗಿ ಮಾನ್ಯತೆ ಪಡೆದಿರುವ ಶಂಕೆಯಾಗಿದೆ. ಈ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಪ್ರಮುಖ ವೈದ್ಯರು ಸೇರಿದಂತೆ ಒಟ್ಟು 35 ಮಂದಿಗೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಳೆ ವಿಭಾಗದ ಮುಖ್ಯಸ್ಥ ಡಾ. ಸಿ.ಎನ್. ಮಂಜಪ್ಪ ಹಾಗೂ ಬೆಂಗಳೂರಿನ ಡಾ. ಸತೀಶ್ ಅವರ ಮೇಲೆ ವೈದ್ಯಕೀಯ ಕಾಲೇಜುಗಳ ಪರವಾಗಿ ಅನುಕೂಲಕರ ವರದಿ ನೀಡಲು ಭಾರಿ ಮೊತ್ತದ ಲಂಚ ಪಡೆದ ಆರೋಪ ಕೇಳಿಬಂದಿದೆ. ಪ್ರತಿ ಕಾಲೇಜುಗಳಿಂದ ಸಕ್ಕರೆ ನೀಡಿದ ವರದಿ ಬರೆಯಲು ಸುಮಾರು ₹55 ಲಕ್ಷ ಲಂಚ ಪಡೆಯಲಾಗುತ್ತಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಹಗರಣದಲ್ಲಿ ಛತ್ತೀಸ್‌ಗಢದ ಸ್ವಯಂಘೋಷಿತ ದೇವಮಾನವ ‘ರಾವತಪುರ ಸರ್ಕಾರ್’ ಹೆಸರು ಕೂಡ ಕೇಳಿಬಂದಿದ್ದು, ಅವರ ವೈದಿಕ ಸಂಸ್ಥೆ ಸೇರಿದಂತೆ ರಾಜಸ್ಥಾನ, ಗುರುಗ್ರಾಮ್, ಇಂದೋರ್, ವಾರಂಗಲ್, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ಈ ಹಗರಣ ವ್ಯಾಪಿಸಿದೆ.
ಇದರಲ್ಲಿಯೇ ಮಾಜಿ ಯುಜಿಸಿ ಅಧ್ಯಕ್ಷ ಡಿ.ಪಿ. ಸಿಂಗ್, ಹಾಗೂ ರೇರಾ ಮಾಜಿ ಅಧ್ಯಕ್ಷ ಸಂಜಯ್ ಶುಕ್ಲಾ ಸೇರಿದಂತೆ ಹಲವರು ಆರೋಪಿತರ ಪಟ್ಟಿಯಲ್ಲಿ ಇದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ತಜ್ಞರು, ಮಧ್ಯವರ್ತಿಗಳು ಸೇರಿದಂತೆ ಅನೇಕ ಮಹತ್ವದ ಅಧಿಕಾರಿಗಳು ಈ ಅನೈತಿಕ ವೃತ್ತಿಚಟುವಟಿಕೆಯಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಗರಣದ ತನಿಖೆ ರಾಯ್ಪುರದ ವೈದ್ಯಕೀಯ ಸಂಸ್ಥೆಯ 55 ಲಕ್ಷ ಲಂಚ ಪ್ರಕರಣದಿಂದ ಆರಂಭವಾಗಿ ರಾಷ್ಟ್ರಮಟ್ಟದ ಭ್ರಷ್ಟಾಚಾರ ಜಾಲವನ್ನೇ ಬಯಲಿಗೆಳೆಯಿತು. ಡಾ. ಮಂಜಪ್ಪ ನೇತೃತ್ವದ ಎನ್‌ಎಂಸಿ ತಪಾಸಣಾ ತಂಡ, ಛತ್ತೀಸ್‌ಗಢದ ‘ಶ್ರೀ ರಾವತ್ಪುರ ಸರ್ಕಾರ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ಗೆ ಅನುಕೂಲಕರ ವರದಿ ನೀಡಲು ಲಂಚ ಪಡೆದಿದ್ದು, ಈ ಹಣವನ್ನು ಬೆಂಗಳೂರು ಮೂಲದ ಸತೀಶ್ ಮೂಲಕ ಸ್ವೀಕರಿಸಲು ಸಂಚು ರೂಪಿಸಲಾಯಿತು. ಈ ವೇಳೆ ಸಿಬಿಐ ತಂಡವು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದೆ.