ಮಂಡ್ಯ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂಸಿಎ ಪದವೀಧರೆ ಯುವತಿಯೋರ್ವಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಅವರ ಪುತ್ರಿ ಸಿಂಚನಾ (24) ಆತ್ಮಹತ್ಯೆಗೂಡಿರುವ ಯುವತಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪಿಸಿಓಡಿ (PCOD) ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಮನೆಯಿಂದ ಏಕಾಏಕಿ ಹೊರಟ ಸಿಂಚನಾ, ಹಾಸನ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಬಸ್ಸಿನಲ್ಲಿ ಶ್ರೀರಂಗಪಟ್ಟಣ ತಲುಪಿದ್ದಾರೆ. ನಂತರ ಬಸ್ ನಿಲ್ದಾಣದಿಂದ ನಡೆದುಕೊಂಡು ಹೋಗಿ ರಾತ್ರಿ 8 ಗಂಟೆ ವೇಳೆಗೆ ಉತ್ತರ ಕಾವೇರಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ.
ಘಟನೆಯನ್ನು ಗಮನಿಸಿದ ವಾಹನ ಸವಾರರು ತಕ್ಷಣ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ನದಿ ತೀರದ ಸುಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಬೆಳಕಿನ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ.
ಸ್ಥಳದಲ್ಲಿ ಸಿಕ್ಕುಬಂದ ಮಹಿಳೆಯ ಬ್ಯಾಗ್, ಆಧಾರ್ ಕಾರ್ಡ್ ಮತ್ತು ಚಪ್ಪಲಿಗಳ ಆಧಾರದ ಮೇಲೆ ನದಿಗೆ ಹಾರಿದ್ದವಳು ಸಿಂಚನಾ ಎಂದು ಶಂಕಿಸಲಾಗಿದೆ. ಕತ್ತಲಿನ ಕಾರಣದಿಂದ ರಾತ್ರಿಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಬುಧವಾರ ಮುಂಜಾನೆ ಪುನಃ ಹುಡುಕಾಟ ಆರಂಭಿಸಲಾಗಿದೆ.
ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಕಾಟ ಕಾರ್ಯ ಮುಂದುವರಿದಿದೆ.